ದೇಶದಲ್ಲಿ ಸಂಭಾವ್ಯ ಕೊರೋನಾ ಸಾಂಕ್ರಾಮಿಕದ 3 ನೇ ಅಲೆಯ ನಿರ್ವಹಣೆ ಕುರಿತು ದೇಶದಲ್ಲಿ ಅನೇಕ ರಾಜ್ಯಗಳು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಮಹಾರಾಷ್ಟ್ರ, ಕರ್ನಾಟಕ, ಸೇರಿದಂತೆ ವಿವಿಧ ರಾಜ್ಯಗಳು ಈಗಾಗಲೇ ಕೊರೋನಾ ಮೂರನೇ ಅಲೆಯನ್ನು ಎದುರಿಸಲು ಮಕ್ಕಳಿಗಾಗಿ ವಿಶೇಷ ಆಸ್ಪತ್ರೆಗಳ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿವೆ. ಈಗ ಪಶ್ಚಿಮ ಬಂಗಾಳ ಸರ್ಕಾರ ಕೊರೋನಾ ಮೂರನೇ ಅಲೆಯ ನಿರ್ವಹಣೆಗೆ 10 ಜನ ತಜ್ಞರ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಮಕ್ಕಳ ತಜ್ಞರು ಮತ್ತು ಪರಿಣಿತ ವೈದ್ಯರನ್ನು ಒಳಗೊಳ್ಳಲಿದೆ.
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕೊರೋನಾ 2 ನೇ ಅಲೆಯ ಸಂದರ್ಭದಲ್ಲಿ 20,000 ಪ್ರಕರಣಗಳು ದಾಖಲಾಗಿದ್ದವು. ಹಾಗೇ ಚುನಾವಣೆ ಕಾರಣದಿಂದ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿತ್ತು. ಎರಡನೇ ಅಲೆಯ ಸಂದರ್ಭದಲ್ಲಿ ಆದ ಲೋಪದೋಷಗಳನ್ನು ಸರಿಪಡಿಸಿಕೊಂಡು ಸಂಭಾವ್ಯ ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ತಜ್ಞರ ಸಮಿತಿ ಪಶ್ಚಿಮ ಬಂಗಾಳ ಸರ್ಕಾರದ ಜೊತೆ ಕೆಲಸ ಮಾಡಲಿದೆ. ಸರ್ಕಾರ ಕೊರೋನಾ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಿತಿ ಸರ್ಕಾರಕ್ಕೆ ಸಲಹೆಗಳನ್ನು ನೀಡಲಿದೆ.
ಪಶ್ಚಿಮ ಬಂಗಾಳ ಸರ್ಕಾರವು ಈಗಾಗಲೇ 12 ವರ್ಷದೊಳಗಿನ ಮಕ್ಕಳ ಕೊರೋನಾ ಚಿಕಿತ್ಸೆಗಾಗಿ ವಿಶೇಷ ಆಸ್ಪತ್ರೆಗಳ ವ್ಯವಸ್ಥೆ ಮಾಡಿದೆ. ಸುಮಾರ 10,000 ಬೆಡ್‌ಗಳನ್ನು ರಾಜ್ಯದಲ್ಲಿ ಮಕ್ಕಳಿಗಾಗಿ ಮೀಸಲಿಡಲಾಗಿದೆ. ಈ ಆಸ್ಪತ್ರೆಗಳಲ್ಲಿ ತಾಯಿ ಮತ್ತು ಮಗು ಒಟ್ಟಿಗೆ ಇರುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ. ಕೊರೋನಾ ಮೂರನೇ ಅಲೆಯು ಆಗಸ್ಟ್ ತಿಂಗಳಿನಲ್ಲಿ ಕಾಣಿಸಿಕೊಳ್ಳಲಿದ್ದು ಈ ಸಂದರ್ಭದಲ್ಲಿ ಮಕ್ಕಳು ತೀವ್ರವಾಗಿ ಸೋಂಕಿಗೆ ತುತ್ತಾಗಲಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ. ತಜ್ಞರ ಎಚ್ಚರಿಕೆಯಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರಗಳು 3 ನೇ ಅಲೆಯ ತಡೆಗೆ ಭರದ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಪಶ್ಚಿಮ ಬಂಗಾಳದ ಜೊತೆಗೆ ಇತರ ರಾಜ್ಯಗಳೂ ಮಕ್ಕಳ ತಜ್ಞರನ್ನು ನೇಮಿಸಿಕೊಂಡಿವೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 2-4 ವಾರಗಳಲ್ಲಿ ಅಪ್ಪಳಿಸಲಿರುವ ಕೋವಿಡ್ ಮೂರನೇ ಅಲೆ: ಹೆಚ್ಚಿನ ಪ್ರಕರಣಗಳ ಸಾಧ್ಯತೆ


