ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ವಿರೋಧ ಪಕ್ಷಗಳ ನಾಯಕರು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ಪಟ್ಟಿಯ ಅಕ್ರಮಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಅವರು ವಿಫಲರಾಗಿದ್ದಾರೆ ಎಂದು ಸೋಮವಾರ (ಆ.18) ಹೇಳಿದರು.
ಇಂಡಿಯಾ ಒಕ್ಕೂಟದ ಸಭೆ ಬಳಿಕ ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್, ಟಿಎಂಸಿ, ಎಸ್‌ಪಿ, ಡಿಎಂಕೆ ಮತ್ತು ಆರ್‌ಜೆಡಿ ಸೇರಿದಂತೆ ಎಂಟು ಪ್ರಮುಖ ವಿರೋಧ ಪಕ್ಷಗಳ ಪ್ರತಿನಿಧಿಗಳು, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಚುನಾವಣಾ ಆಯುಕ್ತರು ಭಾನುವಾರದ ತಮ್ಮ ಪತ್ರಿಕಾಗೋಷ್ಠಿಯನ್ನು ನಮ್ಮ ಮೇಲೆ ವಾಗ್ದಾಳಿ ನಡೆಸಲು ಬಳಸಿಕೊಂಡಿದ್ದಾರೆ ಎಂದರು.
“ಮತದಾನ ಸಂವಿಧಾನ ದೇಶದ ನಾಗರಿಕರಿಗೆ ನೀಡಿರುವ ಪ್ರಮುಖ ಹಕ್ಕು. ಪ್ರಜಾಪ್ರಭುತ್ವವು ಅದರ ಮೇಲೆ ಅವಲಂಬಿತವಾಗಿದೆ. ಚುನಾವಣಾ ಆಯೋಗವು ಅದನ್ನು ರಕ್ಷಿಸಲು ಉದ್ದೇಶಿಸಲಾದ ಸಂಸ್ಥೆಯಾಗಿದೆ. ಆದರೆ, ರಾಜಕೀಯ ಪಕ್ಷಗಳು ಎತ್ತಿರುವ ಪ್ರಮುಖ ಪ್ರಶ್ನೆಗಳಿಗೆ ಮುಖ್ಯ ಚುನಾವಣಾ ಆಯುಕ್ತರು ಉತ್ತರಿಸಿಲ್ಲ. ಅವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಹೇಳಿದರು.
ವಿರೋಧ ಪಕ್ಷಗಳು ಕೇಳಿದ ಸರಿಯಾದ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕಿತ್ತು. ಆದರೆ, ಅವರು ರಾಜಕೀಯ ಪಕ್ಷಗಳಿಗೇ ಪ್ರಶ್ನೆಗಳನ್ನು ಹಾಕಿ ವಾಗ್ದಾಳಿ ನಡೆಸಿದ್ದಾರೆ ಎಂದು ಕಿಡಿಕಾರಿದರು.
“ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿ ಇರುವಾಗ, ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸದೆ ತರಾತುರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ್ದೇಕೆ? ಪರಿಷ್ಕೃತ ಮತದಾರರ ಪಟ್ಟಿ ಪ್ರಕಟಿಸಲು ಅವರು ಆತುರಪಟ್ಟಿದ್ದೇಕೆ?” ಎಂದು ಗೊಗೊಯ್ ಪ್ರಶ್ನಿಸಿದರು.
ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಖಚಿತಪಡಿಸುವುದು ಚುನಾವಣಾ ಆಯೋಗದ ಸಾಂವಿಧಾನಿಕ ಕರ್ತವ್ಯ. ಆದರೆ, ಆಯೋಗದ ಚುಕ್ಕಾಣಿ ಹಿಡಿಯುವ ಅಧಿಕಾರಿಗಳು ವಿರೋಧ ಪಕ್ಷಗಳ ಆರೋಪಗಳ ತನಿಖೆಗೆ ಅವಕಾಶ ನೀಡುತ್ತಿಲ್ಲ ಎಂದು ದೂರಿದರು.
“ಚುನಾವಣಾ ಆಯೋಗವು ಕೆಲವು ಪಕ್ಷಪಾತಿ ಅಧಿಕಾರಿಗಳ ಕೈಯಲ್ಲಿದೆ ಎಂಬುದು ಸ್ಪಷ್ಟ. ಅಂತಹ ಅಧಿಕಾರಿಗಳು ಎಲ್ಲಾ ರೀತಿಯ ತನಿಖೆಗಳನ್ನು ವಿರೋಧಿಸುತ್ತಿದ್ದಾರೆ” ಎಂದು ಗೊಗೊಯ್ ಆರೋಪಿಸಿದರು.
