HomeUncategorizedಪೌರತ್ವ ಕಾಯ್ದೆಯ ಹುಳುಕುಗಳು - ಹುನ್ನಾರಗಳು : ನಿಮ್ಮ ಪ್ರಶ್ನೆಗೆ ಇಲ್ಲಿವೆ ಉತ್ತರಗಳು

ಪೌರತ್ವ ಕಾಯ್ದೆಯ ಹುಳುಕುಗಳು – ಹುನ್ನಾರಗಳು : ನಿಮ್ಮ ಪ್ರಶ್ನೆಗೆ ಇಲ್ಲಿವೆ ಉತ್ತರಗಳು

- Advertisement -

ಅನುವಾದ: ಗಿರೀಶ್ ತಾಳಿಕಟ್ಟೆ

ರಾಷ್ಟ್ರಪತಿಗಳ ಅಂಕಿತದೊಂದಿಗೆ ಹೊಸ ಕಾನೂನಾಗಿ ಜಾರಿಗೆ ಬಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದಲ್ಲಿ ತಲ್ಲಣವನ್ನು ಸೃಷ್ಟಿಸಿದೆ. ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ವಿಪರೀತ ವಿರೋಧ ವ್ಯಕ್ತವಾದಾಗ್ಯೂ ಸಂಖ್ಯಾಬಲದಲ್ಲಿ ಗೆಲುವಿನ ದಡ ಮುಟ್ಟಿರುವ ಕಾಯ್ದೆಗೆ ಕೇರಳ, ಪಂಜಾಬ್, ಪಶ್ಚಿಮ ಬಂಗಾಳ ರಾಜ್ಯಗಳು `ಅಸಹಕಾರ’ದ ಸವಾಲು ಎಸೆದಿವೆ. ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಸೇನೆಯ ಗುಂಡಿನ ದಾಳಿಗೆ ಹಲವು ಪ್ರತಿಭಟನಾಕಾರರು ಅಸುನೀಗಿದ್ದಾರೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆಗೆ ಏಕಿಷ್ಟು ವಿರೋಧ? ಅಸ್ಸಾಂ ರಾಜ್ಯ ಇಡಿಯಾಗಿ ಅಷ್ಟು ಗಟ್ಟಿ ದನಿಯಲ್ಲಿ ಇದನ್ನು ಪ್ರತಿರೋಧಿಸಲು ಕಾರಣವೇನು? ಹೊಸ ಕಾಯ್ದೆಗು ಮುನ್ನ ಇದ್ದ ನಿಯಮಗಳು ಏನು ಹೇಳುತ್ತಿದ್ದವು? ಇದರಿಂದ ಎಷ್ಟು ನಿಜ ನಿರಾಶ್ರಿತರಿಗೆ ಸರ್ಕಾರ ಪೌರತ್ವ ನೀಡಬೇಕಾಗುತ್ತದೆ?….. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ….

ಕಾನೂನಾತ್ಮಕವಾಗಿ ಮತ್ತು ಸಾಂವಿಧಾನಿಕವಾಗಿ, ಈ ಹೊಸ ಕಾಯ್ದೆಯ ಕುರಿತಂತೆ ನಡೆಯುತ್ತಿರುವ ನೈಜ ಚರ್ಚೆಗಳೇನು?

ಕಾನೂನು ತಜ್ಞರು ಮತ್ತು ವಿರೋಧ ಪಕ್ಷಗಳ ನಾಯಕರು, ಈ ತಿದ್ದುಪಡಿ ಸಂವಿಧಾನದ ಮೂಲ ಆಶಯವನ್ನು ಮಣ್ಣುಪಾಲು ಮಾಡಲಿದೆ ಎಂದು ಆರೋಪಿಸಿದ್ದಾರೆ. ಸಂಸತ್ತಿನಲ್ಲಿ ಕೇಳಿಬಂದ ಒಂದು ವಾದದ ಪ್ರಕಾರ ಈ ಕಾಯ್ದೆಯು ಸಂವಿಧಾನದ ಪರಿಚ್ಛೇದ 14ರಲ್ಲಿ ಉಲ್ಲೇಖಿಸಲಾದ, ಕಾನೂನು ದೃಷ್ಟಿಯಲ್ಲಿ ಸರ್ವರಿಗೂ ಸಮನಾದ ರಕ್ಷಣೆ ನೀಡಬೇಕು ಎಂಬ ಕಡ್ಡಾಯ ನಿಯಮವನ್ನು ಮೀರಲಿದೆ. ನ್ಯಾಯಾಲಯಗಳು ಅನುಸರಿಸಿಕೊಂಡು ಬಂದಿರುವ ಕಾನೂನಾತ್ಮಕ ಪ್ರಕ್ರಿಯೆಗಳ ಪ್ರಕಾರ, ಯಾವುದೇ ಕಾನೂನೊಂದು ಪರಿಚ್ಛೇದ 14ನ್ನು ಸಂತೃಪ್ತಗೊಳಿಸಬೇಕೆಂದರೆ, ಮೊದಲು ಅದು ಆ ಕಾನೂನಿನ ಅಡಿಗೆ ಬರುವ “ಸಮಂಸಜ ವರ್ಗೀಕರಣ” (reasonable class) ಹೊಂದಿರಬೇಕು. ಎರಡನೆಯದಾಗಿ, ಅಂತಹ ಕಾನೂನು ಸಾಧಿಸಲು ಹೊರಟಿರುವ ವಸ್ತು ಮತ್ತು ವಿಚಾರಗಳ ನಡುವೆ “ತರ್ಕಬದ್ಧ ನಂಟು” (rational nexus) ವಿವರಿಸಬೇಕು. ಒಂದೊಮ್ಮೆ ವರ್ಗೀಕರಣ (ವಿಂಗಡಿಸುವಿಕೆ) ಸಮಂಜಸವಾಗಿದ್ದರೂ, ಆ ವಿಂಗಡಣೆಗೆ ಬರುವ ಯಾವುದೇ ವ್ಯಕ್ತಿಯನ್ನು ಸಮನಾಗಿ ಪರಿಗಣಿಸಬೇಕು. ಒಂದೊಮ್ಮೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಹೊಸ ಕಾಯ್ದೆಯ ಉದ್ದೇಶ ಕಿರುಕುಳಕ್ಕೆ ಈಡಾದ ನಿರಾಶ್ರಿತರಿಗೆ ರಕ್ಷಣೆ ಒದಗಿಸುವುದೇ ಆಗಿದ್ದರೆ, ಕಾಯ್ದೆಯಲ್ಲಿ ಕೆಲ ದೇಶಗಳನ್ನು ಮತ್ತು ಧಾರ್ಮಿಕ ಮಾನದಂಡಗಳಲ್ಲಿ ಕೆಲವರನ್ನು ಹೊರಗಿಟ್ಟಿರುವುದು ನ್ಯಾಯಾಲಯದ ಕಾನೂನು ವಿಮರ್ಶೆಯ ಸಂದರ್ಭದಲ್ಲಿ ಕಾಯ್ದೆಯ ದೋಷವೆಂದು ಪರಿಗಣಿಸಲಾಗುವುದು.

ಅಷ್ಟೇ ಅಲ್ಲ, ಧರ್ಮದ ಆಧಾರದಲ್ಲಿ ಪೌರತ್ವ ನೀಡಲು ಮುಂದಾಗುವುದು, ನಮ್ಮ ಸಂವಿಧಾನದ ಮೂಲ ಸಂರಚನೆಯಾಗಿ ಪರಿಗಣಿಸಲ್ಪಟ್ಟಿರುವ ಜಾತ್ಯತೀತ ಪರಿಕಲ್ಪನೆಗೆ ವಿರುದ್ಧದವಾದುದಾಗಿದೆ. ಅಂದಹಾಗೆ, ಸಂವಿಧಾನದ ಜಾತ್ಯತೀತ ಮೂಲ ಆಶಯವನ್ನು ಸಂಸತ್ತಿನ ತಿದ್ದುಪಡಿಯಿಂದಲೂ ಬದಲಿಸಲಾಗದು!

