ಮೇಲ್ಮನೆಯಲ್ಲಿ ನಾವು (ಕಾಂಗ್ರೆಸ್) ಬಹುಮತ ಪಡೆದ ನಂತರ ಭೂ ಸುಧಾರಣಾ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದು ಕೃಷಿಕರ ಜಮೀನು ಉದ್ಯಮಿಗಳ ಪಾಲಾಗುತ್ತಿರುವುದಕ್ಕೆ ಕಡಿವಾಣ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಗಳವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಸಿಎಂ, ದೇವರಾಜ ಅರಸು ಅವರು ಕೃಷಿಕರ ಅನುಕೂಲಕ್ಕಾಗಿ ‘ಉಳುವವನೇ ಹೊಲದೊಡೆಯ’ ಎಂದು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದರು. ಆದರೆ, ಬಿಜೆಪಿ ಸರ್ಕಾರ ಅದಕ್ಕೆ ತಿದ್ದುಪಡಿ ತಂದ ಪರಿಣಾಮ ಉದ್ಯಮಿಗಳೂ ಕೃಷಿಕರ ಭೂಮಿ ಪಡೆಯುವಂತವಾಗಿದೆ ಎಂದಿದ್ದಾರೆ.
ಅರಸು ಅವರು ಉಳುವವನೇ ಭೂಮಿಯೊಡೆಯ ಎಂದು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ ಅಸಂಖ್ಯಾತ ಜನರಿಗೆ ಭೂಮಿಯ ಮಾಲೀಕತ್ವ ನೀಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಭೂಮಿಯ ಹಕ್ಕನ್ನು ಖಾತ್ರಿಪಡಿಸಲು 79 ಎ ಮತ್ತು ಬಿ ಗೆ ಮಾಡಿರುವ ತಿದ್ದುಪಡಿಯನ್ನು ಮತ್ತೆ ಸರಿಪಡಿಸಲಾಗುವುದು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಸಂಖ್ಯೆಗೆ…
— CM of Karnataka (@CMofKarnataka) August 20, 2024
ಭೂ ಸುಧಾರಣಾ ಕಾಯ್ದೆ-1961ಕ್ಕೆ ಅರಸು ಅವರು ತಿದ್ದುಪಡಿ ತಂದ ಉಪಬಂಧ ’79 ಎ’ ಮತ್ತು ‘ಬಿ’ಯನ್ನು ಬಿಜೆಪಿ ಸರ್ಕಾರ ರದ್ದುಪಡಿಸಿದೆ. ಇದರಿಂದ ಕೃಷಿ ಕುಟುಂಬದವರು ಮಾತ್ರ ಕೃಷಿ ಭೂಮಿ ಖರೀದಿಸಬಹುದು, ಕೃಷಿ ಆದಾಯದ ಮಿತಿ 25 ಲಕ್ಷ ರೂಪಾಯಿ ಒಳಗಿದ್ದವರೂ ಮಾತ್ರ ಜಮೀನು ಖರೀದಿಸಬಹುದು ಎಂಬುವುದು ಕೊನೆಗೊಂಡಿದೆ ಎಂದು ಸಿಎಂ ಹೇಳಿದ್ದಾರೆ.
ಕಾಯ್ದೆ ರದ್ದಾದ ಬಳಿಕ ವಿಚಾರಣೆಗೆ ಬಾಕಿಯಿದ್ದ 13 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಕೈಬಿಟ್ಟು, ಉಳ್ಳವರಿಗೆ ಅನುಕೂಲ ಮಾಡಿಕೊಡಲಾಗಿದೆ. ಬಡವರ, ಹಿಂದುಳಿದವರ ವಿರೋಧಿಯಾದ ಕಾಯ್ದೆ ತಿದ್ದುಪಡಿ ರದ್ದುಗೊಳಿಸಿ, ಪರಿಶಿಷ್ಷ ಜಾತಿ, ಪರಿಶಿಷ್ಟ ಪಂಗಡದ ಜನರ ಭೂಮಿಯ ಹಕ್ಕು ಖಾತ್ರಿಪಡಿಸಲು ’79ಎ’ ಮತ್ತು ‘ಬಿ’ ಅನ್ನು ಮರು ಸ್ಥಾಪಿಸಲಾಗುವುದು ಎಂದಿದ್ದಾರೆ.
ವಿಧಾನಪರಿಷತ್‌ನಲ್ಲಿ ನಮ್ಮ ಪಕ್ಷ ಬಹುಮತ ಪಡೆಯುವುದಕ್ಕಾಗಿ ಕಾಯುತ್ತಿದ್ದೇವೆ. ನಿರೀಕ್ಷಿತ ಬಲ ಪಡೆದ ನಂತರ ಅರಸು ಕಾಲದ ಉಳುವವನೇ ಹೊಲದ ಒಡೆಯ ಕಾನೂನು ಮರು ಜಾರಿಗೊಳಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಅರಸುಗೆ ಮರಣೋತ್ತರ ಪ್ರಶಸ್ತಿ , ಎಲೆಕ್ಟ್ರಾನಿಕ್ ಸಿಟಿಗೆ ಮರುನಾಮಕರಣ
ದೇಶದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ ವನ್ನು ದೇವರಾಜ ಅರಸು ಅವರಿಗೆ ಮರಣೋತ್ತರವಾಗಿ ನೀಡಿ ಗೌರವಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ‘ಡಿ. ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ’ ಎಂದು ಮರುನಾಮಕರಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಇದನ್ನೂ ಓದಿ : ಜಾತಿ ವ್ಯವಸ್ಥೆಯನ್ನು ಅಸಾಂವಿಧಾನಿಕ ಎಂದು ಘೋಷಿಸಲು ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್


