ಮೂಲ: ಜಿಗ್ನೇಶ್ ಮೇವಾನಿ, ಮೀನಾ ಕಂದಸ್ವಾಮಿ
ಅನುವಾದ: ಅಲ್ಲಮ, ಬೆಂಗಳೂರು
ಕೋವಿಡ್ 19 ವೈರಸ್ ಎಲ್ಲೆಡೆ ಹರಡಿ ಜಗತ್ತನ್ನು ತಲ್ಲಣಗೊಳಿಸುತ್ತಿರುವ ಸಂದರ್ಭದಲ್ಲಿ ಜೈಲುಗಳು ಸಾಂಕ್ರಾಮಿಕ ರೋಗಗಳನ್ನು ಹರಡುವ ಹಾಟ್‌ಸ್ಪಾಟ್‌ಗಳಾಗಿಬಿಟ್ಟಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ನಮ್ಮ ಸುಪ್ರೀಂ ಕೋರ್ಟ್ ಸಹ ಜೈಲಲ್ಲಿರುವ ವಿಚಾರಣಾಧೀನ ಖೈದಿಗಳನ್ನು ಮತ್ತು ಅಪರಾಧಿಗಳನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಎಂಬ ನಿರ್ದೇಶನ ನೀಡಿದೆ. ಲಾಕ್‌ಡೌನ್‌ನಿಂದಾಗಿ ಭಾರತ ದೇಶ ಸ್ತಬ್ಧವಾಗಿದೆ. ನೂರಾರು, ಸಾವಿರಾರು ವಲಸೆ ಕಾರ್ಮಿಕರು ಲಾಕ್‌ಡೌನ್‌ನಲ್ಲಿ ಸಿಕ್ಕಿಹಾಕಿಕೊಂಡು ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಮುಖ್ಯವಾದ ಸಂಗತಿ ಏನೆಂದರೆ, ಭಾರತದ ಅತ್ಯಂತ ಮಹತ್ವದ ಚಿಂತಕರಾದ ಡಾ. ಆನಂದ ತೇಲ್ತುಂಬ್ಡೆಯವರನ್ನು ಭಾರತದ ಪ್ರಭುತ್ವ ಪ್ರಾಸಿಕ್ಯೂಟ್ ಮಾಡುವುದನ್ನು ನಿಲ್ಲಿಸಲು ಯಾವ ವೈರಸ್ ಕೈಲೂ ಸಾಧ್ಯವಾಗಲಿಲ್ಲ. ನಮ್ಮನ್ನು ಆಳುತ್ತಿರುವ ನವಉದಾರವಾದಿ ಹಿಂದುತ್ವದ ಆಡಳಿತವು ತೇಲ್ತುಂಬ್ಡೆಯವರನ್ನು ಏಕೆ ತುಂಬಾ ಅಪಾಯಕಾರಿ ಎಂದು ಪರಿಗಣಿಸಿತು?
2018ರಲ್ಲಿ ಭೀಮಾಕೋರೆಗಾವನಲ್ಲಿ ಮೊದಲು ಹಿಂಸಾಚಾರ ನಡೆದಾಗ, ಪೋಲೀಸ್ ತನಿಖೆ ಮುಖ್ಯವಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರಾದ ಸಂಭಾಜಿ ಭಿಡೆ ಮತ್ತು ಮಿಲಿಂದ್ ಏಕಬೋಟೆ ಮೇಲೆ ಮಾತ್ರ ಕೇಂದ್ರೀಕೃತಗೊಂಡಿತ್ತು. ಸಂಘಪರಿವಾರಕ್ಕೆ ಸೇರಿದ ಬಲಪಂಥೀಯರು ಪೋಲೀಸರ ಈ ತನಿಖೆಯಲ್ಲಿ ತಪ್ಪುಗಳಿವೆ ಎಂಬ ವರದಿಯನ್ನು ಬಿಡುಗಡೆ ಮಾಡಿದರು. ಇದರ ಜೊತೆಗೆ ಎಲ್ಗಾರ್ ಪರಿಷದ್ ಮೇಲೆ ಸುಳ್ಳು ಆಪಾದನೆಗಳನ್ನು ಹುಟ್ಟು ಹಾಕಿದರು. ಎಲ್ಗಾರ್ ಪರಿಷದ್ ಎಂಬುದು ಹಲವು ಪ್ರಗತಿಪರ ಮತ್ತು ಅಂಬೇಡ್ಕರ್‌ವಾದಿ ಕಾರ್ಯಕರ್ತರ ಒಕ್ಕೂಟ. ಈ ಪ್ರಗತಿಪರರು ಪ್ರತಿ ವರ್ಷ ಭೀಮಕೊರೆಗಾವ್‌ನಲ್ಲಿ ಸೇರುತ್ತಾರೆ. ಬಲಪಂಥೀಯ ಜನ ಎಲ್ಗಾರ್ ಪರಿಷದ್‌ಗೆ ಮಾವೋವಾದಿಗಳ ಜೊತೆ ಸಂಪರ್ಕಗಳಿವೆ ಎಂದು ಆಪಾದನೆ ಮಾಡಿದರು.
