ಸದನದ ಶಿಸ್ತು, ಘನತೆ, ಗೌರವದ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಕಿಂಚಿತ್ತಾದರೂ ನೈತಿಕತೆ ಇದೆಯೇ? ಎಂದು ವಿಧಾನಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಗುರುವಾರ (ಜ.22) ವಿಶೇಷ ಅಧಿವೇಶನದ ವೇಳೆ ಸದನದಲ್ಲಿ ಗದ್ದಲ ಉಂಟಾದಾಗ ಬಿ.ಕೆ ಹರಿಪ್ರಸಾದ್ ಅವರು ಲೋಕಲ್ ರೌಡಿಯ ರೀತಿ ರಾಜ್ಯಪಾಲರಿಗೆ ಆವಾಜ್ ಹಾಕಿದ್ದಾರೆ ಎಂಬ ಬಿಜೆಪಿಯ ಟೀಕೆಗೆ ಅವರು ತಿರುಗೇಟು ಕೊಟ್ಟಿದ್ದಾರೆ.
ಸದನದಲ್ಲಿ ಬಟ್ಟೆ ಹರಿದುಕೊಂಡು, ಕೈ ಕೈ ಮಿಲಾಯಿಸಿಕೊಂಡು ಗೂಂಡಾಗಳಂತೆ ವರ್ತಿಸಿದ ಮಹಾನುಭಾವರು ಯಾವ ಪಕ್ಷದವರು? ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಸದನದಲ್ಲೇ ನೀಲಿ ಚಿತ್ರಗಳನ್ನು ವೀಕ್ಷಿಸಿ ದೇಶದ ಜನರೆದುರು ರಾಜ್ಯದ ಮಾನ ಕಳೆದವರು ಯಾವ ಪಕ್ಷದವರು? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸಭಾಪತಿಗಳ ಮುಖದ ಮೇಲೆ ಕಾಗದ ಪತ್ರಗಳನ್ನು ಹರಿದು ಬಿಸಾಕಿ ಅವಮಾನ ಮಾಡಿ ಸದನದಿಂದಲೇ ಉಚ್ಛಾಟಿತರಾದವರು ಯಾವ ಪಕ್ಷದವರು? ಇಂತಹ ಶಿಸ್ತು, ಸಂಸ್ಕಾರ, ಗೌರವ, ಘನತೆ ತಂದುಕೊಟ್ಟಿರುವ ಎಲ್ಲರೂ ನಮ್ಮ ಪಕ್ಷದವರೇ ಎಂದು ಎದೆ ತಟ್ಟಿ ಹೇಳುವ ಧೈರ್ಯ ಬಿಜೆಪಿಯವರಿಗೆ ಇದೆಯಾ? ಎಂದು ಕೇಳಿದ್ದಾರೆ.
ಸಂವಿಧಾನ ಹುದ್ದೆಯಲ್ಲಿರುವ ರಾಜ್ಯಪಾಲರ ಹುದ್ದೆಯನ್ನೇ ದುರಪಯೋಗ ಪಡಿಸಿಕೊಂಡು ರಾಜ್ಯ ರಾಜಕಾರಣದಲ್ಲೇ ಅತ್ಯಂತ ಕರಾಳ ದಿನವನ್ನು ಸೃಷ್ಟಿ ಮಾಡಿರುವ ಬಿಜೆಪಿ ನಾಯಕರಿಗೆ ಸಂವಿಧಾನದ ಮೌಲ್ಯಗಳ ಬಗ್ಗೆ ಮಾತಾನಾಡಲು ನೈತಿಕತೆ ಇಲ್ಲ ಎಂದಿದ್ದಾರೆ.