“ಅಲ್ಪಸಂಖ್ಯಾತರಿಗೆ ಕಿರುಕುಳ ಕೊಡುತ್ತಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನ ದೇಶಗಳ ಪ್ರಧಾನ ಧರ್ಮ ಇಸ್ಲಾಂ” ಆಗಿದೆ ಅನ್ನೋ ತನ್ನ ಹೇಳಿಕೆ ಸಮಂಜಸ ವರ್ಗೀಕರಣಕ್ಕೆ ಸಾಕ್ಷಿಯಾಗಿದೆ ಎಂದು ಶಾ ವಾದಿಸಿದ್ದಾರೆ.

ಇನ್ನೊಂದು ವಾದದ ಪ್ರಕಾರ, ಸದರಿ ಕಾನೂನು, ಇತರೆ ನೆರೆ ದೇಶಗಳಲ್ಲಿ ನಿರಾಶ್ರಿತರಾಗುತ್ತಿರುವ ಹಾಗೂ ವಲಸೆ ಬರುತ್ತಿರುವ ಬೇರೆ ವರ್ಗದವರನ್ನು ಈ ಕಾಯ್ದೆಯಲ್ಲಿ ಪರಿಗಣಿಸದೆ ಇರುವುದು ಇದರ ಮತ್ತೊಂದು ದೋಷ ಎನ್ನಲಾಗುತ್ತಿದೆ.

ಹೊಸ ತಿದ್ದುಪಡಿ, ಮ್ಯಾನ್ಮಾರ್‍ನಲ್ಲಿ (ರೋಹಿಂಗ್ಯ ಮುಸಲ್ಮಾನರು) ಮತ್ತು ಶ್ರೀಲಂಕಾದಲ್ಲಿ (ತಮಿಳಿಗರು) ಜನಾಂಗೀಯ ದೌರ್ಜನ್ಯಕ್ಕೆ ತುತ್ತಾಗಿ ನಿರಾಶ್ರಿತರಾಗುತ್ತಿರುವ ಜನರ ಬಗ್ಗೆ ಪ್ರಸ್ತಾಪಿಸುವುದೇ ಇಲ್ಲ. ವ್ಯತಿರಿಕ್ತವಾಗಿ, ಬೌದ್ಧ ಧರ್ಮೀಯರು ಬಹುಸಂಖ್ಯಾತರಾಗಿರುವ, ಬೌದ್ಧ ಭಿಕ್ಕುಗಳು ಹಾಗೂ ಸಂಪ್ರದಾಯವಾದಿಗಳಿಂದ ಭೀಕರ ಮಾರಣಹೋಮಕ್ಕೆ ತುತ್ತಾಗುತ್ತಿರುವ ಮ್ಯಾನ್ಮಾರ್ ದೇಶದ ಅಲ್ಪಸಂಖ್ಯಾತರಾದ ಒಬ್ಬನೇ ಒಬ್ಬ ರೊಹಿಂಗ್ಯಾ ಮುಸ್ಲಿಂ ನಿರಾಶ್ರಿತ ಭಾರತ ಪ್ರವೇಶಿಸಲು ಬಿಡುವುದಿಲ್ಲ ಎಂದು ಅಮಿತ್ ಶಾ ಪದೇಪದೇ ಹೇಳಿದ್ದಾರೆ! ಅಲ್ಲದೇ, ಸುನ್ನಿ ಮುಸ್ಲಿಂ ಬಹುಸಂಖ್ಯಾತರಿರುವ ಪಾಕಿಸ್ತಾನದಲ್ಲಿ ಕಿರುಕುಳಕ್ಕೆ ಈಡಾಗಿ ಬರುವ ಶಿಯಾ ಮುಸ್ಲಿಮರು, ಅಹ್ಮದೀಯ ಮುಸಲ್ಮಾನರು (ಅಲ್ಪಸಂಖ್ಯಾತರು) ಅಥವಾ ಅಪ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಂದ ದೌರ್ಜನ್ಯಕ್ಕೆ ತುತ್ತಾಗುತ್ತಿರುವ ಹಜ್ರಾ, ತಜಿಕಿಗಳು ಮತ್ತು ಉಜ್ಬೇಕಿಗಳಿಗೆ ಪೌರತ್ವ ನಿರಾಕರಿಸುವ ಮೂಲಕ ಹೊಸ ಕಾಯ್ದೆ ಸ್ಪಷ್ಟವಾಗಿ ಸಂವಿಧಾನದ 14ನೇ ಪರಿಚ್ಛೇದವನ್ನು ಉಲ್ಲಂಘಿಸುತ್ತಿದೆ. ಇಸ್ಲಾಂ ರಾಷ್ಟ್ರಗಳಲ್ಲಿ ಮುಸ್ಲಿಮರಿಗೆ ಕಿರುಕುಳ ನೀಡಲಾಗುವುದಿಲ್ಲ ಎಂದು ಸಂಸತ್ತಿನಲ್ಲಿ ಶಾ ವಾದಿಸಿದ್ದಾರೆ.

ಪಾಕಿಸ್ತಾನದ ಶಿಯಾ ಮತ್ತು ಅಹಮದೀಯ ಅಲ್ಪಸಂಖ್ಯಾತ ನಿರಾಶ್ರಿತರನ್ನು ಕಾಯ್ದೆಯಿಂದ ಹೊರಗಿಟ್ಟಿರುವುದನ್ನು ಸಮರ್ಥಿಸಿಕೊಳ್ಳುತ್ತ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿಯವರು ನಿರಾಶ್ರಿತ ಶಿಯಾಗಳು ಭಾರತಕ್ಕೆ ಬರುವುದಕ್ಕಿಂತ ಇರಾನ್‍ಗೆ ತೆರಳಲಿ ಎಂದಿರುವುದನ್ನೂ ಇಲ್ಲಿ ಪರಿಗಣಿಸಬಹುದು.
ಇನ್ನು ಶ್ರೀಲಂಕಾ ಮತ್ತು ಭೂತಾನ್, ನೆರೆ ರಾಷ್ಟ್ರಗಳ ಬಗ್ಗೆ ಉಲ್ಲೇಖಿಸುತ್ತಾ ಇವೆರಡೂ ಇಸ್ಲಾಂ ರಾಷ್ಟ್ರಗಳಲ್ಲ ಎಂದು ವಾದಿಸಿದ್ದಾರೆ. ಅಲ್ಲಿಗೆ ಇಸ್ಲಾಂ ಅನ್ನು ಮಾನದಂಡವಾಗಿಟ್ಟುಕೊಂಡು ನಿರಾಶ್ರಿತರನ್ನು ಗುರುತಿಸಲಾಗುತ್ತಿದೆಯೇ ವಿನಾಃ ಮಾನವೀಯತೆಯ ಅಡಿಪಾಯದಲ್ಲಿ ಅಲ್ಲ ಎನ್ನುವುದು ಇದರಿಂದ ಸಾಬೀತಾಗುತ್ತದೆ.

ವಿಪರ್ಯಾಸವೆಂದರೆ, ಈ ಕಾಯ್ದೆಯಿಂದ ಶ್ರೀಲಂಕಾದ ಸಿಂಹಳೀಯ ಬಹುಸಂಖ್ಯಾತರಿಂದ ಕಿರುಕುಳ ಅನುಭವಿಸಿ ಸುದೀರ್ಘ ಶಸಸ್ತ್ರ ಹೋರಾಟ ನಡೆಸಿದ ಹೊರತಾಗಿಯೂ ನಿರಾಶ್ರಿತರಾಗುತ್ತಿರುವ ಶ್ರೀಲಂಕಾ ತಮಿಳರೂ ಕಾಯ್ದೆಯಿಂದ ಹೊರಗುಳಿಯಲಿದ್ದಾರೆ. ದ್ರಾವಿಡ ರಾಜಕೀಯ ಸಂಸ್ಕತಿಯ ಅಡಿಪಾಯದಲ್ಲಿ ಬಿಜೆಪಿಯ ಮನುವಾದಿ ಸೈದ್ಧಾಂತಿಕ ರಾಜಕಾರಣವನ್ನು ದೃಢವಾಗಿ ವಿರೋಧಿಸುತ್ತಾ ಬಂದಿರುವ ತಮಿಳು ಅಸ್ಮಿತೆಯ ಮೇಲೆ ಬಿಜೆಪಿ ಪ್ರಹಾರ ಮಾಡುತ್ತಿದೆಯೇ ಎಂಬ ವಾದವೂ ಕೇಳಿಬಂದಿದೆ. ಆ ಮೂಲಕ ತನಗೆ ಯಾವತ್ತಿಗೂ ಭರವಸೆಯ ಮತಬ್ಯಾಂಕ್‍ಗಳಾಗಿ ಪರಿವರ್ತನೆಯಾಗದ ಮುಸ್ಲಿಮರನ್ನು ಹಾಗೂ ತಮಿಳರನ್ನು ಪೌರತ್ವದಿಂದ ದೂರ ಇಡಲಾಗುವ ಸಂಚು ಇದರ ಹಿಂದೆ ಇದೆ ಎಂಬುದಾಗಿ ಈ ವಾದ ವಿಸ್ತಾರಗೊಳ್ಳುವುದನ್ನು ನಾವಿಲ್ಲಿ ಗಮನಿಸಬಹುದು.

