ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ಮೊದಲ ಬಾರಿಗೆ 20 ಕ್ಕೂ ಹೆಚ್ಚು ಯುರೋಪಿಯನ್ ಸಂಸದರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದಿದ್ದು ನಿಮಗೆಲ್ಲಾ ಗೊತ್ತಿದೆ. ಅವರನ್ನು ಆಹ್ವಾನ ಮಾಡಿದವರು ಯಾರು? ಹೇಗೆ ಎಂಬ ಹಲವಾರು ಪ್ರಶ್ನೆಗಳು ಎದ್ದಿದ್ದವು. ಆಶ್ಚರ್‍ಯವೆಂದರೆ ಅವರನ್ನು ಆಹ್ವಾನಿಸಿದ್ದ ಸ್ವಯಂ ಸೇವಾ ಸಂಘದ ಕಛೇರಿ ಬಂದ್ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ನಡುಗೆ ಮಹಾರಾಷ್ಟ್ರದ ಶಿವಸೇನೆ ಪಕ್ಷವೂ ಯುರೋಪಿಯನ್ ಸಂಸದರಿಗೆ ಕಾಶ್ಮೀರದ ಭೇಟಿ ಕೊಟ್ಟಿದ್ದಕ್ಕೆ ಅಪಸ್ವರ ಎತ್ತಿದ್ದು, ತಮ್ಮ ಅಸಮಾಧಾನ ವ್ಯಕ್ತಪಡಿಸಿದೆ.
ಮೊದಲಿಗೆ ಅವರನ್ನು ಆಹ್ವಾನಿಸಿದ್ದು ಮದಿ ಶರ್ಮಾ ಎಂಬುವವರು. ಅವರ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಅವರು ತಮ್ಮನ್ನು ಸಾಮಾಜಿಕ ಬಂಡವಾಳಶಾಹಿ, ಅಂತರರಾಷ್ಟ್ರೀಯ ವ್ಯಾಪಾರ ದಲ್ಲಾಳಿ ಮತ್ತು ಶಿಕ್ಷಣ ಉದ್ಯಮಿ ಎಂದು ಟ್ವಿಟರ್‌ನಲ್ಲಿ ವಿವರಿಸಿಕೊಂಡಿದ್ದಾರೆ.

ಖಾಸಗಿ ಎಂದು ವಿವರಿಸಲಾದ ಈ ಭೇಟಿಯನ್ನು ಮದಿ ಶರ್ಮಾ ಅವರ ಪತ್ರಗಳ ಪ್ರಕಾರ, WESTT (Women’s Economic and Social Think Tank) ಎನ್ನುವ NGO ಆಯೋಜಿಸಿದ್ದು, ಖರ್ಚು ವೆಚ್ಚಗಳನ್ನು ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ನಾನ್ ಅಲೈನ್ಡ್ ಸ್ಟಡೀಸ್ ಎಂಬ ಇನ್ನೊಂದು NGO ಪ್ರಾಯೋಜಿಸಿದೆ. ಆದರೆ ದೆಹಲಿಯಲ್ಲಿರುವ ಅದರ ಕಚೇರಿಯನ್ನು ಇಂದು ಬೆಳಿಗ್ಗೆ ಲಾಕ್ ಮಾಡಲಾಗಿದೆ.
ಯುರೋಪಿಯನ್ ಸಂಸದರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾದಾಗ ಮದಿ ಶರ್ಮಾ ಉಪಸ್ಥಿತರಿದ್ದರು. ಲಿಬರಲ್ ಡೆಮೋಕ್ರಾಟ್ ಸಂಸದ ಕ್ರಿಸ್ ಡೇವಿಸ್ ಅವರು ಕಾಶ್ಮೀರದಲ್ಲಿ ತಮಗೆ ಯಾರನ್ನು ಬೇಕಾದರೂ ಮಾತನಾಡಿಸಬಹುದಾದ ಮುಕ್ತ ಪ್ರವೇಶವನ್ನು ಕೇಳಿದ ನಂತರ ಅವರನ್ನು ಭೇಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ.
“ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪ್ರತಿಷ್ಠಿತ ವಿಐಪಿ ಸಭೆಯನ್ನು ಆಯೋಜಿಸುತ್ತಿದ್ದೇನೆ ಮತ್ತು ಅದರ ಆಹ್ವಾನವನ್ನು ನಿಮಗೆ ಅರ್ಪಿಸುವುದು ನನ್ನ ಪುಣ್ಯ. ನಿಮಗೆ ತಿಳಿದಿರುವಂತೆ ಪ್ರಧಾನಿ ಮೋದಿಯವರು ಇತ್ತೀಚೆಗೆ ಭಾರತದಲ್ಲಿ ನಡೆದ ಚುನಾವಣೆಯಲ್ಲಿ ಅದ್ಭುತ ಜಯ ಸಾಧಿಸಿದ್ದಾರೆ. ಭಾರತವು ತನ್ನ ಬೆಳವಣಿಗೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಮುಂದುವರಿಯಲು ಯೋಜಿಸುತ್ತಿದೆ. ಆ ನಿಟ್ಟಿನಲ್ಲಿ ಅವರು ಯುರೋಪಿಯನ್ ಒಕ್ಕೂಟದ ಪ್ರಭಾವಿ ನಿರ್ಧಾರ ತೆಗೆದುಕೊಳ್ಳುವವರನ್ನು ಭೇಟಿ ಮಾಡಲು ಬಯಸುತ್ತಾರೆ” ಎಂದು ಮದಿ ಶರ್ಮಾ ಅಕ್ಟೋಬರ್ 7 ರಂದು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಪ್ರಧಾನ ಮಂತ್ರಿಯೊಂದಿಗಿನ ಸಭೆ “ಅಕ್ಟೋಬರ್ 28 ರಂದು ನಿಗದಿಯಾಗಿದೆ, 29 ರಂದು ಕಾಶ್ಮೀರ ಭೇಟಿ ಮತ್ತು ಮರುದಿನ ಪತ್ರಿಕಾಗೋಷ್ಠಿ” ಎಂದು ಹೇಳಿಕೆ ನೀಡಿದ್ದರು.
ಆಗ “ಕಾಶ್ಮೀರದಲ್ಲಿ ಮಿಲಿಟರಿ, ಪೊಲೀಸ್ ಅಥವಾ ಭದ್ರತಾ ಪಡೆಗಳ ಬೆಂಬಲವಿಲ್ಲದೆ ನಾನು ಬಯಸಿದವರೊಂದಿಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡಬೇಕು” ಎಂಬ ಷರತ್ತಿನ ಮೇರೆಗೆ ನಾನು ನಿಯೋಗದಲ್ಲಿರಲು ಒಪ್ಪಿದ್ದೆ. ಆದರೆ ಮದಿ ಶರ್ಮಾರವರು ಭಾರತಕ್ಕೆ ಪ್ರಯಾಣಿಸುವ ಗುಂಪಿನಲ್ಲಿ ನನ್ನ ಹೆಸರನ್ನು ಕೈಬಿಟ್ಟದ್ದರು ಎಂದು ಕ್ರಿಸ್ ಡೇವಿಸ್ ಹೇಳಿದ್ದಾರೆ.
“ಮೋದಿ ಸರ್ಕಾರಕ್ಕಾಗಿ ನಡೆಯುವ ಪಿಆರ್ ಸ್ಟಂಟ್‌ನಲ್ಲಿ ಎಲ್ಲವೂ ಚೆನ್ನಾಗಿವೆ ಎಂದು ನಟಿಸಲು ನಾನು ಸಿದ್ಧನಲ್ಲ. ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ತತ್ವಗಳನ್ನು ತಗ್ಗಿಸಲಾಗುತ್ತಿದೆ ಎಂಬುದು ಬಹಳ ಸ್ಪಷ್ಟವಾಗಿದೆ, ಮತ್ತು ಇದನ್ನು ಪ್ರಪಂಚದ ಗಮನಕ್ಕೆ ನಾವು ತರಬೇಕಾಗಿದೆ ಎಂದು ಅವರು ಹೇಳಿದ್ದಾರೆ.
