Homeಮುಖಪುಟಮತ್ತೆ ಮುನ್ನೆಲೆಗೆ ಬಂಡೀಪುರ ಸಂಚಾರ..ರಾತ್ರಿ ನಿಷೇಧ ತೆಗೆದು ಹಾಕುತ್ತಾ ಸರ್ಕಾರ?

ಮತ್ತೆ ಮುನ್ನೆಲೆಗೆ ಬಂಡೀಪುರ ಸಂಚಾರ..ರಾತ್ರಿ ನಿಷೇಧ ತೆಗೆದು ಹಾಕುತ್ತಾ ಸರ್ಕಾರ?

- Advertisement -
- Advertisement -

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ (NH 766) ರಾತ್ರಿ ಹೊತ್ತು ವಾಹನಗಳ ಸಂಚಾರ ನಿಷೇಧಿಸಿರುವುದನ್ನು ಕರ್ನಾಟಕ ರಾಜ್ಯ ಸರ್ಕಾರ ತೆಗೆದು ಹಾಕಲು ಮುಂದಾಗಿದೆ ಎಂಬ ವಿಚಾರ ಕಳೆದ ಕೆಲ ದಿನಗಳಿಂದ ಭಾರೀ ಚರ್ಚೆಯಾಗುತ್ತಿದೆ.

ರಾತ್ರಿ ಸಂಚಾರ ನಿಷೇಧ ತೆಗೆದು ಹಾಕಿದರೆ ಹೋರಾಟ ರೂಪಿಸಲು ಪರಿಸರವಾದಿಗಳು, ವನ್ಯಜೀವಿಗಳ ಪರ ಕೆಲಸ ಮಾಡುವವರು ರೈತರು ಮತ್ತು ಬಂಡೀಪುರ ಅರಣ್ಯ ವ್ಯಾಪ್ತಿಯ ಗ್ರಾಮಗಳ ಜನರು ಮುಂದಾಗಿದ್ದಾರೆ.

ಕಳೆದ ಭಾನುವಾರ (ಮಾ.30) ಬಂಡೀಪುರದ ಮೂಲೆಹೊಳೆಯಲ್ಲಿ ನಡೆದ ಸಭೆಯಲ್ಲಿ ವನ್ಯಜೀವಿಗಳಿಗೆ ತೊಂದರೆ-ಮುಕ್ತ ಆವಾಸಸ್ಥಾನದ ಅವಶ್ಯಕತೆ ಮತ್ತು ರಾತ್ರಿ ಸಂಚಾರ ನಿಷೇಧ ಮುಂದುವರಿಸುವ ಅವಶ್ಯಕತೆಗಳನ್ನು ಒತ್ತಿ ಹೇಳಲಾಗಿದೆ.

“ಬಂಡೀಪುರದಲ್ಲಿ ರಾತ್ತಿ ಹೊತ್ತು ವಾಹನ ಸಂಚಾರ ನಿಷೇಧ ಆದ ಬಳಿಕ, ರಸ್ತೆ ಅಪಘಾತಗಳಲ್ಲಿ ವನ್ಯ ಜೀವಿಗಳು ಸಾಯುವ ಸಂಖ್ಯೆ ಕಡಿಮೆಯಾಗಿದೆ. ಅವುಗಳ ಸಂಖ್ಯೆ ವೃದ್ಧಿಯಾಗಲು ಸಹಾಯವಾಗಿದೆ. ಪ್ರಾಣಿಗಳ ಸಂಖ್ಯೆಯಲ್ಲಿನ ಹೆಚ್ಚಳ ಇದಕ್ಕೆ ಸಾಕ್ಷಿ” ಎಂದು ಬಂಡೀಪುರ ಬಫರ್ ವಲಯದ ಜಕ್ಕಹಳ್ಳಿ ಗ್ರಾಮದ ರೈತ ಶ್ರೀಕಾಂತ ಅವರು ಹೇಳಿದ್ದಾಗಿ ದಿ ಹಿಂದೂ ವರದಿ ಮಾಡಿದೆ.