ಈ ಇತರೆ ಸಮುದಾಯಗಳು ಆಯಾ ದೇಶದಲ್ಲಿ ಕಿರುಕುಳ ಅನುಭವಿಸುತ್ತಿಲ್ಲವೇ?
ಪಾಕಿಸ್ತಾನವು ತನ್ನ ಸಂವಿಧಾನದ ಎರಡನೇ ತಿದ್ದುಪಡಿಯಲ್ಲೇ ಅಹ್ಮದೀಯರನ್ನು “ಮುಸ್ಲೀಮೇತರರು” ಎಂದು ಘೋಷಿಸಿದೆ ಮಾತ್ರವಲ್ಲ, ಅಹಮದೀಯರು ತಮ್ಮನ್ನು ತಾವು ಮುಸ್ಲಿಮರೆಂದು ಕರೆದುಕೊಳ್ಳುವುದು ಅಪರಾಧ ಎಂದು ಅಪರಾಧ ಸಂಹಿತೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, ಮತದಾನ ಮಾಡುವ ಹಕ್ಕನ್ನು ನಿರಾಕರಿಸುವುದೂ ಒಳಗೊಂಡಂತೆ ಈ ಸಮುದಾಯಕ್ಕೆ ಹಲವು ನಿರ್ಬಂಧನೆಗಳನ್ನು ಹೇರಲಾಗಿದೆ. ಈ ಕಾರಣಕ್ಕೇ, 2016ರಲ್ಲಿ ಅಮೆರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗವು, ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ಅಡಿಬರುವ ಧಾರ್ಮಿಕ ಸ್ವಾಯತ್ತತೆ ನಿಯಮಗಳನ್ನು ಪಾಕಿಸ್ತಾನ ಗಂಭೀರವಾಗಿ ಉಲ್ಲಂಘಿಸಿದೆ ಎಂದು ಅದನ್ನು ಶ್ರೇಣಿ-1 ರಾಷ್ಟ್ರಗಳ ಪಟ್ಟಿಗೆ ಸೇರಿಸಿತ್ತು. ಇದೇ ವರ್ಷದ ಆಗಸ್ಟ್‍ನಲ್ಲಿ ನಡೆದ ‘ಸಶಸ್ತ್ರ ಸಂಘರ್ಷ ನಡೆಯುತ್ತಿರುವ ಪ್ರದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತಾ’ ಸಮಾವೇಶದಲ್ಲಿ ಅಮೆರಿಕಾ, ಯುಕೆ ಮತ್ತು ಕೆನಡಾ ದೇಶಗಳು ಚೀನಾ ಮತ್ತು ಪಾಕಿಸ್ತಾನದ ನೆಲಗಳಲ್ಲಿ ನಡೆಯುತ್ತಿರುವ ಧಾರ್ಮಿಕ ದೌರ್ಜನ್ಯವನ್ನು ಖಂಡಿಸಿದ್ದವು. ಅಂದರೆ ಅಹಮದೀಯರು ಪಾಕಿಸ್ತಾನದಿಂದ ಕಿರುಕುಳ ಅನುಭವಿಸುತ್ತಿರುವ, ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ ಎನ್ನುವುದು ಖಾತ್ರಿಯಾಗುತ್ತದೆ. ಆದಾಗ್ಯೂ ಅವರು ಇಸ್ಲಾಂ ಮೂಲದವರು ಎಂಬ ಕಾರಣಕ್ಕೆ ಹೊಸ ತಿದ್ದುಪಡಿಯಲ್ಲಿ ಅವರನ್ನು ಹೊರಗಿಡಲಾಗಿದೆ.

ಹೊಸ ಪೌರತ್ವ ಕಾಯ್ದೆ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿರುವ ಮೂರು ದೇಶಗಳಲ್ಲಿ ನಿಜಕ್ಕೂ ಆ ದೇಶದ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಿ, ಹೊರದಬ್ಬಲಾಗುತ್ತಿದೆಯಾ?
ರಾಜ್ಯಸಭೆಯಲ್ಲಿ ಈ ಸಂಗತಿಯನ್ನು ಚರ್ಚಿಸುವಾಗ, ಗೃಹಮಂತ್ರಿ ಅಮಿತ್ ಶಾ ಅವರು ಪಾಕಿಸ್ತಾನದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಧಾರ್ಮಿಕ ದೌರ್ಜನ್ಯದ ಪತ್ರಿಕಾ ವರದಿಗಳನ್ನಷ್ಟೇ ಅವಲಂಭಿಸಿ, ಬಲವಂತದ ಮತಾಂತರದಿಂದ ಹಿಡಿದು ದೇವಸ್ಥಾನಗಳ ಧ್ವಂಸಗಳಂತಹ ದೌರ್ಜನ್ಯಗಳು ನಡೆದಿವೆ ಎಂದಿದ್ದರು. ಅವರು ಕೊಟ್ಟ ನಿದರ್ಶನದಲ್ಲಿ ಆಸಿಯಾ ಬೀಬಿ ಪ್ರಕರಣ ಗಂಭೀರವಾದುದು. ಹೊಲಗಳಲ್ಲಿ ಕೂಲಿ ಕೆಲಸ ಮಾಡುವ ಈ ಪಾಕಿಸ್ತಾನಿ ಕ್ರಿಶ್ಚಿಯನ್ ಹೆಂಗಸು ಧರ್ಮನಿಂದನೆಯ ಪ್ರಕರಣಕ್ಕೆ ತುತ್ತಾಗಿ ಎಂಟು ವರ್ಷಗಳ ಕಾಲ ಮರಣದಂಡನೆಯ ಭೀತಿ ಅನುಭವಿಸಬೇಕಾಗಿತ್ತು. ಕೊನೆಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆಕೆಯ ಮರಣದಂಡನೆಯನ್ನು ವಜಾಗೊಳಿಸಿತ್ತು.

ಬಾಂಗ್ಲಾದಲ್ಲಿ ಅಲ್ಲಿನ ಇಸ್ಲಾಮಿಕ್ ಉಗ್ರರು ನಾಸ್ತಿಕರನ್ನು ಕೊಂದ ಸಾಕಷ್ಟು ಪ್ರಕರಣಗಳು ವರದಿಯಾಗಿದ್ದನ್ನು ಅವರು ಉಲ್ಲೇಖಿಸಿದ್ದರು. ಆದರೆ ಬಾಂಗ್ಲಾದೇಶದ ಪ್ರಸ್ತುತ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ಅವರು ಶಾ ಅವರ ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.
ಅಂದಹಾಗೆ, ಶಾ ಅವರ ಮಾತುಗಳಲ್ಲಿ ಮುಸ್ಲೀಮೇತರ ಧರ್ಮದವರನ್ನು ಕಿರುಕುಳಕ್ಕೆ ತುತ್ತಾದ ಅಲ್ಪಸಂಖ್ಯಾತರು ಎಂದು ಉಲ್ಲೇಖಿಸಲಾಗಿದೆಯಾದರು, ಕಾಯ್ದೆಯಲ್ಲಿ ಎಲ್ಲೂ `ಕಿರುಕುಳ’ ಎಂಬ ಪದವನ್ನು ಬಳಸಿಲ್ಲ!

