ಈಗ ವಿವಾದಕ್ಕೆ ಗುರಿಯಾಗಿರುವ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಯ ಮೂಲ ಕಾಯ್ದೆಗೆ ಒಂದು ದೊಡ್ಡ ಇತಿಹಾಸವೇ ಇದೆ. ಗೇಣಿದಾರರ ಪರವಾಗಿ ಆರಂಭವಾದ ಹೋರಾಟವು ನಂತರದ ದಿನಗಳಲ್ಲಿ ರೈತರ ಭೂಮಿಯು ಉಳ್ಳವರ ಪಾಲಾಗದಂತೆ ತಡೆಯುವ ಕಾಯ್ದೆಯವರೆಗೆ ವಿವಿಧ ಘಟ್ಟಗಳಲ್ಲಿ ಹಾದು ಬಂದಿತು. ಗೇಣಿದಾರರ ಪರವಾದ ಹೋರಾಟದಲ್ಲಿ ಪಾಲ್ಗೊಂಡಿದ್ದ ಸಾಗರದ ಕಾಗೋಡು ತಿಮ್ಮಪ್ಪನವರು ನಂತರ ಕಾಯ್ದೆಯು ಜಾರಿಗೆ ಬರುವ ಹೊತ್ತಿಗೆ ಶಾಸಕರಾಗಿದ್ದರು. ಹಾಗಾಗಿ ಕಾಯ್ದೆ ತಿದ್ದುಪಡಿಯಾಗುತ್ತಿರುವ ಹೊತ್ತಿನಲ್ಲಿ ಅವರನ್ನೇ ಮಾತಾಡಿಸುವುದು ಸೂಕ್ತವಾಗಿದ್ದುದರಿಂದ, ಸಾಗರದ ಜನಪರ ಹೋರಾಟಗಾರ, ಪತ್ರಕರ್ತ ಕಬಸೆ ಅಶೋಕ ಮೂರ್ತಿಯವರು ನ್ಯಾಯಪಥಕ್ಕಾಗಿ ಕಾಗೋಡು ತಿಮ್ಮಪ್ಪನವರನ್ನು ಸಂದರ್ಶಿಸಿದ್ದಾರೆ.
ಪ್ರಶ್ನೆ: ಭೂ ಸುಧಾರಣಾ ಕಾಯ್ದೆಗೆ ಈಗಿನ ಸರ್ಕಾರ ತರಲಿರುವ ತಿದ್ದುಪಡಿ ಸಣ್ಣ ತಿದ್ದುಪಡಿಯೇ ಅಥವಾ ಭೂ ಸುಧಾರಣಾ ಕಾನೂನನ್ನೇ ಕಿತ್ತು ಹಾಕುವ ಪ್ರಮಾಣದ್ದಾ?
ಉ. ಈ ಬಗ್ಗೆ ಸರ್ಕಾರ ಅಧಿಕೃತವಾಗಿ ಯಾವುದೇ ಮಸೂದೆ ಮಂಡಿಸಿಲ್ಲ. ಆದರೂ ಇವರ ಯೋಚನೆ ಶ್ರೀಮಂತರು, ವ್ಯಾಪಾರಸ್ಥರು ಹಣವಂತರಿಗೆ ಲಾಭಮಾಡಿಕೊಡುವ ಉದ್ದೇಶದಿಂದ ಕೂಡಿದೆ.
ಪ್ರಶ್ನೆ: ನಾವು ಬದಲಾವಣೆಗೆ ಹೊಂದಿಕೊಳ್ಳಬೇಕು, ವಿರೋಧಕ್ಕೆ ವಿರೋಧ ಮಾಡಬಾರದು ಅಂತ ಈಗಿನ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರಲ್ಲ ಇದರ ಕುರಿತು ನಿಮ್ಮ ಅನಿಸಿಕೆ?
