ಮಂಗಳವಾರ ಸಾಂವಿಧಾನಿಕ ನ್ಯಾಯಾಲಯವು ಪ್ರಧಾನಿ ಪೇಟೊಂಗ್ಟಾರ್ನ್ ಶಿನವಾತ್ರ ಅವರನ್ನು ಅಮಾನತುಗೊಳಿಸಿರುವುದು ಥಾಯ್ಲೆಂಡ್ ರಾಜಕೀಯ ಮತ್ತು ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿದೆ.
ಮಾರಕ ಗಡಿ ಘರ್ಷಣೆಯ ನಂತರ ಕಾಂಬೋಡಿಯನ್ ಸೆನೆಟ್ ಅಧ್ಯಕ್ಷ ಹುನ್ ಸೇನ್ ಅವರೊಂದಿಗಿನ ಫೋನ್ ಕರೆ ಸೋರಿಕೆಯಾದ ಕುರಿತ ತನಿಖೆಯ ಮಧ್ಯೆ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಹುನ್ ಸೇನ್ ಅವರೊಂದಿಗಿನ ಫೋನ್ ಸಂಭಾಷಣೆಯ ಸಮಯದಲ್ಲಿ ನೈತಿಕ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುವವರೆಗೆ ಪೇಟೊಂಗ್ಟಾರ್ನ್ ಶಿನವಾತ್ರ ಅವರನ್ನು ಪ್ರಧಾನಿ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.
ಸೋರಿಕೆಯಾದ ಫೋನ್ ಕರೆಯಲ್ಲೇನಿತ್ತು?
ಮೇ 28, 2025ರಂದು ಥಾಯ್ ಮತ್ತು ಕಾಂಬೋಡಿಯನ್ ಪಡೆಗಳ ನಡುವಿನ ಗಡಿ ಘರ್ಷಣೆಯಲ್ಲಿ ಒಬ್ಬ ಕಾಂಬೋಡಿಯನ್ ಸೈನಿಕ ಸಾವನ್ನಪ್ಪಿದ ವಾರಗಳ ನಂತರ, ಅಂದರೆ ಜೂನ್ 15ರಂದು ಫೋನ್ ಸಂಭಾಷಣೆ ನಡೆದಿದೆ.
ಈ ಕರೆ ಸೋರಿಕೆಯಾಗಿ ಥಾಯ್ಲೆಂಡ್ ರಾಜಕೀಯದಲ್ಲಿ ಬಿರುಗಾಳಿಗೆ ಎದ್ದಿತ್ತು. ಪೇಟೊಂಗ್ಟಾರ್ನ್ ರಾಷ್ಟ್ರೀಯ ಹಿತಾಸಕ್ತಿಗಳ ವಿಷಯದಲ್ಲಿ ರಾಜಿ ಮಾಡಿಕೊಂಡಿದ್ದಾರೆ ಮತ್ತು ಮಿಲಿಟರಿ ಅಧಿಕಾರವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ವಿಮರ್ಶಕರು ಆರೋಪಿಸಿದ್ದರು.
ಫೋನ್ ಕರೆಯನ್ನು ಹುನ್ ಸೇನ್ ರೆಕಾರ್ಡ್ ಮಾಡಿದ್ದಾರೆ. ನಂತರ ಅದು ಸೋರಿಕೆಯಾಗಿದೆ. ರೆಕಾರ್ಡ್ ಮಾಡಿದ ಸಂಭಾಷಣೆಯನ್ನು 80ಕ್ಕೂ ಹೆಚ್ಚು ಜನರೊಂದಿಗೆ ಹಂಚಿಕೊಂಡಿರುವುದಾಗಿ ಹುನ್ ಸೇನ್ ಹೇಳಿಕೊಂಡಿದ್ದಾರೆ.
