ಸೇನಾ ಕಾರ್ಯಾಚರಣೆ ವೇಳೆ ನಾಗಾಲ್ಯಾಂಡ್‌ನಲ್ಲಿ ನಾಗರಿಕರು ಸಾವನ್ನಪ್ಪಿದ ಘಟನೆ ಹೃದಯ ವಿದ್ರಾವಕ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ. ಸರ್ಕಾರ ನಿಜವಾದ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದು, “ನಾಗರಿಕರು ಅಥವಾ ಭದ್ರತಾ ಸಿಬ್ಬಂದಿ ನಮ್ಮ ಸ್ವಂತ ಭೂಮಿಯಲ್ಲಿ ಸುರಕ್ಷಿತವಾಗಿಲ್ಲದಿದ್ದಾಗ ಗೃಹ ಸಚಿವಾಲಯವು ನಿಖರವಾಗಿ ಏನು ಮಾಡುತ್ತಿದೆ?” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ನಾಗಾಲ್ಯಾಂಡ್‌ನ ಮಯನ್ಮಾರ್ ಗಡಿಯ ಬಳಿ ದಂಗೆಕೋರರ ವಿರುದ್ಧದ ಕಾರ್ಯಾಚರಣೆಯ ವೇಳೆ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ 13 ಮಂದಿ ಗ್ರಾಮಸ್ಥರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ ನಡೆದ ನಾಗರಿಕರ ಹತ್ಯೆಗಳ ಹೊಣೆಗಾರಿಕೆಯನ್ನು ಸೇನೆ ಹೊರುತ್ತಿದೆ ಎಂದು ದಿಮಾಪುರ್ ಮೂಲದ 3 ಕಾರ್ಪ್ಸ್ ಡಿಸೆಂಬರ್ 5ರ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಮ್ಯಾನ್ಮಾರ್ ಗಡಿಯಲ್ಲಿರುವ ಮೋನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ದಂಗೆಕೋರರ ವಿರುದ್ಧದ ಕಾರ್ಯಾಚರಣೆಗೆ ಸಜ್ಜಾಗಿದ್ದವು. ದಂಗೆಕೋರರ ಚಲನವಲನದ ಬಗ್ಗೆ ವಿಶ್ವಾಸಾರ್ಹ ಗುಪ್ತಚರ ಆಧಾರದ ಮೇಲೆ ಓಟಿಂಗ್ ಗ್ರಾಮದ ಬಳಿ ದಾಳಿ ನಡೆಸಿದ್ದರು. ಆದರೆ ತಿರು-ಓಟಿಂಗ್ ರಸ್ತೆಯಲ್ಲಿ ಗ್ರಾಮಸ್ಥರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುಂಡಿನ ದಾಳಿಯಿಂದ ಆಕ್ರೋಶಗೊಂಡ ಸ್ಥಳೀಯರು ಭದ್ರತಾ ಪಡೆಗಳನ್ನು ಸುತ್ತುವರೆದರು. ಹೀಗಾಗಿ ಆತ್ಮ ರಕ್ಷಣೆಗಾಗಿ ಗುಂಪಿನ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದ್ದರು. ಇದರಿಂದ ಕನಿಷ್ಠ ಏಳು ಗ್ರಾಮಸ್ಥರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭದ್ರತಾ ಪಡೆಗಳ ಮೂರು ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ.
ಘಟನೆ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, “ನಾಗಾಲ್ಯಾಂಡ್‌ನ ಓಟಿಂಗ್‌ನಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ ನೋವಾಗಿದೆ. ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ರಾಜ್ಯ ಸರ್ಕಾರವು ರಚಿಸಿರುವ ಉನ್ನತ ಮಟ್ಟದ ಎಸ್‌ಐಟಿ ಈ ಘಟನೆಯನ್ನು ಕೂಲಂಕಷವಾಗಿ ತನಿಖೆ ನಡೆಸಿ ನ್ಯಾಯ ಒದಗಿಸುತ್ತದೆ” ಎಂದಿದ್ದಾರೆ.
ಘಟನೆಯ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮುಖ್ಯಮಂತ್ರಿ ನೆಫಿಯು ರಿಯೊ ಘಟನೆಯನ್ನು ಖಂಡಿಸಿದ್ದಾರೆ ಮತ್ತು ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿರಿ: ಉತ್ತರ ಪ್ರದೇಶ: ಅಕ್ರಮ ನೇಮಕಾತಿ ವಿರುದ್ಧ ಪ್ರತಿಭಟನೆ- ದಲಿತ, ಒಬಿಸಿ ಯುವಜನರ ಮೇಲೆ ಕ್ರೂರ ಲಾಠೀ ಚಾರ್ಜ್



ನಾಗಲ್ಯಾಂಡ್ ನಲ್ಲಿ ರಾಹುಲ್ ವಂಶಸ್ಥರಿಗೆ ದಾಳಿ ಆಗಿರಬೇಕು ಅನಿಸುತ್ತೇ ಅದಕ್ಕೆ ಕಾಳಜಿ ಮಾಡ್ತಿದ್ದಾರೆ.ಕರ್ನಾಟಕ ದಲ್ಲಿ ಹಿಂದೂಗಳ ಮೇಲೆ ದಾಳಿಗಳು ಆದಾಗ ರಾಹುಲ್ ಗೆ ನೆನಪಿಗೆ ಬರಲಿಲ್ಲ ಅನಿಸುತ್ತೇ