Homeಅಂಕಣಗಳುಕಡೆಗಾಲದಲ್ಲಿ ಹೀಗೇಕೆ ಮಾಡಿದ್ದರು ಪ್ರಣಬ್ ಬಾಬು?

ಕಡೆಗಾಲದಲ್ಲಿ ಹೀಗೇಕೆ ಮಾಡಿದ್ದರು ಪ್ರಣಬ್ ಬಾಬು?

ರಾಷ್ಟ್ರಪತಿಯಾಗಿ ಅವರು ನೋಟು ರದ್ದಿನ ಮೋದಿ ಕ್ರಮವನ್ನು ಸ್ವಾಗತಿಸಿದ್ದರು. ದೇಶದ ಜನತೆಯ ಮೇಲೆ ಕಷ್ಟಕಾರ್ಪಣ್ಯಗಳ ಹೊರೆಯನ್ನೇ ಹೇರಿದ್ದರೂ ಈ ನಿರ್ಧಾರವನ್ನು ಕಪ್ಪುಹಣ ಹೊರತೆಗೆಯಲು ಮತ್ತು ನಕಲಿ ನೋಟು ನಿವಾರಿಸಲು ನೆರವಾಗುವುದೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

- Advertisement -
- Advertisement -

ಎಂಬತ್ತನಾಲ್ಕರ ವೃದ್ಧಾಪ್ಯದಲ್ಲಿ ನಿಧನ ಹೊಂದಿದ ಪ್ರಣಬ್ ಮುಖರ್ಜಿ ಅನನ್ಯ ವ್ಯಕ್ತಿತ್ವದ ರಾಜಕಾರಣಿ. ಆಡಳಿತಗಾರನಾಗಿ ಮತ್ತು ಅಸಾಧಾರಣ ಸಂಸದೀಯ ಪಟುವಾಗಿಯೂ ಎದ್ದು ಕಂಡವರು. ಐವತ್ತು ವರ್ಷಗಳ ಕಾಲ ದೇಶದ ರಾಜಕಾರಣವನ್ನು ಪ್ರಭಾವಿಸಿದವರು. ಇಂದಿರಾಗಾಂಧಿ, ರಾಜೀವಗಾಂಧಿ, ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಸಚಿವ ಸಂಪುಟಗಳಲ್ಲಿ ಮಹತ್ವದ ಖಾತೆಗಳನ್ನು ನಿರ್ವಹಿಸಿದವರು. ಅವರ ನಾಯಕತ್ವದ ಬೇರುಗಳು ಜನಸಮೂಹಗಳಲ್ಲಿ ಇರಲಿಲ್ಲ. ರಾಜ್ಯಸಭೆಯ ಮೂಲಕ ಸಂಸತ್ತಿಗೆ ಕಾಲಿಟ್ಟ ಮುಖರ್ಜಿ ಲೋಕಸಭೆಗೆ ಆಯ್ಕೆಯಾಗಲು ಮೂರೂವರೆ ದಶಕಗಳೇ ಹಿಡಿದವು ಎಂಬುದು ಈ ಮಾತಿಗೆ ಸಾಕ್ಷಿ. ಲೋಕಸಭೆ ಚುನಾವಣೆ ಗೆಲ್ಲಲಾಗದಿದ್ದರೂ ಸರ್ಕಾರಗಳ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕರ ಪರಂಪರೆಯೇ ನಮ್ಮ ಕಣ್ಣಮುಂದಿದೆ. ಬಿಜೆಪಿ ಕೂಡ ಈ ಮಾತಿಗೆ ಹೊರತಲ್ಲ. ಇಂತಹ ನಾಯಕರನ್ನು ದೆಹಲಿಯ ರಾಜಕಾರಣದ ನುಡಿಗಟ್ಟಿನಲ್ಲಿ ‘ಬೇರುಗಳಿಲ್ಲದೆ ಬಿಳಿಲು ಇಳಿಸಿದ ಅಚ್ಚರಿಗಳು’ (Rootless Wonders) ಎಂದು ಕರೆಯುವುದುಂಟು. ಕುಹಕ ಮತ್ತು ಕೌತುಕಗಳೆರಡೂ ಬೆರೆತ ಮಾತಿದು. ಮುಖರ್ಜಿ ಕೂಡ ಭಾರತದ ಚುನಾವಣಾ ರಾಜಕಾರಣದಲ್ಲಿ ‘ಬೇರು ಇಲ್ಲದೆಯೇ ಬಿಳಿಲು ಇಳಿಸಿದ ಅಚ್ಚರಿ’. ರಾಜಕಾರಣಿಯ ಸಾಮಾನ್ಯ ಸ್ಥಾನದಿಂದ ಮೇಲೆದ್ದು ಮುತ್ಸದ್ದಿಯ ಸಾಲಿನಲ್ಲಿ ಸ್ಥಾನ ಪಡೆದವರು.

ಪೊಟೋ ಕೃಪೆ: Indian Defence Review

ಬೆನ್ನ ಹಿಂದೆ ಕೇಳಿ ಬರುತ್ತಿದ್ದ ಈ ಚುಚ್ಚುಮಾತಿನಿಂದ ಪ್ರಣಬ್ ಅವರಿಗೆ ಕಿರಿಕಿರಿಯಾಗಿತ್ತು. ಇಂದಿರಾ ಬೇಡವೆಂದರೂ ಹಠ ತೊಟ್ಟು ಚುನಾವಣೆಗೆ ನಿಂತರು. ನಿರೀಕ್ಷೆಯಂತೆ ಸೋತರು ಕೂಡ. ಸಂಜೆ ಕೊಲ್ಕತ್ತಾದ ಪ್ರಣಬ್ ಅವರ ಮನೆಯ ದೂರವಾಣಿ ಮೊಳಗಿತು. ಆ ತುದಿಯಿಂದ ಇಂದಿರಾಗಾಂಧಿ. ನೀನು ಸೋಲ್ತೀಯಾ ಅಂತ ಎಲ್ಲರಿಗೂ ಗೊತ್ತಿತ್ತು. ಗೀತಾಗೆ (ಪ್ರಣಬ್ ಅವರ ಪತ್ನಿಯವರ ಮುದ್ದಿನ ಹೆಸರು) ಕೂಡ. ಆದರೂ ಮಾತು ಕೇಳದೆ ಸ್ಪರ್ಧಿಸಿ ನನಗೆ ಫಜೀತಿ ತಂದಿಟ್ಟೆ ಎಂದು ಬೈದವರೇ ಉತ್ತರಕ್ಕೂ ಕಾಯದೆ ಪೋನು ಕುಕ್ಕಿದ್ದರು. ಎರಡು ದಿನಗಳ ನಂತರ ಅದೇ ದೂರವಾಣಿಯ ಗಂಟೆ ಮತ್ತೆ ಬಡಿದಾಗ ಆತ್ತಲಿಂದ ಮಾತಾಡುತ್ತಿದ್ದವರು ಸಂಜಯಗಾಂಧಿ. ಮಮ್ಮಿ ನಿಮ್ಮ ಮೇಲೆ ಬಹಳ ಕೋಪಿಸಿಕೊಂಡಿದ್ದಾರೆ. ಆದರೆ ಪ್ರಣಬ್ ಅವರು ಇಲ್ಲದೆ ಕ್ಯಾಬಿನೆಟ್ ಇಲ್ಲ ಎಂದೂ ಹೇಳಿದ್ದಾರೆ. ನಾಳೆ ದಿಲ್ಲಿ ವಿಮಾನ ಹತ್ತಿ ಬಂದುಬಿಡಿ ಎಂದಿದ್ದರು.

