ಪಶ್ಚಿಮ ಬಂಗಾಳಕ್ಕೆ ನರೇಗಾ ನಿಧಿಯನ್ನು ನಿಲ್ಲಿಸುವ ಬಗ್ಗೆ ಮಂಗಳವಾರ ಲೋಕಸಭೆಯಲ್ಲಿ ತೃಣಮೂಲ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಆಡಳಿತ ಪಕ್ಷದ ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ನರೇಗಾ ಯೋಜನೆಯ ಪ್ರಯೋಜನಗಳನ್ನು ಪಶ್ಚಿಮ ಬಂಗಾಳಕ್ಕೆ ವರ್ಗಾಯಿಸಲಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
“25 ಲಕ್ಷ ವಂಚನೆ ಪ್ರಕರಣಗಳು ಪತ್ತೆಯಾಗಿವೆ ಎಂದು ಸಚಿವಾಲಯದ ನಿರಂತರ ಹೇಳುತ್ತಿದೆ. ಇದರ ಬಗ್ಗೆ ನೀವು ತಕ್ಷಣ ಕ್ರಮ ಕೈಗೊಳ್ಳಿ, ತನಿಖೆ ಮಾಡಿ, ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಿ ಮತ್ತು ಬಂಧಿಸಿ ಎಂದು ನಾವು ಹೇಳುತ್ತಿದ್ದೇವೆ. ಅದಾಗ್ಯೂ, 25 ಲಕ್ಷ ಪ್ರಕರಣಗಳ ಕಾರಣಕ್ಕಾಗಿ 10 ಕೋಟಿ ಜನರಿಗೆ ಹಣವನ್ನು ನಿಲ್ಲಿಸುವುದು ಸರಿಯಲ್ಲ. ಯೋಜನೆಯಲ್ಲಿ ಭ್ರಷ್ಟಾಚಾರವಿದೆ ಎಂದಾದರೆ, ನೀವು ಏಕೆ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಸಂಸದ ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ಮೇಲೂ ದಾಳಿ ನಡೆಸಿದ ಕಲ್ಯಾಣ್ ಬ್ಯಾನರ್ಜಿ, “ನೀವು ಕೇಂದ್ರ ಸರ್ಕಾರದ ಸಚಿವರಾಗಿದ್ದು ಈ ರೀತಿ ವರ್ತಿಸುತ್ತಿರುವುದು ಸರಿಯೆ… ನಿಮ್ಮನ್ನು ಸಚಿವರನ್ನಾಗಿ ಮಾಡಿದವರು ಯಾರು?” ಎಂದು ಕೇಳಿದ್ದಾರೆ. ಕಲ್ಯಾಣ್ ಬ್ಯಾನರ್ಜಿ ಅವರ ಈ ಹೇಳಿಕೆಗಳು ಆಡಳಿತರೂಢ ಸದಸ್ಯರಲ್ಲಿ ಆಕ್ರೋಶ ಉಂಟು ಮಾಡಿದ್ದು, ಅವರು ಅವರ ಹೇಳಿಕೆಗಳನ್ನು ಆಕ್ಷೇಪಿಸಿದ್ದಾರೆ.
ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಕಲ್ಯಾಣ್ ಬ್ಯಾನರ್ಜಿಅವರು ಬಳಸಿದ ಭಾಷೆಯನ್ನು ಆಕ್ಷೇಪಿಸಿದ್ದಾರೆ. ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಧ್ಯ ಪ್ರವೇಶಿಸಿ ಸದಸ್ಯರು ತಮ್ಮೊಳಗೆ ಮಾತನಾಡುವ ಬದಲು ಸ್ಪೀಕರ್ ಪೀಠವನ್ನು ಉದ್ದೇಶಿಸಿ ಮಾತನಾಡುವಂತೆ ಒತ್ತಾಯಿಸಿದ್ದಾರೆ. “ನಿಮ್ಮ ಮಾತುಗಳನ್ನು ಬುದ್ಧಿವಂತಿಕೆಯಿಂದ ಬಳಸಿ, ಯಾರಾದರೂ ಅನಧಿಕೃತವಾಗಿ ಏನಾದರೂ ಹೇಳಿದರೆ, ಅದಕ್ಕೆ ಪ್ರತಿಕ್ರಿಯಿಸಬೇಡಿ” ಎಂದು ಓಂ ಬಿರ್ಲಾ ಹೇಳಿದ್ದಾರೆ.
2025-26ರ ಕೇಂದ್ರ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದೆ ನರೇಗಾದ 25 ಲಕ್ಷ ನಕಲಿ ಉದ್ಯೋಗ ಕಾರ್ಡ್‌ಗಳನ್ನು ಟಿಎಂಸಿ ಕಾರ್ಯಕರ್ತರು “ಲೂಟಿ” ಮಾಡಿದ್ದಾರೆ ಎಂದು ಹೇಳಿದ್ದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮೈಕ್ರೋ ಫೈನಾನ್ಸ್, ಗ್ರೇಟರ್ ಬೆಂಗಳೂರು ಮಸೂದೆಗಳು ವಿಧಾನಸಭೆಯಲ್ಲಿ ಅಂಗೀಕಾರ
ಮೈಕ್ರೋ ಫೈನಾನ್ಸ್, ಗ್ರೇಟರ್ ಬೆಂಗಳೂರು ಮಸೂದೆಗಳು ವಿಧಾನಸಭೆಯಲ್ಲಿ ಅಂಗೀಕಾರ

