ಅಪ್ರತಿಮ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಜೀವವನ್ನೇ ಬಲಿಕೊಟ್ಟ ಮಹಾನ್ ವ್ಯಕ್ತಿ ಭಗತ್‌ಸಿಂಗ್ ಕುರಿತ ಪಠ್ಯವನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ. ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ರಚನೆಯಾಗಿದ್ದ ಪಠ್ಯಪುಸ್ತಕ ಪರಿಶೀಲನಾ ಸಮಿತಿಯು ಹಲವು ಬದಲಾವಣೆಗಳನ್ನು ಮಾಡಿದೆ. ಕನ್ನಡ ಖ್ಯಾತ ಲೇಖಕರಾದ ಪಿ.ಲಂಕೇಶ್, ಸಾ.ರಾ.ಅಬೂಬುಕರ್ ಅವರ ಪಠ್ಯಗಳ ಜೊತೆಗೆ ಸರಳ ಸಜ್ಜನಿಕೆಗೆ ಹೆಸರಾದ ಡಾ.ಜಿ.ರಾಮಕೃಷ್ಣ ಅವರು ಬರೆದಿರುವ ‘ಭಗತ್‌ಸಿಂಗ್’ ಪಠ್ಯವನ್ನು ಹೊರಗಿಡಲಾಗಿದೆ.
ಜಾತಿವಾದ, ಮತೀಯವಾದವನ್ನು ಪ್ರತಿಪಾದಿಸಿದ, ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧವಾಗಿದ್ದ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಭಾಷಣವನ್ನು ಪಠ್ಯದಲ್ಲಿ ಸೇರಿಸಲಾಗಿದೆ. ‘ಧ್ವಜ’ (ಭಗವಾಧ್ವಜ)ದ ಕುರಿತು ಮಾತನಾಡುವ ಈ ಪಠ್ಯವನ್ನು ಸೇರಿಸಿಕೊಂಡು, ಆರ್‌ಎಸ್‌ಎಸ್ ಕುರಿತು ಮಕ್ಕಳಿಗೆ ಪರಿಚಯ ಮಾಡಿಕೊಡಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆದರೆ ಭಗತ್‌ಸಿಂಗ್ ಪಠ್ಯವನ್ನು ಕೈಬಿಡಲು ಕಾರಣವೇನು? ಎರಡು ಪುಟಗಳ ಈ ಪುಟ್ಟ ಪಾಠದಲ್ಲಿ ಅಂತಹ ಯಾವ ಆಕ್ಷೇಪಣೀಯ ಅಂಶಗಳಿವೆ? ಅಷ್ಟಕ್ಕೂ ಸರ್ಕಾರಕ್ಕೆ ಭಗತ್‌ಸಿಂಗ್ ಅವರನ್ನು ಕಂಡರೆ ಭಯ ಯಾಕೆ? ಒಬ್ಬ ಕ್ರಾಂತಿಕಾರಿ ಸ್ವಾತಂತ್ಯ್ರ ಯೋಧನ ಬಗ್ಗೆ ನಮ್ಮ ಮಕ್ಕಳಿಗೆ ಕಲಿಸಿದರೆ ತಪ್ಪೇನು? ನಾಡಿನ ಜನತೆಯೇ ಓದಿ ನಿರ್ಧರಿಸಬೇಕೆಂದು ಜಿ.ರಾಮಕೃಷ್ಣ ಅವರು ಬರೆದಿರುವ ಈ ಪಾಠವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಓದಿ….
ಪಠ್ಯಪೂರಕ ಅಧ್ಯಯನ; ಪುಟ ಸಂಖ್ಯೆ-169
೩. ಭಗತ್‌ಸಿಂಗ್
– ಡಾ. ಜಿ. ರಾಮಕೃಷ್ಣ
ಪ್ರವೇಶ: ಭಾರತ ಸ್ವತಂತ್ರಗೊಂಡು ಸ್ವಾತಂತ್ರ್ಯದ ಸವಿಯನ್ನು ನಾವಿಂದು ಅನುಭವಿಸುತ್ತಿದ್ದೇವೆ. ಆದರೆ ಆ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿ ಮಡಿದವರು ಅಸಂಖ್ಯಾತ ದೇಶಭಕ್ತರು. ಸ್ವಾತಂತ್ರ್ಯ ತ್ಯಾಗ ಬಲಿದಾನದ ಫಲ. ವೀರ ಸ್ವಾತಂತ್ರ್ಯ ಯೋಧರ ಬಲಿದಾನವನ್ನು ಸ್ಮರಿಸುವುದು ಭಾರತೀಯರೆಲ್ಲರ ಜವಾಬ್ದಾರಿ.