ಹೊಸ ಕಾಯ್ದೆಯ ಪ್ರಕಾರ ಎಷ್ಟು ಜನ ಅಕ್ರಮ ವಲಸಿಗರಿಗೆ ಪೌರತ್ವ ನೀಡಬೇಕಾಗುತ್ತದೆ?
ಸಂಸತ್ತಿನಲ್ಲಿ ಗೃಹಮಂತ್ರಿ ಅಮಿತ್ ಶಾ ಅವರು ಮಸೂದೆಯನ್ನು ವಿವರಿಸುತ್ತಾ, “ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನಗಳಿಂದ ಗುಳೆ ಬಂದ ಲಕ್ಷ, ಕೋಟಿಗಟ್ಟಲೆ ಮುಸ್ಲಿಮೇತರ ನಿರಾಶ್ರಿತರಿಗೆ ಅನುಕೂಲವಾಗಲಿದೆ” ಎಂದಿದ್ದರು. ಆದರೆ 2016ರಲ್ಲಿ ಗೃಹ ಸಚಿವಾಲಯವೇ ಸಂಸತ್ತಿನಲ್ಲಿ ವಿಷಯ ಮಂಡಿಸುತ್ತಾ ಡಿಸೆಂಬರ್ 31, 2014ಕ್ಕೆ ಅನ್ವಯವಾಗುವಂತೆ ಭಾರತದಲ್ಲಿ 2,89,394 ನಿರಾಶ್ರಿತರನ್ನು ಗುರುತಿಸಲಾಗಿದೆ ಎಂದು ತಿಳಿಸಿತ್ತು. ಅವುಗಳಲ್ಲಿ ಬಹಳಷ್ಟು ಜನ ಬಾಂಗ್ಲಾ (1,03,817) ಮತ್ತು ಶ್ರೀಲಂಕಾ (1,02,467) ದಿಂದ ಬಂದವರು. ಟಿಬೆಟ್‍ನಿಂದ 58,155; ಮ್ಯಾನ್ಮಾರ್‍ನಿಂದ 12,434; ಪಾಕಿಸ್ತಾನದಿಂದ 8,799; ಅಪ್ಘಾನಿಸ್ತಾನದಿಂದ 3,469 ಜನ ವಲಸೆ ಬಂದಿದ್ದಾರೆ. ಇದು ಧರ್ಮಾತೀತವಾದ ಸಂಖ್ಯೆ. ಬಾಂಗ್ಲಾದಲ್ಲಿ ಮುಸ್ಲಿಮರನ್ನು ಹೊರಗಿಟ್ಟಿರುವುದರಿಂದ ಮತ್ತು ಶ್ರೀಲಂಕಾದ ತಮಿಳು ನಿರಾಶ್ರಿತರನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದರಿಂದ ಫಲಾನುಭವಿಗಳ ಸಂಖ್ಯೆ ಮತ್ತಷ್ಟು ಕುಸಿಯಲಿದೆ. ಆದರೆ ಬಾಂಗ್ಲಾ ವಲಸಿಗರು ಕೇಂದ್ರೀಕೃತವಾಗಿರುವ ಈಶಾನ್ಯ ರಾಜ್ಯಗಳು ಭಾರೀ ಹೊರೆ ಅನುಭವಿಸಬೇಕಾಗುತ್ತದೆ.

ಈ ಕಾಯ್ದೆಗು ಮುನ್ನ, ಇದೇ ಸಮುದಾಯಗಳಿಗೆ ಪೌರತ್ವ ನೀಡುವ ನಿಯಮಗಳು ಹೇಗಿದ್ದವು?
ಸಂವಿಧಾನದ 6ನೇ ಕಲಮ್ಮಿನ ಪ್ರಕಾರ ಜುಲೈ 19,1948ಕ್ಕಿಂತ ಮುಂಚಿತವಾಗಿ ಪಾಕಿಸ್ತಾನದಿಂದ (ಇದರ ಒಂದು ಭಾಗ ಈಗ ಬಾಂಗ್ಲಾದೇಶವಾಗಿದೆ) ಭಾರತವನ್ನು ಪ್ರವೇಶಿಸಿದ ವಲಸಿಗರಿಗೆ ಪೌರತ್ವ ನೀಡಲಾಗುತ್ತಿತ್ತು. ಪೂರ್ವ ಪಾಕಿಸ್ತಾನದಿಂದ (ಈಗಿನ ಬಾಂಗ್ಲಾದೇಶ) ಅತಿಹೆಚ್ಚು ವಲಸಿಗ ನಿರಾಶ್ರಿತರನ್ನು ಸ್ವೀಕರಿಸಿರುವ ಅಸ್ಸಾಂನ ಮಟ್ಟಿಗೆ ಅಸ್ಸಾಂ ಒಪ್ಪಂದದಲ್ಲಿ ಉಲ್ಲೇಖಿಸಲಾದಂತೆ ಮಾರ್ಚ್ 24, 1971ಕ್ಕಿಂತ ಮುಂಚೆ ಬಂದ ಬಾಂಗ್ಲಾ ವಲಸಿಗರಿಗೆ ಮಾತ್ರ ಪೌರತ್ವ ನೀಡಲಾಗುತ್ತಿತ್ತು.

ಅಕ್ರಮ ವಲಸೆಗೆ ಸಂಬಂಧಿಸಿದಂತೆ ಆಶ್ರಯ ಒದಗಿಸುವ ಅಥವಾ ನಿರಾಶ್ರಿತರೆಂದು ಘೋಷಿಸುವ ಕುರಿತು ಭಾರತ ಇದುವರೆಗೆ ಒಂದು ಸ್ಪಷ್ಟ ರಾಷ್ಟ್ರೀಯ ನೀತಿಯನ್ನು ಅಳವಡಿಸಿಕೊಳ್ಳದೇ ಇರುವುದು ದೊಡ್ಡ ಸಮಸ್ಯೆಯಾಗಿದೆ. ಆದಾಗ್ಯೂ, ನಿರಾಶ್ರಿತರು ಎಂದು ಕರೆಯಲಾಗುವ ಜನಸಮುದಾಯವನ್ನು ನಿಭಾಯಿಸಲು ಗೃಹ ಸಚಿವಾಲಯ ಒಂದು ನಿರ್ದಿಷ್ಟ ಮಾನದಂಡಗಳ ಕಾರ್ಯಾಚರಣೆ ವಿಧಾನವನ್ನು ಅಳವಡಿಸಿಕೊಂಡಿದೆ. ಒಬ್ಬೊಬ್ಬರೇ ನಿರಾಶ್ರಿತ ವಲಸಿಗ ಪ್ರಕರಣವನ್ನು ಅಧ್ಯಯನ ಮಾಡಿದ ನಂತರ ಅವರಿಗೆ ಇಲ್ಲಿ ದುಡಿಯುವ ಪರವಾನಗಿ ಅಥವಾ ದೀರ್ಘಾವಧಿ ವೀಸಾಗಳನ್ನು ನೀಡುತ್ತಾ ಬಂದಿದೆ. ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಈ ಹೊಸ ತಿದ್ದುಪಡಿ ಬರುವವರೆಗೆ ಹಳೆಯ ಪೌರತ್ವ ಕಾಯ್ದೆಯಲ್ಲಿ ವಲಸಿಗ ಅಲ್ಪಸಂಖ್ಯಾತರಿಗೆ ಅಥವಾ ನಿರಾಶ್ರಿತರಿಗೆ ಪೌರತ್ವ ನೀಡುವ ಯಾವ ಅವಕಾಶವೂ ಇರಲಿಲ್ಲ. ಈಗ 2014ರವರೆಗೆ ವಲಸೆ ಬಂದ ಅಲ್ಪಸಂಖ್ಯಾತರನ್ನು (ಮುಸ್ಲಿಮರನ್ನು ಹೊರತುಪಡಿಸಿ) ಅಧಿಕೃತವಾಗಿ ಭಾರತದ ಪ್ರಜೆಗಳು ಎಂದು ಒಪ್ಪಿಕೊಂಡುಬಿಟ್ಟರೆ, ಅವರು ಇಲ್ಲಿನ ಮೂಲನಿವಾಸಿಗಳ ಅವಕಾಶಗಳನ್ನು ಅಧಿಕೃತವಾಗಿಯೇ ಕಬಳಿಸಿಬಿಡುತ್ತಾರೆ ಎಂಬುದು ಈಶಾನ್ಯ ರಾಜ್ಯಗಳ ಆತಂಕ. 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಹಾಗೂ ಬಿಜೆಪಿಗೆ ಬಹುಮತ ತಂದುಕೊಟ್ಟ 2016ರ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಮಿಗರು ಬಿಜೆಪಿಯನ್ನು ಬೆಂಬಲಿಸಿದ್ದು ಆ ಪಕ್ಷ `ಅಕ್ರಮ ವಲಸಿಗರನ್ನು ಹೊರಹಾಕುತ್ತೇವೆ’ ಎಂಬ ಆಶ್ವಾಸನೆ ಕೊಟ್ಟಿದ್ದಕ್ಕೆ. ಈಶಾನ್ಯ ರಾಜ್ಯದವರ ಪ್ರಕಾರ ಅದರು ಹಿಂದೂಗಳೇ ಇರಲಿ, ಮುಸ್ಲಿಮರೇ ಇರಲಿ ಬಾಂಗ್ಲಾದಿಂದ ಬಂದವರು ವಲಸಿಗರು. ಆದರೆ ಬಿಜೆಪಿಯ ರಾಜಕೀಯ ಹೆಣಿಗೆಯ ಲೆಕ್ಕಾಚಾರದಲ್ಲಿ ಅಕ್ರಮ ವಲಸಿಗರೆಂದರೆ ಕೇವಲ ಬಾಂಗ್ಲಾ ಮುಸ್ಲಿಮರು ಅಷ್ಟೇ!