“ಮದಿ ಶರ್ಮಾ ಯಾರು ಎಂದು ಪ್ರಧಾನಿ ಹೇಳುವರೆ? ಸಂಸದರ ನಿಯೋಗದೊಂದಿಗೆ ವೈಯಕ್ತಿಕ ಭೇಟಿಯಲ್ಲಿ ಪ್ರಧಾನ ಮಂತ್ರಿಯ ನೇಮಕಾತಿಯನ್ನು ಮದಿ ಶರ್ಮಾ ಏಕೆ ಮತ್ತು ಯಾವ ಸಾಮರ್ಥ್ಯದಲ್ಲಿ ನಿಗದಿಪಡಿಸುತ್ತಿದ್ದಾರೆ? ಭಾರತ ಸರ್ಕಾರ ಅದಕ್ಕೆ ಏಕೆ ಅವಕಾಶ ಕಲ್ಪಿಸುತ್ತಿದೆ? ಇದಕ್ಕೆ ಹಣ ಎಲ್ಲಿಂದ ಬರುತ್ತಿದೆ? ಈ ವಿಚಾರದಲ್ಲಿ ವಿದೇಶಾಂಗ ಸಚಿವಾಲಯವನ್ನು ಏಕೆ ಸಂಪೂರ್ಣವಾಗಿ ಬದಿಗಿರಿಸಲಾಗಿದೆ? ಸತ್ಯವೆಂದರೆ ಇದು ಭಾರತದ ಇತಿಹಾಸದಲ್ಲಿ ಅತಿದೊಡ್ಡ ರಾಜತಾಂತ್ರಿಕ ಪ್ರಮಾದವಾಗಿದೆ “ಎಂದು ಕಾಂಗ್ರೆಸ್ ವಕ್ತಾರ ರಣ್‌ದೀಪ್ ಸುರ್ಜೆವಾಲಾ ಆರೋಪಿಸಿದ್ದಾರೆ.

ಇಪ್ಪತ್ತಮೂರು ಯುರೋಪಿಯನ್ ಯೂನಿಯನ್ ಸಂಸದರು ಮಂಗಳವಾರ ಶ್ರೀನಗರ ಪ್ರವಾಸ ಕೈಗೊಂಡು ಇಂದು ಆಯ್ದ ಕೆಲವೇ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಅದನ್ನು ಲೈವ್ ಎಂದು ಬಿತ್ತರಿಸಿದರೂ ಕೂಡ ಅದು ರೆಕಾರ್ಡೆಡ್ ವಿಡಿಯೋ ಆಗಿತ್ತು. ಅವರು ಭಾರೀ ಭದ್ರತೆಯೊಂದಿಗೆ ಬುಲೆಟ್ ಪ್ರೂಫ್ ವಾಹನಗಳಲ್ಲಿ ಪ್ರಯಾಣಿಸಿದರು, ಪಂಚತಾರಾ ಹೋಟೆಲ್‌ನಲ್ಲಿ ಉಳಿದು ಸೇನಾಧಿಕಾರಿಗಳು ಮತ್ತು ಕೆಲವು ಸ್ಥಳೀಯ ಮುಖಂಡರೊಂದಿಗೆ ಸಂವಹನ ನಡೆಸಿದರು. ರಸ್ತೆಗಳು ನಿರ್ಜನವಾಗಿದ್ದವು ಮತ್ತು ಅಂಗಡಿಗಳನ್ನು ಮುಚ್ಚಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
370 ನೇ ವಿಧಿ ರದ್ಧತಿ ನಂತರ ರಾಜ್ಯದ ನೂರಾರು ರಾಜಕಾರಣಿಗಳನ್ನು ವಶಕ್ಕೆ ಪಡೆಯಲಾಯಿತು, ಸಂವಹನವನ್ನು ರದ್ದುಮಾಡಲಾಗಿತ್ತು. ರಾಹುಲ್ ಗಾಂಧಿಯಂತಹ ವಿರೋಧ ಪಕ್ಷದ ನಾಯಕರು – ಅವರ ನಿಯೋಗವನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ತಡೆದು ಹಿಂದಕ್ಕೆ ಕಳಿಸಲಾಯಿತು – ಇಂತಹ ನಿರ್ಬಂಧಗಳ ಮಧ್ಯೆ ಯುರೋಪಿಯನ್ ಸಂಸದರಿಗೆ ಏಕೆ ಅನುಮತಿಸಲಾಗಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಈ ಭೇಟಿಯಲ್ಲಿ ಯುರೋಪಿಯನ್ ಪಾರ್ಲಿಮೆಂಟ್ ಮತ್ತು ಯುರೋಪಿಯನ್ ಯೂನಿಯನ್ ಕ್ರಮಾನುಗತವಾಗಿ ಭಾಗಿಯಾಗಿಲ್ಲ ಎಂದು ಎಎಫ್‌ಪಿ ವರದಿ ಮಾಡಿದೆ. ದೆಹಲಿಯ ಹಲವಾರು ಯುರೋಪಿಯನ್ ರಾಯಭಾರ ಕಚೇರಿಗಳಿಗೆ ಸೋಮವಾರದವರೆಗೆ ಈ ಭೇಟಿಯ ಬಗ್ಗೆ ತಿಳಿದಿರಲಿಲ್ಲ ಎಂದು ತಿಳಿದುಬಂದಿದೆ. ಭಾರತದ ಅಧಿಕಾರಿಯೊಬ್ಬರು ಈ ಭೇಟಿಯು ಅಧಿಕೃತವಲ್ಲ ಮತ್ತು ಎನ್‌ಜಿಒವೊಂದರ ಆಹ್ವಾನದ ಮೇರೆಗೆ ಸಂಸದರು ಬಂದಿದ್ದಾರೆ ಎಂದು ಹೇಳಿದ್ದಾರೆ.
ಈ ಭೇಟಿಯನ್ನು ಸಂಘಟಿಸಿರುವುದು ಯುರೋಪಿಯನ್ ಒಕ್ಕೂಟನೂ ಅಲ್ಲ ಇನ್ಯಾವುದೋ ದೇಶನೂ ಅಲ್ಲ ಬದಲಾಗಿ ಮದಿ ಶರ್ಮಾ ಎಂಬ ಮಹಿಳೆ ಹಾಗೂ ಆಕೆ ನಡೆಸುವ NGO. ಮದಿ ಶರ್ಮಾ ತನ್ನ ವೆಬ್‍ಸೈಟ್‍ನಲ್ಲಿ ತನ್ನನ್ನು International Business Broker ಎಂದು ಹೇಳಿಕೊಂಡಿದ್ದಾರೆ. ಇಂಥ ‘ಅಂತರಾಷ್ಟ್ರೀಯ ದಲ್ಲಾಳಿ’ಗಳಿಗೆ ಕಾಶ್ಮೀರದಲ್ಲಿ ಏನು ಕೆಲಸ ಹಾಗೂ ಕೇಂದ್ರ ಸರಕಾರ ‘ದಲ್ಲಾಳಿ’ಗಳನ್ನು ಕಾಶ್ಮೀರದೊಳಗೆ ಯಾಕೆ ಬಿಟ್ಟುಕೊಟ್ಟದೆಂದು ಸರಕಾರವೇ ಹೇಳಬೇಕು ಎಂದು ಸಾಮಾಜಿಕ ತಾಲತಾಣದಲ್ಲಿ ಪ್ರಶ್ನೆಯೆದ್ದಿದೆ.
ಇದೇ ಮದಿ ಶರ್ಮಾರ NGO ಕಳೆದ ವರುಷ ಮಾಲ್ದೀವ್ಸಿಗೂ ಒಂದು ಯುರೋಪಿಯನ್ ಸಂಸದರ ನಿಯೋಗವನ್ನು ಕಳುಹಿಸಿತ್ತು, ಅಲ್ಲಿ ನಡೆಯುತ್ತಿದ್ದ ಚುನಾವಣೆಯ ವೀಕ್ಷಕರನ್ನಾಗಿ. ಇವತ್ತು ಕಾಶ್ಮೀರಕ್ಕೆ ಬಂದಿರುವ ಥೋಮಸ್ ಡೆಕೋವ್’ಸ್ಕಿ, ಮರಿಯಾ ಗ್ಯಾಬ್ರಿಯೆಲಾ ಝೊವಾನ್ನಾ ಹಾಗೂ ರೈಝಾರ್ಡ್ ಝಾರ್’ನೆಕಿ ಮದಿ ಶರ್ಮಾರ ಮಾಲ್ಡೀವ್ಸ್ ನಿಯೋಗದಲ್ಲಿದ್ದರು. ಆದರೆ ಇವರು ಮಾಲ್ದೀವ್ಸಿಗೆ ಭೇಟಿಕೊಟ್ಟ ನಂತರ ಯುರೋಪಿಯನ್ ಒಕ್ಕೂಟದ ಮಾಲ್ದೀವ್ಸ್ ರಾಯಭಾರಿ ಅಹ್ಮದ್ ಶಿಯಾನ್ ಒಕ್ಕೂಟಕ್ಕೆ ಪತ್ರ ಬರೆದು ಮದಿ ಶರ್ಮಾರ ನಿಯೋಗ ಅಧಿಕೃತವಾಗಿರಲ್ಲಿಲ್ಲ. ಅವರು ‘ಪ್ರವಾಸಿ ವೀಸಾ’ದ ಮೇಲೆ ಮಾಲ್ದೀವ್ಸಿಗೆ ಬಂದಿದ್ದರೆಂದು ದೂರು ಸಲ್ಲಿಸಿದ್ದರು.
