ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ಶನಿವಾರ (ಏ.5) ಬುಡಕಟ್ಟು ಸಾಂಸ್ಕೃತಿಕ ಕಾರ್ಯಕ್ರಮವಾದ ‘ಬಸ್ತಾರ್ ಪಾಂಡುಮ್’ನ ಸಮಾರೋಪ ಸಮಾರಂಭದಲ್ಲಿ ನಕ್ಸಲರನ್ನು ‘ಸಹೋದರರು’ ಎಂದು ಉಲ್ಲೇಖಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬನ್ನಿ’ ಎಂದು ಕರೆ ನೀಡಿದರು.
“ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶ ಮತ್ತು ಇಡೀ ದೇಶದಲ್ಲಿ ಎಡಪಂಥೀಯ ಉಗ್ರವಾದವನ್ನು (ಎಲ್‌ಡಬ್ಲ್ಯುಇ) ನಿರ್ಮೂಲನೆ ಮಾಡುತ್ತೇವೆ” ಎಂಬ ಮಾರ್ಚ್ 2026ರ ಗಡುವನ್ನು ಅವರು ಪುನರುಚ್ಚರಿಸಿದರು.
“ಬಸ್ತಾರ್‌ನಲ್ಲಿ ಗುಂಡಿನ ದಾಳಿ ಮತ್ತು ಸ್ಫೋಟಗಳು ನಡೆಯುವ ಯುಗ ಕಳೆದುಹೋಗಿದೆ. ಈಗಲೂ, ಶಸ್ತ್ರಸಜ್ಜಿತರು ಮತ್ತು ಅಲ್ಲದವರು ಸೇರಿದಂತೆ ಎಲ್ಲಾ ನಕ್ಸಲ್ ಸಹೋದರರಲ್ಲಿ ನಾನು ವಿನಂತಿಸುತ್ತೇನೆ ‘ನಿಮ್ಮ ಶಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬನ್ನಿ, ನೀವು ನಮ್ಮವರು. ನಕ್ಸಲರ ಹತ್ಯೆಯಾದಾಗ ಯಾರೂ ಖುಷಿ ಪಡುವುದಿಲ್ಲ. ಈ ಪ್ರದೇಶ ಅಭಿವೃದ್ಧಿಯನ್ನು ಬಯಸುತ್ತಿದೆ” ಎಂದು ಅಮಿತ್ ಶಾ ಹೇಳಿದರು.
“ಬಸ್ತಾರ್‌ನಲ್ಲಿ ಕಳೆದ 50 ವರ್ಷಗಳಲ್ಲಿ ಮಾಡಲಾಗದ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಐದು ವರ್ಷಗಳಲ್ಲಿ ಮಾಡಲು ಬಯಸಿದ್ದಾರೆ. ಆದರೆ, ಬಸ್ತಾರ್‌ನಲ್ಲಿ ಶಾಂತಿ ನೆಲೆಸಿದಾಗ, ಮಕ್ಕಳು ಶಾಲೆಗೆ ಹೋದಾಗ, ನಾವು ನಮ್ಮ ತಾಯಂದಿರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಾಗ, ಬುಡಕಟ್ಟು ಯುವಕರಲ್ಲಿ ಅಪೌಷ್ಟಿಕತೆ ಕಡಿಮೆಯಾದಾಗ, ಶಿಕ್ಷಣ, ಪ್ರತಿ ಹಳ್ಳಿಯಲ್ಲಿ ಆರೋಗ್ಯ ಸೇವೆಗಳು ದೊರೆತಾಗ, ತಹಸಿಲ್‌ಗಳಲ್ಲಿ ಆಸ್ಪತ್ರೆಗಳಿದ್ದಾಗ ಮತ್ತು ಪ್ರತಿ ಮನೆಗೆ ಪ್ರತಿ ತಿಂಗಳು ಏಳು ಕೆ.ಜಿ ಅಕ್ಕಿ ಸಿಕ್ಕಾಗ, ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಆರೋಗ್ಯ ವಿಮೆ ದೊರೆತಾಗ ಮಾತ್ರ ಇದು ಸಾಧ್ಯ. ಬಸ್ತಾರ್ ನಕ್ಸಲ್ ಮುಕ್ತವಾದರೆ ಇದು ಆಗಬಹುದು” ಎಂದಿದ್ದಾರೆ.
ನಕ್ಸಲರ ಶರಣಾಗತಿ ನೀತಿಯ ಬಗ್ಗೆ ಮಾತನಾಡಿದ ಅಮಿತ್ ಶಾ, “ನಕ್ಸಲ್ ಮುಕ್ತ ಎಂದು ಘೋಷಿಸಿಕೊಳ್ಳುವ ಪ್ರತಿಯೊಂದು ಗ್ರಾಮಕ್ಕೂ 1 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಲಾಗುವುದು. “ನಿಮ್ಮ ಹಳ್ಳಿಯಲ್ಲಿರುವ ಎಲ್ಲಾ ನಕ್ಸಲರಿಗೆ ಶರಣಾಗಲು ಹೇಳಿ” ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.
