ಕಾರ್ಯಕ್ರಮವೊಂದರಲ್ಲಿ ಕರ್ನಾಟಕದ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರುಗಳಲ್ಲಿ ಒಬ್ಬರಾದ ಹಂಸಲೇಖರವರು ಆಡಿದ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿಗೆ ಕಾರಣವಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಜಾತಿಗ್ರಸ್ತ ಟ್ರೋಲ್ ಪಡೆ ಎಷ್ಟು ಸಕ್ರಿಯವಾಗಿದೆ ಮತ್ತು ಭಾರತೀಯ ಸಮಾಜದ ಕೆಟ್ಟ ಜಾತಿ ಶ್ರೇಣೀಕರಣ ವ್ಯವಸ್ಥೆ ಇನ್ನೂ ಎಷ್ಟು ಸದೃಢವಾಗಿದೆ ಹಾಗೂ ಸಾಮಾಜಿಕ ಚಲನೆ ಇಲ್ಲಿ ಇನ್ನೂ ಎಷ್ಟು ದೂರದ ಮಾತಾಗಿದೆ ಎಂಬುದಕ್ಕೆ ಸಾಕ್ಷಿಯಾಯಿತಲ್ಲದೆ, ಸಾರ್ವಜನಿಕ ಸಂವಾದದ ಮಟ್ಟ ಕುಸಿತಗೊಂಡಿರುವುದನ್ನೂ ಮತ್ತೊಮ್ಮೆ ಮನಗಾಣಿಸಿತು.

ವೈರಲ್ ಆದ ಹಂಸಲೇಖ ಅವರ ಆ ವಿಡಿಯೋ ತುಣುಕಿನಲ್ಲಿ ಮುಖ್ಯವಾಗಿ ಎರಡು ಅಂಶಗಳು ಪ್ರಸ್ತಾಪವಾಗಿದ್ದವು. ಒಂದು, ವಿಶ್ವೇಶತೀರ್ಥ ಸ್ವಾಮಿಗಳಾಗಲೀ (ದಿವಂಗತ), ಕುಮಾರಸ್ವಾಮಿ, ಅಶೋಕ್, ಅಶ್ವಥ್‌ನಾರಾಯಣರಂತಹ ರಾಜಕಾರಣಿಗಳಾಗಲೀ, ತಾವು ದಲಿತರ ಮನೆಗಳಿಗೆ ಹೋದರಷ್ಟೇ ಸಾಲದು, ದಲಿತರನ್ನು ತಮ್ಮ ಮನೆಗಳಿಗೆ ಕರೆದುಕೊಂಡುಹೋಗುವುದು ಮುಖ್ಯ ಎಂದು ಹಂಸಲೇಖ ಅವರು ಜನಪ್ರಿಯ ಧಾಟಿಯಲ್ಲಿ ಹೇಳಿದ್ದು. ಇದಕ್ಕೆ ಬಿಳಿಗಿರಿರಂಗನ ಉದಾಹರಣೆಯನ್ನು ನೀಡಿದ್ದರು. ಎರಡನೆಯದ್ದು, ದಲಿತರ ಮನೆಗೆ ಹೋಗಿ ಅವರು ತಯಾರಿಸಿದ ಮಾಂಸಾಹಾರವನ್ನು ತಿನ್ನಬೇಕು, ಕುರಿಯ ರಕ್ತ ಹುರಿದು ಒಗ್ಗರಣೆ ಹಾಕಿದ ಖಾದ್ಯವನ್ನು ಅಲ್ಲಿಗೆ ಹೋದವರು ತಿನ್ನುತ್ತಾರೆಯೇ ಎಂದು ಪ್ರಶ್ನಿಸಿದ್ದರು. ಇದು ವಿಶ್ವೇಶತೀರ್ಥರನ್ನು ಕುರಿತು ಹೇಳಿದ್ದು ಒಂದು ಕಡೆಯಾದರೆ, ರಾಜಕಾರಣಿಗಳು ದಲಿತರ ಮನೆಗಳಿಗೆ ಹೋಗಿ ಬೇರೆ ಎಲ್ಲಿಂದಲೋ ತಂದ ಆಹಾರವನ್ನು ಅಲ್ಲಿ ಫೋಟೋಶೂಟ್‌ಗಾಗಿ ತಿನ್ನುವ ಬಳವಳಿಯನ್ನು ಕೂಡ ಪ್ರಶ್ನಿಸುವಂತೆ ಇತ್ತು. ಇದನ್ನು ಹಂಸಲೇಖರವರು ಬದ್ಧತೆಯಿಂದ ನುಡಿದರೋ ಅಥವಾ ಆ ಕ್ಷಣದ ಆವೇಶದಲ್ಲಿ ಹೇಳಿದರೋ ಅಥವಾ ಜನಪ್ರಿಯತೆಯ ಹಪಾಹಪಿಯಲ್ಲಿ ನುಡಿದರೋ ಎಂಬಂತಹ ಪ್ರಶ್ನೆಗಳನ್ನು ಅವರನ್ನು ಹತ್ತಿರದಿಂದ ಬಲ್ಲ ಹತ್ತಾರು ಜನರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಲೇ ಇದ್ದಾರೆ. ಆದರೆ ಮಾಂಸಾಹಾರ ಸಂಸ್ಕೃತಿಯ ಬಗ್ಗೆ ಒಂದು ಸಣ್ಣ ವರ್ಗದ ಜನ ತಮ್ಮ ಅಸಹನೆಯನ್ನು ಇನ್ನಿಲ್ಲದಂತೆ ತೋರ್ಪಡಿಸಿದ್ದು, ಇದೇ ಕಾರಣಕ್ಕೆ ಹಂಸಲೇಖರವರ ಮೇಲೆ ಮುಗಿಬಿದ್ದು, ಎಲ್ಲೆ ಮೀರಿ ವೈಯಕ್ತಿಕ ದಾಳಿ ನಡೆಸಿದ್ದು, ಹಂಸಲೇಖ ಅವರು ಮರುದಿನವೇ ತಾವು ನೀಡಿದ್ದ ಹೇಳಿಕೆಗೆ ಸ್ಪಷ್ಟೀಕರಣ ನೀಡಿ, ಹಿಂದಿನ ಹೇಳಿಕೆಯಿಂದ ದೂರ ನಡೆಯುವಂತೆ ಮಾಡಿತ್ತು. ಈ ನಿಲುವು ಬದಲಾವಣೆ ಕೂಡ ಹಲವರಿಗೆ ಆಕ್ರೋಶ ತರಿಸಿದ್ದು ನಿಜವೇ!