ಅದು ಅತ್ತೆಯ ಮಾತಾಯಿತು. ಇನ್ನು ಸೊಸೆ ಸೋನಿಯಾ ಕೂಡ ಪ್ರಣಬ್‍ರ ವಿವೇಕಕ್ಕೆ, ಲೋಕಾನುಭವಕ್ಕೆ ಬೆಲೆ ಕೊಡುತ್ತಿದ್ದರು. 2002ರಲ್ಲಿ ಜಮ್ಮು ಕಾಶ್ಮೀರ ಚುನಾವಣೆ ನಂತರ ಕಾಂಗ್ರೆಸ್ ಮತ್ತು ಪಿಡಿಪಿ ಸಮ್ಮಿಶ್ರ ಸರ್ಕಾರ ರಚನೆಯ ಸಂದರ್ಭ. ದಿಲ್ಲಿಯಲ್ಲಿ ಕಾಂಗ್ರೆಸ್ ತಲೆಯಾಳುಗಳ ಸಭೆ. ಮುಖರ್ಜಿ ಮತ್ತು ಅರ್ಜುನ್ ಸಿಂಗ್ ವಿನಾ ಉಳಿದೆಲ್ಲವರೂ ಮುಖ್ಯಮಂತ್ರಿಯ ಮೊದಲ ಸರದಿ ಕಾಂಗ್ರೆಸ್ಸಿಗೇ ದಕ್ಕಬೇಕೆಂದು ವಾದಿಸಿದ್ದರು. ಆದರೆ ಸ್ಥಳೀಯ ಪಕ್ಷಕ್ಕೇ ಮೊದಲ ಅವಕಾಶ ನೀಡುವುದು ಯಾಕೆ ಮುಖ್ಯವೆಂದು ಪ್ರತಿಪಾದಿಸಿದ್ದರು ಪ್ರಣಬ್. ನಾಯಕರ ಅಂತಿಮ ಅಭಿಮತವನ್ನು ಸಂಗ್ರಹಿಸಿದ ಸೋನಿಯಾ ”ನೀವು ಘೋರವಾಗಿ ಸೋತಿದ್ದೀರಿ” ಎಂದು ಮುಖರ್ಜಿಯತ್ತ ನೋಡಿ ನಕ್ಕರು. ”ಹೌದು ನಾನು ಸೋತಿದ್ದೇನೆ ನಿಜ, ಆದರೆ ನಾನು ಹೇಳುತ್ತಿರೋದೇ ವಾಸ್ತವ ಎಂದೂ ನಾನು ಬಲ್ಲೆ” ಎಂದು ಸುಮ್ಮನಾದರು ಮುಖರ್ಜಿ. ಮೂರು ದಿನಗಳ ನಂತರ ಪಿ.ಡಿ.ಪಿಯ ಮುಫ್ತಿ ಮಹಮ್ಮದ್ ಸಯೀದ್ ಮತ್ತು ಅವರ ಮಗಳ ಮೆಹಬೂಬಾ ಮುಫ್ತಿಯನ್ನು ಕರೆದ ಸೋನಿಯಾ ಮುಖ್ಯಮಂತ್ರಿ ಪದವಿಯ ಮೊದಲ ಸರದಿಯನ್ನು ಅವರ ಮಡಿಲಿಗಿಟ್ಟರು.

ಒಂದು ರೀತಿಯಲ್ಲಿ ಪ್ರಣಬ್ ಮುಖರ್ಜಿ ಅದೃಷ್ಟವಂತರು. ಕಾಂಗ್ರೆಸ್ಸಿನ ಕಸದ ಬುಟ್ಟಿ ಸೇರದೆ ಹೊರತೆವಳಿ ಇಪ್ಪತ್ತು ವರ್ಷಗಳ ಕಾಲ ನೆಹರು-ಗಾಂಧೀ ಮನೆತನಕ್ಕೆ ತಮ್ಮ ಅಚಲ ನಿಷ್ಠೆಯನ್ನು ರುಜುವಾತು ಮಾಡಿದ ನಂತರ ರಾಷ್ಟ್ರಪತಿ ಪದವಿಯ ಪಾರಿತೋಷಕ ಗಿಟ್ಟಿಸಿದರು. ನೆಹರೂ-ಗಾಂಧಿ ಮನೆತನದ ನಾಲ್ವರು ನಾಯಕರ ಜೊತೆಗೆ ಕೆಲಸ ಮಾಡಿರುವುದು ಮುಖರ್ಜಿ ವರ್ಚಸ್ಸಿನ ವಿರಳ ವಿಕ್ರಮ. ಇಂದಿರಾ ಗಾಂಧಿ, ಸಂಜಯ್ ಗಾಂಧಿಯ ನಂತರ ರಾಜೀವ್ ಗಾಂಧಿ, ಸೋನಿಯಾ ಗಾಂಧಿ. ನಾಲ್ವರ ಪೈಕಿ ಈ ಬಂಗಾಳೀ ಬಾಬುವನ್ನು ಬಲು ಬವಣೆಗೆ ಗುರಿ ಮಾಡಿದ್ದು ರಾಜೀವ ಗಾಂಧಿ. ಆದರೆ ಪ್ರಣಬ್ ಅವರನ್ನು ರಾಷ್ಟ್ರಪತಿ ಪದವಿಗೆ ಏರಿಸಿದವರು ಅದೇ ರಾಜೀವ್ ಪತ್ನಿ ಸೋನಿಯಾ ಗಾಂಧೀ