ಎಲ್ಲರಿಗೂ ಗೊತ್ತಿರುವಂತೆ ಭಾರತದಲ್ಲಿ ಮಾವೋವಾದಿ ಸಂಘಟನೆಗಳನ್ನು ನಿಷೇಧಿಸಲಾಗಿದೆ. ಅಂಬೇಡ್ಕರ್‌ವಾದಿ ದಲಿತರು ಭೀಮಾಕೊರೆಗಾವ್‌ನಲ್ಲಿ ವಾರ್ಷಿಕವಾಗಿ ಆಚರಿಸುವ ಈ ಸಂಸ್ಮರಣಾ ದಿನವನ್ನು ಮಾವೋವಾದಿ ಆಚರಣೆ ಎಂದು ಯಾಕಾಗಿ ತಿರುಚಲಾಯಿತು? ಈ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಎಲ್ಲರಿಗೂ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಅದೇನೆಂದರೆ, ಕಾನೂನು ಮತ್ತು ಸುವ್ಯವಸ್ಥೆಯ ನೆಪಗಳನ್ನೊಡ್ಡಿ ದಲಿತರನ್ನು ಮತ್ತು ಅಂಬೇಡ್ಕರ್‌ವಾದಿಗಳನ್ನು ಕಾನೂನಿನ ಕುಣಿಕೆಯಲ್ಲಿ ಸಿಲುಕಿಸುವ ಅತ್ಯಂತ ವಂಚನೆಯ ಮತ್ತು ದುರುದ್ದೇಶಗಳ ಹುನ್ನಾರ ಇದರ ಹಿಂದೆ ಕೆಲಸ ಮಾಡುತ್ತಿದೆ.
ನಂತರ ತತ್‌ಕ್ಷಣದಲ್ಲಿ `ಮಾವೋವಾದಿ’ ಎಂಬ ಪದದ ಬಳಕೆಯನ್ನೂ ಇವರು ಕೈಬಿಟ್ಟರು. ಭೀಮಕೊರೆಗಾವ್‌ನ ಕಾರ್ಯಕರ್ತರನ್ನು ಬಂಧಿಸಿದ್ದನ್ನು ಸಮರ್ಥಿಸಿಕೊಳ್ಳಲು ಮತ್ತು ಅದಕ್ಕೆ ಸಾರ್ವಜನಿಕ ಸಮ್ಮತಿಯನ್ನು ಹುಟ್ಟುಹಾಕಲು ಪ್ರಭುತ್ವವು `ನಗರ ನಕ್ಸಲ್’ ಎಂಬ ಪದವನ್ನು ಚಲಾವಣೆಗೆ ತಂದಿತು. ನಗರಗಳಲ್ಲಿನ ಬುದ್ಧಿಜೀವಿಗಳನ್ನು ಮತ್ತು ಪ್ರಗತಿಪರ ಕಾರ್ಯಕರ್ತರನ್ನು ಬೇಟೆಯಾಡಲು `ನಗರ ನಕ್ಸಲ್’ ಎಂಬ ಪರಿಭಾಷೆಯು ಪ್ರಭುತ್ವಕ್ಕೆ ಅನುಕೂಲ ಕಲ್ಪಿಸಿತು. ಎಡಪಂಥದ ಕುರಿತು ಚಿಕ್ಕ ಸಹಾನುಭೂತಿ ಇಟ್ಟಕೊಂಡ ಯಾರನ್ನಾದೂ ಅಗತ್ಯವಿದ್ದರೆ ಈ ನಗರ ನಕ್ಸಲ್ ಎಂಬ ವ್ಯೂಹದೊಳಕ್ಕೆ ಎಳೆದುಬಿಡಬಹುದು. ಈ ಒಂದು ಸವಲತ್ತು ಬಲಪಂಥೀಯರಿಗೆ ಸಿಕ್ಕ ತಕ್ಷಣ ಅವರು `ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಎಡಪಂಥೀಯ ಶಕ್ತಿಗಳು ಹುನ್ನಾರು ಮಾಡುತ್ತಿವೆ’ ಎಂಬ ಪತ್ರಿಕೆಯ ಹೆಡ್‌ಲೈನ್‌ಗಳನ್ನು ತಾವೇ ಸೃಷ್ಟಿಸುವಷ್ಟು ಪ್ರಬಲರಾದರು. ಈ ವಿಕ್ಷಿಪ್ತ ಸಂಚಿನ ಆಧಾರದ ಮೇಲೆ ಕಾರ್ಮಿಕ ಹಕ್ಕುಗಳ ಪರವಾದ ನ್ಯಾಯವಾದಿಗಳಾದ ಗೌರವಾನ್ವಿತ ಸುಧಾ ಭಾರಧ್ವಾಜ ಅವರನ್ನು, ಇಂಗ್ಲೀಷ್ ಪ್ರಾಧ್ಯಾಪಕರಾದ ಶೋಮ ಸೇನ್, ನ್ಯಾಯವಾದಿಗಳಾದ ಸುರೇಂದ್ರ ಗಾಡ್ಲಿಂಗ್ ಮತ್ತು ವೆರ್ನಾನ್ ಗೋನ್ಸಾಲ್ವೆ ಅವರನ್ನು, ಸಂಶೋಧಕ ಮತ್ತು ಸಾಮಾಜಿಕ ಕಾರ್ಯಕರ್ತ ಮಹೇಶ್ ರಾವತ್, ಪತ್ರಕರ್ತ ಅರುಣ್ ಫರ‍್ರಿರಾ, ಸಂಪಾದಕರಾದ ಸುಧೀರ್ ಧಾವ್ಲೆ, ರಾಜಕೀಯ ಖೈದಿಗಳ ಹಕ್ಕುಗಳ ಪರ ಹೋರಾಟಗಾರ ರೋನಾ ವಿಲ್ಸನ್ ಮತ್ತು ಎಲ್ಲರೂ ಇಷ್ಟಪಡುವ ಎಂಬತ್ತರ ಇಳಿವಯಸ್ಸಿನ ಪ್ರಸಿದ್ಧ ತೆಲುಗು ಕವಿ ವರವರ ರಾವ್ ಅವರನ್ನು ಈಗಾಗಲೆ ಅವರು ಜೈಲಿಗೆ ಕಳಿಸಿದ್ದಾರೆ.
ಪೋಲೀಸರ ಚಾರ್ಜ್‌ಶೀಟ್‌ನಲ್ಲಿ ಇನ್ನು ಇಬ್ಬರು ಸಾಮಾಜಿಕ ಕಾರ್ಯಕರ್ತರ ಹೆಸರನ್ನು ಉಲ್ಲೇಖಿಸಲಾಗಿತ್ತು, ಅದು ಆನಂದ ತೇಲ್ತುಂಬ್ಡೆ ಮತ್ತು ಆಕ್ಟಿವಿಷ್ಟ್ ಪತ್ರಕರ್ತ ಗೌತಮ್ ನವಲಖ. ಈ ಇಬ್ಬರಿಗೂ ಏಪ್ರಿಲ್ 14 ಒಳಗಾಗಿ National Investigation Agency ಮುಂದೆ ಶರಣಾಗಲು ಹೇಳಲಾಗಿತ್ತು. ಸದರಿ ಪ್ರಕರಣವು ಅಸಾಧಾರಣ ಅಸಂಬದ್ಧತೆಗಳಿಂದ ರೂಪುಗೊಂಡಿತು. ಈ ಪ್ರಕರಣದ ಅಸಂಬದ್ಧ ನಿರೂಪಣೆಯನ್ನೇ ಆಧರಿಸಿ ಯಾರನ್ನಾದರೂ ಎಲ್ಲಿಬೇಕಾದರೂ ಕಾನೂನಿನ ಇಕ್ಕಟ್ಟಿಗೆ ಸಿಲುಕಿಸಬಹುದಾಗಿತ್ತು. ಹೈದರಾಬಾದಿನ ಪ್ರಾಧ್ಯಾಪಕ ಡಾ. ಸತ್ಯನಾರಾಯಣ, ದೆಹಲಿಯ ಪ್ರಾಧ್ಯಾಪಕ ಡಾ. ಹನಿಬಾಬು ಅವರ ಮನೆಗಳನ್ನು ಶೋಧಿಸಲಾಯಿತು. ಮಾಹಿತಿಗಾಗಿ ಅವರ ಕಂಪ್ಯೂಟರ್‌ಗಳನ್ನು ಜಾಲಾಡಲಾಯ್ತು. ದುಃಖದ ಸಂಗತಿ ಎಂದರೆ, ನಾವು ನೋಡುತ್ತಿರುವಂತೆ ಪೋಲೀಸರ ಈ ಬಂಧನಗಳು ಇಲ್ಲಿಗೆ ಕೊನೆಗೊಳ್ಳಲಾರವು.