“ಕಳೆದ 15 ವರ್ಷಗಳಲ್ಲಿ ವಾಹನಗಳ ಸಂಖ್ಯೆ ಭಾರೀ ಹೆಚ್ಚಾಗಿದೆ. ಬಂಡೀಪುರ ಮಾರ್ಗವಾಗಿ ಹಗಲೊತ್ತು ಸಂಚರಿಸುವ ವಾಹನಗಳನ್ನು ನೋಡಿದರೆ ನಮಗದು ಗೊತ್ತಾಗುತ್ತದೆ. ರಾತ್ರಿ ಸಂಚಾರ ನಿಷೇಧ ಆಗುವ ಮೊದಲೇ ಅನೇಕ ವನ್ಯ ಪ್ರಾಣಿಗಳು ವಾಹನಗಳಿಗೆ ಸಿಲುಕಿ ಸಾಯುತ್ತಿತ್ತು”.

“ಈಗ ಏನಾದರು ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ವನ್ಯ ಜೀವಿಗಳ ಮೇಲಾಗುವ ಹಾನಿ ಊಹಿಸಲಾಗದು. ರಾತ್ರಿ ವಾಹನ ಸಂಚಾರದಿಂದ ವನ್ಯ ಜೀವಿಗಳಿಗೆ ಕಿರಿಕಿರಿ ಉಂಟಾಗಿ ಅವುಗಳು ಅರಣ್ಯದ ಅಂಚಿನ ಗ್ರಾಮಗಳತ್ತ ಬರುವ ಸಾಧ್ಯತೆ ಇದೆ. ಇದರಿಂದ ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚಾಗುತ್ತದೆ” ಎಂಬುವುದು ಬಂಡೀಪುರದ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕವಾಗಿದೆ.

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ಆಗಿದ್ದು ಯಾವಾಗ?

ಕರ್ನಾಟಕದ ಮೈಸೂರು ಮತ್ತು ಕೇರಳದ ವಯನಾಡ್‌ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 (ಹಿಂದೆ 212) ದೇಶದ ಎರಡು ಪ್ರಮುಖ ವನ್ಯಜೀವಿ ಆವಾಸಸ್ತಾನಗಳಾದ ಬಂಡೀಪುರ ಮತ್ತು ವಯನಾಡ್ ರಾಷ್ಟ್ರೀಯ ಉದ್ಯಾನವನಗಳ ಮೂಲಕ ಹಾದು ಹೋಗುತ್ತದೆ.

ವನ್ಯಜೀವಿಗಳಿಗೆ ತೊಂದರೆಯಾಗದಂತೆ ತಡೆಯಲು ಮತ್ತು ವೇಗವಾಗಿ ಚಲಿಸುವ ವಾಹನಗಳಿಗೆ ಸಿಲುಕಿ ವನ್ಯ ಜೀವಿಗಳು ಸಾಯುವುದನ್ನು ತಡೆಯಲು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ವಾಹನಗಳು ಸಂಚರಿಸುವುದನ್ನು 2009ರಲ್ಲಿ ನಿಷೇಧಿಸಲಾಗಿದೆ.

ರಾತ್ರಿ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ. ಬಂಡೀಪುರದ ಬದಲಾಗಿ ಮೈಸೂರಿನಿಂದ ಹುಣಸೂರು, ಗೋಣಿಕೊಪ್ಪಲ್, ಕುಟ್ಟ, ತೋಲ್ಪೆಟ್ಟಿ, ಮಾನಂತವಾಡಿ ಮಾರ್ಗವಾಗಿ ವಯನಾಡ್ ತಲುಪಬಹುದು. ಆದರೆ, ಈ ಮಾರ್ಗದಲ್ಲಿ ಎನ್‌ಹೆಚ್‌ 766ರಕ್ಕಿಂತ 35–40ಕಿ.ಮೀ ಹೆಚ್ಚು ದೂರ ಸಂಚರಿಸಬೇಕಿದೆ.

ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಿ, ಈ ಮಾರ್ಗವನ್ನು ನವೀಕರಿಸಲು ಕರ್ನಾಟಕ ಸರ್ಕಾರ ಈಗಾಗಲೇ ಸುಮಾರು 75–80 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಇದರ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ಸುಪ್ರೀಂ ಕೋರ್ಟ್ ನಿರ್ದೇಶನದ ಭಾಗವಾಗಿ 2019ರಲ್ಲಿ ಅರಣ್ಯ ಅಧಿಕಾರಿಗಳು ಈ ಮಾರ್ಗವನ್ನು ಪರಿಶೀಲಿಸಿದ್ದರು. ಈ ಮಾರ್ಗ ಪ್ರಾಥಮಿಕವಾಗಿ ರಾಜ್ಯ ಹೆದ್ದಾರಿಗಳು 90, 89 ಮತ್ತು 275 ಅನ್ನು ಒಳಗೊಂಡಿದೆ. ಇದು ಬಂಡೀಪುರದ ಉದ್ಯಾನವನದೊಳಗೆ ಸಂಚರಿಸುವುದನ್ನು ಸಂಪೂರ್ಣ ತಪ್ಪಿಸುತ್ತದೆ. ಆದರೆ, ಇದರ ಒಂದು ಸಣ್ಣ ಭಾಗ (ಸುಮಾರು 8.7 ಕಿ.ಮೀ) ವಯನಾಡ್ ವನ್ಯಜೀವಿ ಅಭಯಾರಣ್ಯದ ಅಂಚಿನಲ್ಲಿದೆ.

ಪರ್ಯಾಯ ಮಾರ್ಗ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ವಯನಾಡ್ ವನ್ಯಜೀವಿ ಅಭಯಾರಣ್ಯದ ಅಂಚಿನಲ್ಲಿ ಹೋದರೂ ಪರವಾಗಿಲ್ಲ, ಬಂಡೀಪುರದ ಮಧ್ಯದಲ್ಲಿ ಹೋಗುವುದನ್ನು ತಪ್ಪಿಸುತ್ತದಲ್ಲ ಎಂಬುವುದು ಕರ್ನಾಟಕ ಸರ್ಕಾರದ ವಾದ.

ಕರ್ನಾಟಕ ಸರ್ಕಾರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿವಿಧ ಸಂದರ್ಭಗಳಲ್ಲಿ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಿರುವುದನ್ನು ಸಮರ್ಥಿಸಿದೆ. ಸುರಂಗ ಮಾರ್ಗ, ರೈಲು ಮಾರ್ಗ ಸೇರಿದಂತೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಕೇರಳ ಸರ್ಕಾರ ಪ್ರಸ್ತಾಪಗಳನ್ನು ತಿರಸ್ಕರಿಸಿದೆ.

ಸೆಪ್ಟೆಂಬರ್ 2022ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸುರಂಗ ಮಾರ್ಗ ಮಾಡಿ ಕೇರಳ ಕರ್ನಾಟಕ ನಡುವೆ ರೈಲು ಓಡಿಸುವ ಪ್ರಸ್ತಾವನ್ನು ಮುಂದಿಟ್ಟಿದ್ದರು. ಅದನ್ನು ಬೊಮ್ಮಾಯಿ ತಿರಸ್ಕರಿಸಿದ್ದರು.

ಕರ್ನಾಟಕ ಸರ್ಕಾರ ರಾತ್ರಿ ಸಂಚಾರ ನಿಷೇಧ ತೆಗೆದು ಹಾಕಲು ಮುಂದಾಗಿದೆಯಾ? 