ದೇಶಾದ್ಯಂತ ಎನ್‍ಆರ್‍ಸಿ ನೋಂದಣಿ ನಡೆದರೆ, ಮುಸ್ಲಿಮರಂತೆಯೇ ಸೂಕ್ತ ದಾಖಲೆಗಳಿಲ್ಲದ ಹಿಂದೂಗಳೂ ಬಾಧಿತರಾಗುವುದಿಲ್ಲವೇ?
ಎನ್‍ಆರ್‍ಸಿ ಪಟ್ಟಿಯಿಂದ ಹಿಂದೂಗಳು ಕೂಡಾ ಹೊರಗುಳಿಯುವ ಸಾಧ್ಯತೆಯನ್ನು ತಳ್ಳಿಹಾಕಲಿಕ್ಕೆ ಬರುವುದಿಲ್ಲ. ಆದಾಗ್ಯೂ, ಅಂತಹ ಬಹಳಷ್ಟು ಹಿಂದೂಗಳ ಪ್ರತಿರೋಧ ಬರದಂತೆಯೇ ಈ ತಿದ್ದುಪಡಿಯನ್ನು ಹೆಣೆಯಲಾಗಿದೆ. ಮುಸ್ಲಿಮೇತರ ಅಲ್ಪಸಂಖ್ಯಾತರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವಾಗ ಯಾವುದೇ ದಾಖಲೆಗಳನ್ನು ಅಥವಾ ಅವರ ಮಾತೃದೇಶಗಳಲ್ಲಿ ಕಿರುಕುಳಕ್ಕೆ ಈಡಾದ ಪ್ರಮಾಣಗಳನ್ನು ಕೇಳಲಾಗುವುದಿಲ್ಲ ಎಂದು ಶಾ ಸಂಸತ್ತಿನಲ್ಲೇ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾ “ಈ ಹೊಸ ಕಾಯ್ದೆಯು, ಅಸ್ಸಾಂನಲ್ಲಿ ನಡೆಸಲಾದ ಎನ್‍ಆರ್‍ಸಿ ನೋಂದಣಿಯಿಂದ ಹೊರಗುಳಿದ ಹಿಂದೂ ವ್ಯಕ್ತಿಯೊಬ್ಬ ಸುಳ್ಳು ಹೇಳಲು ಪುಸಲಾಯಿಸುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ. ಅವರ ಪ್ರಕಾರ, ಎನ್‍ಆರ್‍ಸಿ ನೋಂದಣಿ ನಡೆಯುವಾಗ ವ್ಯಕ್ತಿಯೊಬ್ಬ ತಾನು ಭಾರತೀಯ ನಾಗರಿಕ ಎಂದು ಅರ್ಜಿ ಸಲ್ಲಿಸಿದ್ದ ಎಂದಿಟ್ಟುಕೊಳ್ಳೋಣ. ಆದರೆ ಪ್ರಾಧಿಕಾರಕ್ಕೆ ಅವನು ಒದಗಿಸಿದ ದಾಖಲೆಗಳು ಸಮಂಜಸವೆನಿಸದೆ ಅವನನ್ನು ನೋಂದಣಿಯಿಂದ ಹೊರಗೆ ಹಾಕಿರುತ್ತದೆ. ಈಗಾತ ಹೊಸ ಕಾಯ್ದೆಯ ಪ್ರಕಾರ, ನಾನು ಬಾಂಗ್ಲದಿಂದಲೊ, ಅಪ್ಘಾನಿಸ್ತಾನದಿಂದಲೋ ನಿರಾಶ್ರಿತನಾಗಿ ಬಂದ ಹಿಂದೂ ಎಂದು ಅರ್ಜಿ ಪೌರತ್ವಕ್ಕೆ ಸಲ್ಲಿಸಬೇಕಾಗುತ್ತೆ. ಅದನ್ನು ಪರಿಗಣಿಸಿ ಸರ್ಕಾರವೂ ಅವನಿಗೆ ಪೌರತ್ವ ನೀಡಬಹುದು. ಆದರೆ ಈ ಮೊದಲು ಅದೇ ಸರ್ಕಾರಕ್ಕೆ ನಾನು (ಎನ್‍ಆರ್‍ಸಿ ಸಮಯದಲ್ಲಿ) ಭಾರತೀಯ ನಾಗರಿಕ ಎಂದಿದ್ದ ಆತ, ಈಗ ಬೇರೆ ದೇಶದ ನಿರಾಶ್ರಿತ ಎಂದು ಹೇಳಿಕೊಳ್ಳಬೇಕು. ಎರಡರಲ್ಲಿ ಒಂದಂತೂ ಸುಳ್ಳು ಅನ್ನೋದ್ರಲ್ಲಿ ಸಂಶಯವಿಲ್ಲ. ಒಬ್ಬ ವ್ಯಕ್ತಿಯನ್ನು ಸುಳ್ಳು ಹೇಳಿಸಲು ಪ್ರಚೋದಿಸುವ ಶಾಸನ ಎಷ್ಟು ವಿಶ್ವಾಸಾರ್ಹವಾದುದು? ಎಂಬುದು ಅವರ ವಾದ.

ಅಲ್ಲದೇ, ಅಸ್ಸಾಂ ಒಂದು ರಾಜ್ಯದಲ್ಲೆ ಎನ್‍ಆರ್‍ಸಿ ನೋಂದಣಿ ನಡೆಸಲು 12,000 ಕೋಟಿ ರೂಪಾಯಿ ಖರ್ಚಾಗಿದೆ. ವರ್ಷಗಳೇ ಹಿಡಿದವು. ಅಷ್ಟಾದರು ಅಲ್ಲಿ ಸಾಕಷ್ಟು ದೋಷಗಳು ಕಂಡುಬಂದಿವೆ. ಸ್ವತಃ ಸರ್ಕಾರವೇ ಆ ನೋಂದಣಿಯನ್ನು ತಾನು ಪರಿಗಣಿಸುವುದಿಲ್ಲ ಎಂಬ ಅನೌಪಚಾರಿಕ ಹೇಳಿಕೆ ನೀಡುತ್ತಿದೆ. ಅಂತದ್ದರಲ್ಲಿ ಇಡೀ ದೇಶದಲ್ಲಿ ಎನ್‍ಆರ್‍ಸಿ ನೋಂದಣಿ ನಡೆಸಿದರೆ ಎಷ್ಟು ಹಣ ಮತ್ತು ಸಮಯ, ಮಾನವಸಂಪನ್ಮೂಲ ವ್ಯರ್ಥವಾಗಲಿಕ್ಕಿಲ್ಲ ಎಂಬ ವಾದವೂ ಇದೆ.

ಅಷ್ಟಕ್ಕೂ ಎನ್‍ಆರ್‍ಸಿ ನಂತರ ಅಕ್ರಮ ಬಾಂಗ್ಲಾ ವಲಸಿಗರನ್ನೆಲ್ಲ ಧರ್ಮಾತೀತವಾಗಿ ಹೊರಹಾಕಲಾಗುತ್ತದೆ ಎಂದು ನಂಬಿಸಲಾಗಿದ್ದ ಅಸ್ಸಾಂನಲ್ಲಿ ಎನ್‍ಆರ್‍ಸಿಗೆ ಅಂತಹ ವಿರೋಧ ವ್ಯಕ್ತವಾಗಿರಲಿಲ್ಲ. ಆದರೆ ಇಡೀ ದೇಶದ ವಿಷಯದಲ್ಲಿ ಇಂತಹ ಸಹಕಾರದ ವಾತಾವರಣ ಇಲ್ಲ.

