Homeಮುಖಪುಟಬಾಂಗ್ಲಾದೇಶಿಯರೆಂದು ಪಶ್ಚಿಮ ಬಂಗಾಳದ 100 ವಲಸೆ ಕಾರ್ಮಿಕರನ್ನು ಬಂಧಿಸಿದ ಒಡಿಶಾ ಸರ್ಕಾರ: ಆರೋಪ

ಬಾಂಗ್ಲಾದೇಶಿಯರೆಂದು ಪಶ್ಚಿಮ ಬಂಗಾಳದ 100 ವಲಸೆ ಕಾರ್ಮಿಕರನ್ನು ಬಂಧಿಸಿದ ಒಡಿಶಾ ಸರ್ಕಾರ: ಆರೋಪ

- Advertisement -
- Advertisement -

ಒಡಿಶಾದಲ್ಲಿ ತಮ್ಮ ರಾಜ್ಯದ ಸುಮಾರು 100 ವಲಸೆ ಕಾರ್ಮಿಕರನ್ನು ಬಾಂಗ್ಲಾದೇಶೀಯರು ಎಂದು ಬಂಧಿಸಿ, ಬಂಧನ ಕೇಂದ್ರಗಳಿಗೆ ಕಳುಹಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಆರೋಪಿಸಿರುವುದಾಗಿ indianexpress.com ಸೋಮವಾರ (ಜೂ.30) ವರದಿ ಮಾಡಿದೆ.

ಮೇ ತಿಂಗಳಲ್ಲಿ ಒಡಿಶಾದ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ವಾಸಿಸುತ್ತಿರುವ ದಾಖಲೆರಹಿತ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ನಡುವೆ ಅನೇಕ ಭಾರತೀಯ ನಾಗರಿಕರನ್ನು ಅಕ್ರಮ ವಲಸಿಗರು ಎಂದು ಬಾಂಗ್ಲಾ ಗಡಿಯಾಚೆಗೆ ಬಲವಂತವಾಗಿ ತಳ್ಳಿದ ಆರೋಪಗಳು ಕೇಳಿ ಬಂದಿವೆ.

ವಲಸೆ ಕಾರ್ಮಿಕರ ಅಕ್ರಮ ಬಂಧನಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಅಧಿಕಾರಿಗಳು ಮತ್ತು ಪೊಲೀಸರು, ಒಡಿಶಾದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸಂಸದ ಮತ್ತು ಪಶ್ಚಿಮ ಬಂಗಾಳದ ವಲಸಿಗ ಕಲ್ಯಾಣ ಮಂಡಳಿಯ ಅಧ್ಯಕ್ಷ ಸಮೀರುಲ್ ಇಸ್ಲಾಂ ಹೇಳಿರುವುದಾಗಿ indianexpress.com ತಿಳಿಸಿದೆ.

“ಆದರೆ, ಒಡಿಶಾದ ಅಧಿಕಾರಿಗಳು ಬಡ ವಲಸೆ ಕಾರ್ಮಿಕರನ್ನು ಬಿಡುಗಡೆ ಮಾಡುತ್ತಿಲ್ಲ. ಇದು ಸಂವಿಧಾನ ಬಾಹಿರ ನಡೆ” ಎಂದು ಇಸ್ಲಾಂ ಹೇಳಿದ್ದಾರೆ.

“ಅವರು (ವಲಸೆ ಕಾರ್ಮಿಕರು) ಭಾರತೀಯ ನಾಗರಿಕರು ಮತ್ತು ಬಂಗಾಳದ ನಿವಾಸಿಗಳು. ಅವರು ಕೆಲಸಕ್ಕಾಗಿ ಒಡಿಶಾಗೆ ಹೋಗಿದ್ದಾರೆ. ಆದರೆ, ಅವರನ್ನು ಬಂಧಿಸಿ ಬಾಂಗ್ಲಾದೇಶೀಯರು ಎಂದು ಹಣೆಪಟ್ಟಿ ಕಟ್ಟಲಾಗಿದೆ. ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದೆ. ನಾವು ಅವರನ್ನು ಮನೆಗೆ ಕರೆತರುತ್ತೇವೆ. ಈ ಪ್ರವೃತ್ತಿ ಬಿಜೆಪಿ ಆಡಳಿತದಲ್ಲಿ ಒಂದರ ನಂತರ ಒಂದರಂತೆ ರಾಜ್ಯಗಳಲ್ಲಿ ನಡೆಯುತ್ತಿದೆ” ಎಂದು ಸಮೀರುಲ್ ಇಸ್ಲಾಂ ತಿಳಿಸಿದ್ದಾರೆ.

ಆದಾಗ್ಯೂ, “ಯಾವುದೇ ಪೊಲೀಸ್ ಠಾಣೆಯಲ್ಲಿ ಯಾರನ್ನೂ ಬಂಧಿಸಲಾಗಿಲ್ಲ” ಎಂದು ಒಡಿಶಾದ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾಗಿ indianexpress.com ವರದಿ ಮಾಡಿದೆ.

ನೆರೆಹೊರೆಯಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ರಾಷ್ಟ್ರವ್ಯಾಪಿ ಕಾರ್ಯದ ಭಾಗವಾಗಿ ಪರಿಶೀಲನೆಗಳನ್ನು ನಡೆಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

“ನಾವು ಅವರ ಗುರುತುಗಳನ್ನು ಪರಿಶೀಲಿಸುತ್ತಿದ್ದೇವೆ. ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾಗಿ indianexpress.com ವಿವರಿಸಿದೆ.

ಜೂನ್ 15ರಂದು ಮಹಾರಾಷ್ಟ್ರ ಪೊಲೀಸರು ಬಂಧಿಸಿ ಬಾಂಗ್ಲಾದೇಶಕ್ಕೆ ತಳ್ಳಿದ್ದ ಪಶ್ಚಿಮ ಬಂಗಾಳದ ನಾಲ್ವರು ಪುರುಷರನ್ನು ವಾಪಸ್ ಕರೆತಂದ ಸುಮಾರು ಎರಡು ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಪೊಲೀಸರು ಈ ನಾಲ್ವರು ಭಾರತೀಯ ನಾಗರಿಕರು ಎಂಬುದಕ್ಕೆ ಪುರಾವೆಗಳನ್ನು ಪ್ರಸ್ತುತಪಡಿಸಿದ್ದರು.

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: ರಾಜಕೀಯವಾಗಿ, ಕಾನೂನಾತ್ಮಕವಾಗಿ ವಿರೋಧಿಸುತ್ತೇವೆ ಎಂದ ಕಾಂಗ್ರೆಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -