ದೇಶದಲ್ಲಿ ಜಾತಿ ಗಣತಿ ನಡೆಸುತ್ತೇವೆ. ಮೀಸಲಾತಿ ಮೇಲಿನ ಶೇಖಡ 50 ಮಿತಿಯನ್ನು ತೆಗೆದು ಹಾಕುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ನ.18) ಪುನರುಚ್ಚರಿಸಿದ್ದಾರೆ.
ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,”ಜಾತಿ ಗಣತಿಯು ನಮ್ಮ ಮುಂದಿರುವ ದೊಡ್ಡ ಸಮಸ್ಯೆಯಾಗಿದೆ. ನಾವು ಅದನ್ನು ಮಾಡಿಯೇ ತೀರುತ್ತೇವೆ. ಅದು ನಮ್ಮ ಕೇಂದ್ರ ಸ್ತಂಭವಾಗಿದೆ” ಎಂದು ಹೇಳಿದ್ದಾರೆ.
ನವೆಂಬರ್ 20ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಸಿದ್ಧಾಂತಗಳ ಕದನ ಹಾಗೂ ಕೆಲವು ಕೋಟ್ಯಾಧಿಪತಿಗಳು ಮತ್ತು ಬಡವರ ನಡುವಿನ ಹೋರಾಟ ಎಂದು ಗಾಂಧಿ ಬಣ್ಣಿಸಿದ್ದಾರೆ.
ಫಾಕ್ಸ್‌ಕಾನ್ ಮತ್ತು ಏರ್‌ಬಸ್ ಸೇರಿದಂತೆ 7 ಲಕ್ಷ ಕೋಟಿ ರೂ ಯೋಜನೆಗಳನ್ನು ಮಹಾರಾಷ್ಟ್ರದಿಂದ ಗುಜರಾತ್‌ಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಮಹಾರಾಷ್ಟ್ರದ ಯುವಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಇದೇ ವೇಳೆ ಆರೋಪಿಸಿದ್ದಾರೆ.
ಮಹಾ ವಿಕಾಸ್ ಅಘಾಡಿ ಸರ್ಕಾರವು ಮಹಾರಾಷ್ಟ್ರದ ಜನರ ಹಿತಾಸಕ್ತಿಗಳನ್ನು ರಕ್ಷಿಸಲಿದೆ. ಮುಂಬೈನ ಧಾರಾವಿ ಪುನರಾಭಿವೃದ್ಧಿ ಯೋಜನೆಯಲ್ಲಿ ಒಬ್ಬ ವ್ಯಕ್ತಿಗೆ ಸಹಾಯ ಮಾಡಲು ಇಡೀ ಆಡಳಿತ ಯಂತ್ರವನ್ನು ತಿರುಚಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರ ‘ಏಕ್ ಹೈ ತೋ ಸೇಫ್ ಹೈ’ (ಒಟ್ಟಿಗೆ ಇದ್ದರೆ ಸುರಕ್ಷಿತ) ಎಂಬ ಘೋಷಣೆಯನ್ನು ಲೇವಡಿ ಮಾಡಿದ ರಾಹುಲ್ ಗಾಂಧಿ, ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಒಟ್ಟಿಗೆ ಇರುವ ತೋರಿಸಿ, “ಇವರು ಒಟ್ಟಿಗೆ ಇರುವವರೆಗೂ ಸುರಕ್ಷಿತರಾಗಿರುತ್ತಾರೆ” ಎಂದಿದ್ದಾರೆ.
ಇದನ್ನೂ ಓದಿ : ಮರಣದಂಡನೆಗೆ ಗುರಿಯಾಗಿರುವ ಬಲ್ವಂತ್ ಸಿಂಗ್ ರಾಜೋನಾ ಕ್ಷಮಾದಾನ ಅರ್ಜಿ ಪರಿಗಣನೆಗೆ ನಿರ್ದೇಶಿಸಿದ ಸುಪ್ರೀಂಕೋರ್ಟ್