ಮೊದಲು ಎರಡನೇ ಸಂಗತಿಯನ್ನೇ ನೋಡೋಣ. ಎರಡು ದಿನಗಳ ಹಿಂದೆಯಷ್ಟೇ ಗುಜರಾತ್‌ನ ವಡೋಧರದಲ್ಲಿ ಬೀದಿಬದಿಯ ಮಾಂಸಾಹಾರ ಮಳಿಗೆಗಳನ್ನು ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಸ್ಥಳಾಂತರಿಸಬೇಕೆಂಬ ಮೌಖಿಕ ಆದೇಶವನ್ನು ಅಲ್ಲಿನ ಪಾಲಿಕೆ ಅಧಿಕಾರಿಗಳು ನೀಡಿದ್ದರು. ಸದ್ಯಕ್ಕೆ ಅದಕ್ಕೆ ತಾತ್ಕಾಲಿಕವಾಗಿ ತಡೆಬಿದ್ದಿದೆಯಾದರೂ, ಈಗಾಗಲೇ ಗುಜರಾತ್ ರಾಜಧಾನಿಯಲ್ಲಿಯೂ ಇಂತಹ ನಿಷೇಧ ಕ್ರಮ ತೆಗೆದುಕೊಳ್ಳಲು ಕೂಗೆದ್ದಿದೆ. ಇದು ಶತಮಾನಗಳಿಂದ ಈ ದೇಶದ ಬಹುಸಂಖ್ಯಾತರ ಮಾಂಸಾಹಾರ ಪದ್ಧತಿಯ ಮೇಲೆ, ಒಂದು ಚಿಕ್ಕ ಸಂಖ್ಯೆಯ ಬ್ರಾಹ್ಮಣ ಸಮುದಾಯದ ದಬ್ಬಾಳಿಕೆಗೆ ಸಣ್ಣ ಉದಾಹರಣೆಯಷ್ಟೇ. ಮಕ್ಕಳ ಪೌಷ್ಟಿಕತೆಗೆ ಅತಿ ಅಗತ್ಯವಾದ ಬಿಸಿಯೂಟದಲ್ಲಿ ಮೊಟ್ಟೆ ಸೇರಿಸುವ ಬಗ್ಗೆ ತಕರಾರುಗಳು, ದೇಶದ ಅಸಂಖ್ಯಾತ ಕ್ಯಾಂಟೀನ್‌ಗಳಲ್ಲಿ ಮಾಂಸಾಹಾರದ ನಿಷೇಧ, ಜನಪ್ರಿಯ ರಾಜಕಾರಣಿ ಸಿದ್ದರಾಮಯ್ಯನವರು ಮೀನು ತಿಂದು ದೇವಸ್ಥಾನಕ್ಕೆ ಹೋದರೆಂದು ಅವರ ವಿರುದ್ಧ ವಾರಾನುಗಟ್ಟಲೆ ಪ್ರಹಾರ ನಡೆಸುವ ಮಾಧ್ಯಮಗಳು, ಮಾಂಸಾಹಾರಿಗಳಿಗೆ ಕೊರೊನಾ ತೀವ್ರವಾಗುತ್ತದೆ ಎಂಬ ಹೀಗಳೆಯುವ ಸಂದೇಶಗಳು ಹೀಗೆ ಈ ಆಹಾರ ಶ್ರೇಷ್ಠತೆಯ ಹಿಂಸೆಗೆ ತುದಿಮೊದಲಿಲ್ಲ. ತರ್ಕಗಳಂತೂ ಕೇಳುವಂತೆಯೇ ಇಲ್ಲ. ಇಂತಹ ’ಬ್ರಾಹ್ಮಣೀಕರಣ’ಗೊಂಡಿರುವ ಸಮಾಜದಲ್ಲಿ ಹಂಸಲೇಖ ಅವರ ಮೇಲೆ ವೈಯಕ್ತಿಕವಾಗಿ ಮುಗಿಬಿದ್ದದ್ದು ಇವುಗಳ ವಿಸ್ತರಣೆಯಷ್ಟೇ ಎಂದು ತಳ್ಳಿಹಾಕಿಬಿಡಬೇಕೇ? ವಿವಿಧ ಆಹಾರ ಸಂಸ್ಕೃತಿಗಳನ್ನು ಕೇವಲ ಟಿವಿ ಷೋಗಳಲ್ಲಿ ಆರಾಧಿಸಿ, ನಮ್ಮ ನಡುವೆ ಅವುಗಳ ಮೇಲು-ಕೀಳುಗಳ ಕಂದಕ ಕಟ್ಟಿ, ಮಾಂಸಾಹಾರಕ್ಕೆ ಕಳಂಕ ಕಟ್ಟಿ, ಮಾಂಸಾಹಾರ ಸೇವಿಸುವವರಿಗೆ ಕೀಳರಿಮೆ ಮೂಡುವಂತೆ ಮಾಡುವ ವಿದ್ಯಮಾನವನ್ನು ಮೆಟ್ಟಿನಿಲ್ಲುವುದು ಅಸಾಧ್ಯವೇ?