ರಾಜಕೀಯ ಬಿಕ್ಕಟ್ಟುಗಳನ್ನು ಬಗೆಹರಿಸುವ ಮುಖರ್ಜಿ ಕ್ಷಮತೆಯ ಪ್ರತ್ಯಕ್ಷ ಅನುಭವ ಸೋನಿಯಾ ಅವರಿಗೆ ಆದದ್ದು ಆಕೆ ಕಾಂಗ್ರೆಸ್ ಅಧ್ಯಕ್ಷ ಪದವಿಯನ್ನು ಒಪ್ಪಿಕೊಂಡ ನಂತರ. 1998ರಲ್ಲಿ ಸೀತಾರಾಮ ಕೇಸರಿ ಅವರನ್ನು ಅಧ್ಯಕ್ಷ ಪದವಿಯಿಂದ ಹೊರಹಾಕಿ ಸೋನಿಯಾ ಅವರನ್ನು ಪ್ರತಿಷ್ಠಾಪಿಸುವ ಬಂಡಾಯದ ರೂಪು ರೇಖೆಗಳು ಅಂತಿಮಗೊಂಡದ್ದು ಪ್ರಣಬ್ ನಿವಾಸದಲ್ಲೇ. ಯುಪಿಎ ಸರ್ಕಾರದ ರಾಷ್ಟ್ರೀಯ ಸಲಹಾ ಸಮಿತಿಯ ಅಧ್ಯಕ್ಷ ಪದವಿಯ ಲಾಭದಾಯಕ ಹುದ್ದೆ ಹೊಂದಿದ್ದಾರೆಂದು ಪ್ರತಿಪಕ್ಷ ಗುಲ್ಲೆಬ್ಬಿಸಿದ ನಂತರ ಸೋನಿಯಾ ಅವರಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿಸಿ ಮರು ಚುನಾವಣೆ ಎದುರಿಸುವ ಸಲಹೆ ನೀಡಿದವರು ಪ್ರಣಬ್ ಮುಖರ್ಜಿಯೇ. ಆದರೂ ಪ್ರಧಾನಿ ಪೀಠದಲ್ಲಿ ಕೂರಿಸುವಷ್ಟು ನಂಬುಗೆ ರಾಜಕೀಯ ಚತುರಮತಿಯಾದ ಪ್ರಣಬ್ ಕುರಿತು ಸೋನಿಯಾ ಕಾಂಗ್ರೆಸ್ಸಿಗೆ ಇರಲಿಲ್ಲ. ಹೀಗಾಗಿಯೇ ಮಹತ್ವಾಕಾಂಕ್ಷೆಯ ಲವಲೇಶ ಸೋಂಕೂ ಇರದ ರಾಜಕಾರಣಿಯೇ ಅಲ್ಲದ ಮನಮೋಹನ್ ಸಿಂಗ್ ಅವರ ಕೈಯಲ್ಲಿ ಪ್ರಧಾನಿ ಪದವಿ ಸುಭದ್ರ ಎಂಬುದು ಸೋನಿಯಾ ಕಾಂಗ್ರೆಸ್ಸಿನ ಅಚಲ ವಿಶ್ವಾಸವಾಗಿತ್ತು. ಈ ಅಪನಂಬಿಕೆಗೊಂದು ಇತಿಹಾಸ ಉಂಟು.

ಪೊಟೋ ಕೃಪೆ: Oneindia

1984ರ ಅಕ್ಟೋಬರ್ 31ರ ಮುಂಜಾನೆ. ಇಂದಿರಾ ತಮ್ಮ ಮೈಗಾವಲು ಭಟರಿಂದಲೇ ಹತ್ಯೆಗೀಡಾಗಿದ್ದರು. ಪಶ್ಚಿಮ ಬಂಗಾಳದಲ್ಲಿದ್ದ ರಾಜೀವ ಗಾಂಧಿ ಅವರು ಅಬ್ದುಲ್ ಘನಿ ಖಾನ್ ಚೌಧರಿ, ಪ್ರಣಬ್ ಮುಖರ್ಜಿ ಮುಂತಾದವರ ಜೊತೆ ದಿಲ್ಲಿ ವಿಮಾನ ಹತ್ತಿದ್ದರು. ಮುಂದಿನ ಪ್ರಧಾನಿ ರಾಜೀವ್ ಗಾಂಧಿ ಎಂಬುದು ವಿಮಾನದಲ್ಲಿದ್ದವರ ವಿವೇಕ. ಯಾರೂ ಬಾಯಿಬಿಟ್ಟು ಹೇಳುತ್ತಿರಲಿಲ್ಲ ಅಷ್ಟೇ. ಪ್ರಧಾನಿಮಂತ್ರಿಯ ಆಯ್ಕೆ ಹೇಗೆ ಎಂಬ ರಾಜೀವ್ ಪ್ರಶ್ನೆಗೆ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ ಕರೆಯಬೇಕೆಂದರು ಕೆಲವರು. ಆದರೆ ಅಂದಿನ ದಿನಗಳಲ್ಲಿ ಇಂತಹ ಸಭೆ ಸೇರಿಸಲು ಒಂದೆರಡು ದಿನಗಳಾದರೂ ಹಿಡಿಯುತ್ತಿತ್ತು. ಇನ್ನು ಕೆಲವರು ಕಾಂಗ್ರೆಸ್ ಸಂಸದೀಯ ಮಂಡಳಿಯ ಸಭೆ ಕರೆದು ದಿಲ್ಲಿಯಲ್ಲಿ ಲಭ್ಯವಿದ್ದಷ್ಟು ಸದಸ್ಯರೇ ತುರ್ತು ತೀರ್ಮಾನ ತೆಗೆದುಕೊಳ್ಳಲು ಬಂದೀತು ಎಂದರು. ಹೊಸ ನಾಯಕನನ್ನು ಆರಿಸುವ ತನಕ ಹಂಗಾಮಿ ಪ್ರಧಾನಿಯ ನೇಮಕಕ್ಕೆ ಅವಕಾಶ ಉಂಟು ಎಂದವರು ಪ್ರಣಬ್ ಮುಖರ್ಜಿ.

ನೆಹರು ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ನಿಧನದ ನಂತರ ಎರಡು ಬಾರಿಯೂ ತಲಾ ಹದಿಮೂರು ದಿನಗಳ ಕಾಲ ಗುಲ್ಜಾರಿ ಲಾಲ್ ನಂದಾ ಹಂಗಾಮಿ ಪ್ರಧಾನಿ ಆಗಿದ್ದ ಉದಾಹರಣೆಯನ್ನೂ ಹೇಳಿದರು. ತಾವೇ ಹಂಗಾಮಿ ಪ್ರಧಾನಿ ಆಗುವ ಲೆಕ್ಕಾಚಾರ ಪ್ರಣಬ್ ಮನಸ್ಸಿನಲ್ಲಿತ್ತೇ ಅಥವಾ ಕೇವಲ ಮಾಹಿತಿಯನ್ನು ನೀಡುತ್ತಿದ್ದರೇ! ಸಂಜೆ ರಾಜೀವ್ ಪುಟ್ಟ ಸಂಪುಟದೊಡನೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಹಣಕಾಸು ಮಂತ್ರಿಯಾಗಿ ಪ್ರಣಬ್ ಆ ಸಂಪುಟದಲ್ಲಿದ್ದದ್ದು ಹೌದು.