“ಇಂದು, ಶರಣಾದ ನಕ್ಸಲರು ಅಭಿವೃದ್ಧಿಗಾಗಿ ನಮಗೆ ಕಂಪ್ಯೂಟರ್‌ಗಳು ಬೇಕು, ಬಂದೂಕುಗಳಲ್ಲ. ಪೆನ್ನುಗಳು ಬೇಕು, ಐಇಡಿ ಅಥವಾ ಬಾಂಬ್‌ಗಳಲ್ಲ ಎಂದು ಅರ್ಥಮಾಡಿಕೊಂಡಿದ್ದಾರೆ. 2025ರ ಕಳೆದ ಮೂರು ತಿಂಗಳಲ್ಲಿ 521 ನಕ್ಸಲರು ಶರಣಾಗಿದ್ದಾರೆ. ಕಳೆದ ವರ್ಷ 881 ನಕ್ಸಲರು ಶರಣಾಗಿದ್ದರು” ಎಂದು ಅಮಿತ್ ಶಾ ಮಾಹಿತಿ ನೀಡಿದರು.
“ನಕ್ಸಲ್ ಪ್ರೊಪಗಂಡ ನಿಮ್ಮ ಯುವಜನರನ್ನು ಕೊಲ್ಲಲಿದೆ. ನನ್ನ ಸಹೋದರ, ಸಹೋದರಿಯರೇ ಯಾರೂ ಕೊಲ್ಲಲು ಬಯಸುವುದಿಲ್ಲ. ನೀವು ಏನೇ ಕೃತ್ಯಗಳನ್ನು (ಹಿಂಸೆ) ಮಾಡಿದ್ದರೂ, ನಿಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬನ್ನಿ. ನಿಮ್ಮ ಸುರಕ್ಷತೆ ಮತ್ತು ಭದ್ರತೆಯನ್ನು ನಾವು ಖಚಿತಪಡಿಸುತ್ತೇವೆ. ಬಂದೂಕುಗಳನ್ನು ಬಳಸುವ ಮೂಲಕ ಬಸ್ತಾರ್‌ನ ಅಭಿವೃದ್ಧಿ ತಡೆಯಲು ನಿಮಗೆ ಸಾಧ್ಯವಿಲ್ಲ. ಇನ್ನೂ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಬಯಸುವವರನ್ನು ಭದ್ರತಾ ಪಡೆಗಳು ನಿಭಾಯಿಸಲಿವೆ. ಏನೇ ಆಗಲಿ, ಮುಂದಿನ ಮಾರ್ಚ್ ವೇಳೆಗೆ ಇಡೀ ದೇಶ ನಕ್ಸಲ್ ಮುಕ್ತವಾಬೇಕು ಎಂದರು.
ಬಸ್ತಾರ್‌ನಲ್ಲಿ ತಾವು ಕಾಣಬಯಸುವ ಅಭಿವೃದ್ಧಿಯ ಕುರಿತು ಮಾತನಾಡಿದ ಶಾ, “ಅಭಿವೃದ್ಧಿ ಎಂದರೆ ಸುಕ್ಮಾದ ಸಬ್-ಇನ್ಸ್‌ಪೆಕ್ಟರ್, ಬಸ್ತಾರ್‌ನ ಬ್ಯಾರಿಸ್ಟರ್, ದಂತೇವಾಡದ ವೈದ್ಯರು ಮತ್ತು ಕಾಂಕೇರ್‌ನ ಕಲೆಕ್ಟರ್. ನಾವು ಕಷ್ಟಪಟ್ಟು ಕೆಲಸ ಮಾಡಿದರೆ ಮತ್ತು ಯಾರಿಗೂ ಹೆದರದಿದ್ದರೆ ಈ ಕನಸುಗಳು ನನಸಾಗುತ್ತವೆ. ನಿಮ್ಮ ಸುರಕ್ಷತೆಯನ್ನು ಈ ಡಬಲ್ ಇಂಜಿನ್ ಸರ್ಕಾರ ನೋಡಿಕೊಳ್ಳುತ್ತದೆ” ಎಂದು ಅಮಿತ್ ಶಾ ಹೇಳಿದರು.
ತನ್ನ ಕಲಾವಿದರ ಪಟ್ಟಿಯಿಂದ ಕುನಾಲ್ ಕಾಮ್ರಾರನ್ನು ಹೊರಗಿಟ್ಟ ಬುಕ್‌ಮೈಶೋ!