ಹನ್ನೆರಡು ವರ್ಷದ ಒಬ್ಬ ಬಾಲಕ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಮೂಕನಂತೆ ಅತ್ತಿಂದಿತ್ತ ಓಡಾಡುತ್ತಿದ್ದ. ಶಾಲೆಗೆ ಹೋಗಬೇಕಾಗಿದ್ದ ಆ ಬಾಲಕ ಅಂದು ತನ್ನ ಹಳ್ಳಿಯಿಂದ ರೈಲಿನಲ್ಲಿ ಅಮೃತಸರದಲ್ಲಿ ಬಂದಿಳಿದಿದ್ದ. ಒಂದೆರೆಡು ಪುಸ್ತಕಗಳು ಹಾಗೂ ಒಂದು ಪುಟ್ಟ ಡಬ್ಬಿಯಿದ್ದ ಕೈಚೀಲ ಅವನ ಬಳಿಯೇ ಇತ್ತು. ತುಸು ಹೊತ್ತಿನ ನಂತರ ಹುಡುಗ ಜಲಿಯನ್ ವಾಲಾಬಾಗ್‌ನಲ್ಲಿ ಒಂದೆಡೆ ಅಂತರ್ಮುಖಿಯಾಗಿ ಬಹುಕಾಲ ನಿಂತ. ನಂತರ ಅಲ್ಲಿದ್ದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಹಣೆಗಿಟ್ಟುಕೊಂಡ. ಇನ್ನಷ್ಟನ್ನು ತನ್ನಲ್ಲಿದ್ದ ಡಬ್ಬಿಯಲ್ಲಿ ಶೇಖರಿಸಿಕೊಂಡು ಹಿಂತಿರುಗಿದ. ರಾತ್ರಿ ಮನೆಗೆ ಹಿಂತಿರುಗಿದಾಗ ಅವನ ಸಹೋದರಿ ಎಂದಿನಂತೆ ಅವನನ್ನು ಊಟಕ್ಕೆಬ್ಬಿಸಿದರೆ ಒಲ್ಲೆನೆಂದು ಮುಖ ತಿರುಗಿಸಿದ. ಅವನಿಗೆ ಪ್ರಿಯವಾದ ಮಾವಿನ ಹಣ್ಣೊಂದನ್ನು ಕೂಡ ನಿರಾಕರಿಸಿ, ಅವಳನ್ನು ಮನೆಯ ಹಿಂಭಾಗಕ್ಕೆ ಕರೆದೊಯ್ದು. ತನ್ನ ಡಬ್ಬಿಯಲ್ಲಿದ್ದ ಮಣ್ಣನ್ನು ತೋರಿಸಿದ. ರಕ್ತದಲ್ಲಿ ಕಲೆಸಿದಂತಿದ್ದ ಆ ಮಣ್ಣು ಎಲ್ಲಿಯದೆಂದು ತಿಳಿದಾಗ ಅವನ ಉಪವಾಸಕ್ಕೆ ಕಾರಣ ಅವಳಿಗೆ ಗೊತ್ತಾಯಿತು. ‘ತ್ಯಾಗದ ಪ್ರತೀಕ ಆ ಮಣ್ಣು’ ಎಂದವಳಿಗೆ ತಿಳಿಯ ಹೇಳಿದ.
ಏಪ್ರಿಲ್ ೧೩, ೧೯೧೯ ರಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡಿದ್ದವರಿಗೆ ನಮನ ಸಲ್ಲಿಸಲು ಹೋಗಿದ್ದ ಆ ಬಾಲಕ ಭಗತ್‌ಸಿಂಗ್. ಇಂದು ಜಲಿಯನ್ ವಾಲಾಬಾಗ್‌ನಲ್ಲಿರುವ ಒಕ್ಕಣೆ ಹೀಗಿದೆ: “ಏಪ್ರಿಲ್- ೧೩- ೧೯೧೯ ರಂದು ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು ೨೦೦೦ ಮುಗ್ಧ ಹಿಂದೂ, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿ೦ದ ಈ ಪ್ರದೇಶ ಪಾವನವಾಗಿದೆ.” ಭಗತ್‌ಸಿಂಗ್ ಅಲ್ಲಿಗೆ ಹೋಗಿ ಅಂತರ್ಮುಖಿಯಾಗಿ ನಿಂತಾಗ ಈ ಭಾವನೆ ಅವನ ಮನಸ್ಸಿನಲ್ಲಿ ಹಾಯುತ್ತಿರಬೇಕು.