ಉ. ದೇವರಾಜ ಅರಸು ಕಾಲದಲ್ಲಿ ತಂದ ತಿದ್ದುಪಡಿಯಿಂದ ಗೇಣಿ ರೈತರಿಗೆ ಶೇ.100 ಅನುಕೂಲ ಆಗಿತ್ತು. ಹಿಡುವಳಿ ದೃಷ್ಟಿಯಿಂದ ಸಮಾಜವಾದಿಗಳ ಆಲೋಚನೆ ಈಡೇರಿಲ್ಲ. ಒಬ್ಬರಿಗೆ 50 ಎಕರೆ ಮಿತಿ ಎಂದು ಯೋಚಿಸಿ ಒಂದು ಕುಟುಂಬದಲ್ಲಿ 3 ಜನ ಇದ್ದರೆ 150 ಎಕರೆ ಜಮೀನು ಬರುತ್ತಿತ್ತು. ಅದು ಸರಿಯಲ್ಲವೆಂದು ಆ ಸಮಿತಿಯಲ್ಲಿದ್ದ ನಾನೂ ಸೇರಿದಂತೆ ಎಲ್ಲರೂ ವಿರೋಧಿಸಿದ್ದೆವು. ಹಿಡುವಳಿ ದೃಷ್ಟಿಯಿಂದ ಅರಸುರವರು ನಮ್ಮ ಸಲಹೆ ಒಪ್ಪಲಿಲ್ಲ. ಆದರೆ ಗೇಣಿ ರೈತರ ದೃಷ್ಟಿಯಿಂದ ನಮ್ಮ ಸಲಹೆ ಒಪ್ಪಿದ್ದರು. ಈಗಿನ ಸರ್ಕಾರದ ಉದ್ದೇಶ ಗೊತ್ತಾಗಿಲ್ಲ. ಮೇಲ್ನೋಟಕ್ಕೆ ಕಂಡುಬರುವುದೇನೆಂದರೇ, ಬಂಡವಾಳಶಾಹಿಗಳಿಗೆ ಹಣವಂತರಿಗೆ, ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡುವ ಉದ್ದೇಶ ಕಂಡುಬರುತ್ತಿದೆ. ಸರ್ಕಾರ ತನ್ನ ನಿರ್ದಿಷ್ಟ ಉದ್ದೇಶ ಖಚಿತಪಡಿಸುವವರೆಗೆ ವಿರೋಧಿಸುವುದು ಕಷ್ಟ. ಈ ಕಾನೂನಿಗೆ ತಿದ್ದುಪಡಿತರಲು ಹೊರಟಿರುವವರು ಗೇಣಿಶಾಸನ ಜಾರಿಗೆ ಬರುವ ಸಂದರ್ಭದಲ್ಲಿ ಗೇಣಿ ಶಾಸನ ಜಾರಿಗೆ ಬರುವಾಗ ಯಾವುದೇ ಸಲಹೆ ಸಹಕಾರ ನೀಡಿರಲಿಲ್ಲ. ಆಗ ಇವರುಗಳು ಗೇಣಿದಾರರ ವಿರೋಧಿಯಾಗಿದ್ದರು.
ಪ್ರಶ್ನೆ: ಈ ಕಾಯ್ದೆ ಬಂದು ಮೂರುವರೆ ದಶಕಕ್ಕೂ ಹೆಚ್ಚು ಕಾಲವಾಗಿದೆ. ಹಾಗಾದರೆ ಏನೂ ಬದಲಾವಣೆ ಬೇಕಿರಲಿಲ್ಲವಾ?
ಉ. ಭೂಸುಧಾರಣೆ ಕಾನೂನು ಜಾರಿಗೆ ಬಂದಿದ್ದರಿಂದ ಗೇಣಿದಾರರಿಗೆ ಭೂಮಿ ಸಿಕ್ಕಿದೆ. ಹತ್ತಾರು ವರ್ಷಗಳಿಂದ ಗೇಣಿದಾರರಾಗಿದ್ದವರು ಭೂ ಮಾಲೀಕರಾಗಿದ್ದಾರೆ. ಆರ್ಥಿಕವಾಗಿ ಸಬಲರಾಗಿ ಸ್ವತಂತ್ರರಾಗಿ ಬದುಕು ಕಟ್ಟಿಕೊಂಡಿದ್ದಾರೆ.
ಪ್ರಶ್ನೆ: ದಕ್ಷಿಣ ಭಾರತದ ಉಳಿದ ರಾಜ್ಯಗಳು ಸೇರಿದಂತೆ ಹಲವಾರು ಕಡೆ ಇರದೇ ಇದ್ದ ನಿರ್ಬಂಧಗಳನ್ನು ಕರ್ನಾಟಕದಲ್ಲಿ ಹಾಕಲಾಗಿತ್ತು; ಅದನ್ನಷ್ಟೇ ತೆಗೆದಿದೆ ಎಂದು ಹೇಳುತ್ತಾರೆ. ಅದರ ಬಗ್ಗೆ ನಿಮ್ಮ ಅನಿಸಿಕೆ ಏನು?
