ಫೇಸ್‌ಬುಕ್ ಒಡೆತನದ ವಾಟ್ಸಾಪ್ ಭಾರತದಲ್ಲಿ ತನ್ನ ವಿವಾದಾತ್ಮಕ ಹೊಸ ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸದ ಬಳಕೆದಾರರ ಖಾತೆಗಳನ್ನು ಕ್ರಮೇಣ ಅಳಿಸಲಿದೆ ಎಂದು ಹೇಳಿದೆ. ಹೊಸ ಗೌಪ್ಯತೆಯ ನೀತಿಯ ಯಾವುದೇ ಮುಂದೂಡಿಕೆ ಇಲ್ಲ ಎಂದು ವಾಟ್ಸಾಪ್ ಪರ ವಕೀಲರಾದ ಅರವಿಂದ ದತಾರ್ ಮತ್ತು ಕಪಿಲ್ ಸಿಬಲ್ ಸೋಮವಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಬಳಕೆದಾರರನ್ನು ಮನವೊಲಿಸುವ ಮೂಲಕ ತಮ್ಮ ನೀತಿಯನ್ನು ಒಪ್ಪಲು ವಾಟ್ಸಪ್ ಪ್ರಯತ್ನಿಸುತ್ತಿದೆ. ಅಂತಿಮವಾಗಿ ಹೊಸ ನಿಯಮಗಳನ್ನು ಪಾಲಿಸದ ಬಳಕೆದಾರರ ಖಾತೆಗಳನ್ನು ವಾಟ್ಸಪ್ ಅಳಿಸಬಹುದು ಎಂದು ಅವರು ಹೇಳಿದ್ದಾರೆ. ನಿಯಮಗಳಿಗೆ ಒಪ್ಪದ ಖಾತೆಗಳನ್ನು ಈಗಿನಿಂದಲೇ ಅಳಿಸಲಾಗದಿದ್ದರೂ, ಮಾರ್ಗಸೂಚಿಗಳನ್ನು ಸ್ವೀಕರಿಸದಿದ್ದರೆ ಅವುಗಳನ್ನು ಅಂತಿಮವಾಗಿ ತೆಗೆದುಹಾಕಲಾಗುತ್ತದೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ಈ ಹಿಂದೆ ವಾಟ್ಸಪ್ ಭಾರತದಲ್ಲಿ ತನ್ನ ಗೌಪ್ಯತೆ ನೀತಿಯಯನ್ನು ರದ್ದುಗೊಳಿಸಿದೆ ಅಥವಾ ಮುಂದೂಡಿದೆ ಎಂದು ವರದಿಯಾಗಿದ್ದವು, ಆದರೆ ಕಂಪೆನಿಯು ಅದನ್ನು ರದ್ದು ಮಾಡಿಲ್ಲ ಎಂದು ಈಗಿನ ಬೆಳವಣಿಗೆಯಿಂದ ತಿಳಿಯುತ್ತಿದೆ.