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆಗೆದು ಹಾಕಲು ಮುಂದಾಗಿದೆ ಎಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ, ಅದು ಶುದ್ದ ಸುಳ್ಳು. ರಾತ್ರಿ ಸಂಚಾರ ನಿಷೇಧ ಮಾಡಿರುವುದು ಕರ್ನಾಟಕ ಹೈಕೋರ್ಟ್. ಅದನ್ನು ಕೇರಳದ ಹಲವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಹಾಗಾಗಿ, ಪ್ರಕರಣ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ. ಸುಪ್ರೀಂ ಕೋರ್ಟ್ ಈ ಸಂಬಂಧ ಇದುವರೆಗೆ ಯಾವುದೇ ಆದೇಶ ನೀಡಿಲ್ಲ. ಕರ್ನಾಟಕ ಹೈಕೋರ್ಟ್‌ ಆದೇಶವೇ ಜಾರಿಯಲ್ಲಿದೆ. ಹೈಕೋರ್ಟ್ ಆದೇಶದಂತೆ ಜಾರಿಯಾದ ರಾತ್ರಿ ಸಂಚಾರ ನಿಷೇಧವನ್ನು ಸುಪ್ರೀಂ ಕೋರ್ಟ್ ತೆಗೆದು ಹಾಕಬೇಕೇ ಹೊರತು, ಸರ್ಕಾರ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ವನ್ಯಜೀವಿ ಸಂರಕ್ಷಣಾವಾದಿ ಸಂಜಯ್ ಗುಬ್ಬಿ ಹೇಳುತ್ತಾರೆ.

ರಾತ್ರಿ ಸಂಚಾರ ನಿಷೇಧ ಮತ್ತೆ ಮುನ್ನೆಲೆಗೆ ಬಂದಿದ್ದೇಕೆ?

ವರದಿಗಳ ಪ್ರಕಾರ, ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಆಗಿದ್ದರೂ, ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯ ಸರ್ಕಾರಗಳ ಒಪ್ಪಂದದ ಪ್ರಕಾರ ತಲಾ ಎರಡರಂತೆ ನಾಲ್ಕು ಸರ್ಕಾರಿ ಬಸ್‌ಗಳು ರಾತ್ರಿ ಹೊತ್ತು ಸಂಚರಿಸಲು ಅನುವು ಮಾಡಿಕೊಡಲಾಗಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸಿದ್ದ ಕೇರಳದ ಬೈಜು ಪಾಲ್ ಮ್ಯಾಥ್ಯೂಸ್ ಎಂಬವರು, ವಿಶೇಷ ದಿನಗಳು ಮತ್ತು ಹಬ್ಬಗಳ ಸಂದರ್ಭಗಳಲ್ಲಿ ಬಂಡೀಪುರದಲ್ಲಿ ರಾತ್ರಿ ಹೆಚ್ಚುವರಿ ಬಸ್‌ಗಳು ಸಂಚರಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದರು. ಈ ಅರ್ಜಿಗೆ ಬಂಡೀಪುರ ಹುಲಿ ಮೀಸಲು ಪ್ರದೇಶದ ನಿರ್ದೇಶಕ ಪ್ರಭಾಕರನ್ ಎಸ್ ಅವರು ಪ್ರತಿ-ಅಫಿಡವಿಟ್ ಸಲ್ಲಿಸಿದ್ದರು.

ಪ್ರಸ್ತಾವಿತ ಪರ್ಯಾಯ ರಾಜ್ಯ ಹೆದ್ದಾರಿ-88 ಪೂರ್ಣಗೊಂಡ ನಂತರ ಎನ್‌ ಹೆಚ್‌ 766 ಅನ್ನು ಶಾಶ್ವತವಾಗಿ ಮುಚ್ಚಬಹುದು ಎಂದು ಪ್ರಭಾಕರನ್ ಅಫಿಡವಿಟ್‌ನಲ್ಲಿ ತಿಳಿಸಿದ್ದರು. ರಸ್ತೆ ದುರಸ್ತಿಗಾಗಿ ಕರ್ನಾಟಕ ಇದುವರೆಗೆ 75 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಉಲ್ಲೇಖಿಸಿದ್ದರು.

