ಕಳೆದ ಎರಡು ದಿನಗಳಿಂದ ರಾಷ್ಟ್ರಮಟ್ಟದಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ಕುರಿತೇ ಹೆಚ್ಚು ಚರ್ಚೆ. ಗೃಹ ಸಚಿವ ಅಮಿತ್ ಶಾ ಅದನ್ನು ಜಾರಿಗೊಳಿಸಿಯೇ ಸಿದ್ದ ಎಂದು ಪಟ್ಟು ಹಿಡಿದರೆ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿ ಅದನ್ನು ಸುತಾರಂ ಒಪ್ಪುವುದಿಲ್ಲ ಎಂದು ಹಠಕ್ಕೆ ಬಿದ್ದಿದೆ. ಕೊನೆಗೂ ಮಸೂದೆಯ ಪರವಾಗಿ 311 ಮತ್ತು ವಿರುದ್ಧವಾಗಿ 80 ಮತಗಳು ಬೀಳುವ ಮೂಲಕ ಅದು ಮೊದಲ ಹಂತವನ್ನು ದಾಟಿದೆ. ಹಾಗಾದರೆ ಪೌರತ್ವ ತಿದ್ದುಪಡಿ ಮಸೂದೆ ಎಂದರೇನು? ಅದರ ಪರಿಣಾಮಗಳೇನು? ಅದನ್ನು ವಿರೋಧ ಪಕ್ಷಗಳೇಕೆ ವಿರೋಧಿಸುತ್ತವೆ? ಮುಂತಾದ ಪ್ರಶ್ನೆಗಳಿಗಾಗಿ ಇಲ್ಲಿದೆ ಸಮಗ್ರ ಮಾಹಿತಿ.
ಕೃಪೆ: ನ್ಯೂಸ್18 ಕನ್ನಡ
ಸೋಮವಾರ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆದಿರುವ ಕೇಂದ್ರ ಸರ್ಕಾರ ಇದೀಗ ಸಂಸತ್ ಮೇಲ್ಮನೆ ರಾಜ್ಯಸಭೆಯಲ್ಲಿ ಬುಧವಾರ ಮಂಡಿಸಲಿದೆ. ಅಲ್ಲದೆ, ಈ ಮಸೂದೆಯ ಅನುಕೂಲ ಹಾಗೂ ಅನಾನುಕೂಲಗಳ ಕುರಿತು ರಾಜ್ಯಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸುವ ಸಾಧ್ಯತೆಯೂ ಇದೆ. ರಾಜ್ಯಸಭೆಯಲ್ಲೂ ಎನ್ಡಿಎ ಸರ್ಕಾರಕ್ಕೆ ಪೂರ್ಣ ಬಹುಮತ ಇರುವ ಕಾರಣ ಈ ಮಸೂದೆಗೆ ಅನುಮೋದನೆ ಸಿಗುವ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗಿವೆ.

ಆದರೆ, ಕೇಂದ್ರ ಸರ್ಕಾರದ ಈ ನೂತನ ಮಸೂದೆ ಇದೀಗ ಈಶಾನ್ಯ ಭಾರತದ ಜನರ ಆತಂಕ್ಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಪರಿಣಾಮ ಈಶಾನ್ಯದ 7 ರಾಜ್ಯಗಳ ಜನ ಇಂದು ರಸ್ತೆಗಿಳಿದು ಕೇಂದ್ರ ಸರ್ಕಾರದ ನಿರ್ಣಯದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೆ, 40 ಕ್ಕೂ ಹೆಚ್ಚು ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳು ರಾಜ್ಯದಾದ್ಯಂತ ಬಂದ್ಗೂ ಕರೆ ನೀಡಿವೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಈಶಾನ್ಯ ರಾಜ್ಯದ ಪ್ರಾದೇಶಿಕ ಪಕ್ಷಗಳು ತಾವು ನೀಡಿದ್ದ ಬೆಂಬಲವನ್ನೂ ಹಿಂಪಡೆದಿವೆ. ಇಷ್ಟಾದರೂ ಕೇಂದ್ರ ಸರ್ಕಾರ ತನ್ನ ಪಟ್ಟು ಸಡಿಸುವ ಯಾವುದೇ ಸೂಚನೆಗಳು ಕಾಣಿಸುತ್ತಿಲ್ಲ.