ಆನಂದ್ ತೇಲ್ತುಂಬ್ಡೆಯವರನ್ನು ಯಾಕೆ ಹೀಗೆ ಕೆಟ್ಟದಾಗಿ ಟಾರ್ಗೆಟ್ ಮಾಡಲಾಗಿದೆ? ಜೈಲುಗಳು ಸಾಂಕ್ರಾಮಿಕ ರೋಗಗಳನ್ನು ಹರಡುತ್ತವೆ ಎಂದು ಸುಪ್ರೀಂ ಕೋರ್ಟ್ ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಖೈದಿಗಳನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಿರುವಾಗ, ಈ ಸರ್ಕಾರ ತೇಲ್ತುಂಬ್ಡೆ ಮತ್ತು ಗೌತಮ್ ನವಲಖ ಅವರನ್ನು ಏಕೆ ಜೈಲಿಗೆ ಕಳಿಸಲು ನಿರ್ಧರಿಸಿದೆ?
ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು, ಅಂಬೇಡ್ಕರ್ ಅವರ ಕುಟುಂಬದ ಅಳಿಯನಾದ ತೇಲ್ತುಂಬ್ಡೆಯವರನ್ನು ಗುರಿಯಟ್ಟುಕೊಂಡು ದಾಳಿ ನಡೆಸುತ್ತಿರುವ ಹುನ್ನಾರದ ಬಗ್ಗೆ ಈಗಾಗಲೆ ಮಾತನಾಡಿದ್ದಾರೆ. ಆರ್‌ಎಸ್‌ಎಸ್-ಬಿಜೆಪಿ ಮತ್ತು ಸಂಘಪರಿವಾರದ ಬಲಪಂಥೀಯ ಸಂಘಟನೆಗಳ ಗುಪ್ತ ಕಾರ್ಯತಂತ್ರವೇನೆಂದರೆ, ಬಾಬಾ ಸಾಹೇಬರ ಪರಂಪರೆಯ ಮೇಲೆ ಆಕ್ರಮಣ ಮಾಡುವುದೇ ಆಗಿದೆ. ಆನಂದ್ ತೇಲ್ತುಂಬ್ಡೆ ಕೊರೇಗಾವ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ, ಮೇಲಾಗಿ ಆ ಕಾರ್ಯಕ್ರಮದ ಸಂಘಟಕ ಸಮಿತಿಯಲ್ಲೂ ತೇಲ್ತುಂಬ್ಡೆಯವರು ಇರಲಿಲ್ಲ, ಹಾಗಿದ್ದ ಮೇಲೆ ತೇಲ್ತುಂಬ್ಡೆಯವರನ್ನು ಯಾಕೆ ಬೇಟೆಯಾಡಲಾಗುತ್ತಿದೆ? ಏಕೆಂದರೆ ಅವರೇ ವಿಶ್ಲೇಷಣೆ ಮಾಡಿರುವ ಪ್ರಕಾರ, ಈ ನವಉದಾರವಾದಿ ಸರ್ಕಾರ ಮುಕ್ತವಾಗಿ ಬಲಪಂಥೀಯ ರಾಜಕಾರಣದ ಪರವಾಗಿವಾಗಿ ಕೆಲಸ ಮಾಡುತ್ತಿದೆ.
ಅಂಬೇಡ್ಕರ್ ಅವರ ಹಲವಾರು ಅನುಯಾಯಿಗಳಲ್ಲಿ ಆನಂದ್ ತೇಲ್ತುಂಬ್ಡೆ ಅವರೂ ಒಬ್ಬರು. ತೇಲ್ತುಂಬ್ಡೆಯವರು ಹಿಂದುತ್ವದ ರಾಜಕಾರಣವನ್ನು ಸಾಮಾಜಿಕ ಆರ್ಥಿಕ ನೆಲೆಗಳಲ್ಲಿ ಹೇಗೆ ಮುಖಾಮುಖಿಯಾಗಿಸಿ ಹೋರಾಟಗಳನ್ನು ರೂಪಿಸಬೇಕು ಎಂಬುದರ ಕುರಿತು ಆಳವಾಗಿ ಅಧ್ಯಯನ ಮಾಡಿದ್ದಾರೆ. ಒಂದೆಡೆ, ಸಂಘಪರಿವಾರದ ಜಾತಿವಾದಿ ಬ್ರಾಹ್ಮಣಿಕೆಯನ್ನು ಬಯಲಿಗೆಳೆದಿದ್ದಲ್ಲದೆ, ಇನ್ನೊಂದೆಡೆ, ನವಉದಾರವಾದಿ ಹಿಂದುತ್ವದ ಜನವಿರೋಧಿ ಆರ್ಥಿಕ ನೀತಿಗಳನ್ನು ಪಟ್ಟುಹಿಡಿದು ವಿಶ್ಲೇಷಿಸಿದ್ದಾರೆ. ಅವರು ಇತ್ತೀಚೆಗೆ Republic of Caste: Thinking Equality in the Time of Neoliberal Hindutva ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ, ಅಂಬೇಡ್ಕರ್ ಅವರ ಪ್ರಧಾನ ಆಶಯಗಳಾದ ಜಾತಿವಿನಾಶ ಮತ್ತು ಸಮಾಜವಾದಿ ಪ್ರಭುತ್ವವನ್ನು ಅಸ್ತಿತ್ವಕ್ಕೆ ತರುವುದರ ಮೂಲಕ ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ಹೇಗೆ ಸಾಕಾರಗೊಳಿಸಬಹುದು ಎಂಬುದನ್ನು ವಿಶ್ಲೇಷಿಸಿದ್ದಾರೆ.
ತೇಲ್ತುಂಬ್ಡೆ, ಈ ಕೃತಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಖರ ಸಮಾಜವಾದಿ ತತ್ವವನ್ನು ಹೀಗೆ ಉಲ್ಲೇಖಿಸಿದ್ದಾರೆ, `ಈ ದೇಶದಲ್ಲಿ ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಇರಬೇಕೆಂದರೆ, ಕೈಗಾರಿಕೆಗಳ ರಾಷ್ಟ್ರೀಕರಣವಾಗಬೇಕು, ಭೂಮಿಯನ್ನು ರಾಷ್ಟ್ರೀಕರಣಗೊಳಿಸಬೇಕು. ನನ್ನ ದೃಷ್ಟಿಕೋನದಲ್ಲಿ ಪ್ರಭುತ್ವ ಈ ಕುರಿತು ಅತ್ಯಂತ ಸ್ಪಷ್ಟವಾದ ನಿರ್ಣಯಗಳನ್ನು ತೆಗೆದುಕೊಳ್ಳಬೇಕೆಂದು ನಾನು ನಿರೀಕ್ಷಿಸುತ್ತೇನೆ. ನನಗೆ ಅರ್ಥವಾಗುತ್ತಿಲ್ಲ, ಭವಿಷ್ಯದ ಸರ್ಕಾರವು ಸಮಾಜವಾದಿ ಆರ್ಥಿಕತೆಯನ್ನು ಅಳವಡಿಸಿಕೊಳ್ಳದೇ ಇದ್ದ ಪಕ್ಷದಲ್ಲಿ ಅದು ಹೇಗೆ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ನ್ಯಾಯಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ.’ (ಡಿಶಂಬರ್ 17, 1946)
ಇದೇ ಲೇಖನದಲ್ಲಿ ಮುಂದುವರೆದಂತೆ ತೇಲ್ತುಂಬ್ಡೆ, ಸಮಾಜವಾದದ ಯಶಸ್ಸಿಗೆ ಜಾತಿವಿರೋಧಿ ಕ್ರಾಂತಿಯ ಮಹತ್ವವನ್ನು ಹೇಳಲು ಬಾಬಾ ಸಾಹೇಬರನ್ನು ಉಲ್ಲೇಖಿಸುತ್ತಾರೆ, `ಜನಕ್ಕೆ ಕ್ರಾಂತಿಯ ನಂತರ ಆಗುವ ರಾಜಕೀಯ ಬೆಳವಣಿಗೆಗಳಲ್ಲಿ ತಮ್ಮನ್ನು ಸಮಾನವಾಗಿ ನಡೆಸಿಕೊಳ್ಳುವ ಭರವಸೆ ಇಲ್ಲದೇ ಇದ್ದಲ್ಲಿ, ಸಂಪತ್ತಿನ ಸಮಾನ ಹಂಚಿಕೆಗಾಗಿ ನಡೆಯುವ ಕ್ರಾಂತಿಯಲ್ಲಿ ಜನ ಪಾಲ್ಗೊಳ್ಳದೇ ಹೋಗಬಹುದು. ಜಾತಿ ಮತ್ತು ಜನಾಂಗೀಯ ತಾರತಮ್ಯ ಇರುವುದಿಲ್ಲ ಎಂಬ ಭರವಸೆ ಅವರಲ್ಲಿ ಮೂಡಬೇಕು. ಕ್ರಾಂತಿಯನ್ನು ಮುನ್ನೆಡೆಸುವ ಸಮಾಜವಾದಿಯೊಬ್ಬ ಜಾತಿ ವ್ಯವಸ್ಥೆಯಲ್ಲಿ ತನಗೆ ನಂಬಿಕೆ ಇಲ್ಲ ಎಂಬ ಭರವಸೆಯನ್ನು ನೀಡಿದರೆ ಸಾಲದು. ಈ ಭರವಸೆಯು ಅಂತರಾಳದ ಬದ್ಧತೆಯ ಮೂಲಕ ವ್ಯಕ್ತವಾದ ಭರವಸೆಯಾಗಿರಬೇಕು. ಆತನ ದೇಶದ ನಾಗರಿಕರ ಮನೋಗತವೂ ಸಹ ಮತ್ತೊಬ್ಬರನ್ನು ವೈಯಕ್ತಿಕ ಸಮಾನತೆ ಮತ್ತು ಭಾತೃತ್ವದ ಮೂಲಕ ಪರಿಭಾವಿಸುವ ಸಮಾನತೆಯ ತತ್ವದ ನೆಲೆಯಲ್ಲಿ ರೂಪುಗೊಳ್ಳಬೇಕು’