ಹಂಸಲೇಖ ಅವರನ್ನು ವೈಯಕ್ತಿಕ ಟ್ರೋಲ್ ಮಾಡುವುದರ ಜೊತೆಗೆ ಎಲ್ಲ ಮಾಂಸಾಹಾರಿಗಳನ್ನು ರಾಕ್ಷಸರೆನ್ನುವ ಒಂದು ವಿಡಿಯೋ ಕೂಡ ಸದ್ದುಮಾಡಿತು. ಎಷ್ಟೋ ಜನ ಕುರಿಯ ರಕ್ತದಿಂದ ಖಾದ್ಯ ಮಾಡುತ್ತಾರೆಯೇ ಎಂದು ಹುಬ್ಬೇರಿಸಿದರು. ಕನ್ನಡ ರಾಜ್ಯೋತ್ಸವಕ್ಕೆ ಲೇಖಕರಾದ ವಿಕಾಸ್ ಅವರು ನ್ಯಾಯಪಥ ಪತ್ರಿಕೆಗೆ ಒಂದು ಸಣ್ಣ ಕವನವೊಂದನ್ನು ಬರೆದಿದ್ದರು. “ಕನ್ನಡವೆಂದರೆ ಕೊರಬಾಡು ಇದ್ದಂಗೆ.. ಇರೋ ಮೂರು ಗೇಣೂ ದಾಟಿ ಸ್ವರ್ಗಾನೇ ಕಂಡಂಗೆ” ಎಂದು ಪ್ರಾರಂಭವಾಗುವ ಈ ಪದ್ಯದಲ್ಲಿ “ಕರಿಬೇವು ಈರುಳ್ಳಿ ಜೊತೆ ಬೆರೆತ ಲಾಖಿ.. ಸವಿದೊಡನೆ ನಾಲಿಗೆಯ ಮೊಗ್ಗಿಗೆ ಸಂದಾಯ ಋಣ” ಎಂಬ ಸಾಲುಗಳು ಬರುತ್ತವೆ. ಅಲ್ಲಿ ಕನ್ನಡನಾಡಿನ ಹಲವು ಮಾಂಸಾಹಾರ ಖಾದ್ಯಗಳು ಕನ್ನಡದ ಸಂಸ್ಕೃತಿಯಲ್ಲಿ ಬೆರೆತುಹೋದ ವರ್ಣನೆಯಿದೆ. ಇದೇ ಲಾಖಿಯ ಬಗ್ಗೆಯೇ ಹಂಸಲೇಖ ಅವರು ಪ್ರಸ್ತಾಪಿಸಿದ್ದು. ಇದು ಬಹುಸಂಖ್ಯಾತ ಕನ್ನಡ ನಾಡಿನ ಜನರ ಆಹಾರದ ಭಾಗ.