ಸದ್ಯಕ್ಕೆ ಕಾಶ್ಮೀರಕ್ಕೆ ಭೇಟಿಕೊಟ್ಟಿರುವ ನಿಯೋಗದ ಭೇಟಿ ಅಧಿಕೃತ ಅಲ್ಲವೆಂದು ಯುರೋಪಿಯನ್ ಒಕ್ಕೂಟನೇ ಸ್ಪಷ್ಟಪಡಿಸಿರುವುದರಿಂದ, ಈ ನಿಯೋಗ ಕೂಡಾ ಪ್ರವಾಸಿ ವೀಸಾದ ಮೇಲೆಯೇ ಕಾಶ್ಮೀರಕ್ಕೆ ಭೇಟಿ ಕೊಟ್ಟಿದೆಯೆಂದಾಯ್ತು. ಭಾರತದೊಳಗಿನ ಪ್ರವಾಸಿಗರಿಗೆ ಕಾಶ್ಮೀರಕ್ಕೆ ಅನುಮತಿ ಕೊಡದ ಸರಕಾರ ವಿದೇಶಿ ಪ್ರವಾಸಿಗರಿಗೆ ಕಾಶ್ಮೀರ ಪ್ರವಾಸಕ್ಕೆ ಅನುಮತಿ ಕೊಟ್ಟಿದೆಯೆಂದಾಯ್ತು. ಸುಮಾರು ಎರಡು ತಿಂಗಳ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ unbiased ಸ್ವತಂತ್ರ ನಿಯೋಗಕ್ಕೆ ಕಾಶ್ಮೀರ ಭೇಟಿಗೆ ಅನುವು ಮಾಡಿಕೊಡಬೇಕೆಂದು ಕೇಳಿಕೊಂಡಾಗ ಭಾರತ ಸರಕಾರ ಕಾಶ್ಮೀರ ನಮ್ಮ ಆಂತರಿಕ ವಿಷಯ, ಆರ್ಟಿಕಲ್ 370ನ್ನು ರದ್ದು ಮಾಡಿದ್ದೂ ಭಾರತದ ಆಂತರಿಕ ವಿಷಯವಾಗಿರುವುದರಿಂದ ಯಾವುದೇ ವಿದೇಶಿಗರ ಹಸ್ತಕ್ಷೇಪದ ಅಗತ್ಯವಿಲ್ಲವೆಂದು ಹೇಳಿತ್ತು. ಈವಾಗ ಇದೇ ಸರಕಾರ ಅನಧಿಕೃತವಾಗಿ ವಿದೇಶಿಗರನ್ನು ಕಾಶ್ಮೀರದೊಳಗೆ ಬಿಟ್ಟುಕೊಟ್ಟಿದೆ. ಇದು ಹಿಪಾಕ್ರಸಿ, ದಗಲ್ಬಾಜಿತನ ಅಲ್ಲದೆ ಇನ್ನೇನು? ಎಂಬ ಆಕ್ರೋಶ ಎಲ್ಲೆಡೆ ವ್ಯಕ್ತವಾಗಿದೆ.
ಮಾಹಿತಿ ಕೃಪೆ: ಎನ್‌ಡಿಟಿವಿ