ಅಸ್ಸಾಂ ಒಪ್ಪಂದ ಎಂದರೇನು ಮತ್ತು ಅದಕ್ಕೂ ಎನ್‍ಆರ್‍ಸಿಗೂ ಏನು ನಂಟು?
ಇದು ಆಗಸ್ಟ್ 15, 1985ರಲ್ಲಿ ಭಾರತ ಹಾಗೂ ಅಸ್ಸಾಂ ಸರ್ಕಾರಗಳು, ಮತ್ತು ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ, ಅಖಿಲ ಅಸ್ಸಾಂ ಗಣ ಸಂಗ್ರಾಮ ಪರಿಷತ್‍ಗಳ ನಡುವೆ ನವದೆಹಲಿಯಲ್ಲಿ ನಡೆದ ಒಂದು ಒಪ್ಪಂದ. ಪೂರ್ವ ಪಾಕಿಸ್ತಾನ (ಬಾಂಗ್ಲಾದೇಶ)ದಿಂದ ಅಕ್ರಮವಾಗಿ ವಲಸೆ ಬರುವವರ ವಿರುದ್ಧ ಅಸ್ಸಾಂ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಆರು ವರ್ಷಗಳ ಬೃಹತ್ ಹೋರಾಟಕ್ಕೆ ಇದು ಮಂಗಳ ಹಾಡಿತ್ತು. ಅಸ್ಸಾಂಗೆ ಮಾತ್ರ ಅನ್ವಯವಾಗುವ `ಅಕ್ರಮ ವಲಸಿಗರ (ನ್ಯಾಯಮಂಡಳಿಗಳಿಂದ ನಿರ್ಣಯಿಸಲ್ಪಟ್ಟಂತೆ) ಕಾಯ್ದೆ-1983’ ಪ್ರಕಾರ ವಿದೇಶಿ ವಲಸಿಗರನ್ನು ಪತ್ತೆ ಹಚ್ಚಲಾಗುವುದು ಎಂದು ಈ ಒಪ್ಪಂದದಲ್ಲಿ ಉಲ್ಲೇಖಿಸಲಾಗಿತ್ತು. ಆದರೆ 2005ರಲ್ಲಿ ಸರ್ವೋಚ್ಛ ನ್ಯಾಯಾಲಯವು ಇದನ್ನು ಅಸಂವಿಧಾನಿಕ ಎಂದು ವಜಾ ಮಾಡಿತ್ತು. ಅರ್ಜಿದಾರರಲ್ಲಿ ಒಬ್ಬರಾಗಿದ್ದ ಸಬರನಂದ ಸೋನಾವಾಲ (ಅಸ್ಸಾಂನ ಇಂದಿನ ಮುಖ್ಯಮಂತ್ರಿ) ಅವರು ಈ ಒಪ್ಪಂದದ ನಿಯಮಗಳು ಅದೆಷ್ಟು ಜಡವಾಗಿವೆಯೆಂದರೆ ಅಕ್ರಮ ವಲಸಿಗರನ್ನು ಗುರುತಿಸುವುದಾಗಲಿ, ಹೊರಹಾಕುವುದಾಗಲಿ ಇದರಿಂದ ಸಾಧ್ಯವಿಲ್ಲ ಎಂದು ವಾದಿಸಿದ್ದರು.

ಅಸ್ಸಾಂ ಒಪ್ಪಂದದ 6ನೇ ನಿಬಂಧನೆಗಳ ಪ್ರಕಾರ ಅಸ್ಸಾಂನ ಸಾಂಸ್ಕøತಿಕ ಅಸ್ಮಿತೆಯನ್ನು ರಕ್ಷಿಸಲಾಗುವುದು ಎಂದು ಗೃಹಮಂತ್ರಿಗಳು ಭರವಸೆಯ ಮಾತನ್ನಾಡಿದ್ದಾರೆ. ಏನದು?

ಸಮತೋಲನ ಕಾಯ್ದುಕೊಳ್ಳುವ ಭಾಗವಾಗಿ ಒಪ್ಪಂದಕ್ಕೆ ಈ ನಿಯಮವನ್ನು ಸೇರ್ಪಡೆ ಮಾಡಲಾಗಿತ್ತು. ಪಾಕಿಸ್ತಾನದಿಂದ ವಲಸೆ ಬಂದ ನಾಗರಿಕರಿಗೆ ಪೌರತ್ವ ನೀಡಲು ಉಳಿಕೆ ಭಾರತಕ್ಕೆ 19 ಜುಲೈ, 1948 ಕಟ್ ಆಫ್ ದಿನಾಂಕವಾಗಿದ್ದರೆ (ತಿದ್ದುಪಡಿಗು ಮುನ್ನ), ಅಸ್ಸಾಂ ಆ ಕಟ್ ಆಫ್ ದಿನಾಂಕವನ್ನು 24 ಮಾರ್ಚ್, 1971ಕ್ಕೆ ನಿಗದಿ ಮಾಡಿಕೊಂಡಿತ್ತು. ದೇಶವಿಭಜನೆಯ ನಂತರವೂ ನಡೆದ ಹೆಚ್ಚುವರಿ ವಲಸೆಗೆ ನಿರಂತರವಾಗಿ ಸಾಕ್ಷಿಯಾಗಿದ್ದಕ್ಕೆ ಪ್ರತಿಯಾಗಿ, ಆರನೇ ನಿಬಂಧನೆಯು, “ಅಸ್ಸಾಮಿ ಜನರ ಸಾಂಸ್ಕøತಿಕ, ಸಾಮಾಜಿಕ, ಭಾಷಿಕ ಅಸ್ಮಿತೆ ಮತ್ತು ಪರಂಪರೆಯನ್ನು ಸಂರಕ್ಷಿಸಲು ಮತ್ತು ಪ್ರಚುರಪಡಿಸಲು ಸೂಕ್ತವಾಗುವ ಸಾಂವಿಧಾನಿಕ, ಶಾಸನಬದ್ದ ಮತ್ತು ಆಡಳಿತಾತ್ಮಕ ಉಪಕ್ರಮಗಳನ್ನು ಒದಗಿಸಲಾಗುವುದು” ಎಂದು ಹೇಳುತ್ತದೆ.

ಈ ರಕ್ಷಣೆಯನ್ನು ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಅಡಿಯಲ್ಲಿ ಉಲ್ಲೇಖಿಸಲಾಗಿದೆ, “ವ್ಯಕ್ತಿಯ ಪೌರತ್ವ ನೀಡಿಕೆಯ ವಿಶೇಷ ಅವಕಾಶಗಳನ್ನು ಅಸ್ಸಾಂ ಒಪ್ಪಂದದ ಪ್ರಕಾರ ಪರಿಗಣಿಸಲಾಗುವುದು”. ಈ 6ಎ ಸೆಕ್ಷನ್‍ನ ಸಾಂವಿಧಾನಿಕ ಮಾನ್ಯತೆಯು ಸುಪ್ರೀಂ ಕೋರ್ಟ್‍ನ ಮುಂದೆ ವಿಚಾರಣೆಯ ಹಂತದಲ್ಲಿದೆ.

“ಅಸ್ಸಾಮಿ ಜನರು” ಎಂದು ಯಾರನ್ನು ಕರೆಯಲಾಗುತ್ತದೆ ಎಂದು ಇದುವರೆಗೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ. ಆದಾಗ್ಯೂ 1951-71ರ ಅವಧಿಯಲ್ಲಿ ವಲಸೆ ಬಂದ ನಾಗರಿಕರನ್ನು ಹೊರತುಪಡಿಸಿ, 1951ಕ್ಕಿಂತ ಮುಂಚಿನ ಪೂರ್ವಜ ವಂಶಾವಳಿ ಕುರುಹುಗಳಿರುವವರನ್ನು ಅಸ್ಸಾಮಿಗಳು ಎಂದು ಒಂದು ವಿಶಾಲ ದೃಷ್ಟಿಯಲ್ಲಿ ಪರಿಗಣಿಸಲಾಗುತ್ತಿದೆ. ಭೂ ಒಡೆತನದ ಹಕ್ಕು, ರಾಜಕೀಯ ಹಕ್ಕುಗಳು, ಸಾಂಸ್ಕøತಿಕ ಸಂರಕ್ಷಣೆಯ ವಿಚಾರದಲ್ಲಿ ಎಂಥಾ `ವಿಶೇಷ ಅವಕಾಶಗಳನ್ನು’ ನೀಡಲಾಗುವುದು ಎಂದು ಕೇಂದ್ರದಿಂದ ರಚಿಲಸ್ಪಟ್ಟ ಸಮಿತಿ ಇನ್ನೂ ನಿರ್ಧರಿಸಬೇಕಿದೆ.

