ಸಾಮಾನ್ಯವಾಗಿ ಪ್ರತಿನಿತ್ಯ ಬಳಸುವ ತರಕಾರಿಗಳಲ್ಲಿ ಒಂದಾದ ಟೊಮೆಟೊ ಬೆಲೆ ಧಿಡೀರ್ ಏರಿಕೆಯಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶಾದ್ಯಂತ ಉತ್ತಮ ಗುಣಮಟ್ಟದ ಒಂದು ಕೆಜಿ ಟೊಮೆಟೊ ಬೆಲೆ 100 ರೂಗಳ ಆಸುಪಾಸಿನಲ್ಲಿದೆ. ಹಲವಾರು ಕಾರಣಗಳಿಂದ ಟೊಮೆಟೊ ಉತ್ಪಾನದೆ ಕುಸಿದ ಕಾರಣ, ಬೇಡಿಕೆ ಹೆಚ್ಚಾಗಿ ಈ ಮಟ್ಟದ ಬೆಲೆ ಏರಿಕೆ ಉದ್ಭವಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅತಿಯಾದ ಮಳೆ ಮತ್ತು ಅತಿಯಾದ ಬಿಸಿಲು
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಚತ್ತೀಸ್‌ಘಡ, ಪಶ್ಚಿಮ ಬಂಗಾಳ ರಾಜ್ಯಗಳು ಅತಿ ಹೆಚ್ಚು ಟೊಮೆಟೊ ಬೆಳೆಯುವ ರಾಜ್ಯಗಳಾಗಿವೆ. ಕೆಲ ರಾಜ್ಯಗಳಲ್ಲಿ ಏಪ್ರಿಲ್ ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಳೆಯಿಂದ ಟೊಮೆಟೊ ಬೆಳೆ ನಾಶವಾದರೆ ಕೆಲ ರಾಜ್ಯಗಳಲ್ಲಿ ತೀರಾ ಬಿಸಿಲು ಕಂಡುಬಂದು ಹಾಳಾಗಿದೆ. ಬಿಫರ್‌ಜಾಯ್ ಚಂಡಮಾರುತವೂ ಬೆಳೆ ನಾಶಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ಮುಂಗಾರು ಮಳೆ ಬಾರದೆ ಸಂಕಷ್ಟ ಎದುರಾಗಿದೆ. ಹಾಗಾಗಿ ಒಟ್ಟಾರೆ ಟೊಮೆಟೊ ಇಳುವರಿಯಲ್ಲಿ ಕುಸಿತ ಕಂಡಿದೆ.
ಮುಖ್ಯವಾಗಿ ಕರ್ನಾಟಕದಲ್ಲಿ ಬೆಂಗಳೂರು ಸುತ್ತಮುತ್ತಲಿನ 5 ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆಯಲಾಗುತ್ತಿತ್ತು. ಆದರೆ ಈ ಬಾರಿ ಹಲವು ಕಾರಣಗಳಿಂದ ಉತ್ಪಾದನೆ ಅರ್ಧದಷ್ಟು ಕುಸಿತ ಕಂಡಿದೆ. ಈ ಜಿಲ್ಲೆಗಳಿಂದ ಕಳೆದ ವರ್ಷದ ಟೊಮೆಟೊ ಉತ್ಪಾದನೆ 5.45 ಲಕ್ಷ ಕ್ವಿಂಟಲ್ ಇದ್ದಿದ್ದು ಈ ವರ್ಷ 2.90 ಲಕ್ಷ ಕ್ವಿಂಟಲ್‌ಗೆ ಕುಸಿದಿದೆ ಎನ್ನಲಾಗಿದೆ.
ರೋಗಬಾಧೆ
ಬಿಳಿಸೊಳ್ಳೆ, ವೈರಸ್ ಬಾಧೆ, ಎಲೆ ರೋಗ ಟೊಮೆಟೊ ಬೆಳೆಗೆ ಬಾಧಿಸುತ್ತಿದೆ. ರೋಗಬಾಧೆ ಕಾರಣದಿಂದಾಗಿ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಟೊಮೆಟೊ ಇಳುವರಿ ಕಡಿಮೆಯಾಗಿದೆ.
ಬೀನ್ಸ್‌ನತ್ತ ಮುಖ ಮಾಡಿದ ಕೆಲ ರೈತರು
ಕಳೆದ ವರ್ಷ ಬೀನ್ಸ್ ಬೆಳೆಗೆ ಉತ್ತಮ ಬೆಲೆ ಸಿಕ್ಕಿತ್ತು. ಅದೇ ಸಂದರ್ಭದಲ್ಲಿ ಟೊಮೆಟೊ ಬೆಳೆದವರು ನಷ್ಟಕ್ಕೆ ತುತ್ತಾಗಿದ್ದರು. ಹಾಗಾಗಿ ಈ ಬಾರಿ ಬಹುತೇಕರು ಟಮೊಟೊ ಬಿಟ್ಟು ಬೀನ್ಸ್ ಬೆಳೆಯತ್ತ ಮುಖ ಮಾಡಿದ್ದಾರೆ. ಹಾಗಾಗಿ ಸಹಜವಾಗಿ ಉತ್ಪಾದನೆ ಕಡಿಮೆಯಾಗಿದೆ.