ಇದಲ್ಲದೆ, ಸಮಾಜವಾದದ ಜೊತೆಗೆ ಜಾತಿವಿನಾಶದ ಸಿದ್ಧಾಂತವನ್ನು, ಅದರ ಅನುಷ್ಠಾನದ ಕಾರ್ಯಕ್ರಮಗಳನ್ನು ರೂಪಿಸಿದ್ದು ದಲಿತ ಹಿನ್ನೆಲೆಯ ವಿದ್ವಾಂಸರು, ಮತ್ತು ವಿಶಾಲ ಅರ್ಥದಲ್ಲಿ ಇಂಡಿಯಾದ ಬಹು ಸಂಖ್ಯೆಯ ದುಡಿವ ವರ್ಗವನ್ನು ಇದೇ ದಲಿತ ಬಹುಜನರು ಪ್ರತಿನಿಧಿಸುತ್ತಾರೆ. ಇದರ ಅರ್ಥ ಜಾತಿ ವ್ಯವಸ್ಥೆಯನ್ನು ಮುಖಾಮುಖಿಯಾಗುವುದೆಂದರೆ, ಅದು ಶೋಷಕ ಮತ್ತು ಅನಿಯಂತ್ರಿತ ಬಂಡವಾಳಶಾಹಿ ವ್ಯವಸ್ಥೆಯನ್ನು ಮುಖಾಮುಖಿ ಮಾಡುವ ಸವಾಲನ್ನು ನಮ್ಮ ಮುಂದಿಡುತ್ತದೆ.
ಬಾಬಾ ಸಾಹೇಬರ ಪ್ರಖರ ವೈಚಾರಿಕತೆಯಾದ ಸಮಾಜವಾದಿ, ಜಾತಿವಿರೋಧಿ ತತ್ವವು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ನವಉದಾರವಾದಿ ಹಿಂದುತ್ವವನ್ನು ತೀವ್ರವಾಗಿ ವಿರೋಧಿಸುತ್ತದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ನವಉದಾರವಾದಿ ಹಿಂದುತ್ವವು, ಸಮಾಜದಲ್ಲಿರುವ ಜಾತಿ, ಲಿಂಗ ಮತ್ತು ವರ್ಗ ಅಸಮಾನತೆಗಳನ್ನು ಬೆಳೆಸಲು ಹವಣಿಸುತ್ತಿರುತ್ತದೆ. ಸಾಮಾಜಿಕ ಹಿಂಚಲನೆಗಾಗಿ ಅದು ಭಾರತವನ್ನು ಕೋಮುಗಳ ಆಧಾರದಲ್ಲಿ ಧ್ರುವೀಕರಿಸುವುದರಲ್ಲಿ ಮತ್ತು ಒಡೆಯುವುದರಲ್ಲಿ ಸದಾ ನಿರತವಾಗಿರುತ್ತದೆ, ಅದಕ್ಕಾಗಿ ಅದು ಯಾವತ್ತೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಳ್ಳುತ್ತಲೇ ಇರುತ್ತದೆ.
ಆರ್‌ಎಸ್‌ಎಸ್ ತನ್ನ ಹುಟ್ಟಿನಿಂದಲೇ ಮನುವಾದವನ್ನು ಎತ್ತಿ ಹಿಡಿಯುತ್ತ, ಬ್ರಿಟಿಶ್ ಸಾಮ್ರಾಜ್ಯಶಾಹಿಯ ಅಧೀನ ವಿದೂಷಕನಂತೆ ಕಾರ್ಯನಿರ್ವಹಿಸುತ್ತ ಬಂದಿದೆ. ಬ್ರಿಟೀಶ್ ವಸಾಹತು ಆಡಳಿತವು ತನ್ನ ಸ್ವಹಿತಾಸಕ್ತಿಗಾಗಿ ಭಾರತದ ನಿಸರ್ಗ ಮಾನವ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾಗ, ಆರ್‌ಎಸ್‌ಎಸ್ ಮುಖ್ಯಸ್ಥ ಎಮ್ ಎಸ್ ಗೋಲ್ವಾಲ್ಕರ್ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮ ತೀವ್ರವಾಗಿದ್ದ ಸಂದರ್ಭದಲ್ಲಿ ‘ಹಿಂದುಗಳೆ, ಬ್ರಿಟಿಶರ ವಿರುದ್ಧ ಹೋರಾಡುವುದಕ್ಕಾಗಿ ನಿಮ್ಮ ಶಕ್ತಿಯನ್ನು ವ್ಯಯಿಸದಿರಿ, ನಿಮ್ಮ ಶಕ್ತಿಯನ್ನು ಉಳಿಸಿಕೊಳ್ಳಿ, ನಾವು ನಮ್ಮ ಆಂತರಿಕ ಶತೃಗಳಾದ ಮುಸ್ಲಿಮ್, ಕ್ರಿಶ್ಚಿಯನ್ ಮತ್ತು ಕಮ್ಯುನಿಷ್ಟರ ವಿರುದ್ಧ ಹೋರಾಡಬೇಕಿದೆ’ ಎಂದು ಕರೆ ನೀಡಿದ್ದರು.
