ಪುನರುತ್ಪಾದನೆಯಾಗಿ ಹರಡಲು ವೈರಸ್‌ಗಳಿಗೆ ಜೀವಿ ದೇಹವೊಂದು ಬೇಕೇ ಬೇಕಂತೆ. COVID-19 ಕೂಡ ಈ ಮಾತಿಗೆ ಹೊರತಲ್ಲ. ಮೂಲಭೂತವಾಗಿ ವೈರಸ್ ಒಂದು ಆನುವಂಶಿಕ ವಸ್ತು. ತಂತಾನೇ ಏನನ್ನೂ ಮಾಡಲು ಸಾಧ್ಯವಿಲ್ಲ. ಪುನರುತ್ಪಾದನೆ ಮಾಡಲು ಅದು ಜೀವಿಯೊಂದರ ದೇಹಕ್ಕೆ ಲಗ್ಗೆ ಹಾಕಲೇಬೇಕು. ಜೀವಿಯ ದೇಹ ಸಿಗದಿದ್ದರೆ ಇಂತಿಷ್ಟು ದಿನಗಳೊಳಗಾಗಿ ಸತ್ತು ಹೋಗುತ್ತದೆ. ವೈರಸ್ ಬ್ಯಾಕ್ಟೀರಿಯಾದಂತಲ್ಲ. ಅದಕ್ಕೆ ತಿನ್ನಲು, ಕುಡಿಯಲು ಏನೂ ಬೇಕಿಲ್ಲ. ಏನನ್ನೂ ವಿಸರ್ಜಿಸಬೇಕಿಲ್ಲ, ಬಿಡುವು ಇಲ್ಲವೇ ವಿಶ್ರಾಂತಿಯ ಅಗತ್ಯ ಮೊದಲೇ ಇಲ್ಲ. ಒಂದು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ, ಎಂಟು ಹದಿನಾರಾಗಿ ತನ್ನ ಸಂಖ್ಯೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತ ಹೋಗುವುದೊಂದೇ ಅದರ ಏಕೈಕ ಕೆಲಸ. ಹೀಗಾಗಿ ಅದಕ್ಕೆ ಬೇಕಾದದ್ದೆಲ್ಲ ಜೀವಿಯೊಂದರ ದೇಹ.
ಕೊರೋನ ವೈರಸ್ ಲಗ್ಗೆ ಹಾಕಿದ್ದು ಮನುಷ್ಯ ದೇಹಕ್ಕೆ. ಮನುಷ್ಯ ದೇಹ ಪ್ರವೇಶಿಸಿ ಜೀವಕೋಶವೊಂದಕ್ಕೆ ಅಂಟಿಕೊಂಡು ಪುನರುತ್ಪಾದನೆಯಾಗುತ್ತವೆ ಈ ವೈರಸ್. ವೈರಸ್‌ಗಳ ಸಂಖ್ಯೆಯು ನಿರ್ದಿಷ್ಟ ಜೀವಕೋಶವು ಸಲಹಲಾರದಷ್ಟು ಹೆಚ್ಚಿದ ನಂತರ ಪಕ್ಕದ ಮತ್ತೊಂದು ಜೀವಕೋಶದ ಮೇಲೆ ದಾಳಿ ಮಾಡುತ್ತವೆ ಎನ್ನುತ್ತಾರೆ ಜೀವಿ ವಿಜ್ಞಾನಿಗಳು.