ರಾಜ್ಯಪಾಲರು ರಾಜ್ಯದ ತೆರಿಗೆಯ ಹಣದಿಂದ ಅಧಿಕಾರ ಅನುಭವಿಸುತ್ತಿದ್ದಾರೆಯೇ ಹೊರತು “ನಾಗಪುರ”ದಲ್ಲಿರುವ ನೊಂದಣಿಯೇ ಆಗದ ಸಂಘಟನೆಗೆ ಬರುವ ಬಿಟ್ಟಿ ಹಣದಿಂದಲ್ಲ. ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಿದರೆ ರಾಜ್ಯಪಾಲರೇ ಇರಲಿ, ಸಾಂವಿಧಾನಿಕ ಹುದ್ದೆಯಲ್ಲೇ ಇರಲಿ ನಮ್ಮ ಹಕ್ಕನ್ನು ಪ್ರತಿಪಾದಿಸುತ್ತಲೇ ಇರುತ್ತೇವೆ. ಬಿಜೆಪಿಯವರಿಂದ ನೈತಿಕತೆ ಕಲಿಯುವ ದಾರಿದ್ರ್ಯ ನಮಗೆ ಬಂದಿಲ್ಲ, ಬರುವುದೂ ಇಲ್ಲ ಎಂದು ಹರಿಪ್ರಸಾದ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಜೈಲು, ಬೇಲು, ಡೀಲು, ಅಕ್ರಮದಂತ ಪದಗಳನ್ನೇ ಕೇಳಿ ರಾಜಕೀಯದಲ್ಲಿ ಆಶ್ರಯ ಪಡೆದುಕೊಂಡಿರುವ ಗಾಲಿ ಜನಾರ್ಧನ ರೆಡ್ಡಿಗೆ ಸಂವಿಧಾನ, ಸಂಸತ್ತು-ಸದನ, ವಿಧಾನಸಭೆಯ ಕಾರ್ಯಕಲಾಪ, ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಬಗ್ಗೆ ಕಿಂಚಿತ್ತಾದರೂ ತಿಳುವಳಿಕೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ಅಷ್ಟಕ್ಕೂ ಜನಾರ್ಧನ ರೆಡ್ಡಿ “ಕರ್ನಾಟಕದಲ್ಲಿ ರೌಡಿಗಳ ದರ್ಬಾರೋ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಯಾವ ಕರ್ನಾಟಕದ ಬಗ್ಗೆ ರೆಡ್ಡಿ ಆತಂಕವಾಗಿದ್ದಾರೆ ಎಂದು ಸ್ಪಷ್ಟಪಡಿಸಬೇಕಿತ್ತು. ಕರ್ನಾಟಕದ ಗಡಿಯನ್ನು ತಾವೇ ಕಿತ್ತು ಅಕ್ರಮ ಗಣಿಗಾರಿಕೆ ಮಾಡಿದ ಕರ್ನಾಟಕ ರಾಜ್ಯದ ಬಗ್ಗೆಯೋ? ಅಥವಾ ಬಳ್ಳಾರಿ ಜಿಲ್ಲೆಯನ್ನು “ರಿಪಬ್ಲಿಕ್” ಮಾಡಿಕೊಂಡು ಗೂಂಡಾಗಿರಿ ನಡೆಸಿದ ಕಾಲದ ಕರ್ನಾಟಕದ ಬಗ್ಗೆಯೋ? ಎಂದು ಹರಿಪ್ರಸಾದ್ ಖಾರವಾಗಿ ಕೇಳಿದ್ದಾರೆ.
ಬಗೆದಷ್ಟು ಬಯಲಾಗುವ ಈ ಜನಾರ್ಧನ ರೆಡ್ಡಿ ಎಲ್ಲಿಯೂ ಸಲ್ಲದ ಪಾಪದ ಕೂಸು. ಬಿಜೆಪಿ ಪಕ್ಷದಲ್ಲಿದ್ದೇನೆ ಎಂದು ಭಾವಿಸಿರುವ ರೆಡ್ಡಿ, ಒಮ್ಮೆ ಬಿಜೆಪಿ ಪಕ್ಷದ ಮಾಜಿ ಸಂಸದ ಪ್ರತಾಪ ಸಿಂಹ ಬರೆದಿರುವ “ಮೈನಿಂಗ್ ಮಾಫಿಯಾ” ಪುಸ್ತಕದಲ್ಲಿ ಹಾಡಿ ಹೊಗಳಿದ್ದಾರೆ ಒಮ್ಮೆ ಬಿಡುವು ಮಾಡಿಕೊಂಡಿ ಓದಲಿ. ಅದೂ ಸರಿಯೇ ಪುಸ್ತಕ ಓದುವ ಸಮಯ ಜನಾರ್ಧನ ರೆಡ್ಡಿಗೆ ಎಲ್ಲಿ ಸಿಗಬೇಕು. ಸಾವಿರಾರು ಪುಟಗಳ ಚಾರ್ಜ್ ಶೀಟ್, ಕೇಸ್, ಕೋರ್ಟ್, ಬೇಲು-ಡೀಲುಗಳ ಪ್ರತಿಗಳನ್ನೇ ಓದುವುದಕ್ಕೇ ಸಮಯ ಸಾಲುತ್ತಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ದುಡಿಯುವ ಜನರ ಉದ್ಯೋಗವನ್ನೇ ಕಸಿದುಕೊಂಡಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಿಶೇಷ ಅಧಿವೇಶನ ನಡೆಸದೇ, ಜನಾರ್ಧನ ರೆಡ್ಡಿ ಮಾಡಿರುವ ಅಕ್ರಮಗಳ ಬಗ್ಗೆ ವಿಶೇಷ ಅಧಿವೇಶನ ನಡೆಸಬೇಕೇ? “ಗಾಲಿ” ಇಲ್ಲದ ಜನಾರ್ಧನ ರೆಡ್ಡಿಯ ರಾಜಕೀಯ ಚಕ್ರ ಮುರಿದು ಬಿದ್ದಾಗಿದೆ, ಮುಂದೆ ಅವಶೇಷಗಳು ಕೂಡ ಸಿಗುವುದಿಲ್ಲ ಎಚ್ಚರಿಕೆ..! ಎಂದು ಹೇಳಿದ್ದಾರೆ.


