Homeಮುಖಪುಟದಲಿತ ಯುವಕನಿಗೆ ಮೂತ್ರ ಕುಡಿಸಿ ದೌರ್ಜನ್ಯ: ಹೇಯ ಕೃತ್ಯ ಎಸಗಿದ ಪಿಎಸ್‌ಐ ಅಮಾನತ್ತಿಗೆ ಆಗ್ರಹ

ದಲಿತ ಯುವಕನಿಗೆ ಮೂತ್ರ ಕುಡಿಸಿ ದೌರ್ಜನ್ಯ: ಹೇಯ ಕೃತ್ಯ ಎಸಗಿದ ಪಿಎಸ್‌ಐ ಅಮಾನತ್ತಿಗೆ ಆಗ್ರಹ

ದೌರ್ಜನ್ಯ ಎಸಗಿದ ಸಬ್ ಇನ್ಸ್‌ಪೆಕ್ಟರ್‌ರವರನ್ನು ಕೇವಲ ವರ್ಗಾವಣೆ ಮಾಡಿ ಚಿಕ್ಕಮಗಳೂರು ಜಿಲ್ಲಾ ಹಿರಿಯ ಪೊಲೀಸರು ಕಣ್ಣೊರೆಸುವ ತಂತ್ರ ಮಾಡಿ ಕೈತೊಳೆದು ಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

- Advertisement -
- Advertisement -

ಗೋಣೀಬೀಡು ಠಾಣೆ ಪಿಎಸ್‌ಐ ತನ್ನ ಮೇಲೆ ವಿನಾಕಾರಣ ತೀವ್ರ ಹಲ್ಲೆ ನಡೆಸಿ, ಮೂತ್ರ ಕುಡಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಮೂಡಿಗೆರೆ ಬಳಿಯ ಕಿರಗುಂದದ ದಲಿತ ಯುವಕ ಕೆ.ಎಲ್.ಪುನೀತ್ ಆರೋಪಿಸಿದ್ದಾರೆ. ಈ ಕುರಿತು ಪಿಎಸ್‌ಐ ಮೇಲೆ ಕ್ರಮ ಕೈಗೊಳ್ಳುವಂತೆ ಹಿರಿಯ ಪೋಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ನಮ್ಮ ಗ್ರಾಮದಿಂದ ಕಾಣೆಯಾಗಿದ್ದ ವಿವಾಹಿತ ಮಹಿಳೆಯೋರ್ವರ ಜೊತೆ ನನಗೆ ಅಕ್ರಮ ಸಂಬಂಧವಿದೆ ಎಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಆದರೆ ನಾನು ತಪ್ಪು ಮಾಡಿಲ್ಲವೆಂದು ಹೇಳಿದ್ದರಿಂದ ನನ್ನ ಮೇಲೆ ಈ ಕ್ರೂರ ಹಲ್ಲೆ ನಡೆಸಲಾಯಿತು ಎಂದು ಪುನೀತ್ ಹೇಳಿದ್ದಾರೆ.

ಮೇ10ರಂದು ಗ್ರಾಮದ ಕೆಲವರು ಬಂದು ನನ್ನ ಮೇಲೆ ಹಲ್ಲೆ ನಡೆಸಲು ಮುಂದಾದಾಗ ನಾನು ಸಹಾಯಕ್ಕಾಗಿ ಪೋಲೀಸ್ ಹೆಲ್ಪ್‌ಲೈನ್ 112ಕ್ಕೆ ಕರೆ ಮಾಡಿದ್ದೆ. ನಂತರ ಸ್ಥಳಕ್ಕೆ ಬಂದ ಗೋಣೀಬೀಡು ಪಿಎಸ್‌ಐ ಅರ್ಜುನ್ ಅವರು ತನ್ನ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ್ದಲ್ಲದೇ ಪೋಲೀಸ್ ಠಾಣೆಯಲ್ಲಿ ನನ್ನ ಬಟ್ಟೆ ಬಿಚ್ಚಿಸಿ ಕೈಕಾಲು ಕಟ್ಟಿ ಮೇಲಕ್ಕೆ ತೂಗುಹಾಕಿ ಪಾದ ಹಾಗೂ ಮೈಕೈಗೆ ತೀವ್ರ ಹಲ್ಲೆ ನಡೆಸಿದ್ದಾರೆ. ಮೂತ್ರ ಕುಡಿಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನನ್ನು ವಿನಾಕಾರಣ ಠಾಣೆಗೆ ಕರೆದೊಯ್ದು ಬೆಳಗ್ಗಿನಿಂದ ರಾತ್ರಿವರೆಗೂ ಕ್ರೂರವಾಗಿ ದೌರ್ಜನ್ಯ ನಡೆಸಿ, ಮೂತ್ರ ಕುಡಿಸಿ ಜಾತಿ ನಿಂದನೆಮಾಡಿದ ಪಿಎಸ್‌ಐ ಅರ್ಜುನ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೋಲೀಸ್ ಮಹಾ ನಿರ್ದೇಶಕರು, ಪಶ್ಚಿಮ ವಲಯ ಐಜಿಪಿ ಹಾಗೂ ಎಸ್‌ಪಿ ಎಂ.ಹೆಚ್.ಅಕ್ಷಯ್ ಅವರಿಗೆ ದೂರು ನೀಡಿದ್ದೇನೆ ಎಂದು ಕೆ.ಎಲ್.ಪುನೀತ್ ತಿಳಿಸಿದ್ದಾರೆ.

ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲಾಗಿದ್ದು ಈ ಬಗ್ಗೆ ಪರೀಶಿಲನೆ ನಡೆಸಲು ಡಿವೈಎಸ್‌ಪಿಗೆ ಸೂಚಿಸಲಾಗಿದೆ ಎಂದು ಎಸ್‌ಪಿ ಅಕ್ಷಯ್ ಎಂ ಹಕಾಯ್ ಮಾಹಿತಿ ನೀಡಿದ್ದಾರೆ.

ಘಟನೆಯನ್ನು ಜಿಲ್ಲಾ ದಲಿತರ ಸಂಘರ್ಷ ಸಮಿತಿ ಮುಖಂಡ ರತನ್ ಊರುಬಗೆ ಖಂಡಿಸಿದ್ದು ಪಿಎಸ್‌ಐ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿಯವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಈ ಹಿಂದೆಯೇ ಹಲವು ದೂರುಗಳಿರುವ ಪಿಎಸ್‌ಐ ಅನ್ನು ವರ್ಗಾವಣೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸೂಚಿಸಿದ್ದೇನೆ ಎಂದು ಹೇಳಿದ್ದರು. ಅದರಂತೆ ಪಿಎಸ್‌ಐ ಅರ್ಜುನ್‌ರವರನ್ನು ವರ್ಗಾವಣೆ ಮಾಡಲಾಗಿದೆ.

ದೌರ್ಜನ್ಯ ಎಸಗಿದ ಸಬ್ ಇನ್ಸ್‌ಪೆಕ್ಟರ್‌ರವರನ್ನು ಕೇವಲ ವರ್ಗಾವಣೆ ಮಾಡಿ ಚಿಕ್ಕಮಗಳೂರು ಜಿಲ್ಲಾ ಹಿರಿಯ ಪೊಲೀಸರು ಕ್ರಮ ಜರುಗಿಸಿದಂತೆ ಕಣ್ಣೊರೆಸುವ ತಂತ್ರ ಮಾಡಿ ಕೈತೊಳೆದು ಕೊಂಡಿದ್ದಾರೆ. ಇದು ಸರಿಯಲ್ಲ, ಯುವಕನೊಂದಿಗೆ ಅನಾಗರಿಕವಾಗಿ ನಡೆದುಕೊಂಡು ಅತ್ಯಂತ ಹೇಯ ಕೃತ್ಯ ಎಸಗಿರುವ ಪಿಎಸ್‌ಐ ಅನ್ನು ತಕ್ಷಣ ಅಮಾನತ್ತು ಮಾಡಿ ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿಬಂದಿದೆ.

“ಮೂಡಿಗೆರೆಯ ಪೋಲೀಸ್ ಇನ್ಸ್ಪೆಕ್ಟರ್ ಮಾಡಿದ್ದರೆನ್ನಲಾದ ಈ ಕೃತ್ಯ ಅತ್ಯಂತ ಹೇಯಕರ ಮತ್ತು ವಿಕೃತ. ಇಂತಹ ಅಮಾನವೀಯವಾದ ಕೃತ್ಯಕ್ಕೆ ತಕ್ಕ ಶಿಕ್ಷೆಯಾಗಲೇಬೇಕು. ಇದು ಉಳಿದ ಅಧಿಕಾರಿಗಳಿಗೆ ಪಾಠವಾಗಬೇಕು. ನಾಗರೀಕರನ್ನು ಜಾತೀಯ ಹಿನ್ನೆಲೆಯಲ್ಲಿ ನೋಡುವುದು, ನಿಂದುಸುವುದು ಮತ್ತು ಆ ಕಾರಣದಿಂದ ಸರಕಾರದ ಕಚೇರಿಯಲ್ಲೇ ಹಿಂಸಾತ್ಮಕ ದೌರ್ಜನ್ಯ ಎಸಗುವುದು ಗುರುತರ ಅಪರಾಧ” ಎಂದು ಸಂಕಥನ ಸಂಪಾದಕರಾದ ರಾಜೇಂದ್ರ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಬಸವನ ಬಾಗೇವಾಡಿಯಲ್ಲಿ ಅಪ್ರಾಪ್ತ ದಲಿತ ಬಾಲಕಿಯರ ಅತ್ಯಾಚಾರ: ಕೈ ಕಟ್ಟಿ ಬಾವಿಗೆ ಎಸೆದು ಕೊಲೆಗೈದ ದುಷ್ಕರ್ಮಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

0
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಪ್ರತ್ಯೇಕ ವಿಚಾರಣೆ ಮಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಬದ್ದವಾಗಿದೆ ಎಂದು...