ಮನುಷ್ಯನ ಭಾವ ಮತ್ತು ಬುದ್ಧಿಯ ಮೇಲೆ ದಾಳಿ ನಡೆಸುವ ದ್ವೇಷ- ಹಿಂಸೆ-ಶ್ರೇಷ್ಠತೆಯ ವ್ಯಸನದ ವೈರಾಣುಗಳು ಕೂಡ ಥೇಟ್ ಹೀಗೆಯೇ ಕೆಲಸ ಮಾಡುತ್ತವೆ. ಬುದ್ಧಿ ಮತ್ತು ಭಾವವನ್ನು ಭ್ರಷ್ಟಗೊಳಿಸುವ ಈ ವೈರಾಣುಗಳು ಮನುಷ್ಯನಲ್ಲಿನ ಮನುಷ್ಯತ್ವವನ್ನು ತಿಂದು ಹಾಕುತ್ತವೆ. ಮನುಷ್ಯತ್ವವನ್ನು ಕಳೆದುಕೊಂಡ ಮೆದುಳುಗಳ ದೂರನಿಯಂತ್ರಣ ಮಾಡುವುದು ಸಲೀಸು.

ಕಳೆದ ಐದಾರು ವರ್ಷಗಳಿಂದ ನಮ್ಮ ಪ್ರಚಂಡ ಜನನಾಯಕರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಸಂಗತಿಯನ್ನು ಒಂದಲ್ಲ ಹಲವು ಸಲ ಆಗು ಮಾಡಿ ತೋರಿದ್ದಾರೆ. ಮೊನ್ನೆ ಭಾನುವಾರ ಸಂಜೆ ನಡೆದ ವಿದ್ಯಮಾನ ಈ ಮಾತಿಗೆ ಮತ್ತೊಂದು ಉದಾಹರಣೆ. ಭಯಾನಕ ಸಾಂಕ್ರಾಮಿಕ ಕೊರೋನಾ ಮಹಾಮಾರಿಯನ್ನು ಮೆದುಳುರಹಿತ ಜನಕೋಟಿ ಹಬ್ಬದಂತೆ ಆಚರಿಸಿತು. ಶಾರೀರಿಕ ದೂರದ ನಿಯಮವನ್ನು ಬಿಗಿಯಾಗಿ ಪಾಲಿಸಬೇಕಿರುವ ಈ ಹೊತ್ತಿನಲ್ಲಿ ಜನ ಗುಂಪು ಗುಂಪಾಗಿ ಬೀದಿಗಿಳಿದು ಸಂಭ್ರಮಿಸಿದರು. ತಟ್ಟೆ, ಜಾಗಟೆ ಬಾರಿಸಿ, ಶಂಖ ಊದಿ, ಚಪ್ಪಾಳೆ ತಟ್ಟಿ ಕೊರೋನ ಪರಾರಿಯಾಯಿತೆಂದು ಗೆಲುವಿನಿಂದ ಬೀಗಿದರು.
ನೋಟುರದ್ದಿನಂತ ಮೂರ್ಖ ಮತ್ತು ಅಮಾನವೀಯ ಕ್ರಮವನ್ನು ಕೂಡ ಜನ ಹೀಗೆಯೇ ಸಾಮೂಹಿಕ ಸನ್ನಿಗೊಳಗಾಗಿ ಸ್ವಾಗತಿಸಿದ್ದರು. ತಮ್ಮ ಬದುಕುಗಳ ಮೇಲೆ ಬಿದ್ದ ಈ ಮಾರಣಾಂತಿಕ ಹೊಡೆತದಿಂದ ಕೋಟ್ಯಂತರ ಜನ ಈಗಲೂ ಚೇತರಿಸಿಕೊಂಡಿಲ್ಲ.
ಸಾಂಕ್ರಾಮಿಕ ರೋಗಗಳ ತಜ್ಞರು ಹೇಳುವಂತೆ ಕೊರೋನಾ ಮಹಾಮಾರಿಯನ್ನು ಭಾರತ ಎಷ್ಟು ಗಂಭೀರವಾಗಿ ಪರಿಗಣಿಸಬೇಕೋ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಕೋಟಿಗಟ್ಟಲೆ ಸಾವು ನೋವು ಸಂಭವಿಸಿದರೆ ಆಶ್ಚರ್ಯವಿಲ್ಲ. ಭಾರೀ ಬಾಂಬೊಂದು ಸ್ಫೋಟಿಸಲಿದೆ ಎಂಬ ಅವರ ಎಚ್ಚರಿಕೆಯ ನಂತರವೂ ಜನಸಮೂಹ ಮೊನ್ನೆ ಭಾನುವಾರ ಬೀದಿಗಿಳಿದು ಮೂಢನಂಬಿಕೆಯನ್ನು ಮೆರೆಯಿತು.
ಭಾನುವಾರ ಸಂಜೆ ತಟ್ಟೆ ಜಾಗಟೆ ಚಪ್ಪಾಳೆ ಬಾರಿಸುವಂತೆ ಕರೆ ನೀಡಿದ ಮಹಾನ್ ನಾಯಕರಿಗೆ ಜನಸಮೂಹಗಳ ವರ್ತನೆಯ ವೈಖರಿ ತಿಳಿಯದ್ದೇನಲ್ಲ. ಆದರೆ ಅವರಿಗೆ ಬೊಮ್ಮನಹಳ್ಳಿಯ ಕಿಂದರಿ ಜೋಗಿಯಾಗುವ ವಿಕೃತ ಸಂಭ್ರಮ. ಅವರ ಮಡಿಲ ಮುದ್ದಿನ ನಾಯಿಯಾಗಿ ಬದಲಾಗಿದೆ ಸಮೂಹಮಾಧ್ಯಮ ಎಂಬ ಜನತಂತ್ರದ ಕಾವಲು ನಾಯಿ. ಅದು ಮಹಾನ್ ನಾಯಕರ ಸಂದೇಶದ ಡಂಗುರವನ್ನು ಹಗಲಿರುಳು ಬಾರಿಸಿ ನಿಷ್ಠೆ ಮೆರೆಯಿತು. ಮೆದುಳನ್ನು ಒತ್ತೆ ಇರಿಸಿರುವ ಜನಸಮೂಹ ಕೀಲುಬೊಂಬೆಯಂತೆ ಕುಣಿಯಿತು.

ವುಹಾನ್‌ನಲ್ಲಿ ಈ ಮಹಾಮಾರಿ ಅಬ್ಬರಿಸಿದಾಗ ಚೀನಾ ಸರ್ಕಾರ ತಟ್ಟೆ ಜಾಗಟೆ ಬಾರಿಸುವ ಸರ್ಕಸ್ ಮಾಡಲಿಲ್ಲ. ಬದಲಾಗಿ ದಾಖಲೆಯ ಸಮಯದಲ್ಲಿ ದೈತ್ಯ ಆಸ್ಪತ್ರೆಯ ನಿರ್ಮಿಸಿತು. ಸಾಂಕ್ರಾಮಿಕದ ಬೇರುಗಳ ಸುಟ್ಟು ಹಾಕಲು ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿತು. ಸಾರ್ವಜನಿಕ ಆರೋಗ್ಯದ ಮೇಲೆ ಭಾರತ ಸರ್ಕಾರದ ವೆಚ್ಚದ ಪ್ರಮಾಣ ಶೋಚನೀಯ ಪ್ರಮಾಣದ್ದು. ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕಿಂತಲೂ ಕಡಿಮೆ. ಜಿ.ಡಿ.ಪಿ.ಯ ಶೇ.1.28ರಷ್ಟು ಮಾತ್ರ. ಈ ಮೊತ್ತವನ್ನು ಕನಿಷ್ಠ ಶೇ.ಮೂರಕ್ಕೆ ಹೆಚ್ಚಿಸಬೇಕೆಂದು ದಶಕಗಳಿಂದ ಮುಂದಿಡುತ್ತ ಬಂದಿರುವ ಬೇಡಿಕೆಯನ್ನು ಯಾವ ಸರ್ಕಾರಗಳೂ ಕಿವಿಗೆ ಹಾಕಿಕೊಳ್ಳಲಿಲ್ಲ. ನರೇಂದ್ರ ಮೋದಿಯವರ ಸರ್ಕಾರವೂ ಈ ಮಾತಿಗೆ ಹೊರತಾಗಲಿಲ್ಲ. ಹಣವುಳ್ಳ ವರ್ಗಗಳ ಅಗತ್ಯಗಳನ್ನು ಪೂರೈಸುವ ಮಲ್ಟಿ ಸ್ಪೆಶಾಲಿಟಿ, ಸೂಪರ್ ಸ್ಪೆಶಾಲಿಟಿ ಖಾಸಗಿ ಆಸ್ಪತ್ರೆ ವ್ಯವಸ್ಥೆ ತಲೆಯೆತ್ತಿ ಬೆಳೆಯಿತೇ ವಿನಾ ಸಾರ್ವಜನಿಕ ಆರೋಗ್ಯ ಹಾಸಿಗೆ ಹಿಡಿಯುತ್ತಲೇ ಹೋಯಿತು. ಈಗ ಅದು ಕೃತಕ ಉಸಿರಾಟದಲ್ಲಿದೆ. ಸಾವು ಬದುಕಿನ ನಡುವೆ ತೂಗುಯ್ಯಾಲೆ ಆಡಿದೆ. ಅರ್ಥಾತ್ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನೇ ಆಧರಿಸಿರುವ ಶೇ.80ರಷ್ಟು ಜನಸಂಖ್ಯೆ ಹಾಸಿಗೆ ಹಿಡಿದಿರುವ ಆರೋಗ್ಯ ವ್ಯವಸ್ಥೆಯನ್ನು ಅವಲಂಬಿಸಿದೆ. ಪ್ರತಿ ಹನ್ನೊಂದು ಸಾವಿರ ಮಂದಿಗೆ ಒಬ್ಬ ಸರ್ಕಾರಿ ವೈದ್ಯರಿದ್ದಾರೆ. ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ದೇಶದಲ್ಲಿರುವ ವೆಂಟಿಲೇಟರುಗಳ (ಕೃತಕ ಉಸಿರಾಟ ವ್ಯವಸ್ಥೆ) ಸಂಖ್ಯೆ ಒಂದು ಲಕ್ಷ ಮೀರುವುದಿಲ್ಲ. ಇನ್ನು ಮಹಾಮಾರಿಯು ಅಬ್ಬರಿಸಿರುವ ಈ ದಿನಗಳಲ್ಲಂತೂ ಈ ಜನವರ್ಗಗಳನ್ನು ಕೇಳುವವರು ಯಾರು? ಅವರ ಪ್ರಾಣಗಳು ಬಲು ಅಗ್ಗ.
ಅಷ್ಟಿಷ್ಟು ಪ್ರಮಾಣಕ್ಕೆ ಬೆಳೆದಿದ್ದ ವೈಜ್ಞಾನಿಕ ಮನೋಧರ್ಮವನ್ನು ನಾಶ ಮಾಡುವ ಎಲ್ಲ ಪ್ರಯತ್ನಗಳು ಕಳೆದ ಆರೇಳು ವರ್ಷಗಳಿಂದ ನಡೆಯುತ್ತ ಬಂದಿವೆ. ತರ್ಕ, ಸಂಶೋಧನೆ, ವಿಜ್ಞಾನ, ವಿದ್ವತ್ತಿನ ಮಾನಹರಣ ಮಾಡಲಾಗಿದೆ. ಅಂಧ ವಿಶ್ವಾಸ ಮತ್ತು ನಕಲಿ ಸುದ್ದಿಗಳು ಮತ್ತು ಹಸೀ ಸುಳ್ಳುಗಳನ್ನು ಉತ್ಪಾದಿಸಿ ಹಬ್ಬಿಸುವ ‘ಕಾರ್ಖಾನೆ’ಗಳನ್ನು ಲಕ್ಷಗಳ ಸಂಖ್ಯೆಯಲ್ಲಿ ದೇಶದುದ್ದಗಲಕ್ಕೂ ಕಟ್ಟಿ ನಿಲ್ಲಿಸಲಾಗಿದೆ. ಭಾವ ಬುದ್ಧಿಗಳನ್ನು ಭ್ರಷ್ಟಗೊಳಿಸಿ ಮಿದುಳುಗಳನ್ನು ತಿಂದು ಹಾಕುವ ದ್ವೇಷ-ಹಿಂಸೆ-ಶ್ರೇಷ್ಠತೆಯ ವ್ಯಸನದ ವೈರಾಣುಗಳನ್ನು ತಿನ್ನುವ ವೈರಾಣುಗಳನ್ನು ಬಿಟ್ಟು ಬಹಳ ಕಾಲವೇ ಆಗಿದೆ. ಭಾನುವಾರ ಸಂಜೆ ಕಂಡು ಬಂದ ಭೀಭತ್ಸದ ತಳಪಾಯವಿದು.