ಹಾಗಾದರೆ, ಏನಿದು ಭಾರತ ಪೌರತ್ವ ತಿದ್ದುಪಡಿ ಮಸೂದೆ ? ಈ ಮಸೂದೆಯನ್ನು ಮೊದಲು ಮಂಡಿಸಿ ಅನುಮೋದನೆ ಪಡೆದದ್ದು ಯಾವಾಗ? ನೂತನ ಪೌರತ್ವ ಕಾಯ್ದೆಯಲ್ಲಾಗಿರುವ ತಿದ್ದುಪಡಿ ಏನು? ಇದರ ವಿರುದ್ಧ ದೇಶದ ಈಶಾನ್ಯ ಭಾರತದಲ್ಲಿ ಜನಾಕ್ರೋಶ ಭುಗಿಲೇಳಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಏನಿದು ಪೌರತ್ವ ತಿದ್ದುಪಡಿ ಮಸೂದೆ?
ಸ್ವಾತಂತ್ರ್ಯ ನಂತರದ ಭಾರತದಲ್ಲಿ ನೆಹರು ಪ್ರಧಾನಿಯಾಗಿದ್ದ ಕಾಲದಲ್ಲಿ 1955ರಲ್ಲೇ ಭಾರತೀಯ ಪೌರತ್ವ ಮಸೂದೆಯನ್ನು ಮಂಡಿಸಿದ್ದ ಅಂದಿನ ಸರ್ಕಾರ ಅದಕ್ಕೆ ಅನುಮತಿಯನ್ನೂ ಪಡೆದಿತ್ತು.
ದೇಶ ವಿಭಜನೆ ಮತ್ತು ಕೋಮು ಗಲಭೆ ಸಂದರ್ಭದಲ್ಲಿ ಭಾರತದಿಂದ ಅನಿವಾರ್ಯವಾಗಿ ಬೇರೆ ದೇಶಗಳಿಗೆ ವಲಸೆ ಹೋಗಿದ್ದ, ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರಾದ ಮೂಲ ಭಾರತೀಯರಿಗೆ ಮತ್ತೆ ದೇಶದಲ್ಲಿ ನೆಲೆ ಕಲ್ಪಿಸುವ ಮತ್ತು ಭಾರತೀಯ ಪೌರತ್ವ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಮಂಡಿಸಿದ್ದ ಮಹತ್ವದ ಮಸೂದೆಯೇ ಭಾರತೀಯ ಪೌರತ್ವ ಕಾಯ್ದೆ-1955.
ಕಳೆದ ಆರು ದಶಕಗಳಿಂದ ದೇಶದಲ್ಲಿ ಚಾಲ್ತಿಯಲ್ಲಿರುವುದು ಇದೇ ಮಸೂದೆ. ಈ ಮಸೂದೆಯ ಪ್ರಕಾರ ನೆರೆ ರಾಷ್ಟ್ರದಲ್ಲಿ ನೆಲೆಸಿರುವ ಧಾರ್ಮಿಕ ಅಲ್ಪ ಸಂಖ್ಯಾತರಾದ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ, ಪಾರ್ಸಿ, ಬೌದ್ಧ, ಜೈನ ಮತ್ತು ಯಹೂದಿಗಳು ನಿರ್ದಿಷ್ಟ ದಾಖಲೆಗಳ ಜೊತೆಗೆ ಭಾರತದಲ್ಲಿ ಸುಮಾರು 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ನೆಲೆಸಿದ್ದರೆ ಅವರಿಗೆ ಭಾರತೀಯ ಪೌರತ್ವ ನೀಡಲಾಗುತ್ತಿತ್ತು. ಆದರೆ ನೂತನವಾಗಿ ತಿದ್ದುಪಡಿಯಾಗಿರುವ ಕಾಯ್ದೆಯಲ್ಲಿ ಹತ್ತಾರು ನಿಯಮಗಳನ್ನು ಸಡಿಲಿಸಲಾಗಿದೆ. ಮತ್ತು ಈ ನಿಯಮದಿಂದ ಇಸ್ಲಾಂ ಧರ್ಮದವರನ್ನು ಸಂಪೂರ್ಣವಾಗಿ ಹೊರಗಿಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನೂತನ ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಏನಿದೆ?
ಭಾರತದ ನೆರೆಯ ರಾಷ್ಟ್ರಗಳು ಬಹುತೇಕ ಇಸ್ಲಾಂ ರಾಷ್ಟ್ರಗಳು. ಭಾರತದಿಂದ ವಲಸೆ ಹೋದ ಅನೇಕರು ನೆಲೆಸಿರುವುದು ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್ ಮತ್ತು ಇಂಡೋನೇಷ್ಯಾದಲ್ಲೇ.