ಸಮಾಜವಾದಿ ಪಕ್ಷದ ನಾಯಕ ರಾಮಗೋಪಾಲ್ ಯಾದವ್ ಮಾತನಾಡಿ, ಚುನಾವಣಾ ಆಯೋಗವು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರಮಾಣಪತ್ರ ಸಲ್ಲಿಸುವಂತೆ ಕೇಳುತ್ತಿದೆ. ಆದರೆ, ನಮ್ಮ ಪಕ್ಷ 2022ರಲ್ಲಿ ಸುಮಾರು 18,000 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ದೂರನ್ನು ಪ್ರಮಾಣ ಪತ್ರದೊಂದಿಗೆ ಸಲ್ಲಿಸಿದೆ. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
“2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಬೆಂಬಲಿಗರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದರು. ಈ ಆರೋಪಕ್ಕೆ ನಾವು ಪ್ರಮಾಣಪತ್ರ ಸಲ್ಲಿಸಿದ್ದೆವು. ಆದರೆ, ಚುನಾವಣಾ ಆಯೋಗ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ತಿಳಿಸಿದರು.
ಕಳೆದ ಸಾರ್ವತ್ರಿಕ ಚುನಾವಣೆ ನಡೆದ ಮತದಾರರ ಪಟ್ಟಿ ಸರಿಯಾಗಿಲ್ಲದಿದ್ದರೆ, ಲೋಕಸಭೆಯನ್ನು ವಿಸರ್ಜಿಸಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಒತ್ತಾಯಿಸಿದರು.
“ಲೋಕಸಭಾ ಚುನಾವಣೆ ನಡೆದ ಪಟ್ಟಿಯು ವಂಚನೆಯೇ? ಅದು ನಿಜವಾಗಿದ್ದರೆ, ಪ್ರಸ್ತುತ ಮತ್ತು ಹಿಂದಿನ ಚುನಾವಣಾ ಆಯುಕ್ತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಈ ಲೋಕಸಭೆಯನ್ನು ತಕ್ಷಣವೇ ವಿಸರ್ಜಿಸಬೇಕು” ಎಂದು ಅವರು ಹೇಳಿದರು.
“ನಿನ್ನೆ ನಾವು ನಮ್ಮ ಚುನಾವಣಾ ಆಯುಕ್ತರನ್ನು ಹುಡುಕುತ್ತಿದ್ದೆವು, ಆದರೆ, ನಮಗೆ ಹೊಸ ಬಿಜೆಪಿ ವಕ್ತಾರರು ಸಿಕ್ಕರು” ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಮನೋಜ್ ಝಾ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ವಾಗ್ದಾಳಿ ನಡೆಸಿದರು.
ಶಿವಸೇನೆಯ (ಯುಬಿಟಿ) ನಾಯಕ ಅರವಿಂದ್ ಸಾವಂತ್ ಕೂಡ ಮುಖ್ಯ ಚುನಾವಣಾಧಿಕಾರಿ “ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಭಾನುವಾರ (ಆ.16) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, “ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರು ವಾರದೊಳಗೆ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲದಿದ್ದರೆ ಅವರ ಆರೋಪಗಳನ್ನು ಆಧಾರರಹಿತ ಎಂಬುವುದಾಗಿ ಪರಿಗಣಿಸಲಾಗುವುದು” ಎಂದಿದ್ದರು. ಅಲ್ಲದೆ, “ಪ್ರಮಾಣಪತ್ರ ಸಲ್ಲಿಸಿ. ಇಲ್ಲವೇ, ಕ್ಷಮೆಯಾಚಿಸಿ” ಎಂದು ರಾಹುಲ್ ಗಾಂಧಿಗೆ ತಾಕೀತು ಮಾಡಿದ್ದರು.
ಬಿಹಾರ| ಮತದಾರರ ಪಟ್ಟಿಯಿಂದ ಕೈಬಿಟ್ಟ 65 ಲಕ್ಷ ಹೆಸರುಗಳನ್ನು ಬಹಿರಂಗಪಡಿಸಿದ ಚು.ಆಯೋಗ