ಶೀಘ್ರದಲ್ಲೇ ಚುನಾವಣೆಗಳನ್ನು ಘೋಷಿಸಲಾಯಿತು. ದಾಖಲೆಯ ಗೆಲವು ರಾಜೀವ್‌ಗೆ ಒಲಿದಿತ್ತು. ಗುಂಪುಗಾರಿಕೆ ಗರಿಗೆದರಿತ್ತು. ಹೊಸ ಅಂತರಂಗ ವಲಯದ ಹತ್ತು ಹಲವು ಮಂದಿ ತಿದಿಯೊತ್ತಿದ್ದರು. ಅಂಬಾನಿಗಳ ಹಿತಚಿಂತನೆಯ ಅಪವಾದವೂ ಪ್ರಣಬ್ ಹೆಗಲೇರಿತ್ತು. ವಿಮಾನದಲ್ಲಿನ ಸಂಭಾಷಣೆಯ ಕಿಡಿ ಭುಗ್ಗೆಂದು ಬೆಂಕಿಯಾಗಿತ್ತು. ಹೊಸ ಸಚಿವ ಸಂಪುಟ ಪ್ರಮಾಣವಚನ ಸ್ವೀಕರಿಸಿತು. ಆದರಲ್ಲಿ ಪ್ರಣಬ್ ಇರಲಿಲ್ಲ. ಅವರ ಜಾಗವನ್ನು ವಿ.ಪಿ.ಸಿಂಗ್ ತುಂಬಿದ್ದರು. ಪಕ್ಷವಿರೋಧಿ ಚಟುವಟಿಕೆಗಳ ಆಪಾದನೆ ಹೊತ್ತ ಪ್ರಣಬ್ ಪಕ್ಷದಿಂದ ಅಮಾನತಿನ ಶಿಕ್ಷೆಗೆ ಗುರಿಯಾದರು. ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು. ನೆತ್ತಿಯ ಮೇಲೆ ಇಂದಿರಾ- ಸಂಜಯ್ ನೆರಳಿಲ್ಲದೆ “ಅನಾಥ”ರಾಗಿದ್ದ ಆರ್. ಗುಂಡೂರಾವ್ ಕೂಡ ಪ್ರಣಬ್ ಜೊತೆ ಸೇರಿದರು. ಬೆಂಗಳೂರಿನ ಲಾಲ್‍ಬಾಗ್ ಗಾಜಿನಮನೆಯಲ್ಲಿ ಈ ಪಕ್ಷದ ಸಮಾವೇಶ ಕೂಡ ನಡೆಯಿತು. ಈ ಪಕ್ಷ ಬರಕತ್ತಾಗಲಿಲ್ಲ. ಪ್ರಣಬ್ ರಾಜಕೀಯ ವನವಾಸಕ್ಕೆ ಸಂದಿದ್ದರು.

ಅಪ್ಪಟ ಬಂಗಾಳಿ ಪ್ರತಿಭೆ ಪ್ರಣಬ್ ಸಂಸತ್ತಿನ ಹಿರಿಯರ ಸದನ ರಾಜ್ಯಸಭೆಯನ್ನು ಪ್ರವೇಶಿಸಿದಾಗ ಅವರ ವಯಸ್ಸು ಕೇವಲ 33. 1969ರಲ್ಲಿ ಅವರನ್ನು ರಾಜ್ಯಸಭೆಗೆ ಕಳಿಸಿದ ಇಂದಿರಾ ಅವರು 1973ರಲ್ಲಿ ತಮ್ಮ ಮಂತ್ರಿಮಂಡಲಕ್ಕೆ ಸೇರಿಸಿಕೊಂಡರು. ರಾಜಕೀಯ ಬಿಕ್ಕಟ್ಟುಗಳನ್ನು ಬಗೆಹರಿಸುವುದೆಂದರೆ ಪ್ರಣಬ್ ಅವರಿಗೆ ಅನ್ನ ನೀರು ಆಮ್ಲಜನಕ ಸೇವನೆಯಷ್ಟು ಸಲೀಸು. ಅವು ಕ್ಲಿಷ್ಟಗೊಂಡಷ್ಟೂ ಇಷ್ಟ ಅವರಿಗೆ. ರಾಜಕೀಯ ನಡೆಗಳನ್ನು ರಣತಂತ್ರಗಳನ್ನು ಪ್ರಣಬ್ ಕಲಿತದ್ದು ತಮ್ಮನ್ನು ರಾಜಕಾರಣದಲ್ಲಿ ತಿದ್ದಿ ತೀಡಿ ಬೆಳೆಸಿದ ಇಂದಿರಾಗಾಂಧಿ ಅವರಿಂದ.

ಪೊಟೋ ಕೃಪೆ: Wikipedia

ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರಗಳನ್ನು ನಡೆಸುವಲ್ಲಿ ಅವರ ಸಲಹೆ ಸೂಚನೆ, ವ್ಯೂಹ ರಚನೆಯ ಕೌಶಲಗಳನ್ನು ಅವರ ಎದುರಾಳಿಗಳೂ ಮೆಚ್ಚಿದ್ದಾರೆ. ಇಂದಿರಾ ಅನುಯಾಯಿಯಾಗಿ ತುರ್ತುಪರಿಸ್ಥಿತಿ ಹೇರಿಕೆಯನ್ನು ಬೆಂಬಲಿಸಿ ಸಮರ್ಥಿಸಿದ್ದರು. ತುರ್ತುಪರಿಸ್ಥಿತಿಯ ಅತಿರೇಕಗಳ ಕುರಿತು ವಿಚಾರಣೆ ನಡೆಸಿದ ವರದಿ ನೀಡಿರುವ ಶಾ ಆಯೋಗ ಪ್ರಣಬ್ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿರುವುದುಂಟು. ಉಳಿದಂತೆ ಸಂವಿಧಾನದಲ್ಲಿ ಅಚಲ ನಿಷ್ಠೆ ಹೊಂದಿದ್ದರು. ಹಿಂದೂ ಧರ್ಮದಲ್ಲಿ ಆಳದ ಶ್ರದ್ಧೆಯ ಜೊತೆ ಜೊತೆಗೆ ಜಾತ್ಯತೀತ ತತ್ವ ಮತ್ತು ಭಾರತದ ಬಹುಮುಖಿ ಸಾಮಾಜಿಕ ಮೌಲ್ಯಗಳನ್ನು ಬದುಕಿನುದ್ದಕ್ಕೂ ಭುಜಕೀರ್ತಿಗಳಂತೆ ಧರಿಸಿ ನಡೆದರು.

ತಮ್ಮ ಹಿರಿಯರು ಬಾಳಿ ಬದುಕಿದ ಮನೆಯಲ್ಲಿ ತಾವೇ ಮುಂದೆ ನಿಂತು ಪ್ರತಿ ವರ್ಷ ತಪ್ಪದೆ ದುರ್ಗಾಪೂಜೆ ಮಾಡುತ್ತಿದ್ದರು ಪ್ರಣಬ್ ಬಾಬು. ದುರ್ಗಾಪೂಜೆಗಾಗಿ ಅಮೆರಿಕೆಯೊಂದಿಗೆ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ದಿನಾಂಕವನ್ನು ಒಂದು ವಾರ ಕಾಲ ಮುಂದೂಡಿದ್ದುಂಟು.