ಫೋನ್ ಸಂಭಾಷಣೆಯಲ್ಲಿ, ಪೇಟೊಂಗ್ಟಾರ್ನ್ ಮತ್ತು ಹುನ್ ಸೇನ್ ಥಾಯ್ಲೆಂಡ್-ಕಾಂಬೋಡಿಯಾ ಗಡಿ ಉದ್ವಿಗ್ನತೆಯನ್ನು ಹೇಗೆ ಪರಿಹರಿಸುವುದು ಮತ್ತು ಘರ್ಷಣೆಯ ನಂತರ ವಿಧಿಸಲಾದ ನಿರ್ಬಂಧಗಳನ್ನು ಸಡಿಲಿಸಬೇಕೆ? ಎಂದು ಚರ್ಚಿಸಿರುವುದು ಇದೆ ಎಂದು ವರದಿಯಾಗಿದೆ.
ಬಹು ವರದಿಗಳ ಪ್ರಕಾರ, ಪೇಟೊಂಗ್ಟಾರ್ನ್ ಫೋನ್ ಕರೆಯಲ್ಲಿ ಹುನ್ ಸೇನ್ ಅವರನ್ನು ‘ಅಂಕಲ್’ ಎಂದು ಉಲ್ಲೇಖಿಸಿದ್ದಾರೆ. ಹುನ್ ಸೇನ್ ಪೇಟೊಂಗ್ಟಾರ್ನ್ ಅವರ ತಂದೆ ಥಾಕ್ಸಿನ್ ಶಿನವಾತ್ರ ಅವರ ಆಪ್ತ ಸ್ನೇಹಿತರಾಗಿದ್ದಾರೆ, ಅವರು ಕೂಡ ಥಾಯ್ಲೆಂಡ್ ಪ್ರಧಾನಿಯಾಗಿದ್ದರು.
ಥಾಯ್ಲೆಂಡ್‌ನ ‘ಇನ್ನೊಂದು ಕಡೆಯ’ ಮಾತನ್ನು ಕೇಳಬೇಡಿ ಎಂದು ಪೇಟೊಂಗ್ಟಾರ್ನ್ ಹುನ್ ಸೇನ್ ಅವರನ್ನು ಒತ್ತಾಯಿಸಿದ್ದಾರೆ ಮತ್ತು ಕಾಂಬೋಡಿಯಾವನ್ನು ನೇರವಾಗಿ ಟೀಕಿಸಿದ ಥಾಯ್ ಸೇನಾ ಕಮಾಂಡರ್ ಅನ್ನು ಉಲ್ಲೇಖಿಸಿದ್ದಾರೆ. ಸೋರಿಕೆಯಾದ ಫೋನ್ ಕರೆಯಲ್ಲಿ, ಪೇಟೊಂಗ್ಟಾರ್ನ್ ಸೇನಾ ಕಮಾಂಡರ್ ಅನ್ನು ‘ವಿರೋಧಿ’ ಎಂದು ಹಣೆಪಟ್ಟಿ ಕಟ್ಟುವುದು ಸಹ ಕೇಳಬಹುದು ಎಂದು
ವರದಿಯಾಗಿದೆ.
ಅಷ್ಟಕ್ಕೆ ಸುಮ್ಮನಾಗದ ಪೇಟೊಂಗ್ಟಾರ್ನ್ ಸೇನಾ ಕಮಾಂಡರ್ ಬಗ್ಗೆ ಉಲ್ಲೇಖಿಸುತ್ತಾ, “ಅವರು ಕೂಲ್ ಆಗಿ ಕಾಣಲು ಬಯಸುತ್ತಾರೆ” ಎಂದು ಹೇಳಿದ್ದಾರೆ. ಹುನ್‌ಸೇನ್ ಏನು ಬಯಸುತ್ತಿದ್ದಾರೆ ಎಂದು ಕೇಳಿರುವ ಪೇಟೊಂಗ್ಟಾರ್ನ್, ಅವರು ಬಯಸಿದ್ದನ್ನು ನೆರವೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಪೇಟೊಂಗ್ಟಾರ್ನ್ ಅವರ ಮಾತುಗಳು ಥಾಯ್ಲೆಂಡ್‌ನ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಂಡತಿದೆ. ಇದು ರಾಜತಾಂತ್ರಿಕ ಮತ್ತು ಮಿಲಿಟರಿ ನಿಲುವಿಗೆ ಹಾನಿ ಮಾಡುವ ಸಾಧ್ಯತೆಯಿದೆ ಎಂದು ಆರೋಪಿಸಲಾಗಿದೆ. ಪೇಟೊಂಗ್ಟಾರ್ನ್ ಫೋನ್ ಕರೆ ಕುರಿತು ಕ್ಷಮೆಯಾಚಿಸಿದರೂ, ತನ್ನ ಮಾತುಕತೆ ಕಾರ್ಯ ತಂತ್ರದ ಭಾಗ ಎಂದು ಸಮರ್ಥಿಸಿಕೊಂಡಿದ್ದಾರೆ.