ನಾಗರಹೊಳೆ ಹುಲಿ ಮೀಸಲು ಪ್ರದೇಶದ ಅಂಚಿನಲ್ಲಿ ಹಾದುಹೋಗುವುದರಿಂದ ನಾವು ಈ ಪರ್ಯಾಯ ರಸ್ತೆಯನ್ನು ಎಲಿವೇಟೆಡ್ ರಸ್ತೆಯಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದಿದ್ದರು.

ಎಲಿವೇಟೆಡ್ ರಸ್ತೆ ನಿರ್ಮಾಣ ಪೂರ್ಣಗೊಂಡ ನಂತರ, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮಧ್ಯಭಾಗದ ಮೂಲಕ ಹಾದುಹೋಗುವ ಅಸ್ತಿತ್ವದಲ್ಲಿರುವ ಎನ್‌ ಹೆಚ್‌-766 ಅನ್ನು ನಾವು ಶಾಶ್ವತವಾಗಿ ಮುಚ್ಚಬಹುದು, ತುರ್ತು ವಾಹನಗಳು ಮತ್ತು ಸ್ಥಳೀಯ ಸಂಚಾರಕ್ಕೆ ಮಾತ್ರ ಅವಕಾಶ ನೀಡಬಹುದು ಎಂದು ತಿಳಿಸಿದ್ದರು.

ಪ್ರತಿ-ಅಫಿಡವಿಟ್‌ನಲ್ಲಿ ಬಂಡೀಪುರದ ವನ್ಯಜೀವಿಗಳ ಮೇಲೆ ರಾತ್ರಿ ಪ್ರಯಾಣ ನಿಷೇಧದ ಸಕಾರಾತ್ಮಕ ಪರಿಣಾಮದ ದತ್ತಾಂಶವನ್ನು ನೀಡಲಾಗಿತ್ತು.

ಕೇರಳ, ವಿಶೇಷವಾಗಿ ಆಡಳಿತಾರೂಢ ಸಿಪಿಐ(ಎಂ) ಈ ಪ್ರತಿ-ಅಫಿಡವಿಟ್‌ ಅನ್ನು ಟೀಕಿಸಿತ್ತು. ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ದ್ವಿಮುಖ ನೀತಿಯನ್ನು ಹೊಂದಿದೆ ಎಂದು ಕಿಡಿಕಾರಿತ್ತು.

ಪ್ರತಿ-ಅಫಿಡವಿಟ್ ಸಲ್ಲಿಸಿದ ನಂತರ, ಮಾರ್ಚ್ 23 ರಂದು ಕರ್ನಾಟಕದ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿತ್ತು.

ಗುಂಡ್ಲುಪೇಟೆ ಶಾಸಕ ಎಚ್‌.ಎಂ ಗಣೇಶ್ ಪ್ರಸಾದ್ ಅವರ ಪ್ರಕಾರ, ಪ್ರತಿ-ಅಫಿಡವಿಟ್ ಸಲ್ಲಿಸಿದ್ದ ಬಂಡೀಪುರ ಉದ್ಯಾನವನದ ನಿರ್ದೇಶಕ ಪ್ರಭಾಕರನ್. ಎಸ್ ಅವರನ್ನು ಈ ಪ್ರಕರಣದಲ್ಲಿ ಕಾನೂನು ನಿರ್ವಹಣಾ ಅಧಿಕಾರಿಯಾಗಿ ನೇಮಿಸಲಾಗಿಲ್ಲ. ಹಾಗಾಗಿ, ಅಫಿಡವಿಟ್ ಹಿಂತೆಗೆದುಕೊಳ್ಳಲು ಮತ್ತು ಹೊಸದಾಗಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಕರ್ನಾಟಕ ಸರ್ಕಾರ ಇತ್ತೀಚಿನ ದತ್ತಾಂಶವನ್ನು ಒಳಗೊಂಡ ಹೊಸ ಅಫಿಡವಿಟ್ ಸಲ್ಲಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಆಕ್ರೋಶಕ್ಕೆ ಕಾರಣವಾದ ಡಿಕೆಶಿ ವಾಗ್ದಾನ

ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿ-ಅಫಿಡವಿಟ್ ಸಲ್ಲಿಸುವ ಮೊದಲೇ, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ತೆಗೆದುಹಾಕುವ ಬಗ್ಗೆ ಹೇಳಿಕೆಗಳನ್ನು ನೀಡಿದ್ದರು.