ಜಲಿಯನ್ ವಾಲಾಬಾಗ್‌ನಲ್ಲಿ ನೆರೆದಿದ್ದ ಜನಕ್ಕೆ ತಾವೊಂದು ರಾಜಕೀಯ ಆಂದೋಳನದಲ್ಲಿ ಭಾಗಿಗಳಾಗಬೇಕೆಂಬ ಆಕಾಂಕ್ಷೆಯಾಗಲಿ ಹುತಾತ್ಮರಾಗಬೇಕೆಂಬ ಅಭಿಲಾಷೆಯಾಗಲಿ ಇದ್ದಿರಲಾರದು. ಜನರಲ್ ಡಯರ್ ಸಹ ತನ್ನ ಪೈಶಾಚಿಕ ಘಾತುಕತೆಯನ್ನುಳಿದ ಬೇರಾವ ಭಾವನೆಯಿಂದಲೂ ಪ್ರೇರಿತನಾಗಿದ್ದ ಎಂದು ನಂಬುವುದು ಕಷ್ಟ. ಕ್ರೂರ ಮಾರ್ಗದಿಂದ ಭಾರತೀಯರನ್ನೂ ಬಗ್ಗು ಬಡಿಯಬಹುದೆಂದು ಅವನ ಎಣಿಕೆ. ಬ್ರಿಟಷ್ ಸಾಮ್ರಾಜ್ಯದ ಅನವರತ ಏಳಿಗೆಗೆ ಇದಕ್ಕಿಂತಲೂ ಸುಲಭವಾದ ಮಾರ್ಗವನ್ನು ಚಿಂತಿಸಲು ಅವನು ಅಶಕ್ತನಾಗಿದ್ದ. ಒಟ್ಟು ೧೬೫೦ ಸುತ್ತುಗಳಷ್ಟು ಗುಂಡಿನ ಮಳೆ ಕರೆಯಿಸಿದ್ದ ಅವನು ಹೆಮ್ಮೆಯಿಂದ ಹೇಳಿಕೊಂಡದ್ದು ಇದು “ಒಂದೇ ಒಂದು ಗುಂಡು ಸಹ ದಂಡವಾಗಲಿಲ್ಲ”. ಅಂದು ಪ್ರಾಣ ಕಳೆದುಕೊಂಡವರ ಸಂಖ್ಯೆ ಇದನ್ನು ಖಚಿತಗೊಳಿಸಿತ್ತು.
ಜಲಿಯನ್ ವಾಲಾಬಾಗಿನ ರಕ್ತಸಿಕ್ತವಾಗಿದ್ದ ಮಣ್ಣನ್ನು ನಿಧಿಯಂತೆ ಕಾಪಾಡಿಕೊಂಡು ಬಂದಿದ್ದ ಬಾಲಕ ಭಗತ್‌ಸಿಂಗ್ ಮುಂದೆ ತನ್ನ ಕ್ರಾಂತಿಕಾರಿ ಗುಂಪಿನ ಸಹಾಯದಿಂದ ಬ್ರಿಟಿಷ್ ಸರ್ಕಾರದ ವಿರುದ್ಧ ತನ್ನ ಸೇಡನ್ನು
ತೀರಿಸಿಕೊಳ್ಳುತ್ತಾನೆ. ಇದರ ಫಲವಾಗಿ ಮರಣ ದಂಡನೆಗೆ ಈಡಾಗಿ ತನ್ನ ಸಹಚರರಾದ ಸುಖ್‌ದೇವ್, ರಾಜ್‌ಗುರು, ಭಟುಕೇಶ್ವರ ದತ್ತರೊಂದಿಗೆ ಹಸನ್ಮುಖಿಯಾಗಿ ತಾಯಿ ಭಾರತಾಂಬೆಯ ಸ್ವಾತಂತ್ರ್ಯದ ಹಣತೆಗೆ ತೈಲವೆಂಬಂತೆ ವೀರಯೋಧನಾಗಿ ಅಮರನಾದನು.
ಇಂಕ್ವಿಲಾಬ್ ಜಿಂದಾಬಾದ್…!
ಕೃತಿಕಾರರ ಪರಿಚಯ
ಡಾ. ಜಿ. ರಾಮಕೃಷ್ಣ : ಗಂಪಲಹಳ್ಳಿ ರಾಮಕೃಷ್ಣರವರು ಕ್ರಿ.ಶ. ೧೯೩೯ರಲ್ಲಿ ಬೆಂಗಳೂರು ಗ್ರಾಮಾಂತರ ಮಾಗಡಿ ಬಳಿಯ ಕೆಂಪಸಾಗರದಲ್ಲಿ ಜನಿಸಿದರು. ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರಾಗಿ, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಹಂಪಿ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.ದೇವಿಪ್ರಸಾದ್ ಮತ್ತು ಲೋಕಾಯತ ದರ್ಶನ, ಭಗತ್‌ಸಿಂಗ್, ಭೂಪೇಶಸುಪ್ತ, ಚೆಗೆವಾರ, ಲೆನಿನ್, ಅನುವಾದ – ಬಾ ನೊಣವೇ, ವಾನರನಿಂದ ಮಾನವ ದರ್ಶನ ಮತ್ತು ಹಲವಾರು ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ರಾಜ್ಯಸಾಹಿತ್ಯ ಅಕಾಡೆಮಿ ಬಹುಮಾನವನ್ನು ನೀಡಿ ಗೌರವಿಸಲಾಗಿದೆ. ಪ್ರಸ್ತುತ ಪಾಠವನ್ನು ಜಿ. ರಾಮಕೃಷ್ಣರ ‘ಭಗತ್‌ಸಿಂಗ್’ ಎಂಬ ಜೀವನ ಚರಿತ್ರೆಯಿಂದ ಆರಿಸಿಕೊಳ್ಳಲಾಗಿದೆ.