ಥಾಯ್-ಕಾಂಬೋಡಿಯನ್ ಗಡಿಯಲ್ಲಿರುವ ವಿವಾದಿತ ಪ್ರದೇಶದಲ್ಲಿ ಮೇ 28ರಂದು ನಡೆದ ಸಣ್ಣ ಗುಂಡಿನ ಚಕಮಕಿಯಿಂದ ಸಂಘರ್ಷ ಉಂಟಾಗಿದೆ. ಎರಡೂ ಕಡೆಯ ಸೈನಿಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯು ದೀರ್ಘಕಾಲದ ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತೆ ಮುನ್ನಲೆಗೆ ತಂದಿತ್ತು. ಆದರೆ, ಘರ್ಷಣೆಯ ನಂತರ ಎರಡೂ ಸರ್ಕಾರಗಳು ಸಮಸ್ಯೆಯನ್ನು ರಾಜತಾಂತ್ರಿಕವಾಗಿ ಪರಿಹರಿಸಿಕೊಳ್ಳುವ ಉತ್ಸಾಹ ತೋರಿತ್ತು.
ಇದರ ಹೊರತಾಗಿಯೂ, ಪ್ರತೀಕಾರದ ಕ್ರಮಗಳು ಮುಂದುವರೆದಿತ್ತು. ಪರಿಣಾಮ ಥಾಯ್ಲೆಂಡ್ ತೀವ್ರ ಗಡಿ ನಿರ್ಬಂಧಗಳನ್ನು ವಿಧಿಸಿತ್ತು. ಅಗತ್ಯ ಮತ್ತು ಸೀಮಿತ ಗಡಿ ದಾಟುವಿಕೆಗಳಿಗೆ ಮಾತ್ರ ಅವಕಾಶ ನೀಡಿತ್ತು. ಕಾಂಬೋಡಿಯಾ ಥಾಯ್ ಮಾಧ್ಯಮವನ್ನು ನಿಷೇಧಿಸುವ ಮೂಲಕ, ಹಣ್ಣು ಮತ್ತು ತರಕಾರಿ ಆಮದುಗಳನ್ನು ನಿಲ್ಲಿಸುವ ಮೂಲಕ ಮತ್ತು ಥಾಯ್ ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕಗಳನ್ನು ಬಹಿಷ್ಕರಿಸುವ ಮೂಲಕ ಪ್ರತಿಕಾರ ತೀರಿಸಿತ್ತು. ಅಲ್ಲದೆ, ಕಾಂಬೋಡಿಯಾ ಥಾಯ್ಲೆಂಡ್‌ನಿಂದ ಇಂಧನ ಆಮದನ್ನು ಸಹ ಸ್ಥಗಿತಗೊಳಿಸಿದೆ.