ನವೆಂಬರ್ 2024 ರಲ್ಲಿ ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ವಯನಾಡಿನಲ್ಲಿ ನಡೆದ ಉಪಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಡಿ.ಕೆ ಶಿವಕುಮಾರ್, ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ತೆಗೆದುಹಾಕಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.

ರಾತ್ರಿ ಸಂಚಾರ ನಿಷೇಧದಿಂದ ಅಂತಾರಾಜ್ಯ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದಿದ್ದರು.

ಕರ್ನಾಟಕ ಸರ್ಕಾರ ಪ್ರತಿ-ಅಫಿಡವಿಟ್ ಹಿಂತೆಗೆದುಕೊಂಡ ನಂತರ, ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ತೆಗೆದುಹಾಕುವಂತೆ ಕೋರಿ ಪ್ರಿಯಾಂಕಾ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆಯೇ? ಎಂದು ಮಾಧ್ಯಮ ವರದಿಗಾರರು ಡಿ.ಕೆ ಶಿವಕುಮಾರ್ ಅವರನ್ನು ಕೇಳಿದ್ದರು. ಆದಕ್ಕೆ ಪ್ರತಿಕ್ರಿಯಿಸಿದ್ದ ಡಿಕೆಶಿ “ನಾವು ಈ ಪತ್ರ ನೋಡುತ್ತೇವೆ, ಪರಿಶೀಲನೆ ಮಾಡಿ, ಚರ್ಚಿಸುತ್ತೇವೆ. ಆನಂತರ ತೀರ್ಮಾನ ಮಾಡುತ್ತೇವೆ” ಎಂದಿದ್ದರು.

ಅರಣ್ಯ ಸಚಿವರು ಹೇಳಿದ್ದೇನು?

“ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧ ವಿಷಯ ಅತ್ಯಂತ ಸೂಕ್ಷ್ಮವಾದುದು. ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಸರ್ವಸಮ್ಮತ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಮಾರ್ಚ್‌ 28ರ ಶುಕ್ರವಾರ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

“ಪ್ರಸ್ತುತ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಈಗ ರಾತ್ರಿ 9ರಿಂದ ಬೆಳಿಗ್ಗೆ 6ಗಂಟೆಯವರೆಗೆ ನಿರ್ಬಂಧ ಜಾರಿಯಲ್ಲಿದೆ. ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ರಾಜ್ಯಗಳ ಬಾಂಧವ್ಯ ಗಮನದಲ್ಲಿಟ್ಟುಕೊಂಡು, ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡಲು ಕ್ರಮ ವಹಿಸಲಾಗುವುದು” ಎಂದಿದ್ದಾರೆ.

ಕರ್ನಾಟಕ ಸರ್ಕಾರ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ವಾಪಸ್ ಪಡೆಯುತ್ತೇವೆ ಎಂದು ಸುಪ್ರೀಂ ಕೋರ್ಟ್‌ಗೆ ಇನ್ನೂ ಅಫಿಡವಿಟ್ ಸಲ್ಲಿಸಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಆ ವಿಚಾರದಲ್ಲಿ ಯಾವುದೇ ಆದೇಶ ಆಗಿಲ್ಲ. ಸುಮ್ಮನೆ ರಾಜಕೀಯ ಕಾರಣಕ್ಕೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ” ಎಂದು ವನ್ಯಜೀವಿ ಸಂರಕ್ಷಣಾವಾದಿ ಸಂಜಯ್ ಗುಬ್ಬಿ ಹೇಳಿದ್ದಾರೆ.