ಹೀಗೆ ವಲಸೆ ಹೋದವರ ಪೈಕಿ ಹಿಂದೂಗಳು ಸೇರಿ ಅನೇಕ ಧಾರ್ಮಿಕ ಅಲ್ಪ ಸಂಖ್ಯಾತರಿದ್ದಾರೆ. ಅಲ್ಪ ಸಂಖ್ಯಾತರು ಎಂಬ ಕಾರಣಕ್ಕೆ ನೆರೆ ರಾಷ್ಟ್ರದಲ್ಲಿ ಹಿಂಸೆ ಅನುಭವಿಸುತ್ತಿರುವ ಜನರಿಗೆ ಮತ್ತೆ ಭಾರತಕ್ಕೆ ಬಂದು ನೆಲೆಸಲು ಅವಕಾಶ ನೀಡಬೇಕು ಎಂಬುದು ಪ್ರಸ್ತುತ ಕೇಂದ್ರ ಸರ್ಕಾರದ ನಿಲುವು.
ಕೇಂದ್ರ ಸರ್ಕಾರದ ಈ ನಿಲುವನ್ನು ಇಡೀ ದೇಶ ಸ್ವಾಗತಿಸುತ್ತದೆ. ಆದರೆ, ತಕರಾರಿರುವುದು ನೂತನ ಪೌರತ್ವ ತಿದ್ದುಪಡಿ ಮಸೂದೆಯಲ್ಲಿನ ಪೌರತ್ವ ಪಡೆಯಲು ಇರುವ ನಿಯಮ ಸಡಿಲಿಕೆಯ ಕುರಿತು.
ಈ ಹಿಂದಿನ ಮಸೂದೆಯಲ್ಲಿ ಭಾರತೀಯ ಮೂಲದ ನಿರಾಶ್ರಿತರು ದೇಶದ ಪೌರತ್ವ ಪಡೆಯಲು ಕನಿಷ್ಟ 12 ವರ್ಷ ಭಾರತದಲ್ಲಿ ನೆಲೆಸಿರಬೇಕು ಮತ್ತು ದೇಶದಲ್ಲಿ ನೆಲೆಸಲು ವಲಸಿಗರು ಸೂಕ್ತ ದಾಖಲೆಗಳನ್ನು ಹೊಂದಿರುವುದು ಕಡ್ಡಾಯ ಎನ್ನಲಾಗಿತ್ತು. ಆದರೆ, ಹೊಸ ಕಾಯ್ದೆಯಲ್ಲಿ ಸೂಕ್ತ ದಾಖಲೆಗಳಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಪೌರತ್ವ ಪಡೆಯಲು ಕೇವಲ 6 ವರ್ಷ ಭಾರತದಲ್ಲಿ ನೆಲೆಸಿದರೆ ಸಾಕು ದೇಶದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂಬುದು ನೂತನ ಪೌರತ್ವ ತಿದ್ದುಪಡಿ ಮಸೂದೆಯ ಸಾರ.
ಈ ಮಸೂದೆ ಲೋಕಸಭೆ ಮತ್ತೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿ ಜಾರಿಯಾದರೆ 2015ಕ್ಕಿಂತ ಮುಂಚಿತವಾಗಿ ನೆರೆಯ ದೇಶಗಳಿಂದ ಭಾರತಕ್ಕೆ ಅಕ್ರಮವಾಗಿ ಬಂದು ನೆಲೆಸಿರುವ ನಿರಾಶ್ರಿತರಿಗೆ ದೇಶದ ಪೌರತ್ವ ದೊರೆಯುತ್ತದೆ. ಆದರೆ, ಭಾರತದ ಮೂಲದವರೇ ಆಗಿದ್ದರು ಇಸ್ಲಾಂ ಧರ್ಮದವರನ್ನು ಈ ಅವಕಾಶದಿಂದ ದೂರ ಇಡಲಾಗಿದೆ. ಇಸ್ಲಾಂ ಧರ್ಮದ ನಿರಾಶ್ರಿತರಿಗೆ ಮಾತ್ರ ಭಾರತ ಪೌರತ್ವ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ಕಾರಣವೇನು?
ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಿಂದ ದೇಶದಲ್ಲಿರುವ ಅಕ್ರಮ ಬಾಂಗ್ಲಾ ಇಸ್ಲಾಂ ಧರ್ಮದ ವಲಸಿಗರನ್ನು, ರೋಹಿಂಗ್ಯಾ ಮುಸಲ್ಮಾನರನ್ನು ದೇಶದಿಂದ ಹೊರಹಾಕುವ ಸಲುವಾಗಿ “ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ”(NRC) ಯನ್ನು ಜಾರಿಗೆ ತಂದಿದೆ. ಒಂದು ಅಂದಾಜಿನ ಪ್ರಕಾರ ಬಾಂಗ್ಲಾದೇಶ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಭಾರತಕ್ಕೆ ಬಂದು ನೆಲೆಸಿರುವ ನಿರಾಶ್ರಿತರ ಸಂಖ್ಯೆ ಬರೋಬ್ಬರಿ 20 ಲಕ್ಷಕ್ಕೂ ಅಧಿಕ. ಹೀಗೆ ಅಕ್ರಮವಾಗಿ ದೇಶಕ್ಕೆ ನುಸುಳಿದವರು ಇದೀಗ ದೇಶದ ನಾನಾಮೂಲೆಗಳಲ್ಲಿ ನೆಲೆಸಿದ್ದಾರೆ.

ಆದರೆ, ಈ ಅಕ್ರಮ ವಲಸಿಗರಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಸಂಖ್ಯೆಯ ಹಿಂದೂಗಳು ಹಾಗೂ ಬೌದ್ಧರೂ ಇದ್ದಾರೆ. ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯ ಪ್ರಕಾರ ಇವರೆಲ್ಲ ಇದೀಗ ಭಾರತವನ್ನು ತ್ಯಜಿಸುವುದು ಅನಿವಾರ್ಯ. ಆದರೆ, ಎನ್‌ಆರ್‌ಸಿ ಕಾಯ್ದೆಯ ಮೂಲಕ ಹಿಂದೂಗಳನ್ನು ದೇಶದಿಂದ ಹೊರಗೆ ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಸುತಾರಾಂ ಇಷ್ಟವಿಲ್ಲ. ಇದೇ ಕಾರಣಕ್ಕೆ ಹಿಂದೂಗಳನ್ನು ದೇಶದಲ್ಲೇ ಉಳಿಸಿಕೊಂಡು ಮುಸ್ಲೀಮರನ್ನು ಮಾತ್ರ ದೇಶದಿಂದ ಗಡಿಪಾರು ಮಾಡುವ ಸಲುವಾಗಿ ಕೇಂದ್ರ ಸರ್ಕಾರ “ಪೌರತ್ವ ತಿದ್ದುಪಡಿ ಮಸೂದೆ”ಯನ್ನು ಜಾರಿಗೆ ತರಲು ಮುಂದಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಎನ್‌ಆರ್‌ಸಿ ವಿಷಯಕ್ಕೆ ಬಂದರೆ, ಅಲ್ಲಿ ಒಂದು ಅರ್ಹವಾದ ಆಕ್ಷೇಪಣೆ ಇರಬೇಕಿದೆ.
ಈ ಮಸೂದೆಯಲ್ಲಿ ನಿರಾಶ್ರಿತರು ಅಕ್ರಮವಾಗಿ ದೇಶ ಪ್ರವೇಶ ಮಾಡಿದ್ದರೂ ಕೇವಲ ನೆರೆ ರಾಷ್ಟ್ರದ ಅಲ್ಪ ಸಂಖ್ಯಾತರಾದರೆ ಸಾಕು ಎಂಬ ನಿಯಮ ಬರೋಬ್ಬರಿ 5 ರಿಂದ 6 ಲಕ್ಷ ಹೆಚ್ಚುವರಿ ಹಿಂದೂ ನಿರಾಶ್ರಿತರನ್ನು ದೇಶದಲ್ಲೇ ಉಳಿಸಲಿದೆ. ಇದೇ ಕಾರಣಕ್ಕೆ ಈ ಮಸೂದೆ ಮುಸ್ಲೀಂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂಬುದು ಭಾರತೀಯ ಅಲ್ಪ ಸಂಖ್ಯಾತ ಸಮುದಾಯದ ಮೊದಲ ಆರೋಪ.
ಕೇಂದ್ರದ ಈ ನೂತನ ಮಸೂದೆಗೆ ಈಶಾನ್ಯ ಭಾರತ ರೊಚ್ಚಿಗೇಳಲು ಕಾರಣವೇನು?