ನಿರ್ದಿಷ್ಟವಾಗಿ ಅಸ್ಸಾಂನಲ್ಲೇ ಯಾಕೆ ಈ ಪರಿ ಪ್ರತಿರೋಧ ಭುಗಿಲೆದ್ದಿದೆ?

ದೇಶದ ಇತೆರೆಡೆ ಈ ಕಾಯ್ದೆಯಿಂದ ಎಷ್ಟು ಜನ ನಿಜವಾದ ನಿರಾಶ್ರಿತರಿಗೆ ಧರ್ಮದ ಆಧಾರದಲ್ಲಿ ಅವಕಾಶ ಕೈತಪ್ಪಲಿದೆ ಎಂಬ ಚರ್ಚೆಯೇ ಪ್ರತಿಭಟನೆಗೆ ನೀರೆರಯುತ್ತಿದ್ದರೆ, ಅಸ್ಸಾಂ ಒಳಗೊಂಡ ಈಶಾನ್ಯ ರಾಜ್ಯಗಳಲ್ಲಿ ಈ ಕಾಯ್ದೆಯಿಂದ ಎಷ್ಟೆಲ್ಲ ನಿರಾಶ್ರಿತರಿಗೆ ಪೌರತ್ವ ದೊರೆಯಲಿದೆ ಎಂಬ ವಿಷಯವೇ ಪ್ರತಿಭಟನೆಯ ಕಾವು ಹೆಚ್ಚಿಸುತ್ತಿದೆ. ಈ ಕಾಯ್ದೆಯಿಂದಾಗಿ ಈಗಾಗಲೇ ಧರ್ಮಾತೀತವಾಗಿ (ಮುಸ್ಲಿಂ ವಲಸಿಗರಿಗಿಂತ ಹಿಂದೂ ವಲಸಿಗರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ) ಬಾಂಗ್ಲಾದಿಂದ ವಲಸೆ ಬಂದು ಉದ್ಯೋಗ, ಶಿಕ್ಷಣ, ಆರೋಗ್ಯ ಈ ಎಲ್ಲಾ ಕ್ಷೇತ್ರಗಳಲ್ಲು ತಮಗೆ ಪ್ರತಿಸ್ಪರ್ಧಿಯಾಗಿರುವ ವಲಸಿಗರಿಗೆ ಪೌರತ್ವ ನೀಡಿ ಅವರನ್ನು ಅಧಿಕೃತಗೊಳಿಸುವುದು ಮಾತ್ರವಲ್ಲ, ಮುಂದೆ ಆ ದೇಶಗಳಿಂದ ವಲಸೆ ಬರುವವರಿಗೆ ಈ ಕಾಯ್ದೆ ಉತ್ತೇಜನ ಕೊಟ್ಟ ತಮ್ಮ ಅಸ್ಸಾಮಿ ಅಸ್ಮಿತೆಯೇ ನಶಿಸಿಹೋಗಲಿದೆ ಎಂಬುವುದು ವಲಸಿಗರಿಂದಲೇ ತುಂಬಿಹೋಗಿರುವ ರಾಜ್ಯವಾದ ಅಸ್ಸಾಂನ ನಿಜವಾದ ಆತಂಕ. 1979-85ರ ನಡುವೆ ನಡೆದ ಅಸ್ಸಾಂ ಚಳುವಳಿಯ ಮೂಲ ಆಶಯವೇ ಬಂಗಾಳಿ ವಲಸಿಗರಿಂದ ಅಸ್ಸಾಮಿಗಳ ಉದ್ಯೋಗಾವಕಾಶ ಮತ್ತು ಜಮೀನು ಹಕ್ಕು ಕುಸಿಯದಂತೆ ತಡೆಯುವುದೇ ಆಗಿತ್ತು. ಪ್ರತಿಭಟನಕಾರರ ಪ್ರಕಾರ, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಈ ಹೊಸ ಕಾಯ್ದೆ 1985ರಲ್ಲಿ ಸಹಿಹಾಕಲ್ಪಟ್ಟ `ಅಸ್ಸಾಂ ಒಪ್ಪಂದ’ Assam Accord of 1985)ವನ್ನು ಇದು ಉಲ್ಲಂಘಿಸಲಿದೆ. ಅದರ ಪ್ರಕಾರ, ವಲಸಿಗರಿಗೆ ಪೌರತ್ವ ನೀಡಲು ಮಾರ್ಚ್ 24, 1971ಅನ್ನು ಕಟ್ ಆಫ್ ಡೇಟ್ ಆಗಿ ಪರಿಗಣಿಸಲಾಗುತ್ತಿತ್ತು. ಅಸ್ಸಾಂನಲ್ಲಿ ಇತ್ತೀಚೆಗೆ ನಡೆಸಲಾದ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ ಆರ್‍ಸಿ)ಗೂ ಇದೇ ದಿನಾಂಕವನ್ನು ಮಾನದಂಡವಾಗಿ ಬಳಸಲಾಗಿತ್ತು. ಆದರೆ ಹೊಸ ಕಾಯ್ದೆಯು ಡಿಸೆಂಬರ್ 31, 2014ರವರೆಗು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನ ದೇಶಗಳಿಂದ ವಲಸೆ ಬರಲಿರುವ ಹಿಂದೂ, ಸಿಖ್, ಕ್ರಿಶ್ಚಿಯನ್, ಪಾರ್ಸಿ, ಬೌದ್ಧರು ಮತ್ತು ಜೈನ ಅಲ್ಪಸಂಖ್ಯಾತ (ಆಯಾ ದೇಶಗಳ ದೃಷ್ಟಿಯಲ್ಲಿ) ಸಮುದಾಯಗಳಿಗೆ ಪೌರತ್ವ ನೀಡಲಾಗುವುದು. ಇಲ್ಲಿ ಮುಸ್ಲಿಮರನ್ನು ಹೊರಗಿಟ್ಟಿರುವುದು ಸದ್ಯದ ಚರ್ಚೆಯ ಸಂಗತಿಯಾಗಿದೆ.

ಈ ತಿದ್ದುಪಡಿಯು 1950ರಲ್ಲಿ ನೆಹ್ರೂ ಮತ್ತು ಲಿಯಾಕತ್ ನಡುವೆ ನಡೆದ ಒಪ್ಪಂದದಲ್ಲಾದ ದೋಷಗಳನ್ನು ಸರಿಪಡಿಸಲಿದೆ ಎಂದು ಶಾ ಸಂಸತ್ತಿನಲ್ಲಿ ಹೇಳಿದರು. ಏನಿದು ಒಪ್ಪಂದ?