ಉ. ವಾಸ್ತವವಾಗಿ ಕರ್ನಾಟಕದಲ್ಲಿ ಬಂದಷ್ಟು ಪರಿಣಾಮಕಾರಿಯಾಗಿ ಭೂ ಸುಧಾರಣಾ ಕಾನೂನು ಭಾರತದ ಯಾವ ರಾಜ್ಯದಲ್ಲಿಯೂ ಬಂದಿಲ್ಲ; ಇವರಿಗೆ ಸುಧಾರಣೆ ತರಬೇಕೆಂದು ಅನ್ನಿಸಿದ್ದರೆ, ಈಗ ಅತ್ಯಧಿಕ ಭೂಮಿ ಹೊಂದಿದವರಿಂದ ಭೂಮಿಯನ್ನು ಕಿತ್ತುಕೊಂಡು ಭೂ ರಹಿತರಿಗೆ ಹಂಚುವ ಕೆಲಸ ಮಾಡಬೇಕಿತ್ತು.
ಪ್ರಶ್ನೆ: ನಾವು ತಿದ್ದುಪಡಿ ಮಾಡದಿದ್ದರೂ ಎಸಿ.ಗಳಿಗೆ ದುಡ್ಡುಕೊಟ್ಟು ಭೂಮಿ ಕೊಂಡುಕೊಳ್ಳುವುದು ನಡೆಯುತ್ತಲೇ ಇತ್ತು. ಅದನ್ನು ಈಗ ಕಾನೂನು ಬದ್ಧಗೊಳಿಸಿದ್ದೇವೆ ಎಂಬದು ಸರ್ಕಾರದ ಇನ್ನೊಂದು ಸಮಜಾಯಿಷಿ. ಇದಕ್ಕೇನು ಹೇಳುತ್ತೀರಿ?
ಉ. ಭೂ ನ್ಯಾಯ ಮಂಡಳಿಯಲ್ಲಿ ಎ.ಸಿ.ಯವರು ಅಧ್ಯಕ್ಷರಾಗಿರುತ್ತಾರೆ. ಶಾಸಕರು ಆ ಸಮಿತಿಯಲ್ಲಿರುತ್ತಾರೆ. ಅಂತಹಾ ಅವ್ಯವಹಾರ ಕಂಡು ಬಂದರೆ ಸರಿಯಾದ ತನಿಖೆ ನಡೆಸಿ ಅಂತಹವರಿಂದ ಭೂಮಿ ಕಿತ್ತುಕೊಳ್ಳುವ ಕೆಲಸ ಮಾಡಲಿ.
ಪ್ರಶ್ನೆ: ಎ.ಪಿ.ಎಂ.ಸಿ. ಕಾಯ್ದೆಗೆ ತಂದ ತಿದ್ದುಪಡಿಯು ಗುತ್ತಿಗೆ ಕೃಷಿಗೆ ಅನುಕೂಲ ಮಾಡಿಕೊಡುವ ತಿದ್ದುಪಡಿಯಾಗಿದೆಯೆಂದು ಹೇಳಲಾಗುತ್ತದೆ. ಇವೆಲ್ಲವೂ ಭಾರತದ/ ಕರ್ನಾಟಕದ ಕೃಷಿ ಕ್ಷೇತ್ರ ಉಂಟು ಮಾಡುವ ಪರಿಣಾಮಗಳೇನು?
ಉ. ರೈತರ ಮನೆ ಬಾಗಿಲಿಗೆ ಬಂದು ದವಸಧಾನ್ಯ ಖರೀದಿ ಮಾಡುವುದರಿಂದ ಯಾವ ರೀತಿ ರೈತರಿಗೆ ಲಾಭವಾಗುತ್ತದೆ? ರೈತರಿಗೆ ಲಾಭ ಮಾಡಿಕೊಡುವ ದೃಷ್ಟಿ ಇದ್ದರೆ ಎ.ಪಿ.ಎಂ.ಸಿ.ಗಳ ಶಾಖೆಗಳನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾಡಲಿ. ಭೂ ಹಿಡುವಳಿ ಹೊಂದಿದವರು ಹೆಚ್ಚಿನ ಹಣದಾಸೆಗಾಗಿ ಭೂಮಿ ಮಾರಿಕೊಂಡು ಭೂ ರಹಿತರಾಗುತ್ತಾರೆ, ಹಣವಂತರು, ಕೈಗಾರಿಕೋದ್ಯಮಿಗಳ ಕೈಗೆ ಕೃಷಿ ಭೂಮಿ ಹೋಗುತ್ತದೆ, ಸಮಾಜದಲ್ಲಿ ಮತ್ತೆ ಅಸಮಾನತೆ ಮೂಡುತ್ತದೆ.