ಆದರೆ, ಹಿಂದುಗಳನ್ನೂ ಒಳಗೊಂಡಂತೆ ದೇಶಪ್ರೇಮಿ ಭಾರತೀಯರು ಹಿಂದುತ್ವದ ದೇಶದ್ರೋಹಿ ಕರೆಯನ್ನು ಕೇಳಿಸಿಕೊಳ್ಳದೆ ವಸಾಹತು ಆಡಳಿತದ ವಿರುದ್ಧ ಹೋರಾಡಿದರು. ಭಾರತ ಸ್ವಾತಂತ್ರ್ಯವನ್ನು ಗಳಿಸಿತು. ಇನ್ನೊಂದು ಕಡೆ ಗೋಲ್ವಾಲ್ಕರ್ ಮನುವನ್ನು ಹೊಗಳಿ ಹೀಗೆ ಬರೆದಿದ್ದಾರೆ, ‘ಮೊಟ್ಟಮೊದಲಿಗೆ ಜಗತ್ತಿಗೆ ಶ್ರೇ಼ಷ್ಟ ಕಾನೂನುಗಳನ್ನು ನೀಡಿದ್ದು ಮನು. ಅವನ ಸಂಹಿತೆಯ ಪ್ರಕಾರ, ಈ ಭೂಮಿಯ ಮೇಲೆ `ಮೊದಲು ಜನಿಸಿದ’, ಈ ದೇಶದ ಬ್ರಾಹಣರ ಪವಿತ್ರ ಪಾದಗಳ ಬಳಿ ಬಂದು ಜಗತ್ತಿನ ಎಲ್ಲ ಜನರು ತಮ್ಮ ಕರ್ತವ್ಯಗಳನ್ನು ಕಲಿಯಬೇಕಿದೆ’
ಭಾರತದ ಸಂವಿಧಾನದ ಆರ್ಟಿಕಲ್ 15ರ ಕುರಿತು ಸಂಘಪರಿವಾರಕ್ಕೆ ಸಹಮತವಿಲ್ಲ. ಏಕೆಂದರೆ, ಆರ್ಟಿಕಲ್ 15 ಧರ್ಮ, ಜನಾಂಗ, ಜಾತಿ, ಜನ್ಮಸ್ಥಳ ಮತ್ತು ಲಿಂಗಾಧಾರಿತ ತಾರತಮ್ಯಗಳನ್ನು ನಿಷೇಧಿಸುತ್ತದೆ.
ತೇಲ್ತುಂಬ್ಡೆ, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ನವಉದಾರವಾದಿ ಹಿಂದುತ್ವಕ್ಕೆ ಪ್ರತಿಯಾಗಿ ಗೋಡೆಯಂತೆ ನಿಂತಿರುವ ಅಂಬೇಡ್ಕರ್‌ವಾದಿ ಪ್ರಗತಿಪರ ಚಿಂತಕರ ಗುಂಪಿಗೆ ಸೇರಿದವರು. ಜೀವವಿರೋಧಿ ಆರ್‌ಎಸ್‌ಎಸ್‌ನ ಕಣ್ಗಾವಲಲ್ಲಿ ನಡೆಯುತ್ತಿರುವ ಕೇಂದ್ರ ಸರ್ಕಾರವು ಹಿಂದುತ್ವ ಪ್ರಣೀತ ಜಾತಿಯಾಧಾರಿತ, ವರ್ಗ ಅಸಮಾನ, ಪಿತೃಪ್ರಧಾನ ಸಮಾಜದ ಕಡೆಗೆ ಪ್ರತಿಗಾಮಿಯಾಗಿ ನಡೆಯುತ್ತಿದೆ. ತನ್ನ ಈ ಹಿಂಚಲನೆಯನ್ನು ವಿರೋಧಿಸುವ ಪ್ರಗತಿಪರ ಬುದ್ಧಿಜೀವಿಗಳು ಗೋಡೆಯಂತೆ ಅಡ್ಡ ನಿಂತಿದ್ದಾರೆ. ಈ ಗೋಡೆಯನ್ನು ಸರ್ಕಾರ ಒಡೆಯಬೇಕಿದೆ. ತಮ್ಮ ಪ್ರತಿಗಾಮಿ ನಡಿಗೆಯ ವೇಗವನ್ನು ಅವರು ಹೆಚ್ಚಿಸುತ್ತಿದ್ದಾರೆ, ಅದು ನಮ್ಮನ್ನು ಕಗ್ಗತ್ತಲ ಯುಗಕ್ಕೆ ಕೊಂಡೊಯ್ಯುತ್ತದೆ. ಈ ಕಾರಣದಿಂದ ಕೋರೆಗಾವ್ ಹಿಂಸಾಚಾರಕ್ಕೆ ಕಾರಣಕರ್ತರಾದ ಹಿಂದೂ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು, ಈ ಹಿಂಸಾಚಾರದ ಹಿಂದೆ ಮಾವೋವಾದಿಗಳಿದ್ದಾರೆ, ಈ ಹಿಂಸಾಚಾರಕ್ಕೆ ಕಾರಣ ಅಂಬೇಡ್ಕರ್‌ವಾದಿ ಎಲ್ಗಾರ್ ಪರಿಷದ್ ಎಂದು ಹಸಿ ಸುಳ್ಳುಗಳನ್ನು ಹರಡುತ್ತಿದ್ದಾರೆ.
ಆದಾಗ್ಯೂ ಸತ್ಯ ಮೇಲುಗೈ ಸಾಧಿಸುತ್ತದೆ. ಈ ಎಲ್ಲ ಕಾರಣಗಳಿಗಾಗಿ, ದೇಶಪ್ರೇಮಿ ಭಾರತೀಯರು ಮುಖ್ಯವಾಗಿ ಸಂಘಪರಿವಾರದ ಈ ದುಷ್ಟ ನಡೆಯನ್ನು ಖಂಡಿಸಬೇಕಿದೆ. ಸಂಘಪರಿವಾರವು, ಮೋದಿ-ಶಾ ನಾಯಕತ್ವದ ಕೇಂದ್ರ ಸರ್ಕಾರವನ್ನು ಬಳಸಿಕೊಂಡು ತೇಲ್ತುಂಬ್ಡೆಯಂತಹ ಪ್ರಗತಿಪರ ಮತ್ತು ಸಮಾನತಾವಾದಿ ಅಂಬೇಡ್ಕರೈಟ್ ಬುದ್ಧಿಜೀವಿಗಳಿಗೆ ಮಸಿ ಬಳಿಯಲು ಹೊರಟಿದೆ.
ಅಂಬೇಡ್ಕರ್ ಜಯಂತಿಯಂದೇ ನಡೆದ ತೇಲ್ತುಂಬ್ಡೆಯವರ ಯೋಜಿತ ಬಂಧನವು ನಮ್ಮ ರಾಷ್ಟ್ರಕ್ಕೆ ಅಂಟಿದ ಕಳಂಕ. ಅವರನ್ನು ತುರ್ತಾಗಿ ಬಿಡುಗಡೆ ಮಾಡಲು ನಾವು ಒತ್ತಾಯಿಸಬೇಕಿದೆ. ಜೊತೆಗೆ, ಭೀಮಾಕೊರೇಗಾವ್ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಜೈಲಲ್ಲಿರುವ ಸಾಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳನ್ನು ಮತ್ತು ಚಿಂತಕರನ್ನು ಕೂಡಲೇ ಬಿಡುಗಡೆ ಮಾಡಲು ಆಗ್ರಹಿಸಬೇಕಿದೆ.
ಕೃಪೆ: (ದಿ ವೈರ್, 14.04.2020)



ತೇಲ್ತುಂಬ್ಡೆಯವರ ಬಿಡುಗಡೆಗೆ ಒತ್ತಾಯಿಸುವುದಶ್ಟೇ ಅಲ್ಲ, ಕರಾಳ ಶಾಸನ ಯು.ಎ.ಪಿ.ಎ. ವಿರುದ್ಧವೂ ಹೋರಾಟವನ್ನು ಸಂಗಟಿಸಬೇಕು. ಇಲ್ಲದಿದ್ದರೆ ಅನೇಕ ಪ್ರಜ್ಞಾವಂತರು, ಅಂಬೇಡ್ಕರ್ ವಾದಿ ಹೋರಾಟಗಾರರು ಜೈಲುಪಾಲಾಗುತ್ತಾರೆ. ಅಮಾಯಕರ ಮೇಲೆ ಮನುವಾದಿಗಳ ಕ್ರೌರ್ಯ ಮುಂದುವರಿಯುತ್ತದೆ.