ಭಾರತ ಮತ್ತು ಪಾಕಿಸ್ತಾನಗಳ ಇಬ್ಭಾಗದ ನಂತರ ಎರಡೂ ಕಡೆ ಭುಗಿಲೆದ್ದ ಕೋಮುದಳ್ಳುರಿಯ ಸಂದರ್ಭದಲ್ಲಿ ಉಭಯ ದೇಶದ ಪ್ರಧಾನಿಗಳಾದ ಜವಾಹರ ಲಾಲ್ ನೆಹರೂ ಮತ್ತು ಲಿಯಾಕತ್ ಅಲಿ ಖಾನ್ ನಡುವೆ ಆಯಾ ದೇಶದ ಅಲ್ಪಸಂಖ್ಯಾತರ ರಕ್ಷಣೆ ಮತ್ತು ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿ ಸಹಿಹಾಕಲ್ಪಟ್ಟ ಒಪ್ಪಂದ ಇದು. ಇದನ್ನು ದಿಲ್ಲಿ ಒಪ್ಪಂದ ಎಂತಲೂ ಕರೆಯಲಾಗುತ್ತದೆ. ಭಾರತವು ಅಲ್ಪಸಂಖ್ಯಾತರ ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿ ಸಾಂವಿಧಾನಿಕ ಖಾತ್ರಿಯನ್ನು ನೀಡಿದರೆ, ಪಾಕಿಸ್ತಾನವು ತನ್ನ ಸಂವಿಧಾನ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸುವ ಭರವಸೆ ನೀಡಿತ್ತು. ಈ ವಿಚಾರದಲ್ಲಿ ಪಾಕಿಸ್ತಾನ ತನ್ನ ಭರವಸೆ ಮುರಿದಿರುವುದರಿಂದ ಭಾರತವೂ ಆ ಒಪ್ಪಂದದಲ್ಲಿ ಇದ್ದಂತ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ನೀಡಲಾಗುತ್ತಿರುವ ರಕ್ಷಣೆ ಮತ್ತು ಹಕ್ಕುಗಳನ್ನು ನಿಲ್ಲಿಸಬೇಕು ಎಂಬುದು ಶಾ ಅವರ ವಾದ. ಇದು ಒಂದು ದ್ವೇಷ ಮನೋಭಾವದ, ಸೇಡಿನ ಪ್ರತಿಕಾರದ ವ್ಯಕ್ತಿಗತ ನಿಲುವಾಗಿರುತ್ತದೆಯೇ ವಿನಾಃ ಜಾತ್ಯತೀತ ಸಂವಿಧಾನದ ಅಡಿಪಾಯದ ಮೇಲೆ ಅಧಿಕಾರ ನಡೆಸುವ ಜವಾಬ್ಧಾರಿಯುತ ಸರ್ಕಾರದ ನಡೆಯೆನಿಸುವುದಿಲ್ಲ. ಹಾಗಾಗಿ ನೆಹರೂ-ಲಿಯಾಕತ್ ಒಪ್ಪಂದದ ಯಾವ ದೋಷಗಳನ್ನೂ ಈ ತಿದ್ದುಪಡಿ ಸರಿಪಡಿಸುವುದಿಲ್ಲ.

ಮೇಲ್ನೋಟಕ್ಕೆ ಹೊಸ ತಿದ್ದುಪಡಿ ಭಾರತೀಯೇತರ ಮುಸ್ಲಿಮರನ್ನಷ್ಟೇ ತನ್ನ ವ್ಯಾಪ್ತಿಯಿಂದ ಹೊರಗಿಡುತ್ತಿರುವಂತೆ ಕಂಡುಬಂದರು, ಇದು ಭಾರತೀಯ ಮುಸ್ಲಿಮರ ವಿರುದ್ಧವೂ ಕಿಡಿಕಾರುವ ಕಾಯ್ದೆ ಎಂತಲೂ ಏಕೆ ಹೇಳಲಾಗುತ್ತಿದೆ?

ಮೇಲ್ನೋಟಕ್ಕೆ ಈ ತಿದ್ದುಪಡಿ ಯಾವ ಭಾರತೀಯ ನಾಗರಿಕನನ್ನು ಹೊರಹಾಕುವುದಿಲ್ಲ. ಆದಾಗ್ಯೂ, ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ಎನ್‍ಆರ್‍ಸಿ (ರಾಷ್ಟ್ರೀಯ ನಾಗರಿಕ ನೋಂದಣಿ) ಮತ್ತು ಹೊಸ ಪೌರತ್ವ ಕಾಯ್ದೆಗಳನ್ನು ಪ್ರತ್ಯೇಕಿಸಿ ನೋಡಲಾಗುವುದಿಲ್ಲ. ಅಸ್ಸಾಂನ ಅಂತಿಮ ಎನ್‍ಆರ್‍ಸಿ ನೋಂದಣಿ ಪ್ರಕಾರ ಆ ಒಂದು ರಾಜ್ಯದಲ್ಲೇ 19 ಲಕ್ಷ ಜನ ಸೂಕ್ತ ದಾಖಲೆಗಳಿಲ್ಲದವರು ಎಂದು ಗುರುತಿಸಲ್ಪಟ್ಟಿದ್ದಾರೆ. ಈ ಹೊಸ ಕಾಯ್ದೆಯು ಈ 19 ಲಕ್ಷಗಳಲ್ಲಿರುವ ಬಾಂಗ್ಲಾ ಹಿಂದೂ ಕುಟುಂಬಗಳಿಗೆ ಪೌರತ್ವ ಹೊಂದುವ ಅವಕಾಶವನ್ನು ನೀಡುತ್ತದೆ, ಆದರೆ ಬಾಂಗ್ಲಾ ಮುಸ್ಲಿಂ ಕುಟುಂಬಗಳಿಗೆ ಈ ಅವಕಾಶ ಇರುವುದಿಲ್ಲ! ಅವರು ಕಾನೂನು ಹೋರಾಟ ನಡೆಸಬೇಕಾಗುತ್ತದೆ.

ಅಸ್ಸಾಂನಲ್ಲಿ ನಡೆಸಲಾದ ಎನ್‍ಆರ್‍ಸಿ ನೋಂದಣಿಯನ್ನು ದೇಶದ ಎಲ್ಲಾ ರಾಜ್ಯಗಳಿಗೆ ವಿಸ್ತರಿಸಲಾಗುವುದು ಎಂದು ಶಾ ಮತ್ತು ಇತರೆ ಬಿಜೆಪಿ ನಾಯಕರು ಹೇಳುತ್ತಲೇ ಬಂದಿದ್ದಾರೆ. ಅಸ್ಸಾಂನಲ್ಲಿ ಆದಂತೆ ಒಂದೊಮ್ಮೆ, ದೊಡ್ಡ ಸಂಖ್ಯೆಯ ಜನ ಸೂಕ್ತ ನೋಂದಣಿ ದಾಖಲೆಗಳಿಲ್ಲದೆ ಎನ್‍ಆರ್‍ಸಿ ಪಟ್ಟಿಯಿಂದ ಹೊರಗುಳಿದರೆ, ಅವರಲ್ಲಿ ಹಿಂದೂ ಅಥವಾ ಇನ್ನುಳಿದ ಐದು ಧರ್ಮದವರು ನೂತನ ತಿದ್ದುಪಡಿ ಪ್ರಕಾರ ಸುಲಭವಾಗಿ ಪೌರತ್ವ ಪಡೆದುಕೊಳ್ಳಬಹುದು. ಆದರೆ ಇಲ್ಲಿಯೇ ವಾಸವಾಗಿದ್ದರು, ಕಾರಣಾಂತರಗಳಿಂದ ಪ್ರಾಧಿಕಾರಗಳನ್ನು ಸಂತೃಪ್ತಪಡಿಸಬಲ್ಲಂತಹ ಸೂಕ್ತದಾಖಲೆಗಳಿಲ್ಲದ ಮುಸ್ಲಿಮರು ನಿರಾಶ್ರಿತರ ಶಿಬಿರ ಸೇರಬೇಕಾಗುತ್ತದೆ. ಇದೇ ಭಾರತೀಯ ಮುಸ್ಲಿಮರನ್ನು ಹಾಗೂ ಈ ದೇಶದ ಜಾತ್ಯತೀಯ ಪರಂಪರೆ ಅಭಿಮಾನಿಸುವರನ್ನು ಆತಂಕಕ್ಕೆ ತಳ್ಳಿರೋದು. ಹೀಗೆ ನಿರಾಶ್ರಿತ ಶಿಬಿರ ಸೇರುವ `ಅಕ್ರಮ’ ವಲಸಿಗ ಹಣೆಪಟ್ಟಿ ಹೊತ್ತವರಿಂದ ಮತದಾನದ ಹಕ್ಕನ್ನು ಕಿತ್ತುಕೊಂಡರೆ ಅವರು ಈ ದೇಶದಲ್ಲೆ ಎರಡನೇ ದರ್ಜೆಯ ನಾಗರೀಕರಾಗಿ ಬದುಕಬೇಕಾಗುತ್ತದೆ…

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಪರೇಡ್‌ ಮೈದಾನ ಸಜ್ಜು, ಸಾರ್ವಜನಿಕರಿಗಿಲ್ಲ ಪ್ರವೇಶ

0
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬೆಂಗಳೂರಿನ  ಮಹಾತ್ಮ ಗಾಂಧಿ ರಸ್ತೆಯ ಮಾಣಿಕ್ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಸಾರ್ವಜನಿಕರಿಗೆ ಅವಕಾಶ ನೀಡಿಲ್ಲ. ಆಹ್ವಾನ ಪತ್ರಗಳು ಮತ್ತು ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್‌ನಲ್ಲಿ...
Wordpress Social Share Plugin powered by Ultimatelysocial
Shares