ಪ್ರಶ್ನೆ: ಯಡಿಯೂರಪ್ಪನವರೂ ರೈತರ ಪರ ಕೆಲವು ಹೋರಾಟಗಳನ್ನು ನಡೆಸಿದವರು, ಇದೇ ಜಿಲ್ಲೆಯವರು. ಅವರೇಕೆ ಇಂತಹ ತೀರ್ಮಾನಗಳಿಗೆ ಮುಂದಾಗುತ್ತಿದ್ದಾರೆ?
ಉ. ಯಡಿಯೂರಪ್ಪನವರು ಯಾವ ಹೋರಾಟ ಮಾಡಿದ್ದಾರೆ?
ಪ್ರಶ್ನೆ: ಕಾಂಗ್ರೆಸ್ ಪಕ್ಷದ ನಾಯಕರು ವಿರೋಧ ಮಾಡಿದ್ದಾರೆ. ಆದರೆ ಈ ರೀತಿ ಹೇಳಿಕೆಗಳನ್ನಷ್ಟೇ ನೀಡಿ ಸುಮ್ಮನಾಗಿ ಬಿಟ್ಟರೆ ಸಾಕೇ? ಕಾಂಗ್ರೆಸ್ ಇನ್ನೂ ಪರಿಣಾಮಕಾರಿ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಲ್ಲವೇ?
ಉ. ಡಿ.ಕೆ.ಶಿವಕುಮಾರ್‌ರವರು ಈಗಷ್ಟೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಕ್ಷ ಸಭೆ ಸೇರಿ ಸೂಕ್ತ ತೀರ್ಮಾನ ಕೈಗೊಂಡು ಭೂ ಸುಧಾರಣೆ ತಿದ್ದುಪಡಿಯ ಬಗ್ಗೆ ಪರಿಣಾಮಕಾರಿ ಹೋರಾಟ ಮಾಡುತ್ತದೆ.
ಪ್ರಶ್ನೆ: ಗೇಣಿದಾರರ ಪರವಾಗಿ ಹೋರಾಟ ಮಾಡಿದ ನೀವು ಈ ಸಂದರ್ಭದಲ್ಲಿ ಏನು ಮಾಡುತ್ತೀರಿ ಸುಮ್ಮನಿರುವುದು ಸರಿಯೇ?
ಭೂ ಸುಧಾರಣಾ ತಿದ್ದುಪಡಿಯ ಬಗ್ಗೆ ನನ್ನ ವಿರೋಧ ಇದ್ದೇ ಇದೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.
ಪ್ರಶ್ನೆ: ಭೂಮಿಯನ್ನು ಪಡೆದು ಉಳುಮೆ ಮಾಡಬೇಕೆಂದು ಆಸಕ್ತಿ ಹೊಂದಿದವರಿಗೆ ಈ ಕಾನೂನಿನಿಂದ ಅನುಕೂಲವಾಗುತ್ತದಲ್ಲವೇ?
ಉ. ಭೂಮಿ ಹೊಂದಿ ಕೃಷಿ ಮಾಡಬೇಕೆಂದು ಆಸಕ್ತಿ ಹೊಂದಿದವರಿಗೆ ಭೂಮಿ ನೀಡುವ ಅಭಿಲಾಷೆ ಸರ್ಕಾರಕ್ಕಿದ್ದರೆ ಭೂ ತಿದ್ದುಪಡಿಯನ್ನು ಮಾಡುವ ಅಗತ್ಯವಿಲ್ಲ. ಸರ್ಕಾರದ ಹತ್ತಿರ ಇರುವ ಭೂಮಿಯನ್ನು ಅಂತಹವರಿಗೆ ನೀಡಬಹುದಲ್ಲ.
ಸಂದರ್ಶಕರು: ಕಬಸೆ ಅಶೋಕಮೂರ್ತಿ ಮತ್ತು ನಾಗರಾಜ
ಇದನ್ನೂ ಓದಿ: ಹಳೆ ಕಾಂಗ್ರೆಸ್ ಸಂಸ್ಕೃತಿ ಮತ್ತು ದುಡ್ಡು ಎಂಬ ಡಿಕೆಶಿ ಮಾದರಿ ವರ್ಕ್‌ಔಟ್ ಆಗುತ್ತಾ?


