ಕೆಲವೇ ಜನರು ಬಿಜೆಪಿಯಿಂದ ಹಣ ತೆಗೆದುಕೊಂಡು ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವ ಕೆಸಲದಲ್ಲಿ ತೊಡಗಿದ್ದಾರೆ ಎಂದು ಬಂಗಾಳದಲ್ಲಿ ಹಿಂಸಾಚಾರದ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ನಾಗರಿಕತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಹಿಂತೆಗೆದುಕೊಳ್ಳುವವರೆಗೆ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ಘೋಷಿಸಿದ್ದಾರೆ.
ಬಿಜೆಪಿ ಮಾತ್ರ ಇಲ್ಲಿಯೇ ಉಳಿಯಬೇಕು ಮತ್ತು ಉಳಿದವರೆಲ್ಲರೂ ಹೊರಹೋಗುವಂತೆ ಮಾಡಬೇಕು ಎಂಬುದು ಅವರ ರಾಜಕೀಯ. ಅದು ಎಂದಿಗೂ ಸಾಧ್ಯವಿಲ್ಲ. ಭಾರತ ಎಲ್ಲರದು. ಎಲ್ಲರೂ ಜೊತೆಯಲ್ಲಿರದಿದ್ದರೆ, ಎಲ್ಲರ ವಿಕಾಸವಾಗುವುದು ಹೇಗೆ? ನಾಗರಿಕತ್ವ ಕಾಯ್ದೆ ಯಾರಿಗಾಗಿ? ನಾವೆಲ್ಲರೂ ನಾಗರಿಕರು. ನೀವು ಮತ ಚಲಾಯಿಸಲಿಲ್ಲವೇ? ನೀವು ಇಲ್ಲಿ ವಾಸಿಸುತ್ತಿಲ್ಲವೇ? ಎಂದು ಅವರು ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಮೊದಲು ನಾನೊಬ್ಬಳೆ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿದ್ದೆ. ಈಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ಎನ್‌ಆರ್‌ಸಿ ಬೆಂಬಲಿಸುವುದಿಲ್ಲ ಎಂದಿದ್ದಾರೆ. ಪೌರತ್ವ ಕಾಯ್ದೆ ಸಹ ಜಾರಿಗೊಳಿಸಬೇಡಿ ಎಂದು ನಾನು ಅವರಲ್ಲಿ ಕೇಳಿಕೊಳ್ಳುತ್ತೇನೆ. ಮಧ್ಯಪ್ರದೇಶ, ರಾಜಸ್ಥಾನ. ಪಂಜಾಬ್, ಛತ್ತೀಸ್‌ಘಡ, ಕೇರಳದ ಮುಖ್ಯಮಂತ್ರಿಗಳ ಸಹ ಈಗ ಪೌರತ್ವ ಕಾಯ್ದೆ ವಿರೋಧಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.