ಸಾಗಾಣಿಕೆ ಸಮಸ್ಯೆ
ಟೊಮೆಟೊ ಬೇಗ ಹಾಳಾಗುವ ತರಕಾರಿಯಾಗಿದ್ದು, ಮಳೆಗೆ ಸಿಕ್ಕರಂತೂ ಇನ್ನೂ ಬೇಗ ಹಾಳಾಗುತ್ತದೆ. ಕೆಲ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾದ ಕಾರಣ ಸಾಗಾಣಿಕೆ ಸಮಸ್ಯೆಯಿಂದಲೂ ಸಹ ಬೆಲೆ ಏರಿಕೆ ಆಗಿದೆ.
ಸಾಕಷ್ಟು ಸಂಖ್ಯೆಯಲ್ಲಿ ಕೋಲ್ಡ್ ಸ್ಟೋರೇಜ್‌ಗಳು ಇಲ್ಲದಿರುವುದು
ಟೊಮೆಟೊ ಸೇರಿದಂತೆ ಹಲವು ತರಕಾರಿಗಳನ್ನು ಸಂಗ್ರಹಿಸಿಡುವ ದೊಡ್ಡ ದೊಡ್ಡ ಕೋಲ್ಡ್ ಸ್ಟೋರೇಜ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದರಿಂದ ಸಂಗ್ರಹಿಸಿ ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬೇಡಿಕೆ ಹೆಚ್ಚಿದಂತೆ ಬೆಲೆ ಏರಿಕೆ ಆಗಿದೆ.
ಪ್ರತಿವರ್ಷದ ವಿದ್ಯಮಾನ
ಇನ್ನು ಈ ಸಮಸ್ಯೆ ಪ್ರತಿವರ್ಷದ ವಿದ್ಯಾಮಾನವಾಗಿದ್ದು ಈ ಸಮಯದಲ್ಲಿ ಬೆಲೆ ಏರಿಕೆಯಾಗುವುದು ಸಹಜ. ಆದರೆ ಕೆಲವೇ ದಿನಗಳಲ್ಲಿ ಬೆಲೆ ಇಳಿಯಲಿದ್ದು ಸಹಜ ಸ್ಥಿತಿಗೆ ಮರಳಲಿದೆ ಎಂದು ಗ್ರಾಹರ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬೆಲೆ ಏರಿಕೆ ತಡೆಯಲು ತಮಿಳುನಾಡು ಸರ್ಕಾರದ ಯತ್ನ
ಬಡವರು ಮತ್ತು ಮಧ್ಯಮ ವರ್ಗದ ಸಮುದಾಯಗಳ ಮೇಲಿನ ಬೆಲೆ ಏರಿಕೆ ಹೊರೆಯನ್ನು ತಗ್ಗಿಸುವ ಪ್ರಯತ್ನದಲ್ಲಿ ತಮಿಳುನಾಡು ಸರ್ಕಾರವು ರಾಜ್ಯದಾದ್ಯಂತ ಫಾರ್ಮ್ ಫ್ರೆಶ್ ಔಟ್ಲೆಟ್‌ಗಳಲ್ಲಿ (FFOs) ಟೊಮೆಟೊ ಮಾರಾಟ ಮಾಡಲು ಪ್ರಾರಂಭಿಸಿದೆ. ಟೊಮೆಟೊ ಬೆಲೆಯನ್ನು ನಿಯಂತ್ರಿಸುವುದು ಮತ್ತು ಈ ಅಗತ್ಯ ತರಕಾರಿಯನ್ನು ಸಾರ್ವಜನಿಕರಿಗೆ ಹೆಚ್ಚು ಸುಲಭವಾಗಿ ತಲುಪಿಸುವುದು ಇದರ ಉದ್ದೇಶವಾಗಿದೆ. ಎಫ್‌ಎಫ್‌ಒಗಳಲ್ಲಿ ಪ್ರತಿ ಕೆಜಿ ಟೊಮೆಟೊಗೆ 68 ರೂ.ಗೆ ಬೆಲೆ ನಿಗಧಿಪಡಿಸಲಾಗಿದೆ. 60 ರೂಗಿಂತ ಬೆಲೆ ಕಡಿಮೆ ಮಾಡಲು ಚಿಂತಸಲಾಗುತ್ತಿದೆ ಎಂದು ತಮಿಳುನಾಡಿನ ಸಹಕಾರ, ಆಹಾರ ಮತ್ತು ಗ್ರಾಹಕ ಸಂರಕ್ಷಣಾ ಇಲಾಖೆಯ ಸಚಿವ ಪೆರಿಯಕರುಪ್ಪನ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ ಮರ್ಯಾದೆಗೇಡು ಹತ್ಯೆ: ಪರಿಶಿಷ್ಟ ಜಾತಿಯವನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ; ಯುವಕ ಆತ್ಮಹತ್ಯೆ