ಇದನ್ನು ಸವಿಯುವುದರ ಬಗ್ಗೆ, ನಮಗೆ ಪರಿಚಿತವಿಲ್ಲದ ಆಹಾರ ಸಂಸ್ಕೃತಿಯ ಜೊತೆ ಸಂಬಂಧ ಬೆಸೆದುಕೊಳ್ಳುವ, ಆ ಮೂಲಕ ನಮ್ಮ ಬದುಕಿನ-ತಿಳಿವಿನ ವಿಸ್ತಾರವನ್ನು ಹಿಗ್ಗಿಸಿಕೊಳ್ಳುವ, ಆಹಾರದ ಹುಸಿ ಶ್ರೇಷ್ಠತೆಯನ್ನು ತ್ಯಜಿಸುವ ಬಗ್ಗೆ ಹಂಸಲೇಖ ಅವರು ಆಡಿದ ಮಾತುಗಳನ್ನು ಓತಪ್ರೇತವಾಗಿ ವ್ಯಾಖ್ಯಾನಿಸಿ ಮಾಂಸಾಹಾರದ ಬಗ್ಗೆ ಶತಮಾನಗಳಿಂದ ಜನಿತವಾದ ಸುಳ್ಳಿನ ಕಂತೆಗೆ ಮತ್ತೆ ಪುಷ್ಟಿ ಕೊಡಲಾಯಿತು. ಆದರೆ ಹಲವರು ಲಾಖಿಯ ವಿಶಿಷ್ಟ ರುಚಿಯ ಬಗ್ಗೆ, ಇದರ ವಿವಿಧ ರೆಸಿಪಿಗಳ ಬಗ್ಗೆ ಬರೆದು ಇದಕ್ಕೆ ಅಗತ್ಯವಿದ್ದ ಪ್ರತಿರೋಧವನ್ನು ದಾಖಲಿಸಿದ್ದು ಕನ್ನಡನಾಡಿನಲ್ಲಿ ಇರುವ ಎಚ್ಚೆತ್ತ ಪ್ರಜ್ಞೆಗೂ ಸಾಕ್ಷಿಯಾಯಿತು. ಅನ್ಯ ದೇಶಗಳಿಂದ ಪರಿಚಿತವಾಗುವ, ಕೆಲವು ವರ್ಷಗಳ ಹಿಂದೆ ಹೆಸರೇ ಕೇಳಿಲ್ಲದ ಪಿಜ್ಜಾ, ಪಾಸ್ತಾ, ಸ್ಪಗೆಟ್ಟಿಗಳಂತಹ ಎಷ್ಟೋ ಖಾದ್ಯಗಳು ಇಂದು ಇಲ್ಲಿಯವೇನೋ ಎಂಬಂತೆ ಅವಕ್ಕೆ ಹೊಂದಿಕೊಳ್ಳಬಹುದಾದರೆ, ಲಾಖಿ ಮತ್ತು ಇತರ ಮಾಂಸಾಹಾರಗಳಿಗೆ ತೆರೆದುಕೊಳ್ಳುವುದು ಕಷ್ಟವಾಗಬಾರದಲ್ಲವೇ? ಬಳವಳಿಯಾಗಿ ಬಂದಿರುವ ಮಾಂಸಾಹಾರದ ಬಗೆಗಿನ ’ವ್ಯಾಕರಿಕೆ’, ಅಸಡ್ಡೆ ಮನೋಭಾವಗಳನ್ನು ತೊರೆದು ಅವುಗಳಿಗೆ ತೆರೆದುಕೊಂಡರೆ ನಮ್ಮ ಲೋಕವೂ, ಲೋಕದೃಷ್ಟಿಯೂ ವಿಸ್ತಾರ ವಾಗುವುದರಲ್ಲಿ ಸಂಶಯವೇ ಇಲ್ಲ.

