ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್‌ನಲ್ಲೇ ವಕೀಲನೊಬ್ಬ ಶೂ ಎಸೆಯಲು ಯತ್ನಿಸಿರುವುದು ಸಂವಿಧಾನವನ್ನು ಅನುಸರಿಸುವ ದೇಶದ ಜನತೆಯಲ್ಲಿ ಆತಂಕ ಉಂಟು ಮಾಡಿದೆ.
ದಲಿತ ಸಮುದಾಯವರಾದ ಸಿಜೆಐ ಮೇಲೆಯೇ ದಾಳಿ ಮಾಡಲು ಹೇಸದ ಜನರು, ದೇಶದ ಸಾಮಾನ್ಯ ದಲಿತ, ಅಲ್ಪಸಂಖ್ಯಾತ ಸೇರಿದಂತೆ ತಳ ಸಮುದಾಯಗಳ ಜನರ ಮೇಲೆ ಯಾವ ಪರಿಯ ಅಸಮಾನತೆ, ಅಸಹನೆ ಹೊಂದಿರಬಹುದು ಎಂದು ಅನೇಕರು ಪ್ರಶ್ನಿಸಿದ್ದಾರೆ.
ಸಿಜೆಐ ಮೇಲಿನ ದಾಳಿ ಸಂವಿಧಾನದ ಮೇಲೆ ಮನುವಾದಿಗಳು ಮಾಡಿರುವ ದಾಳಿ ಎಂದು ಕೆಲ ರಾಜಕೀಯ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ. ಇದು ಸಂವಿಧಾನದ ಮೇಲೆ ಧರ್ಮದ ಅಂಧತ್ವ ಮಾಡಿರುವ ಸವಾರಿ ಎಂದಿದ್ದಾರೆ.
ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿರುವ ವಿಚಾರ ದೇಶದಲ್ಲೆಡೆ ಚರ್ಚೆಯಾಗುತ್ತಿರುವ ನಡುವೆ, ಶೂ ಎಸೆದ ವಕೀಲ ಯಾರು..ಆತನ ಹಿನ್ನೆಲೆ ಏನು? ಎಂದು ಅನೇಕರು ಹುಡುಕಾಡುತ್ತಿದ್ದಾರೆ.
ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ಮಾಡಿರುವ ವರದಿಯ ಪ್ರಕಾರ, ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ನೋಂದಾಯಿತ ಸದಸ್ಯರಾಗಿದ್ದಾರೆ ಮತ್ತು ದೆಹಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು 2009ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಂಡಿದ್ದರು.
ಹಿರಿಯ ವಕೀಲರಾಗಿರುವ ಅವರು, ಅನೇಕ ಬಾರ್ ಅಸೋಸಿಯೇಷನ್‌ಗಳಲ್ಲಿ ದೀರ್ಘಕಾಲದ ಸದಸ್ಯತ್ವ ಹೊಂದಿದ್ದು, ಕಾನೂನು ವಲಯದಲ್ಲಿ ಚಿರಪರಿಚಿತರು.
ರಾಕೇಶ್ ಕಿಶೋರ್ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್, ಶಹದಾರಾ ಬಾರ್ ಅಸೋಸಿಯೇಷನ್ ಮತ್ತು ದೆಹಲಿ ಬಾರ್ ಕೌನ್ಸಿಲ್‌ನ ಸದಸ್ಯತ್ವ ಕಾರ್ಡ್‌ಗಳನ್ನು ಹೊಂದಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಸುಪ್ರೀಂ ಕೋರ್ಟ್ ಕಾಂಪ್ಲೆಕ್ಸ್‌ನ ನ್ಯಾಯಾಲಯ ಸಂಖ್ಯೆ 1ರಲ್ಲಿ ಸಿಜೆಐ ಮೇಲೆ ದಾಳಿ ಪ್ರಯತ್ನ ನಡೆದಿದೆ. ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ರಾಕೇಶ್ ಕಿಶೋರ್ ಅವರನ್ನು ನ್ಯಾಯಾಲಯದ ಕೊಠಡಿಯಿಂದ ಹೊರ ತಂದರು. ನಂತರ ಅವರನ್ನು ವಿಚಾರಣೆಗೊಳಪಡಿಸಿ, ಸ್ವಲ್ಪ ಸಮಯದವರೆಗೆ ಬಂಧಿಸಿ ನ್ಯಾಯಾಲಯದ ಸಂಕೀರ್ಣದೊಳಗೆ ಬಿಡುಗಡೆ ಮಾಡಲಾಯಿತು ಎಂದು ಇಂಡಿಯಾ ಟುಡೇ ವರದಿ ಹೇಳಿದೆ.
ಸಿಜೆಐ ಮೇಲೆ ದಾಳಿ ಪ್ರಯತ್ನ ಬೆನ್ನಲ್ಲೇ ಬಾರ್ ಕೌನ್ಸಿಲ್ ಆಫ್ ಇಂಡಿಯಾ ರಾಕೇಶ್ ಕಿಶೋರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
“ವಕೀಲ ರಾಕೇಶ್ ಕಿಶೋರ್ ಅವರ ವರ್ತನೆ ಮೇಲ್ನೋಟಕ್ಕೆ ನ್ಯಾಯಾಂಗದ ಘನತೆಗೆ ವಿರುದ್ದವಾಗಿದೆ. ವಕೀಲರ ಕಾಯ್ದೆ, 1961 ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮಗಳನ್ನು ಅವರು ಉಲ್ಲಂಘಿಸಿದ್ದಾರೆ” ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ವಕೀಲರ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ಇದು ನ್ಯಾಯಾಲಯದ ಗೌರವವನ್ನು ಹಾಳು ಮಾಡುತ್ತದೆ ಎಂದು ಬಾರ್ ಕೌನ್ಸಿಲ್ ಒತ್ತಿ ಹೇಳಿದೆ. ಕೌನ್ಸಿಲ್ ತೆಗೆದುಕೊಂಡ ಕ್ರಮವು ತಾತ್ಕಾಲಿಕವಾಗಿದ್ದು, ಹೆಚ್ಚಿನ ವಿಚಾರಣೆ ಬಾಕಿ ಇದೆ ಎಂದು ವರದಿಗಳು ತಿಳಿಸಿವೆ.
ಬಾಬರಿ ಮಸೀದಿ ಧ್ವಂಸ ಮಾಡಿದ ಸಂಘಿಗಳಿಗೂ, ಸಿಜೆಐಗೆ ಶೂ ಎಸೆದ ಸನಾತನಿ ವಕೀಲನಿಗೂ ಸಾಮ್ಯತೆಗಳಿವೆ: ಬಿ.ಕೆ ಹರಿಪ್ರಸಾದ್