ಥಾಯ್ಲೆಂಡ್ ಮತ್ತು ಕಾಂಬೋಡಿಯಾ 800 ಕಿ.ಮೀ.ಗೂ ಹೆಚ್ಚು ಉದ್ದದ ಭೂ ಗಡಿಯನ್ನು ಹಂಚಿಕೊಂಡಿವೆ. ಕೆಲ ಗಡಿ ಭಾಗಗಳನ್ನು ಇನ್ನೂ ಗುರುತಿಸಲಾಗಿಲ್ಲ ಅಥವಾ ವಿವಾದಾತ್ಮಕವಾಗಿಯೇ ಉಳಿದಿವೆ. ಹೆಚ್ಚಿನ ವಿವಾದಿತ ಪ್ರದೇಶಗಳು 1907ರ ಫ್ರೆಂಚ್ ವಸಾಹತುಶಾಹಿ ಆಳ್ವಿಕೆಯಲ್ಲಿ ಚಿತ್ರಿಸಿದ ನಕ್ಷೆಗಿಂತ ಹಿಂದಿನವು. ಇದನ್ನು ಕಾಂಬೋಡಿಯಾ ತನ್ನ ಪ್ರದೇಶ ಎಂದು ಪ್ರತಿಪಾದಿಸಿಕೊಂಡು ಬಂದಿವೆ. ಥಾಯ್ಲೆಂಡ್ ವಿರೋಧಿಸಿದೆ.
ಕಳೆದ ಫೆಬ್ರವರಿಯಲ್ಲಿ, ಕಾಂಬೋಡಿಯನ್ ಪಡೆಗಳು ವಿವಾದಿತ ದೇವಾಲಯ ಪ್ರದೇಶವನ್ನು ಪ್ರವೇಶಿಸಿ ತಮ್ಮ ರಾಷ್ಟ್ರಗೀತೆಯನ್ನು ಹಾಡಿದಾಗ ಉದ್ವಿಗ್ನತೆ ಭುಗಿಲೆದ್ದಿತ್ತು. ಇದು ಥಾಯ್ ಸೈನಿಕರನ್ನು ಕೆರಳಿಸಿತ್ತು. ಐತಿಹಾಸಿಕವಾಗಿ, ಎರಡೂ ರಾಷ್ಟ್ರಗಳು ಹಕ್ಕು ಸಾಧಿಸಿರುವ 1,000 ವರ್ಷಗಳಷ್ಟು ಹಳೆಯದಾದ ಪ್ರಿಯಾ ವಿಹಿಯರ್ ದೇವಾಲಯದ ಸುತ್ತಲೂ ಅತ್ಯಂತ ಹಿಂಸಾತ್ಮಕ ಘರ್ಷಣೆಗಳು ನಡೆದಿತ್ತು.
1962ರಲ್ಲಿ, ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ದೇವಾಲಯದ ವಿಷಯದಲ್ಲಿ ಕಾಂಬೋಡಿಯಾದ ಪರವಾಗಿ ತೀರ್ಪು ನೀಡಿತ್ತು. 2011ರಲ್ಲಿ ನಡೆದ ಮಾರಕ ಘರ್ಷಣೆಗಳ ನಂತರ, ಐಸಿಜೆ 2013ರಲ್ಲಿ ಆ ಪ್ರದೇಶದ ಮೇಲೆ ಕಾಂಬೋಡಿಯಾದ ಸಾರ್ವಭೌಮತ್ವವನ್ನು ಪುನರುಚ್ಚರಿಸಿತ್ತು. ಈ ನಿರ್ಧಾರವು ಥಾಯ್ಲೆಂಡ್‌ನ ಆಕ್ರೋಶಕ್ಕೆ ಕಾರಣವಾಗಿದೆ.
ಥಾಯ್ಲೆಂಡ್-ಕಾಂಬೋಡಿಯಾ ಉದ್ವಿಗ್ನತೆಯಲ್ಲಿ ಹೊಸತೇನಿದೆ?
