ಕೋಮು ಸಂಘರ್ಷ ತಡೆಯಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ‘ಕೋಮುದ್ವೇಷ ನಿಗ್ರಹ ಘಟಕ’ (Anti Communal Force) ಆರಂಭಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಮಂಗಳೂರು ನಗರದ ಹೊರವಲಯಗಳಲ್ಲಿ ಒಂದು ವಾರದೊಳಗೆ ಕೇರಳ ಮೂಲದ ಅಶ್ರಫ್ ಮತ್ತು ರೌಡಿ ಸುಹಾಸ್ ಶೆಟ್ಟಿ ಕೊಲೆ ನಡೆದಿರುವ ಹಿನ್ನೆಲೆ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಗೃಹ ಸಚಿವ ಪರಮೇಶ್ವರ್ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಸಭೆ ನಡೆಸಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೃಹ ಸಚಿವರು, “ಅಶ್ರಫ್ ಮತ್ತು ಸುಹಾಸ್ ಶೆಟ್ಟಿ ಕೊಲೆ ಬಳಿಕ ಜಿಲ್ಲೆಯಲ್ಲಿ ಕೋಮು ಸಂಘರ್ಷ ಮತ್ತೆ ಮರುಕಳಿಸಿದೆ ಎಂಬ ಭಾವನೆ ಜನರಲ್ಲಿ ಬಂದಿರಬಹುದು. ಜನ ಸಮುದಾಯ ಇದನ್ನು ಇಷ್ಟಪಡುವುದಿಲ್ಲ. ಸರ್ಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರು ಶಾಂತಿಯಿಂದ ಬದುಕಬೇಕು, ಮಕ್ಕಳು ಇಲ್ಲಿಯೇ ವ್ಯಾಸಂಗ ಮಾಡುವಂತೆ ಆಗಬೇಕು, ಇಲ್ಲಿ ಬಂಡವಾಳ ಹೂಡಿಕೆ ಆಗಬೇಕು ಮತ್ತು ಉದ್ಯೋಗ ಸೃಷ್ಟಿಯಾಗಬೇಕು ಎಂದು ಬಯಸುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳುತ್ತದೆ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಳೆದ ಎರಡು ವರ್ಷಗಳಲ್ಲಿ ನಮ್ಮ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಆದರೂ, ಕಳೆದ ಒಂದು ವಾರದೊಳಗೆ ಎರಡು ಹತ್ಯೆಗಳು ನಡೆದಿವೆ. ಇದು ಇಲ್ಲಿನ ಕೋಮು ಸೌಹಾರ್ದಕ್ಕೆ ಸವಾಲಾಗಿ ನಿಂತಿದೆ ಎಂದು ಹೇಳಿದರು.
ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಪೊಲೀಸರು ಇದುವರೆಗೆ 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಅಶ್ರಫ್ ಹತ್ಯೆ ಪ್ರಕರಣದಲ್ಲಿ ಸುಮಾರು 21 ಜನರನ್ನು ಬಂಧಿಸಲಾಗಿದೆ. ನಾವು ಯಾವುದೇ ಕಾರಣಕ್ಕೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಾಂತಿ ಕದಡಲು ಅವಕಾಶ ನೀಡುವುದಿಲ್ಲ ಎಂದರು.
ಯಾವುದೇ ಕೋಮು ಶಕ್ತಿಗಳು, ಅವರು ಯಾವುದೇ ಸಮುದಾಯದವರು ಆದರೂ ಕಾನೂನು ಉಲ್ಲಂಘನೆ ಮಾಡಲು ಬಿಡುವುದಿಲ್ಲ. ಅವರನ್ನು ಹತ್ತಿಕ್ಕುತ್ತೇವೆ, ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳುತ್ತೇವೆ. ಕೋಮು ಸಂಘರ್ಷದ ಹಿಂದೆ ಅನೇಕ ಶಕ್ತಿಗಳು ಇರುವುದು ಗೊತ್ತಾಗಿದೆ. ಅವರ ಹುಟ್ಟಡಗಿಸುತ್ತೇವೆ ಎಂದು ಹೇಳಿದರು.
ಸರ್ಕಾರ ಈಗ ಒಂದು ತೀರ್ಮಾನಕ್ಕೆ ಬಂದಿದೆ. ಇನ್ನು ಮುಂದೆ ಈ ರೀತಿಯ ಘಟನೆಗಳು ಮರುಕಳಿಸಬಾರದು. ಈ ನಿಟ್ಟಿನಲ್ಲಿ ನಕ್ಸಲ್ ನಿಗ್ರಹ ದಳದಂತೆ ಹೊಸದಾಗಿ ‘ಕೋಮುದ್ವೇಷ ನಿಗ್ರಹ ಘಟಕ’ವನ್ನು ಪ್ರತ್ಯೇಕವಾಗಿ ರಚಿಸುತ್ತೇವೆ. ಅದಕ್ಕೆ ಐಜಿಪಿ ದರ್ಜೆಯ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ನೇಮಿಸುತ್ತೇವೆ. ಈ ಘಟಕ ಪೊಲೀಸರ ಸಹಕಾರದ ಜೊತೆ ಪ್ರತ್ಯೇಕವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಕೋಮುದ್ವೇಷದ ಚಟುವಟಿಕೆಗಳ ಮೇಲೆ ನಿಗಾ ಇಟ್ಟು, ಅದರ ಹಿಂದೆ ಇರುವವರ ಮೇಲೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲು ಈ ಟಾಸ್ಕ್ ಫೋರ್ಸ್‌ಗೆ ಕಾನೂನು ವ್ಯಾಪ್ತಿಯಲ್ಲಿ ಅಧಿಕಾರ ಕೊಡುತ್ತೇವೆ. ಈ ಮೂಲಕ ಎರಡು ಜಿಲ್ಲೆಗಳಲ್ಲಿ ಶಾಂತಿ ಸ್ಥಾಪನೆ ಮಾಡುತ್ತೇವೆ. ಯಾರು ಕೋಮು ಪ್ರಚೋದನಕಾರಿ ಭಾಷಣ ಮಾಡುತ್ತಾರೋ ಅಥವಾ ಹೇಳಿಕೆ ಕೊಡುತ್ತಾರೋ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಗೃಹ ಸಚಿವರು ಹೇಳಿದರು.