ಸರ್ಕಾರ ರಾತ್ರಿ ಸಂಚಾರ ನಿಷೇಧ ತೆಗೆದು ಹಾಕಲು ಮುಂದಾದರೆ ಮಾತನಾಡಬಹುದಿತ್ತು. ಈಗ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಿಷೇಧ ತೆಗೆದು ಹಾಕುವ ಅಧಿಕಾರ ಈಗ ಸುಪ್ರೀಂ ಕೋರ್ಟ್‌ ಕೈಯ್ಯಲ್ಲಿದೆ. ಸರ್ಕಾರ ತನ್ನ ಅಭಿಪ್ರಾಯ ತಿಳಿಸಬಹುದು ಅಷ್ಟೆ ಎಂದು ತಿಳಿಸಿದ್ದಾರೆ.

“ವನ್ಯ ಜೀವಿಗಳಿಗೂ ಬದುಕುವ ಹಕ್ಕಿದೆ. ಅವುಗಳ ಆವಾಸಸ್ತಾನಗಳನ್ನು ಹಾಳುಗೆಡವದೆ ಉಳಿಸಬೇಕಿದೆ. ಜನರು ಸ್ವಲ್ಪ ಹೊಂದಿಕೊಂಡು ಹೋಗಬೇಕು. ನಾವು ಧರ್ಮ, ಸಂಸ್ಕೃತಿ ಎಂದು ಹಲವು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಅದೇ ರೀತಿ ಪರಿಸರ ವನ್ಯ ಜೀವಿಗಳ ವಿಚಾರದಲ್ಲೂ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು. ಉದಾ : ಬೇಲೂರು-ಹಳೆಬೇಡು ದೇವಸ್ಥಾನಗಳನ್ನು ಕೆಡವಿ ರಸ್ತೆ ನಿರ್ಮಿಸಲು ಸಾಧ್ಯವೇ? ಅದೇ ರೀತಿ ಬಂಡೀಪುರದಲ್ಲೂ ಕೆಲವೊಂದು ಸಾಧ್ಯವಿಲ್ಲ. ಹಾಗಾಗಿ, ಜನರು ಹೊಂದಾಣಿಕೆ ಮಾಡಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಸರ್ಕಾರ ಬಂಡೀಪುರದ ಬದಲಾಗಿ ರಾತ್ರಿ ಸಂಚಾರಕ್ಕೆ ಪರ್ಯಾಯ ಮಾರ್ಗ ನಿರ್ಮಾಣ ಮಾಡಿದೆ. ಅದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿ ಹೋಗುತ್ತದೆ. ಅಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ಮಾಡಿದರೆ, ಬಂಡೀಪುರದ ಮಧ್ಯೆ ಹೋಗುವ ಎನ್‌ಎಚ್‌ 766 ಅನ್ನು ಸಂಪೂರ್ಣವಾಗಿ ಮುಚ್ಚಬಹುದು” ಎಂದಿದ್ದಾರೆ.

ಮರಳು ದಂಧೆ, ಖಾಸಗಿ ಬಸ್‌ಗಳ ಲಾಬಿ   

ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವುದು ಅಕ್ರಮ ಮರಳು ದಂಧೆ ಮತ್ತು ಕೇರಳದ ಖಾಸಗಿ ಬಸ್‌ಗಳ ಲಾಬಿ ಎಂದು ಹಲವು ವರದಿಗಳು ಹೇಳಿವೆ. ಸಂಜಯ್‌ ಗುಬ್ಬಿ ಕೂಡ ಈ ಆರೋಪವನ್ನು ಹೌದು ಎಂದಿದ್ದಾರೆ. ಕೇರಳದ ಖಾಸಗಿ ಬಸ್‌ಗಳ ಲಾಬಿ ಈ ವಿಚಾರದಲ್ಲಿ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ತಮಿಳುನಾಡು ಬಿಜೆಪಿಯಲ್ಲಿ ಜಾತಿ ಲೆಕ್ಕಾಚಾರ: ಅಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಕೆಳಗಿಳಿಯುವ ಸಾಧ್ಯತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...