‘ನನ್ನ ಇತಿಮಿತಿಗಳು ನನಗೆ ತಿಳಿದಿದ್ದವು. ಇಂಡಿಯಾದ ಪ್ರಧಾನಿಯಾಗಲು ಜನಸಮೂಹಗಳ ಭಾಷೆ ಹಿಂದಿ ಗೊತ್ತಿರಬೇಕು. ನನಗೆ ಅದರ ಮೇಲೆ ಹಿಡಿತ ಇರಲಿಲ್ಲ’ ಎಂದು ಮನಸಿನ ಕಹಿಯನ್ನು ಹೊರಚೆಲ್ಲದೆ ನುಂಗಿಕೊಂಡಿದ್ದರು. ರಾಜೀವ್ ಅವಕೃಪೆಗೆ ಗುರಿಯಾಗಿದ್ದ ಪ್ರಣಬ್ ಅವರನ್ನು ಆದರಿಸಿದವರು ಪಿ.ವಿ.ನರಸಿಂಹರಾವ್. ಸಕ್ರಿಯ ರಾಜಕಾರಣದಿಂದಲೇ ನಿವೃತ್ತಗೊಳಿಸಲು ಕಾತರರಾಗಿ ನೆಹರೂ-ಗಾಂಧಿ ಕುಟುಂಬದ ‘ಹಿತಚಿಂತಕ’ರಿಂದಲೂ ರಕ್ಷಿಸಿದ್ದರು.

ಪೊಟೋ ಕೃಪೆ: Asia en Fragmentos Blog

ಮುಖರ್ಜಿಯವರು ಹಣಕಾಸು ಮಂತ್ರಿಯಾಗಿದ್ದಾಗ ಮನಮೋಹನ್ ಸಿಂಗ್ ಭಾರತೀಯ ರಿಸರ್ವ್ ಬ್ಯಾಂಕ್‍ನ ಗೌರ್ನರ್ ಆಗಿದ್ದರು. ಪ್ರಧಾನಿ ಹುದ್ದೆಯ ಓಟದಲ್ಲಿ ಸಿಂಗ್ ಮುಂದೆ ಸೋಲೊಪ್ಪಿದ್ದರು ಪ್ರಣಬ್. ಆದರೆ ಸೋಲಿನ ಕಹಿಯನ್ನು ಅವರು ಎಂದೂ ಪ್ರಕಟಿಸಲಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾದ ನಂತರ ಕಾಂಗ್ರೆಸ್ಸಿನ ಮೊದಲ ಕೋರ್ ಕಮಿಟಿ ಸಭೆಯಲ್ಲಿ ಸಿಂಗ್ ಅವರು ಪ್ರಣಬ್ ಅವರನ್ನು “ಸರ್” ಎಂದು ಸಂಬೋಧಿಸಿದರಂತೆ. ಸಿಟ್ಟಿಗೆದ್ದ ಪ್ರಣಬ್ ಮುಂದಿನ ಸಭೆಗೆ ಬರುವುದಿಲ್ಲವೆಂದು ಬೆದರಿಕೆ ಹಾಕಿದರು. ಕಡೆಗೆ ಇಬ್ಬರ ಮಧ್ಯೆ ಒಪ್ಪಂದ ಏರ್ಪಟ್ಟಿತು. ಪರಸ್ಪರರನ್ನು “ಪ್ರಣಬ್‍ಜೀ” ಮತ್ತು “ಡಾ.ಸಿಂಗ್” ಎಂದೂ ಸಂಬೋಧಿಸಿಕೊಳ್ಳುವಂತೆ ಆಯಿತು. ರಕ್ಷಣಾ ಖಾತೆಯಿಂದ ವಿದೇಶಾಂಗ ಖಾತೆಗೆ ಬದಲಾವಣೆ ಆದಾಗ ರಕ್ಷಣಾ ಖಾತೆಯನ್ನು ಎ.ಕೆ.ಆ್ಯಂಟನಿ ಅವರಿಗೆ ವಹಿಸಿಕೊಡುತ್ತ “ಆ್ಯಂಟನಿ, ನನ್ನ ಎಲ್ಲ ನಿದ್ರೆಯಿಲ್ಲದ ರಾತ್ರಿಗಳನ್ನು ನಿಮಗೆ ಹಸ್ತಾಂತರ ಮಾಡುತ್ತಿದ್ದೇನೆ” ಎಂದಿದ್ದರು.

ರಾಷ್ಟ್ರಪತಿಯಾಗಿ ಅವರು ನೋಟು ರದ್ದಿನ ಮೋದಿ ಕ್ರಮವನ್ನು ಸ್ವಾಗತಿಸಿದ್ದರು. ದೇಶದ ಜನತೆಯ ಮೇಲೆ ಕಷ್ಟಕಾರ್ಪಣ್ಯಗಳ ಹೊರೆಯನ್ನೇ ಹೇರಿದ್ದರೂ ಈ ನಿರ್ಧಾರವನ್ನು ಕಪ್ಪುಹಣ ಹೊರತೆಗೆಯಲು ಮತ್ತು ನಕಲಿ ನೋಟು ನಿವಾರಿಸಲು ನೆರವಾಗುವುದೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೋದಿಯವರನ್ನು ದೂರದೃಷ್ಟಿಯ ನಾಯಕನೆಂದೂ ಹಗಲಿರುಳೂ ದೇಶಕ್ಕಾಗಿ ದುಡಿಯುವ ಪ್ರಧಾನಿಯೆಂದು ಪ್ರಶಂಸಿಸಿದ್ದರು. ಆರ್‌ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತರನ್ನು ರಾಷ್ಟ್ರಪತಿ ಭವನಕ್ಕೆ ಭೋಜನಕೂಟಕ್ಕೆ ಆಹ್ವಾನಿಸಿ ಹುಬ್ಬುಗಳು ಮೇಲೇರುವಂತೆ ಮಾಡಿದ್ದರು.

ರಾಷ್ಟ್ರಪತಿ ಪ್ರಣಬ್ ಮತ್ತು ಪ್ರಧಾನಿ ಮೋದಿ ನಡುವೆ ಪರಸ್ಪರ ಮೆಚ್ಚುಗೆಯ ವಿಚಿತ್ರ ಸಂಬಂಧವೊಂದು ರೂಪು ತಳೆದಿತ್ತು. ಕಾಂಗ್ರೆಸ್ ಪಕ್ಷವನ್ನು ಹಣಿಯುವ ಯಾವ ಅವಕಾಶವನ್ನೂ ಪ್ರಧಾನಿ ನರೇಂದ್ರ ಮೋದಿಯವರು ಬಿಡುವುದಿಲ್ಲ. ಹೀಗೆ ನಾಗಪುರಕ್ಕೆ ಭೇಟಿ ನೀಡಿದ್ದ ಮತ್ತು ಕಾಂಗ್ರೆಸ್ಸಿನಲ್ಲಿ ‘ಅವಗಣನೆ-ಅಪನಂಬಿಕೆ’ಗೆ ತುತ್ತಾಗಿದ್ದ ನಾಯಕನಿಗೆ ಭಾರತರತ್ನ ನೀಡಿದರು. ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಮುಖರ್ಜಿಯವರ ತವರು ರಾಜ್ಯ ಪಶ್ಚಿಮ ಬಂಗಾಳಕ್ಕೆ ಒಂದು ರಾಜಕೀಯ ಸಂದೇಶವನ್ನು ಕಳಿಸುವುದೂ ಅವರ ಉದ್ದೇಶವಾಗಿತ್ತು. ಬಂಗಾಳದಲ್ಲಿ ನೆಲಕಚ್ಚಿರುವ ಎಡಪಂಥೀಯ ಪಕ್ಷಗಳ ಸ್ಥಾನದಲ್ಲಿ ಬಿಜೆಪಿಯನ್ನು ಪ್ರತಿಷ್ಠಾಪಿಸುವುದು ಮೋದಿ-ಶಾ ಉದ್ದೇಶ. ನೆಹರೂ-ಗಾಂಧಿ ಮನೆತನಕ್ಕೆ ಮೂರು ಭಾರತರತ್ನಗಳು ಸಂದಿವೆ. ಈ ಮನೆತನ ನಂಬದೆ ಪ್ರಧಾನಿ ಪದವಿಯಿಂದ ದೂರ ಇರಿಸಿದ್ದ ‘ಸಾಮಾನ್ಯ ಹಿನ್ನೆಲೆ’ಯ ಕಾಂಗ್ರೆಸ್ಸಿಗನನ್ನು ನೆಹರು, ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಅವರುಗಳ ಸಾಲಿಗೆ ಸರಿಸಮನಾಗಿ ನಿಲ್ಲಿಸಿ ಹಗೆ ತೀರಿಸಿಕೊಳ್ಳುವುದು ಮೋದಿ ಅವರ ಆಂತರ್ಯ ಎಂಬ ವ್ಯಾಖ್ಯಾನವೂ ನಡೆದಿದೆ. ರಾಜಕಾರಣದಲ್ಲಿ ಹಲವು ಬಾರಿ ತಮ್ಮ ತಲೆ ಕಾಯ್ದು ಕಾಪಾಡಿದ್ದ ತಮ್ಮದೇ ಪರಿವಾರದ ಹಿರಿಯ ಎಲ್.ಕೆ.ಆಡ್ವಾಣಿ ಅವರನ್ನು ಮೂಲೆಗುಂಪು ಮಾಡಿರುವ ಅವರ ನಡೆಯ ಬೆಳಕಿನಲ್ಲಿ, ಮುಖರ್ಜಿಯವರಿಗೆ ನೀಡಿರುವ ಸಮ್ಮಾನ ಇನ್ನಷ್ಟು ಹೊಳೆದು ಕಾಣತೊಡಗಿದೆ. ಒಂದು ಕಾಲಕ್ಕೆ ಮುಖರ್ಜಿ ಅವರ ರಾಷ್ಟ್ರಪತಿ ಉಮೇದುವಾರಿಕೆಯನ್ನು ಸಂಘಪರಿವಾರದ ”ಟ್ರೋಲ್ ಆರ್ಮಿ” ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವಿರೋಧಿಸಿತ್ತು. ಹಣಕಾಸು ಸಚಿವರಾಗಿ ಅವರ ‘ವೈಫಲ್ಯ’ವನ್ನು ಕಡುವ್ಯಂಗ್ಯದ ಬಾಣಗಳಿಂದ ತಿವಿದಿತ್ತು. ನಾಗಪುರ ಭೇಟಿ ಮತ್ತು ಭಾರತರತ್ನ ನೀಡಿಕೆಯ ನಂತರ ಈ ಸೇನೆಯ ಬಾಯಿ ಕಟ್ಟಿಹೋಗಿರುವುದು ವಿಡಂಬನೆಯೇ ಸರಿ.

ಪೊಟೋ ಕೃಪೆ: Oneindia

ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾದ ನಂತರ ಏನು ಮಾಡುವಿರಿ ಎಂಬ ಪ್ರಶ್ನೆಯೊಂದಕ್ಕೆ ‘ಜನಸಮೂಹಗಳಲ್ಲಿ ಕರಗಿ ಒಂದಾಗಿ ಹೋಗುವೆ’ ಎಂಬ ಉತ್ತರವನ್ನು ಪ್ರಣಬ್ ನೀಡಿದ್ದು ಸಂದರ್ಶನವೊಂದರಲ್ಲಿ ದಾಖಲಾಗಿದೆ. ಆದರೆ ಅದು ಅಷ್ಟು ಸುಲಭ ಇರಲಿಲ್ಲ. ಬದುಕೆಲ್ಲ ತಾವು ಸೈದ್ಧಾಂತಿಕವಾಗಿ ವಿರೋಧಿಸುತ್ತ ಬಂದಿದ್ದರೂ ಅವರು ನಾಗಪುರದಲ್ಲಿ ಆರ್‌ಎಸ್‍ಎಸ್‍ನ ಶಿಕ್ಷಾ ವರ್ಗದ ತೃತೀಯ ವರ್ಷದ ತರಬೇತಿ ಮುಗಿಸಿದ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತಾಡಿದರು. ಆಗ ತಾವು ಪ್ರತಿಪಾದಿಸಿದ ಎಲ್ಲರ ಭಾರತ- ಸೆಕ್ಯುಲರ್ ಭಾರತ- ಸಹಿಷ್ಣು ಭಾರತ- ಸಂವಿಧಾನ ಮೂಲದ ರಾಷ್ಟ್ರೀಯತೆಯ ಭಾರತದಲ್ಲಿ ವಿಶ್ವಾಸ ಇಲ್ಲದವರ ವೇದಿಕೆಗೆ ಹೋದದ್ದೇಕೆ ಎಂಬ ಟೀಕೆಯನ್ನು ಪ್ರಣಬ್ ಎದುರಿಸಬೇಕಾಯಿತು. ಒಂದೆಡೆ ಆರ್‌ಎಸ್‍ಎಸ್ ವೇದಿಕೆಯಿಂದ ‘ಎಲ್ಲರ ಭಾರತ’ದ ಪಾಠ ಹೇಳಿ ಸೆಕ್ಯುಲರ್ ವಾದಿಗಳನ್ನು ಮೆಚ್ಚಿಸಿದರೆ, ಇನ್ನೊಂದೆಡೆ ಆರ್‌ಎಸ್‍ಎಸ್‍ನ ಸ್ಥಾಪಕ ಡಾ.ಹೆಡಗೇವಾರ್ ಅವರನ್ನು ಭಾರತದ ಮಹಾನ್ ಪುತ್ರನೆಂದು ಹೊಗಳಿ ಆರ್‌ಎಸ್‍ಎಸ್‍ಗೆ ಹತ್ತಿರವಾಗಿ ಎರಡು ಪಾಳೆಯಗಳ ನಡುವೆ ಸಮತೂಕ ಸಾಧಿಸುವ ಚತುರಮತಿಯನ್ನು ಮೆರೆದರು ಎನ್ನಲಾಗುತ್ತಿದೆ. ತುಂಬು ಜೀವನ ನಡೆಸುತ್ತಿದ್ದ ಪ್ರಣಬ್ 82ನೇ ವಯಸ್ಸಿನಲ್ಲಿ ಹಠಾತ್ತನೆ ವಿವಾದದ ಮಡುವಿಗೆ ಬಿದ್ದರು.

