ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವ ಮುನ್ನ ಕ್ರಿಕೆಟಿಗ ಮನೋಜ್ ತಿವಾರಿ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಹೂಗ್ಲಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ರ್ಯಾಲಿಯಲ್ಲಿ ಮನೋಜ್ ತಿವಾರಿ ಅಧಿಕೃತವಾಗಿ ಟಿಎಂಸಿಗೆ ಸೇರಿದರು.
ಈ ಕುರಿತು ತಮ್ಮ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಇಂದು ಹೊಸ ಪ್ರಯಾಣ ಪ್ರಾರಂಭವಾಗಲಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಬೇಕು. ಇಂದಿನಿಂದ ಇದು ಇನ್‌ಸ್ಟಾಗ್ರಾಮ್‌ನಲ್ಲಿ ನನ್ನ ರಾಜಕೀಯ ಪ್ರೊಫೈಲ್ ಆಗಿರುತ್ತದೆ” ಎಂದು ಲಿಂಕ್ ಒಂದನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಪುಟದ ಅವರ ಬಯೋದಲ್ಲಿ ‘ರಾಜಕಾರಣಿ, ಎಐಟಿಎಂಸಿ’ ಎಂದು ಬರೆಯಲಾಗಿದೆ.
ಮನೋಜ್ ತಿವಾರಿ ಅಂತಾರಾಷ್ಟ್ರೀಯ ಏಕದಿನ ಮತ್ತು ಟಿ 20 ವಿಭಾಗದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಪ್ರಸ್ತುತ ಅವರು ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳವನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಕೋಲ್ಕತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರೈಸಿಂಗ್ ಪುಣೆ ಸೂಪರ್‌ಜಾಯಂಟ್ಸ್ ಪರ ಆಡಿದ್ದಾರೆ.
ಇತ್ತೀಚೆಗೆ ಮನೋಜ್ ತಿವಾರಿ ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣ ಟೀಕೆಗಳ ಮೂಲಕ ಗಮನ ಸೆಳೆದಿದ್ದರು. ರೈತ ಹೋರಾಟದ ವಿರುದ್ಧ ಭಾರತದ ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಒಂದೇ ಥರನೇ ಟ್ವೀಟ್ ಮಾಡುತ್ತಿದ್ದ ಸಮಯದಲ್ಲಿ ಅದನ್ನು ಕೈಗೊಂಬೆ ಆಟವೆಂದು ಕರೆದು ವ್ಯಂಗ್ಯವಾಡಿದ್ದರು. “ನಾನು ಚಿಕ್ಕವನಿದ್ದಾಗ ಯಾವತ್ತೂ ಈ ಕೈಗೊಂಬೆ ಆಟ ನೋಡಲು ಆಗಿರಲಿಲ್ಲ.. ಅದನ್ನು ನೋಡಲು 35 ವರ್ಷ ಬೇಕಾಯಿತು” ಎಂದು ಕೈಗೊಂಬೆ ಆಟದ ಫೋಟೊವೊಂದನ್ನು ಟ್ವೀಟ್ ಮಾಡಿದ್ದರು.
When I was a kid, I never saw a puppet show. It took me 35 years to see one ? pic.twitter.com/AMCGIZMfGN
— MANOJ TIWARY (@tiwarymanoj) February 4, 2021
Wat an innings by Petrol so far. A well-compiled century on dis difficult situation. U looked 4 a big one d moment u played ur first ball. Equally supported by Diesel. Great partnership by u 2. Wasn't easy playing against d common people but u both did it? #PetrolDieselPriceHike
— MANOJ TIWARY (@tiwarymanoj) February 18, 2021
ಅಲ್ಲದೆ ಏರುತ್ತಿರುವ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ವಿರುದ್ಧ ಕ್ರಿಕೆಟ್ ಕಾಮೆಂಟರಿ ಶೈಲಿಯಲ್ಲಿ “ಪೆಟ್ರೋಳ್ ಅತ್ಯುತ್ತಮ ಇನ್ನಿಂಗ್ಸ್ ಪ್ರದರ್ಶಿಸಿದೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಪೆಟ್ರೋಲ್ ಶತಕ ಬಾರಿಸಿದೆ. ಡೀಸೆಲ್ ನ ಬೆಂಬಲದೊಂದಿಗೆ ಉತ್ತಮ ಇನ್ನಿಂಗ್ಸ್ ಕಟಿದ್ದು, ನಿಮ್ಮಿಬ್ಬರದು ಉತ್ತಮ ಜೊತೆಯಾಟವಾಗಿದೆ. ಸಾಮಾನ್ಯ ಜನರ ವಿರುದ್ಧ ಆಡುವುದು ತುಂಬಾ ಕಷ್ಟಕರ ಕೆಲಸ. ಆದರೆ ನೀವದನ್ನು ಮಾಡಿ ತೋರಿಸಿದ್ದೀರಿ” ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಪಾಂಡಿಚೇರಿ ನಂತರ ಮಹಾರಾಷ್ಟ್ರ ಸರ್ಕಾರ ಪತನಕ್ಕೆ ಬಿಜೆಪಿ ಯತ್ನ: ಶಿವಸೇನೆ ಆರೋಪ