ಈಶಾನ್ಯ ಭಾರತ ದೇಶದಲ್ಲೇ ಅತಿಹೆಚ್ಚು ಅಮೂಲ್ಯ ನೈಸರ್ಗಿಕ ಸಂಪತ್ತು ಹಾಗೂ ವಿಶಿಷ್ಠ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ರಾಜ್ಯಗಳು. ಆದರೆ, ಇದರ ಜೊತೆಗೆ ನೆರೆಯ ಟಿಬೆಟಿಯನ್ನರನ್ನೂ ಸೇರಿದಂತೆ ಅಸಂಖ್ಯಾತ ವಸಿಗರನ್ನು ತನ್ನ ಒಡಲಲ್ಲಿ ಸಾಕುತ್ತಿರುವ ರಾಜ್ಯವೂ ಹೌದು…!
ಈಗಾಗಲೇ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ ನಿರಾಶ್ರಿತರ ಸ್ವರ್ಗವಾಗಿ ಬದಲಾಗಿದೆ. ಅಸ್ಸಾಂ ಒಂದೇ ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ನಿರಾಶ್ರಿತರು ನೆಲೆಸಿದ್ದಾರೆ. ಈ ಪೈಕಿ ಹಿಂದೂಗಳ ಸಂಖ್ಯೆಯೇ ಅಧಿಕ. ಅಲ್ಲದೆ, ಇಲ್ಲಿನ ಎಲ್ಲಾ ನಿರಾಶ್ರಿತರೂ ಅಕ್ರಮ ವಲಸಿಗರು ಎಂಬುದು ಉಲ್ಲೇಖಾರ್ಹ.

ಆದರೆ, ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ನೂತನ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರವಾದರೆ ಇಲ್ಲಿ ಎಲ್ಲಾ ಹಿಂದೂ ಅಕ್ರಮ ವಲಸಿಗರಿಗೂ ದೇಶದ ಪೌರತ್ವ ಲಭ್ಯವಾಗುತ್ತದೆ. ಹೀಗೆ ಎಲ್ಲರಿಗೂ ಪೌರತ್ವ ಲಭ್ಯವಾದರೆ ಇವರು ಸ್ಥಳೀಯ ಜನರ ಅವಕಾಶಗಳನ್ನು ಕಸಿದುಕೊಳ್ಳುತ್ತಾರೆ. ಸ್ಥಳೀಯ ಹಿಂದೂಗಳು ಅಲ್ಪ ಸಂಖ್ಯಾತರಾಗುತ್ತಾರೆ. ಈಶಾನ್ಯ ಭಾರತ ಮತ್ತೊಂದು ಕಾಶ್ಮೀರವಾಗಿ ಬದಲಾಗುತ್ತದೆ. ಅಲ್ಲದೆ, ನಿರಾಶ್ರಿತರಿಗೂ ನುಸುಳುಕೋರರಿಗೂ ವ್ಯತ್ಯಾಸವಿಲ್ಲದಂತಾಗುತ್ತದೆ ಎಂಬುದು ಪ್ರತಿಭಟನಾಕಾರರ ವಾದ.
ಆದರೆ, ವಿರೋಧ ಪಕ್ಷಗಳ ಟೀಕೆ ಹಾಗೂ ಈಶಾನ್ಯ ಭಾರತೀಯರ ಜನಾಕ್ರೋಶದ ನಡುವೆಯೂ ಕೇಂದ್ರ ಸರ್ಕಾರ ನೂತನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಕಾಯ್ದೆ ಸಂಸತ್ನ ಎರಡೂ ಸದನದಲ್ಲಿ ಅಂಗೀಕಾರವಾಗುವುದು ಬಹುತೇಕ ಖಚಿತವಾಗಿದೆ. ಆದರೆ, ಈಶಾನ್ಯ ಭಾರತದಲ್ಲಿ ಮಾತ್ರ ಪ್ರತಿಭಟನಾ ಕಾವು ಕಡಿಮೆಯಾಗುವ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ. ಹೀಗಾಗಿ ಈ ವಿವಾದ ಮುಂದಿನ ದಿನದಲ್ಲಿ ಯಾವ ರೂಪ ಪಡೆಯಲಿದೆ? ಎಂಬುದನ್ನು ಕಾದುನೋಡಬೇಕಿದೆ.


