“ಶರಣ್ ಪಂಪ್‌ವೆಲ್ ಮಾಡಿರುವ ಭಾಷಣ ಸಂಬಂಧ ನೀವೇಕೆ ತಲೆ ಕೆಡಿಸಿಕೊಳ್ಳುತ್ತೀರಿ?”- ಹೀಗೆ ಕೇಳಿದ್ದು ತುಮಕೂರು ತಿಲಕ್ ಪಾರ್ಕ್ ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ (ಸಿಪಿಐ) ನವೀನ್ ಕುಮಾರ್.
ತುಮಕೂರು ನಗರದಲ್ಲಿ ಭಜರಂಗದಳ ಹಮ್ಮಿಕೊಂಡಿದ್ದ ಶೌರ್ಯ ಯಾತ್ರೆಯಲ್ಲಿ ಮಾತನಾಡಿದ್ದ ವಿಎಚ್‌ಪಿ, ಬಿಜೆಪಿ ಮುಖಂಡ ಶರಣ್ ಪಂಪ್‌ವೆಲ್, ಅಮಾಯಕನಾದ ಫಾಸಿಲ್ ಕೊಲೆಯನ್ನು ಸಮರ್ಥಿಸಿ ಮಾತನಾಡಿದ್ದರಲ್ಲಿ ಸಿಪಿಐಗೆ ಯಾವುದೇ ತಪ್ಪುಗಳು ಕಂಡು ಬಂದಂತೆ ತೋರುತ್ತಿಲ್ಲ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ಅಮಾಯಕ ಫಾಸಿಲ್‌ನನ್ನು ಹಿಂದೂ ಸಂಘಟನೆಗಳು ಕೊಂದಿರುವುದಾಗಿ ಒಪ್ಪಿಕೊಂಡಿರುವ ಶರಣ್, “ಈ ಕೊಲೆಯಲ್ಲಿ ಪರೋಕ್ಷವಾಗಿ ತನ್ನ ಪಾತ್ರವಿದೆ” ಎಂಬ ಸೂಚನೆಯನ್ನೂ ನೀಡಿದ್ದಾರೆಂಬ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಶೌರ್ಯ ಯಾತ್ರೆಯಲ್ಲಿ ಮಾತನಾಡಿದ ಅವರು, “ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾಗಿರುವ ಮುಸ್ಲಿಂ ಜಿಹಾದಿಗಳಿಗೆ ಪ್ರತ್ಯುತ್ತರ ನೀಡಲು, ಸುರತ್ಕಲ್‌ನ ಬಿಸಿ ರಕ್ತದ ಯುವಕರು ಸೇಡು ತೀರಿಸಿಕೊಂಡರು” ಎಂದು ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆಯೇ ಎಂದು ತಿಳಿಯಲು ಸಿಪಿಐ ಅವರಿಗೆ ಕರೆ ಮಾಡಿದಾಗ, “ಅವರೇನೂ ಮಾತನಾಡಿಲ್ಲವಲ್ಲ” ಎಂದರು. “ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತಿಕಾರವಾಗಿ ಫಾಸಿಲ್ ಕೊಲ್ಲಲಾಯಿತು” ಎಂದು ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ ಎಂದು ತಿಳಿಸಲಾಯಿತು. ಆಗ ಸಿಪಿಐ, “ಅವರೇನು ಮಾತನಾಡಿಲ್ಲ ಬಿಡಿ. ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ ಎಂದರೆ ನೀವ್ಯಾಕೆ ತಲೆಕೆಡಿಸಿಕೊಳ್ಳುತ್ತೀರಿ. ನಾವು ಮಾಡಿಕೊಳ್ಳುತ್ತೇವೆ ಬಿಡಿ” ಎಂದು ದಾಷ್ಟ್ಯದಿಂದ ವರ್ತಿಸಿ ಕರೆ ಕಟ್ ಮಾಡಿದರು. ಹೆಚ್ಚುವರಿ ಪ್ರತಿಕ್ರಿಯೆ ಪಡೆಯಲು ಮತ್ತೆ ಮತ್ತೆ ಕರೆ ಮಾಡಿದಾಗ, ಅವರ ನಂಬರ್ (9480802932) ಬ್ಯುಸಿ ಬರುತ್ತಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್‌ವಾದ್ ಅವರ ಪ್ರತಿಕ್ರಿಯೆ ಪಡೆಯಲು ‘ನಾನುಗೌರಿ.ಕಾಂ’ ಪ್ರಯತ್ನಿಸಿದೆ. ಆದರೆ ಅವರು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.
ಶರಣ್ ಪಂಪ್‌ವೆಲ್ ಭಾಷಣದಲ್ಲಿ ಪ್ರಚೋದನಕಾರಿ ಅಂಶಗಳಿಲ್ಲವೇ?
ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯವರು ನಡೆದಾಡಿದ, ಸರ್ವಜನಾಂಗದ ಶಾಂತಿಯ ತೋಟವಾದ ತುಮಕೂರಿನಲ್ಲಿ ಕೋಮುಗಲಭೆ ಎಬ್ಬಿಸಲು ಶರಣ್ ಪಂಪ್‌ವೆಲ್ ಆಡಿರುವ ಮಾತುಗಳು ಆತಂಕಕಾರಿಯಾಗಿವೆ. ಅವರ ಭಾಷಣದ ವಿಡಿಯೊ ವೈರಲ್ ಆಗಿದೆ. ಭಾಷಣದಿಂದ ಆಯ್ದ ಅಂಶಗಳು ಹೀಗಿವೆ:
“ಎಲ್ಲಾ ಮಸೀದಿಗಳಿಗೆ ನುಗ್ಗಿ ಹನುಮಾನ್ ಚಾಲೀಸ್ ಭಜಿಸುತ್ತೇವೆ ಎಂಬ ಎಚ್ಚರಿಕೆಯನ್ನು ದೇಶಕ್ಕೆ ಕೊಟ್ಟೆವು. ಮುಸಲ್ಮಾನರು ಗಾಬರಿಯಾದರು. ಮೆರವಣಿಗೆ ಆಯೋಜನೆಯನ್ನು ಬಂದ್ ಮಾಡಿದರು…”
“ನಮ್ಮ ಸಾಮರ್ಥ್ಯವನ್ನು ಈ ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ. ಒಂದು ಸಲ ಗುಜರಾತ್ ಘಟನೆಯನ್ನು ನೆನಪು ಮಾಡಿಕೊಳ್ಳಿ. 59 ಕರಸೇವಕರ ಹತ್ಯೆ ಮಾಡಲಾಯಿತು. ಅದಕ್ಕೆ ಗುಜರಾತ್ ಯಾವ ರೀತಿ ಉತ್ತರ ಕೊಟ್ಟಿತು? ಯಾರು ಕೂಡ ಮನೆಯಲ್ಲಿ ಕೂರಲಿಲ್ಲ. ರಸ್ತೆಗೆ ಇಳಿದರು. ಮನೆಮನೆಗೆ ನುಗ್ಗಿದರು. 59 ಕರಸೇವಕರ ಹತ್ಯೆಗೆ ಪ್ರತಿಯಾಗಿ ಸುಮಾರು ಎರಡು ಸಾವಿರ ಜನರ ಹತ್ಯೆ ಗುಜರಾತ್‌ನಲ್ಲಿ ಆಯಿತು….”
“ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಮುಸಲ್ಮಾನ್ ಜಿಹಾದಿಗಳಿದ್ದಾರೆ. ಅವರಿಗೆ ಉತ್ತರವನ್ನು ಕೊಡಬೇಕೆಂಬ ಕಾರಣಕ್ಕಾಗಿ ಸುರತ್ಕಲ್‌ನಲ್ಲಿದ್ದ ಬಿಸಿ ನೆತ್ತರಿನ ಯುವಕರು ಕೊಂದಿದ್ದಾರೆ. ಯಾರು ಇಲ್ಲದ ಸಮಯದಲ್ಲಿ ಅಲ್ಲ. ಮಾರ್ಕೆಟ್‌ನಲ್ಲಿ ಜನ ಇದ್ದಾಗಲೇ, ಅವರ ಎದುರಲ್ಲೇ ನುಗ್ಗಿ ಅವರಿಗೆ ಹೊಡೆದು ಹತ್ಯೆಗೆ ಪ್ರತಿಕಾರವನ್ನು ತೋರಿಸಿದ್ದು ಹಿಂದೂ ಹುಡುಗರ ತಾಕತ್ತು.”
“ಅವಶ್ಯಕತೆ ಇದ್ದಾಗ ಹೊಡೆದಾಟನೂ ಮಾಡ್ತೀವಿ, ಅನಿವಾರ್ಯ ಇದ್ದಾಗ ನುಗ್ಗಿ ಹೊಡೆದೇ ಹೊಡೆಯುತ್ತೇವೆ. ಸಿದ್ದರಾಮಯ್ಯನವರೇ, ದಕ್ಷಿಣ ಕನ್ನಡ ಮಾತ್ರ ಹಿಂದುತ್ವದ ಪ್ರಯೋಗಶಾಲೆಯಲ್ಲ, ತುಮಕೂರು ಕೂಡ ಮುಂದಿನ ದಿನಗಳಲ್ಲಿ ಪ್ರಯೋಗಶಾಲೆ ಆಗಲಿದೆ…”
– ಈ ಮೇಲಿನ ಭಾಷಣದಲ್ಲಿ ಪೊಲೀಸ್ ಅಧಿಕಾರಿಗೆ ಯಾವುದೇ ತಪ್ಪುಗಳು ಕಂಡಿಲ್ಲವಂತೆ. ಪ್ರಶ್ನಿಸಿದರೆ, “ನೀವ್ಯಾಕೆ ತಲೆಕೆಡಿಸಿಕೊಳ್ಳುತ್ತೀರಿ?” ಎಂದು ಪ್ರತಿಕ್ರಿಯೆ ನೀಡುತ್ತಾರೆ ಸಿಪಿಐ ನವೀನ್‌ಕುಮಾರ್.



Police officer is unfit to be in that job
Take legal action against him
He seems to a member of Bajarang Dal
Remove him from that sensitive area