ಮೇ 28ರಂದು ಘರ್ಷಣೆ ನಡೆದ ಸ್ಥಳ ಸೇರಿದಂತೆ ಬಹು ವಿವಾದಿತ ಪ್ರದೇಶಗಳಿಗೆ ಕಾನೂನು ಪರಿಹಾರವನ್ನು ಕೋರಿ ಕಾಂಬೋಡಿಯಾ ಐಸಿಜೆ ಮೊರೆ ಹೋಗಿದೆ. ಆದರೆ, ಥಾಯ್ಲೆಂಡ್ ಐಸಿಜೆ ನ್ಯಾಯವ್ಯಾಪ್ತಿಯನ್ನು ತಿರಸ್ಕರಿಸಿದೆ. 2000ರಲ್ಲಿ ಸ್ಥಾಪಿಸಲಾದ ದ್ವಿಪಕ್ಷೀಯ ಕಾರ್ಯವಿಧಾನದ ಮೂಲಕ ಭೂ ಗಡಿ ಗುರುತಿಸುವಿಕೆಗೆ ಜವಾಬ್ದಾರರಾಗಿರುವ ಜಂಟಿ ಸಮಿತಿಯ ಮೂಲಕ ಪರಿಹಾರವನ್ನು ಕೋರಿದೆ.
ಕಾಂಬೋಡಿಯಾ ಇನ್ನು ಮುಂದೆ ದ್ವಿಪಕ್ಷೀಯ ಚರ್ಚೆಗಳನ್ನು ಮುಂದುವರಿಸುವುದಿಲ್ಲ ಎಂದಿದೆ. ಇದು ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ. ಎರಡೂ ಕಡೆಗಳಲ್ಲಿ ರಾಷ್ಟ್ರಪರ ವಾಗ್ವಾದಗಳು ಹೆಚ್ಚಿದ್ದು, ರಾಜತಾಂತ್ರಿಕತೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಘರ್ಷಣೆಯು ಕೇವಲ ಗಡಿ ವಿವಾದಕ್ಕೆ ಸೀಮಿತವಾಗಿಲ್ಲ. ಎರಡೂ ದೇಶಗಳ ನಡುವೆ ಆಳವಾದ ಸಾಂಸ್ಕೃತಿಕ ದ್ವೇಷವು ಶತಮಾನಗಳ ಹಿಂದಿನಿಂದ ಇದೆ. ಆಗ ಅವು ದೊಡ್ಡ ಮತ್ತು ಸ್ಪರ್ಧಾತ್ಮಕ ಸಾಮ್ರಾಜ್ಯಗಳಾಗಿದ್ದವು. ಇತ್ತೀಚಿನ ದಿನಗಳಲ್ಲಿ, ಫ್ರೆಂಚ್ ವಸಾಹತುಶಾಹಿ ಮತ್ತು 1970ರ ದಶಕದಲ್ಲಿ ಕಮ್ಯುನಿಸ್ಟ್ ಖಮೇರ್ ರೂಜ್‌ನ ಕ್ರೂರ ಆಳ್ವಿಕೆಯಿಂದ ಕಾಂಬೋಡಿಯಾದ ಅಭಿವೃದ್ಧಿಗೆ ಅಡ್ಡಿಯಾಗಿದೆ. ಆದ್ದರಿಂದ ಅದು ಥಾಯ್ಲೆಂಡ್‌ಗಿಂತ ಬಹಳ ಹಿಂದೆ ಇದೆ ಎಂಬ ಅಸಮಾಧಾನದ ಭಾವನೆ ಇದೆ.
ಬಾಕ್ಸಿಂಗ್ ಮತ್ತು ಮಾಸ್ಕ್ ಡ್ಯಾನ್ಸ್‌ನಿಂದ ಹಿಡಿದು ಸಾಂಪ್ರದಾಯಿಕ ಉಡುಪು ಮತ್ತು ಆಹಾರದವರೆಗೆ ಸಾಂಸ್ಕೃತಿಕ ಉತ್ಪನ್ನಗಳ ಹಕ್ಕುಗಳಿಗಾಗಿ ಎರಡೂ ದೇಶಗಳು ಹೋರಾಡುತ್ತಿವೆ.
‘ಭಾರತ-ಪಾಕ್ ಯುದ್ಧ ತಡೆದಿದ್ದು ನಾನೇ’: ಶ್ವೇತಭವನದಲ್ಲಿ ಪುನರುಚ್ಚರಿಸಿದ ಟ್ರಂಪ್