ಇನ್ನು ಇದೇ ವಾದ ಮುಂದುವರೆದು, ಉಡುಪಿ ಮಠದ ದಿವಂಗತ ವಿಶ್ವೇಶತೀರ್ಥ ಸ್ವಾಮಿಗಳ ಗುಣಗಾನವೂ ಪುಂಖಾನುಪುಂಖವಾಗಿ ನಡೆದುಹೋಯಿತು. ಅವರು ಬದಲಾವಣೆ, ಸಂವಾದದಲ್ಲಿ ನಂಬಿಕೆ ಇಟ್ಟಿದ್ದವರು, ಅವರ ಬಗ್ಗೆ ಇಂತಹ ಆರೋಪಗಳು ಸಲ್ಲದು ಎಂಬಿತ್ಯಾದಿ ಚರ್ಚೆಗಳು ಹಾದುಹೋದವು. ಇಡೀ ದಕ್ಷಿಣ ಕನ್ನಡದಲ್ಲಿ ಇಂದು ವಿಕೋಪಕ್ಕೆ ತಿರುಗಿರುವ ಕೋಮು ವೈಷಮ್ಯತೆಗೆ ವಿಶ್ವೇಶತೀರ್ಥ ಸ್ವಾಮಿಗಳ ಕೊಡುಗೆ ಇಲ್ಲವೇ? ಅಡ್ವಾನಿ ರಥಯಾತ್ರೆಗೆ, ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣವಾದ ಕರಸೇವೆ ಬಗೆಗೆ ವಿಶ್ವೇಶತೀರ್ಥರ ನಿಲುವೇನಿತ್ತು ಎಂಬುದರ ಬಗ್ಗೆ ತಿಳಿದಿಲ್ಲವೇ? ದಲಿತರ ಕೇರಿಗೆ ಹೋಗಿದ್ದು, ಮಠದ ಆವರಣದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದನ್ನು ಭಾರಿ ಸುಧಾರಣಾ ನಿಲುವುಗಳು ಎಂದು ಬಿಂಬಿಸುವವರು, ಕೋಮು ದಳ್ಳುರಿ ಸೃಷ್ಟಿಸಿದ ಬಾಬ್ರಿ ಮಸೀಸಿ ಧ್ವಂಸದ ಬಗೆಗೆ ಮೌನವಾಗಿದ್ದ, ರಾಮಮಂದಿರ ನಿರ್ಮಾಣಕ್ಕೆ
ಕೊನೆಯ ಉಸಿರಿನವರೆಗೂ ಉತ್ಸುಕರಾಗಿದ್ದ ವಿಶ್ವೇಶತೀರ್ಥರ ಮತ್ತೊಂದು ಬದಿಯ ವ್ಯಕ್ತಿತ್ವದ ಬಗ್ಗೆ ಮೌನವಾಗಿರುವುದೇಕೆ? ಇದೇ ಕಾರಣಕ್ಕಲ್ಲವೇ, ದಲಿತರ ಮನೆಗಷ್ಟೇ ಹೋದರೆ ಸಾಲದು, ನಿಮ್ಮ ಮನೆಗೆ ಅವರನ್ನು ಕರೆಯಬೇಕು ಎಂದು ಹಂಸಲೇಖ ಅವರು ಹೇಳಿದ್ದು. ಆಗ ದಮನಿತ ಸಮುದಾಯಗಳಿಗೆ ಇರುವ ಹೃದಯ ವೈಶಾಲ್ಯತೆ, ಅವರಿಗೆ ಇರುವ ಸಹನೆಯ, ಒಳಗೊಳ್ಳುವ, ವಿಶಾಲ ಆಧ್ಯಾತ್ಮದ ತತ್ವದ ಒಂದಂಶವಾದರೂ ವಿಶ್ವೇಶತೀರ್ಥರಿಗೆ ದಕ್ಕುತ್ತಿಲ್ಲವೇ? ಶತಶತಮಾನಗಳ ಮೌಢ್ಯಗಳನ್ನು ತೊರೆದು ಸಮಸಮಾಜದ ಪರಿಕಲ್ಪನೆ ಅವರಿಗೆ ಅರ್ಥವಾಗುತ್ತಿದ್ದುದು ಅಂತಹ ಸಮಯದಲ್ಲಿಯೇ ಅನ್ನುವ ಸಾಮಾನ್ಯ ಅಂಶ ಈ ಜಾತಿಗ್ರಸ್ತ ಮನಸ್ಸುಗಳಿಗೆ ತಿಳಿಯದೇ ಹೋಯಿತು. ಇದು ದಲಿತರ ಮನೆಗೆ ಹೋಗಿ ಊಟ ಮಾಡುವ ಫೋಟೋ ಆಪ್ ರಾಜಕಾರಣಿಗಳಿಗೂ ಅನ್ವಯವಾಗುವ ಅಂಶ.