ರೋಗಗ್ರಸ್ತ ಸಮಾಜವನ್ನು ಕಟ್ಟಿ ನಿಲ್ಲಿಸಿದರೆ ಮಹಾಮಾರಿಯನ್ನು ಎದುರಿಸುವ ಚೈತನ್ಯವಾದರೂ ಅದಕ್ಕೆ ಎಲ್ಲಿಂದ ಬರಬೇಕು? ಸಮಾಜದಲ್ಲಿ ಹಂಚಿಕೆಯಾಗಬೇಕಿರುವ ಸಂಪತ್ತನ್ನು ಬಾಚಿಕೊಂಡಿರುವ ರೆಡ್ಡಿಗಳು, ಅಂಬಾನಿಗಳು, ಅದಾನಿಗಳು ಮುಂತಾದ ಉದ್ಯಮಿಗಳು, ಮಹಾನ್ ನಟರು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡೆಯವ ಕನಿಷ್ಠ ಮಾನವೀಯತೆಯನ್ನೂ ಮರೆತಿದ್ದಾರೆ.
ದೇಶಾದ್ಯಂತ ಜನಜೀವನ ಅನಿರ್ದಿಷ್ಟ ಕಾಲ ಸ್ತಬ್ದಗೊಳ್ಳಲಿದೆ. ನಿತ್ಯದ ದುಡಿಮೆಯನ್ನು ಆಧರಿಸಿ ಹೊಟ್ಟೆ ಹೊರೆಯುವ ಕೋಟ್ಯಂತರ ಜನರ ಬದುಕು ನೋಟು ರದ್ದಿನ ನಂತರ ಮತ್ತೊಮ್ಮೆ ಅತಂತ್ರ ಆಗಲಿದೆ. ಈ ಜನರಿಗೆ ಪ್ರಧಾನಿಯವರು ಯಾವ ಪರಿಹಾರವನ್ನೂ ನೀಡಿಲ್ಲ. ಕೇವಲ ಚಪ್ಪಾಳೆ ತಟ್ಟಲು ಹೇಳಿರುವುದು ಕ್ರೌರ್ಯದ ಪರಮಾವಧಿ.
ಜನತಾಂತ್ರಿಕವಾಗಿ ಆರಿಸಿ ಬಂದಿರುವವರು ಸರ್ವಾಧಿಕಾರಿಗಳಾಗುವ ದಿನ ದೂರವಿಲ್ಲ. ಚಿಂತಕ ಶಿವಸುಂದರ್ ಅವರು ಹೇಳುವಂತೆ ದೇಹಕ್ಕೆ ಬಿದ್ದ ಪೆಟ್ಟು ಮೆದುಳಿಗೆ ತಿಳಿಯುತ್ತಿಲ್ಲ. ಯಾಕೆಂದರೆ ಮಿದುಳನ್ನು ನಾಶ ಮಾಡಲಾಗಿದೆ.


