ಕರ್ನಾಟಕದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಬಿರುಸಿನಿಂದ ಸಾಗುತ್ತಿದೆ, ಈಗಾಗಲೇ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಎರಡನೇ ಹಂತದ ಮತದಾನ ಡಿಸೆಂಬರ್ 27 ರಂದು ನಡೆಯಲಿದೆ. ಚುನಾವಣೆ ಆರಂಭವಾದಾಗಿನಿಂದಲೂ ತರೇಹವಾರಿ ಆಶ್ವಾಸನೆಗಳು, ಭರವಸೆಗಳು, ಪ್ರಣಾಳಿಕೆಗಳು ಚರ್ಚೆಯಲ್ಲಿವೆ. ಅಂತದ್ದೇ ವಿಶೇಷ ಪ್ರಣಾಳಿಕೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಹೊರಬಿದ್ದಿದೆ. ತಾನು ಗೆದ್ದಲ್ಲಿ ಗ್ರಾಮಕ್ಕೆ 25 ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ಅಭ್ಯರ್ಥಿಯೊಬ್ಬರು ಘೋಷಿಸಿ ಗಮನಸೆಳೆದಿದ್ದಾರೆ.
ಜಿಲ್ಲೆಯ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿಯ ದೊಡ್ಡೇಗಾನಹಳ್ಳಿ ಕ್ಷೇತ್ರದ ಅಭ್ಯರ್ಥಿಯಾದ ಲಕ್ಷ್ಮೀನರಸಿಂಹಪ್ಪ ಎಂಬುವವರು ದೊಡ್ಡಗಾನಹಳ್ಳಿ ಗ್ರಾಮದ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ. ಶಾಲೆ ಅಭಿವೃದ್ದಿ, ಗ್ರಂಥಾಲಯ ನಿರ್ಮಾಣ, ಕಾರ್ಮಿಕರಿಗೆ ಕೆಲಸ, ನೈರ್ಮಲ್ಯ ಕಾಪಾಡುವುದು ಸೇರಿದಂತೆ ಹಲವು ಜನಪರ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗೆ ತುಮಕೂರಿನ ಕಲ್ಕೆರೆ ಗ್ರಾಮದ ಮಹಿಳೆಯೊಬ್ಬರ ಪ್ರಣಾಳಿಕೆ ವೈರಲ್ ಆಗಿತ್ತು. ಆದರೆ ಅದರಲ್ಲಿ ಸೋತರೆ ತೊಂದರೆ ಕೊಡುತ್ತೇನೆ ಎಂಬ ಧಮಕಿ ಇದ್ದ ಕಾರಣ ಅವರ ವಿರುದ್ಧ ದೂರು ಸಹ ದಾಖಲಾಗಿತ್ತು. ಆದರೆ ದೊಡ್ಡೇಗಾನಹಳ್ಳಿಯ ಪ್ರಣಾಳಿಕೆಯು ಗ್ರಾಮದ ಅಭಿವೃದ್ದಿಯ ಸಮಗ್ರ ನೋಟ ಒಳಗೊಂಡಿರುವುದರಿಂದ ಎಲ್ಲರ ಗಮನ ಸೆಳೆದಿದೆ.

ಗ್ರಾಮಗಳ ಅಭಿವೃದ್ದಿಯೇ ದೇಶದ ಅಭಿವೃದ್ದಿ ಎಂಬ ಮಾತನ್ನು ಎಲ್ಲಾ ಕಡೆ ಕೇಳುತ್ತೇವೆ. ಆದರೆ ರಸ್ತೆ ಮತ್ತು ದೇವಸ್ಥಾನ ನಿರ್ಮಾಣವನ್ನೇ ಬಹುತೇಕರು ಗ್ರಾಮದ ಅಭಿವೃದ್ದಿ ಎಂದು ಭಾವಿಸುವವರಿದ್ದಾರೆ. ಇವರ ನಡುವೆ ಈ ಅಭ್ಯರ್ಥಿ ಲಕ್ಷ್ಮೀನರಸಿಂಹಪ್ಪ ಮಾತ್ರ ವಿಶಿಷ್ಟವಾಗಿ ನಿಲ್ಲುತ್ತಾರೆ. ಅವರ ಪ್ರಣಾಳಿಕೆಯಲ್ಲಿ ಗ್ರಾಮಕ್ಕೆ ಶುದ್ಧ ನೀರಿನ ಘಟಕವನ್ನು ತರುವುದು, ಊರಿನ ಎಲ್ಲಾ ರಸ್ತೆಗಳಲ್ಲಿ ಕಸದ ತೊಟ್ಟಿಗಳನ್ನು ಸ್ಥಾಪಿಸಿ ಸ್ವಚ್ಚತೆಯನ್ನು ಕಾಪಾಡುವುದು. ಮನೆ ಇಲ್ಲದವರಿಗೆ ಖುದ್ದಾಗಿ ಸರ್ವೇ ಮಾಡಿ ಸರ್ಕಾರದಿಂದ ಹೊಸ ಮನೆ ಕಟ್ಟಿಕೊಳ್ಳಲು ಸಹಾಯಧನವನ್ನು ಕೊಡಿಸುವುದು. ಊರಿಗೆ ನೀರಿನ ಓವರ್‌ಹೆಡ್ ಟ್ಯಾಂಕ್ ತರುವುದು. ಹೊಸ ಗ್ರಂಥಾಲಯವನ್ನು ಸ್ಥಾಪಿಸಿ ವಾಚನಾಲಯದ ಮೂಲಕ ಊರಿನ ಮಕ್ಕಳ ಜ್ಞಾನವನ್ನು ವೃದ್ಧಿಸುವುದು. ಸಾರ್ವಜನಿಕ ಆರೋಗ್ಯ ಸಂರಕ್ಷಣೆ ಮತ್ತು ರೋಗಗಳ ಹರಡುವಿಕೆಯನ್ನು ತಡೆಯುವ ಸುವ್ಯವಸ್ಥೆಯನ್ನು ಜವಬ್ದಾರಿ ಇರುವಂತಹವರಿಗೆ ಪಿಂಚಣಿ ಸೌಲಭ್ಯವನ್ನು ಕೊಡಿಸುವುದು. ಊರಿನ ಪ್ರಮುಖರಸ್ತೆಗಳ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಸಂರಕ್ಷಿಸಿ ಪೋಷಿಸುವ ಮೂಲಕ ಊರಿನ ಸೌಂದರ್ಯವನ್ನು ಹೆಚ್ಚಿಸುವುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಮದ ಜನರ ಜೊತೆ ನಿರಂತರ ಸಂಪರ್ಕದಲ್ಲಿರುವುದು ಸೇರಿ 25 ಕಾರ್ಯಕ್ರಮಗಳನ್ನು ಪಟ್ಟಿ ಮಾಡಲಾಗಿದೆ.
ಒಬ್ಬ ಗ್ರಾಮ ಪಂಚಾಯ್ತಿ ಸದಸ್ಯ ಮತ್ತು ಜನಪ್ರತಿನಿಧಿಗಳು ಮಾಡಬೇಕಾದ ಪ್ರಾಥಮಿಕ ಕರ್ತವ್ಯವನ್ನು ಈ ಮೇಲಿನ ಪಟ್ಟಿ ಸೂಚಿಸುತ್ತದೆ. ಪ್ರಾಮಾಣಿಕವಾಗಿ, ಶ್ರದ್ದೆಯಿಂದ ನಿರಂತರವಾಗಿ ಕೆಲಸ ಮಾಡಿದ್ದಲ್ಲಿ ಮೇಲಿನವನ್ನು ಮಾಡುವುದು ಅಸಾಧ್ಯದ ಮಾತಲ್ಲ ಜೊತೆಗೆ ಅನುದಾನದ ಕೊರತೆಯೂ ಇರುವುದಿಲ್ಲ. ಈ ರೀತಿಯಾಗಿ ಬಹುತೇಕ ಚುನಾಯಿತ ಜನಪ್ರತಿನಿಧಿಗಳು ನಿರ್ಧರಿಸಿದ್ದಲ್ಲಿ ಗ್ರಾಮಗಳು ನಿಜವಾದ ಅರ್ಥದಲ್ಲಿ ಸಬಲೀಕರಣವಾಗುತ್ತವೆ. ಅಂತಹ ಕೆಲಸ ಮಾಡುತ್ತೇನೆ ಎಂದು ದೊಡ್ಡೇಗಾನಹಳ್ಳಿ ಕ್ಷೇತ್ರದ ಅಭ್ಯರ್ಥಿಯಾದ ಲಕ್ಷ್ಮೀನರಸಿಂಹಪ್ಪ ಘೋಷಿಸಿ ಮಾದರಿಯಾಗಿದ್ದಾರೆ. ಇದು ಇತರರಿಗೂ ಸ್ಪೂರ್ತಿಯಾಗಲಿ ಎಂಬುದು ನಮ್ಮ ಆಶಯ.
ಇದನ್ನೂ ಓದಿ: ಇದನ್ನೂ ಓದಿ: ಗ್ರಾಮ ಪಂಚಾಯತ್ ಚುನಾವಣೆ: ಈ ಮಹಿಳಾ ಅಭ್ಯರ್ಥಿ ಸೋತರೆ ಏನು ಮಾಡುತ್ತಾರೆ ಗೊತ್ತೇ?