ಇದನ್ನೂ ಓದಿ: ಮೂಡಿಗೆರೆ ದಲಿತ ಯುವಕನ ಮೇಲೆ ಪಿಎಸ್‌ಐ ದೌರ್ಜನ್ಯ ಆರೋಪ: ಹಿರಿಯ ಅಧಿಕಾರಿಗಳಿಗೆ ದೂರು
ವಾಟ್ಸಪ್‌ನ ಹೊಸ ನಿಯಮವು ಚಾಟ್ ಮಾಹಿತಿ ಮತ್ತು ಬ್ಯುಸಿನೆಸ್ ಖಾತೆಗಳ ಬಳಕೆಗೆ ಇರುವ ಹೊಸ ನಿಯಮವಾಗಿದೆ. ಇದು ಬಳಕೆದಾರರ ಗೌಪ್ಯತೆಯನ್ನು ಉಲ್ಲಂಘಿಸುತ್ತದೆ ಎಂದು ದೇಶಾದ್ಯಂತ ವ್ಯಾಪಕ ಟೀಕೆಗಳನ್ನು ಹುಟ್ಟುಹಾಕಿದೆ. ಆದಾಗ್ಯೂ, ಮುಂದಿನ ವಾರಗಳಲ್ಲಿ ಗೌಪ್ಯತೆ ನೀತಿ ನವೀಕರಣದ ಕುರಿತು ಜ್ಞಾಪನೆಗಳನ್ನು ಕಂಪೆನಿಯು ಬಳಕೆದಾರರಿಗೆ ಕಳುಹಿಸಲಿದೆ. ಜೊತೆಗೆ ಇದರಿಂದಾಗಿ ವಾಟ್ಸಪ್ ಬಳಕೆದಾರರ ಗೌಪ್ಯತೆಯ ಉಲ್ಲಂಘನೆ ಆಗುವುದಿಲ್ಲ ಎಂದು ಕಂಪೆನಿ ಹೇಳಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ, ‘ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯು ದೇಶದ ಮಾಹಿತಿ ತಂತ್ರಜ್ಞಾನ ಕಾಯ್ದೆ 2020 ಅನ್ನು ಉಲ್ಲಂಘಿಸಿದೆ ಮತ್ತು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರಿಂದ ಉತ್ತರವನ್ನು ಕೋರಲಾಗಿದೆ’ ಎಂದು ದೆಹಲಿ ಹೈಕೋರ್ಟ್‌ಗೆ ಹೇಳಿದರು. ಹೊಸ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ಕೇಂದ್ರವು ಪ್ರಯತ್ನಿಸಿತಾದರೂ, ವಾಟ್ಸಾಪ್ ಅದನ್ನು ವಿರೋಧಿಸಿದೆ.
ಡೇಟಾ ಅನಾಲಿಟಿಕ್ಸ್ ಸಂಸ್ಥೆ ಸೆನ್ಸರ್ ಟವರ್ ಪ್ರಕಾರ, ಜನವರಿ-ಏಪ್ರಿಲ್ ಅವಧಿಯಲ್ಲಿ ವಾಟ್ಸಪ್ ತನ್ನ ಹೊಸ ಗೌಪ್ಯತೆ ನೀತಿಯಲ್ಲಿ ಬದಲಾವಣೆಗಳನ್ನು ಘೋಷಿಸಿದ ನಂತರ ಜಾಗತಿಕವಾಗಿ ವಾಟ್ಸಾಪ್ ಡೌನ್‌ಲೋಡ್ 43% ದಷ್ಟು ಕುಸಿದು ಜಾಗತಿಕವಾಗಿ 172.3 ಮಿಲಿಯನ್‌ಗೆ ತಲುಪಿದೆ. ಪ್ರತಿಸ್ಪರ್ಧಿ ಮೆಸೇಜಿಂಗ್ ಅಪ್ಲಿಕೇಶನ್‌ಗಳಾದ ಸಿಗ್ನಲ್ ಮತ್ತು ಟೆಲಿಗ್ರಾಮ್ ಈ ಅವಧಿಯಲ್ಲಿ ಹೊಸ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ. ಇವುಗಳ ಡೌನ್‌ಲೋಡ್‌ಗಳು ಕ್ರಮವಾಗಿ 64.4 ಮಿಲಿಯನ್ (1,192%) ಮತ್ತು 161 ಮಿಲಿಯನ್ (98%) ಏರಿಕೆಯಾಗಿದೆ.
ಇದನ್ನೂ ಓದಿ: ‘ಎಚ್ಚರಿಕೆ; ಬೇಕಾಬಿಟ್ಟಿ ಬಿಸಿ ನೀರಿನ ಆವಿ (ಸ್ಟೀಮ್) ಪಡೆಯದಿರಿ’-ತಮಿಳುನಾಡು ವೈದ್ಯಕೀಯ ಸಚಿವ