ಇದೇ ಬೆನ್ನಲ್ಲಿ ಕುವೆಂಪು ಇತ್ಯಾದಿಯಾಗಿ ಮಾಧ್ವ ಪರಂಪರೆಯ ತಾರತಮ್ಯದ ಆಚರಣೆಗಳನ್ನು ಬಯಲು ಮಾಡಿ ಬರೆದ ಬರೆಹಗಳು ಮತ್ತೆಮತ್ತೆ ಮುನ್ನಲೆಗೆ ಬರುತ್ತಿವೆ. ಕುವೆಂಪು ಅವರ ಭಾಷಣದ ತುಣುಕೊಂದನ್ನು ಇಲ್ಲಿ ನೆನೆಸಿಕೊಳ್ಳುವುದಾದರೆ “… ಅದಕ್ಕೆ ನಮ್ಮ ದೊಡ್ಡ ದೊಡ್ಡ ಆಚಾರ್ಯವರ್ಗದವರು, ಹಿಂದಿನವರು ಮಾತ್ರವಲ್ಲ ಇಪ್ಪತ್ತನೆಯ ಶತಮಾನದ ಇಂದಿನವರೂ, ಸ್ವಜಾತಿ ಸ್ವಾರ್ಥದೃಷ್ಟಿಯಿಂದ ತಪ್ಪು ತಪ್ಪು ವ್ಯಾಖ್ಯಾನಗಳನ್ನೆಲ್ಲ ಮಾಡಿ, ತಮ್ಮ ಜಾತಿಶ್ರೇಷ್ಠತೆಯನ್ನು ರಕ್ಷಿಸಿಕೊಂಡು ಬಾಕಿಯವರನ್ನೆಲ್ಲ ಊಳಿಗರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಆ ರೀತಿ ಮಾಡಿಕೊಂಡು ಹೋಗಿದ್ದಾರೆ. ಒಬ್ಬ ಆಚಾರ್ಯರಂತೂ ಎಲ್ಲಿಯವರೆಗೆ ಹೋಗಿದ್ದಾರೆಂದರೆ, ಈಗಾಗಲೆ ಇರುವ ಜಾತಿಭೇದಗಳು ಸಾಲದೆಂದು ಜೀವಗಳನ್ನೆಲ್ಲಾ ಮುಕ್ತಿಯೋಗ್ಯರು, ತಮೋಯೋಗ್ಯರು ಮತ್ತು ನಿತ್ಯನಾರಕಿಗಳು ಅಂತ ವಿಭಜಿಸಿಬಿಟ್ಟಿದ್ದಾರೆ”. ಇಂತಹ ವಿಭಜನೆಯನ್ನು ಕಾಪಾಡಿಕೊಂಡು ಬರಲು ಇಂದಿಗೂ ಶ್ರಮಿಸುತ್ತಿರುವ ಪರಂಪರೆಯವರ ಬಗ್ಗೆ ಈಗ ಮತ್ತೊಬ್ಬರು ಮಾತನಾಡಿದ್ದಾರೆ. ಅದನ್ನು ಅವರು ಯಾವುದಕ್ಕಾಗಿ ಹೇಳಿದ್ದರೂ, ಮರುದಿನ ಹಿಂಜರಿದಿದ್ದರೂ, ಒಟ್ಟಾರೆ ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಇಂತಹ ತಿಳಿವಳಿಕೆಯ ಮಾತುಗಳ ಬೆನ್ನಿಗೆ ನಿಲ್ಲುವುದು ಒಳ್ಳೆಯದು.

