ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವೈರಸ್‌ನಿಂದ ಉಂಟಾದ ಸಂಕಷ್ಟಗಳು ಮುಗಿಯುತ್ತಿವೆ ಎನ್ನುವಾಗಲೇ ಮತ್ತೆ ಸೋಂಕಿತ ಪ್ರಕರಣಗಳ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದ ಹಲವು ಜಿಲ್ಲಾಕೇಂದ್ರಗಳು ಮತ್ತೆ ಲಾಕ್‌ಡೌನ್ ಆಗುತ್ತಿವೆ. ದೇಶದಲ್ಲಿ ಒಂದೇ ದಿನ ೪೦ ಸಾವಿರ ಪ್ರಕರಣಗಳು ದಾಖಲಾಗಿವೆ. ಇದು ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ನಡುವೆ, ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಸರ್ಕಾರದ ಭ್ರಷ್ಟಾಚಾರದ ವೈರಸ್‌ಗೆ ಲಸಿಕೆ ಎಲ್ಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನ ಸಂಖ್ಯೆ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣದ ಹೆಸರಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ ಎಂಬ ನಮ್ಮ ಆರೋಪಕ್ಕೆ ಸಾಕ್ಷಿ ಹೇಳುವಂತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ, ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಖರ್ಚು ಮಾಡಿದ್ದರೆ ಮತ್ತೆ ಯಾಕೆ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಸಂಪನ್ಮೂಲ ವ್ಯಯ ಮಾಡಬೇಕಾಗಿದೆ ಎಂಬ ಕುಂಟು ನೆಪ ಹೇಳಿ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನಗಳನ್ನು ಕಡಿತಗೊಳಿಸಿದ ಸಿಎಂ ಯಡಿಯೂರಪ್ಪನವರು ಈಗ ಏನು ಹೇಳುತ್ತಾರೆ? ಅಷ್ಟೊಂದು ಆದ್ಯತೆ ನೀಡಿದ್ದರೆ ಕೊರೊನಾ ನಿಯಂತ್ರಣಕ್ಕೆ ಬರಬೇಕಿತ್ತಲ್ಲವೇ? ಯಾಕೆ ನಿಯಂತ್ರಣ ತಪ್ಪಿದೆ? ಎಂದು ಅವರು ಟೀಕಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ದೇಶದ ಮುಂದೆ ಬೆತ್ತಲಾಗುತ್ತಿದ್ದಾರೆ: ಸಿದ್ದರಾಮಯ್ಯ
ಕೊರೊನಾ ನಿರ್ವಹಣೆಗಾಗಿ 5,372 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಮೊನ್ನೆ ಮಂಡಿಸಿದ್ದ ಬಜೆಟ್ ನಲ್ಲಿ ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿರುವ ಖರ್ಚಿನ ವಿವರ ಮಾತ್ರ ತಿಳಿಸಿಲ್ಲ. ಈಗಲಾದರೂ ಆ ಹಣ ಯಾವ ಉದ್ದೇಶಗಳಿಗೆ ಖರ್ಚು ಮಾಡಿದ್ದೀರಿ ಎಂಬ ಲೆಕ್ಕದ ವಿವರವನ್ನು ಜನರ ಮುಂದಿಡಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಕೊರೊನಾ ವೈರಸ್‌ಗೆ ಲಸಿಕೆ ಬಂದಿದೆ. ಆದರೆ, ನಿಮ್ಮ ಸರ್ಕಾರಕ್ಕೆ ತಗಲಿರುವ ಭ್ರಷ್ಟಾಚಾರದ ವೈರಸ್ ಗೆ ಎಲ್ಲಿಂದ ಲಸಿಕೆ ತರುವುದು? ಕೊರೊನಾ ಮೊದಲ ಅಲೆಯ ನಿಯಂತ್ರಣದಲ್ಲಿನ ಲೋಪ-ದೋಷವನ್ನು ಎರಡನೇ ಅಲೆಯಲ್ಲಿಯಾದರೂ ತಿದ್ದಿಕೊಂಡು, ಕೊರೊನಾವನ್ನು ಭ್ರಷ್ಟಾಚಾರಕ್ಕೆ ದುರ್ಬಳಕೆ ಮಾಡಿಕೊಳ್ಳದೆ ಕೆಲಸ ಮಾಡಿ ಜನರನ್ನು ಉಳಿಸಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, 2ನೇ ಅಲೆಯ ಆತಂಕ ಹೆಚ್ಚಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 1,488 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 11,359 ಜನರು ನಿನ್ನೆ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 341 ಜನರು ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರೊಂದರಲ್ಲೇ ನಿನ್ನೆ 925 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ.
ಇದನ್ನೂ ಓದಿ: ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರಗಳಿಗೆ ಸ್ಪಷ್ಟತೆಯಾಗಲೀ, ಇಚ್ಛಾಶಕ್ತಿಯಾಗಲೀ ಇಲ್ಲ; ಸಿದ್ದರಾಮಯ್ಯ