ಅಲ್ಪಸಂಖ್ಯಾತರನ್ನು ಸಾರಾಸಗಟು ಅಂಚಿಗೆ ನೂಕಿ ಬ್ರಾಹ್ಮಣ್ಯ ಅಧಿಪತ್ಯದ ಹಿಂದೂ ರಾಷ್ಟ್ರ ಸ್ಥಾಪಿಸುವ ಆರ್‌ಎಸ್‍ಎಸ್ ಕಾರ್ಯಸೂಚಿಯಲ್ಲಿ ಏನೂ ಬದಲಾವಣೆ ಆಗಿಲ್ಲ. ಇಂದಿನಿಂದ ಐವತ್ತು ವರ್ಷಗಳ ನಂತರ ಚಿತ್ತಭಿತ್ತಿಗಳಲ್ಲಿ ಕೆತ್ತಿದಂತೆ ಉಳಿಯುವುದು ಚಿತ್ರಗಳೇ ವಿನಾ ವಿಚಾರಗಳಲ್ಲ. ಭಗವಾ ಧ್ವಜ ಏರಿಸುವ ಕ್ಷಣಗಳಲ್ಲಿ ಎದ್ದು ನಿಂತು ಗೌರವ ಸೂಚಿಸಿದ ಪ್ರಣಬ್ ಮುಖರ್ಜಿ ಚಿತ್ರ ದಿನ ಬೆಳಗಾಗುವುದರ ಒಳಗೆ ಎದೆ ಮೇಲೆ ಕೈಯಿರಿಸಿ ಆರ್‌ಎಸ್‍ಎಸ್‍ ಪ್ರಣಾಮ ಸಲ್ಲಿಸುತ್ತಿರುವ ಚಿತ್ರವಾಗಿ ಮಾರ್ಪಟ್ಟಿತ್ತು.

ಇದನ್ನು ಓದಿ : ಖಾಸಗೀಕರಣ ಪ್ರಕ್ರಿಯೆ: ರೈಲ್ವೇ ಮಂಡಳಿಯ 7 ಕಾರ್ಖಾನೆಗಳನ್ನು ವಿಲೀನಗೊಳಿಸಿದ ಕೇಂದ್ರ ಸರ್ಕಾರ

ಪ್ರಣಬ್ ಅವರ ಚಿತ್ರವನ್ನು ಆರ್‌ಎಸ್‍ಎಸ್ ಪ್ರಣಾಮ ಮಾಡುತ್ತಿರುವ ಚಿತ್ರವನ್ನಾಗಿ ಪೋಟೋಶಾಪ್ ಮಾಡಿ ತಿದ್ದಿರುವುದು “ಒಡಕು ಉಂಟು ಮಾಡುವ ಕೆಲ ರಾಜಕೀಯ ಶಕ್ತಿಗಳು” ಎಂದು ಆರ್‌ಎಸ್‍ಎಸ್‍ನ ಸಹ ಸರಕಾರ್ಯವಾಹ ಮನಮೋಹನ ವೈದ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇರಬಹುದು, ಇವೇ ವಿಭಜಕ ರಾಜಕೀಯ ಶಕ್ತಿಗಳು ನೆಹರೂ ಅವರನ್ನು ಸ್ವತಂತ್ರ ಭಾರತದ ಅತಿ ದೊಡ್ಡ ಖಳನಾಯಕ ಎಂದು ಬಿಂಬಿಸುತ್ತಬರುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ವಿಭಜಕ ಶಕ್ತಿಗಳಿಗೆ ಇನ್ನಷ್ಟು ಶಕ್ತಿ ಬಂದಿರುವುದು ಕೇವಲ ಕಾಕತಾಳೀಯ ಇರಬಹುದು. ಅವುಗಳ ವಿಕೃತಿ ಎಲ್ಲ ಎಲ್ಲೆಗಳನ್ನೂ ಮೀರಿ ಹಬ್ಬಿದೆ. ನೆಹರೂ ಸಂತತಿಗೆ ಮೊಘಲ್ ಮುಸ್ಲಿಂ ಮೂಲವನ್ನು ಅಂಟಿಸಲಾಗಿದೆ. ಇವೇ ವಿಭಜಕ ಶಕ್ತಿಗಳು ನೆಹರು ಅವರನ್ನು ಹೆಣ್ಣುಬಾಕ ಚರಿತ್ರಹೀನ ಎಂದು ಅಂತರ್ಜಾಲದಲ್ಲಿ ಬಿಂಬಿಸುವ ಚಿತ್ರಗಳು- ಹಸಿ ಸುಳ್ಳುಗಳ ಖಜಾನೆಯನ್ನೇ ಸೃಷ್ಟಿಸಿದೆ.

Photo Credit: Alt News

ಈ ಪೈಕಿ ಇತ್ತೀಚಿನ ಒಂದೆರಡು ಚಿತ್ರಗಳನ್ನು ನೋಡೋಣ. ಮೊದಲನೆಯ ಚಿತ್ರದಲ್ಲಿ ಯುವತಿಯೊಬ್ಬಳು ಹಿಂದಿನಿಂದ ನೆಹರೂ ಅವರ ಕೆನ್ನೆಗೆ ಮುತ್ತಿಡುತ್ತಿದ್ದಾಳೆ. ಎರಡನೆಯ ಚಿತ್ರದಲ್ಲಿ ವಯಸ್ಸಾದ ಮತ್ತೊಬ್ಬ ಹೆಣ್ಣುಮಗಳು ವಿಮಾನ ನಿಲ್ದಾಣದ ಹಿನ್ನೆಲೆಯಲ್ಲಿ ನೆಹರೂ ಗಲ್ಲಕ್ಕೆ ಮುತ್ತಿಡುತ್ತಿದ್ದಾರೆ. ಯುವತಿ ಈಗಲೂ ಬದುಕಿದ್ದಾರೆ. ಅವರ ಹೆಸರು ನಯನತಾರಾ ಸೆಹಗಲ್. ವಯಸ್ಸು 91 ವರ್ಷ. ದಿವಂಗತ ರಂಜೀತ್ ಸೀತಾರಾಂ ಪಂಡಿತ್ ಮತ್ತು ವಿಜಯಲಕ್ಷ್ಮಿ ಪಂಡಿತ್ ಅವರ ಮಗಳು. ಅಂದಹಾಗೆ ವಿಜಯಲಕ್ಷ್ಮಿ ಅವರು ಜವಾಹರಲಾಲ್ ನೆಹರೂ ಅವರ ತಂಗಿ. ಜವಾಹರ್‌ಗಿಂತ ಹನ್ನೆರಡು ವರ್ಷ ಚಿಕ್ಕವರು. ಸ್ವಾತಂತ್ರ್ಯ ಬಂದ ನಂತರ 1955ರಲ್ಲಿ ಪ್ರಧಾನಿ ನೆಹರೂ ಬ್ರಿಟನ್‍ಗೆ ಭೇಟಿ ನೀಡಿದಾಗ ಅಲ್ಲಿನ ಭಾರತೀಯ ಹೈಕಮಿಷನರ್ ವಿಜಯಲಕ್ಷ್ಮಿ ಪಂಡಿತ್. ಸೋದರನಿಗೆ ಮುತ್ತಿಟ್ಟು ಬರಮಾಡಿಕೊಳ್ಳುತ್ತಾರೆ. ಮಗಳು ನಯನತಾರಾ ಕೂಡ ಮಾಮನಿಗೆ ಮುತ್ತಿಡುತ್ತಾರೆ.