ಕೊನೆಯ ಮಾತು: ಇತ್ತೀಚೆಗೆ ಬಿಡುಗಡೆಯಾದ ತಮಿಳು ಚಿತ್ರ ’ಜೈ ಭೀಮ್’ ಬಗ್ಗೆ ಒಂದು ಸಮುದಾಯದವರು ಹುರುಳಿಲ್ಲದ ತಗಾದೆ ತೆಗೆದಿರುವುದನ್ನು ವಿರೋಧಿಸಿ ಆ ಚಿತ್ರರಂಗದ ಪ್ರಾಜ್ಞರು, ನಿರ್ದೇಶಕ ಜ್ಞಾನವೇಲ್ ಮತ್ತು ನಟ ಸೂರ್ಯನ ಬೆಂಬಲಕ್ಕೆ ನಿಂತರು. ಇಲ್ಲಿ ಹಂಸಲೇಖ ಅವರ ಬೆನ್ನಿಗೆ ನಿಂತ ಕನ್ನಡ ಚಿತ್ರರಂಗದವರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇದರ ಹೊರತಾಗಿಯೂ, ಹಂಸಲೇಖರಂತಹ ಜನಪ್ರಿಯ ವ್ಯಕ್ತಿಗಳು ಈ ಟ್ರಾಲ್‌ಗಳನ್ನು ಎದುರಿಸಲಾಗದಷ್ಟು ಧೃತಿಕೆಡಬಾರದು ಎಂಬುದು ನಮ್ಮೆಲ್ಲರ ಅಭಿಲಾಷೆ. ಅವರ ಬೆಂಬಲಕ್ಕೆ ಎಷ್ಟೋ ಕನ್ನಡ ಮನಸ್ಸುಗಳು ನಿಂತಿದ್ದವು. ಅವರ ವಿರುದ್ಧ ಆದ ಟ್ರಾಲ್‌ಗಳಿಗೆ, ಅವರವರ ಮಟ್ಟಕ್ಕೆ ಇರುವ ರಿಸ್ಕ್‌ಗಳನ್ನು ಮೀರಿ ಈ ಕನ್ನಡ ಮನಸ್ಸುಗಳು ಉತ್ತರಿಸುತ್ತಿದ್ದಾರೆ, ಪ್ರತಿರೋಧ ತೋರಿಸುತ್ತಿದ್ದಾರೆ. ಇಂತಹ ಬೆಂಬಲವನ್ನು ಗಮನಿಸಿ ಹಂಸಲೇಖ ತಾವು ಮೊದಲು ಹೇಳಿದ ಮಾತುಗಳಿಗೆ ಬದ್ಧರಿರಬೇಕಿತ್ತು ಎಂಬ ಅಪೇಕ್ಷೆ ಕೊನೆಗೆ ಉಳಿದೇ ಉಳಿಯುತ್ತದೆ.


ಇದನ್ನೂ ಓದಿ: ‘ಬಾಡು ಸಪ್ತಾಹ’: ಸಾಮಾಜಿಕ ಜಾಲತಾಣದಲ್ಲಿ #ಬಾಡೇ_ನಮ್_ಗಾಡು ಅಭಿಯಾನ!

2 COMMENTS

  1. ಸಸ್ಯಾಹಾರಿಗಳನ್ನು ದನಗಳಂತೆ ಸೊಪ್ಪು ಸದೆ ತಿನ್ನುವ ವರು ಎಂದು ಮಾಂಸಾಹಾರಿಗಳು ಗೇಲಿ ಮಾಡಿದ್ದನ್ನು ಕೇಳಿದ್ದೇನೆ.

  2. Nindu ons side story aytu guru. Nin non veg thinnu. Yaru beda anta helilla. Huli yavattu hullu thinnalla. Dana hullnne thinnodu. Oota thindi namma swanta nirdhaara. Namge nammade paddati. First avamana madiddu neevu swamijige. Don’t write this type of story.sumne kelsa illa anta eneno baribeda.

LEAVE A REPLY

Please enter your comment!
Please enter your name here