Photo credit: Alt News

ಸ್ವಾತಂತ್ರ್ಯಯೋಧ ತಂದೆ ರಂಜೀತ್ ಸೀತಾರಾಂ ಪಂಡಿತ್ ನಾಲ್ಕನೆಯ ಸಲ ಬ್ರಿಟಿಷರ ಸೆರೆವಾಸದಿಂದ ಹೊರಬಂದವರು ಬದುಕಿ ಉಳಿಯುವುದಿಲ್ಲ. ತಂದೆಯಿಲ್ಲದ ನಯನತಾರಾ ಮಾಮ ನೆಹರೂ ಮನೆಯಲ್ಲಿ ಇಂದಿರಾಗಾಂಧಿ ಜೊತೆಗೆ ಮತ್ತೊಬ್ಬ ಮಗಳಂತೆ ಬೆಳೆದವರು. ಎರಡನೆಯ ಪೋಟೋ ನೆಹರೂ ಅಮೆರಿಕಾಗೆ ಭೇಟಿ ನೀಡಿದಾಗಿನದು. ಆಗಲೂ ಅಲ್ಲಿನ ಭಾರತೀಯ ರಾಜದೂತರಾಗಿದ್ದ ವಿಜಯಲಕ್ಷ್ಮಿ ವಿಮಾನ ನಿಲ್ದಾಣದಲ್ಲಿ ಅಣ್ಣನೂ ಆದ ಪ್ರಧಾನಿಯನ್ನು ಅಪ್ಪಿ ಮುತ್ತಿಟ್ಟು ಸ್ವಾಗತಿಸುತ್ತಾರೆ. ಇಂದಿರಾಗಾಂಧಿ ಸರ್ವಾಧಿಕಾರಿಯಂತೆ ನಡೆದುಕೊಂಡು ತುರ್ತುಪರಿಸ್ಥಿತಿ ಹೇರಿದ್ದನ್ನು ವಿಜಯಲಕ್ಷ್ಮಿ ಮತ್ತು ನಯನತಾರಾ ಇಬ್ಬರೂ ವಿರೋಧಿಸಿ ಆಕೆಯ ಹಗೆ ಕಟ್ಟಿಕೊಳ್ಳುತ್ತಾರೆ. ಇಂತಹ ತಾಯಿ ಮಗಳನ್ನು ನೆಹರೂ ಪ್ರೇಮಿಗಳನ್ನಾಗಿ ಮಾಡಲಾಗಿದೆ. ಅಂತರ್ಜಾಲದಲ್ಲಿ ಈ ಚಿತ್ರಗಳನ್ನು ಹುಚ್ಚೆದ್ದು ಹಂಚಿಕೊಳ್ಳಲಾಗಿದೆ. ಮನಮೋಹನ ವೈದ್ಯ ಅವರು ಹೇಳುವ ಈ “ಕೆಲವು ರಾಜಕೀಯ ವಿಭಜಕ ಶಕ್ತಿಗಳ” ಆಟಾಟೋಪಗಳಿಗೆ ಎಣೆಯೇ ಇಲ್ಲ. ಈ ಶಕ್ತಿಗಳು ಸಮಾಜಮುಖಿ ಪತ್ರಕರ್ತರನೇಕರಿಗೆ ಪ್ರಾಣಬೆದರಿಕೆ ಹಾಕುತ್ತವೆ. ಹಿಂದೂ-ಮುಸ್ಲಿಮ್ ಜಗಳ ಹಚ್ಚುವವರು ಮತ್ತು ಅದನ್ನೇ ಹಗಲಿರುಳು ತಿರುಚಿ ತೋರಿಸಿ ಟಿಆರ್‍ಪಿ ಹಿಂದೆ ಓಡುವ ಟಿವಿ ಚಾನೆಲ್‍ಗಳನ್ನು ತಿವಿದು, ಬಡತನ, ನಿರುದ್ಯೋಗ, ಅನ್ಯಾಯ, ಅಸಮಾನತೆಗಳನ್ನೇ ಸುದ್ದಿ ಮಾಡಿ ಬಿಂಬಿಸುವ ರವೀಶ್ ಕುಮಾರ್ ಅವರಂತಹ ಪ್ರಾಮಾಣಿಕ ಪತ್ರಕರ್ತನನ್ನು ಅಟ್ಟಾಡಿಸಿಕೊಂಡು ಪಾಕಿಸ್ತಾನ ತಲುಪುವ ತನಕ ಓಡಿಸಿ ಗುಂಡಿಕ್ಕುವುದಾಗಿ ಬೆದರಿಸುವ ವಿಡಿಯೋ ಕಳಿಸಿ ಮೀಸೆ ತಿರುವುತ್ತವೆ. ಗೌರಿ ಲಂಕೇಶರಂತಹ ಪತ್ರಕರ್ತರನ್ನು ಗುಂಡಿಕ್ಕಿ ಕೊಲ್ಲುತ್ತವೆ. ರಾಣಾ ಆಯೂಬ್ ಅವರಂತಹ ಪತ್ರಕರ್ತೆಯರ ಮುಖದ ಚಿತ್ರವನ್ನು ಅಶ್ಲೀಲ ಕಾಮಕೇಳಿಯ ವಿಡಿಯೋಗಳಿಗೆ ಅಂಟಿಸಿ ಹಂಚಿ ಅಂತರ್ಜಾಲದಲ್ಲಿ ವೈರಲ್ ಮಾಡುತ್ತವೆ. ನಾಳೆ ತಾಯಿ ಮಗುವನ್ನು ತಬ್ಬಿ ಮುತ್ತಿಟ್ಟರೂ ಪಾಪ ಎನ್ನಬಹುದು ಈ ವಿಭಜಕ ಶಕ್ತಿಗಳು. ಹೌದು, ಮನಮೋಹನ್ ವೈದ್ಯರು ಹೇಳುವುದು ಪರಮ ಸತ್ಯ.


ಇದನ್ನೂ ಓದಿ: ಬದುಕಿದ್ದರೆ ಗೌರಿ ಮೇಡಂ ಹೀಗನ್ನುತ್ತಿದ್ದರೇನೋ.. – ಸಾಕ್ಯ ಸಮಗಾರ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...