ಜೆ.ಸಿ. ಮಾಧುಸ್ವಾಮಿ ಅವರದ್ದು ಅಹಂ ಸ್ವಭಾವ. ಸೊಕ್ಕಿನ ಮಾತುಗಳಿಂದಲೇ ಜನರ ವಿರೋಧ ಕಟ್ಟಿಕೊಂಡು ಬಂದವರು. ಜನರನ್ನು ಪ್ರೀತಿಯಿಂದ ಕಂಡದ್ದೇ ಇಲ್ಲ.. ದರ್ಪದ ಮಾತುಗಳಿಂದಲೇ ಜನಜನಿತ. ಇಂಗ್ಲೀಷ್ ಮತ್ತು ಕನ್ನಡ ಸಾಹಿತ್ಯವನ್ನು ಸಾಕಷ್ಟು ಓದಿಕೊಂಡಿರುವ ಅವರು ಸೌಜನ್ಯದಿಂದ ವರ್ತಿಸುವುದಿಲ್ಲ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತುಗಳು.
1989ರಲ್ಲಿ ಜನತಾದಳದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮಾಧುಸ್ವಾಮಿ ವಿಧಾನಸಭೆಯಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಸಾಕಷ್ಟು ಚರ್ಚೆ ಮಾಡಿದರು. ಪ್ರಸಿದ್ದಿಯೂ ಆದರು. ಎರಡನೇ ಬಾರಿಗೆ 2004ರಲ್ಲಿ ಜೆಡಿಯುನಿಂದ ಶಾಸಕರಾದರು. ಮೂರನೇ ಬಾರಿಗೆ ಬಿಜೆಪಿಯಿಂದ ಶಾಸಕರಾಗಿ ಗೆದ್ದು ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ಬಾರಿಗೆ ಆಯ್ಕೆಯಾದಾಗಿನ ಹುಮ್ಮಸ್ಸು ಈಗ ಇಲ್ಲ. ಆದರೆ ಅವರಲ್ಲಿನ ದರ್ಪ ಮಾತ್ರ ಹೋಗಿಲ್ಲದಿರುವುದು ಕಾಣುತ್ತದೆ.
2004ರಲ್ಲಿ ತುಮಕೂರು ಜಿಲ್ಲೆಯಲ್ಲಿ ಗಣಿಗಾರಿಕೆ ವಿರುದ್ದದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಗಣಿಗಾರಿಕೆ ನಿಲ್ಲಿಸಬೇಕೆಂದು ಪರಿಸರ ಹೋರಾಟಗಾರರು ಚಳವಳಿ ನಡೆಸಿದ್ದರು. ಸಾಮಾಜಿಕ ಕಾರ್ಯಕರ್ತರು ಪರಿಸರವಾದಿಗಳು ಚಿಕ್ಕನಾಯಕನಹಳ್ಳಿಯಲ್ಲೇ ಪೆಂಡಾಲ್ ಹಾಕಿ ಅಂದಿನ ಸ್ಥಳೀಯ ಶಾಸಕರಾಗಿದ್ದ ಮಾಧುಸ್ವಾಮಿ ಅವರ ಗಮನ ಸೆಳೆಯುವ ಉದ್ದೇಶದಿಂದ ನಿರಂತರವಾಗಿ ಒಂದು ತಿಂಗಳು ಪ್ರತಿಭಟನಾ ಧರಣಿ ನಡೆಸಿದರು. ಗಣಿಗಾರಿಕೆ ನಿಲ್ಲಿಸಬೇಕು. ಪರಿಸರ ಉಳಿಸಬೇಕು. ಶಾಸಕರು ಇತ್ತ ಗಮನಹರಿಸಬೇಕು ಎಂದು ಹಗರಲಿರುಳು ಹೋರಾಟ ಮಾಡಿದರೂ ಒಂದೇ ಒಂದು ದಿನ ಹೋರಾಟದ ಸ್ಥಳಕ್ಕೆ ಮಾಧುಸ್ವಾಮಿ ಬರೆಲೇ ಇಲ್ಲ.
ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಯತ್ನಿಸಿದ ರೈತ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಸಚಿವ ಮಾಧುಸ್ವಾಮಿ ವಿಡಿಯೋ ವೈರಲ್ ಆಗಿದ್ದು ನಾಗರೀಕರು ಛೀಮಾರಿ ಹಾಕುತ್ತಿದ್ದಾರೆ#NaanuGauri #madhuswamy #kolara #muniraju
Posted by Naanu Gauri on Wednesday, May 20, 2020
ಮಹಿಳೆಯೊಂದಿಗೆ ದರ್ಪ ತೋರಿಸುತ್ತಿರುವ ಸಚಿವ ಮಾಧುಸ್ವಾಮಿ
ಚಿಕ್ಕನಾಯಕನಹಳ್ಳಿ ಹೊನ್ನೇಬಾಗಿ ಪ್ರದೇಶ ವ್ಯಾಪ್ತಿಯಲ್ಲಿ ವ್ಯಾಪಕ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಲೇ ಇಲ್ಲ. ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದರೂ ಮಾಧುಸ್ವಾಮಿ ಮೌನವಹಿಸಿಕೊಂಡೇ ಬಂದಿದ್ದಾರೆ. ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ್ ನೇತೃತ್ವದಲ್ಲಿ ಮುನ್ನಡೆಯುತ್ತದ್ದ ಗಣಿ ವಿರುದ್ದದ ಚಳವಳಿಯಲ್ಲಿ ಶಿವನಂಜಯ್ಯ ಬಾಳೆಕಾಯಿ, ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಬಂದು ಒತ್ತಾಯ ಹೇರಿದರು. ಪರಿಸರವಾದಿ ಯಲ್ಲಪ್ಪರೆಡ್ಡಿ ಬಂದು ಅಕ್ರಮ ಗಣಿಗಾರಿಕೆ ವಿರುದ್ದ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಮಾಧುಸ್ವಾಮಿ ಅವರಿಗೆ ಮನವಿ ಮಾಡಿದರು. ಮಾಧುಸ್ವಾಮಿ ಇದ್ಯಾವುದಕ್ಕೂ ಕ್ಯಾರೇ ಅನ್ನಲಿಲ್ಲ. ತುಟಿಬಿಚ್ಚಿ ಮಾತನಾಡಲೇ ಇಲ್ಲ.
ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭ ಗೊಲ್ಲ ಸಮುದಾಯದ ಯುವಕನಿಗೆ ಕಪಾಳಮೋಕ್ಷೆ ಮಾಡಿ ಜನರ ವಿರೋಧ ಕಟ್ಟಿಕೊಂಡರು. ಆನಂತರ ಚುನಾವಣೆಯಲ್ಲಿ ಗೆದ್ದು ಸಚಿವರಾದರು. ನಂತರ ಕುರುಬ ಸಮುದಾಯದ ಸ್ವಾಮೀಜಿ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿ ಆ ಸಮುದಾಯದ ಕೋಪಕ್ಕೂ ಗುರಿ ಆದರು. ಇದೀಗ ಕೋಲಾರದಲ್ಲಿ ಕೆರೆ ಒತ್ತುವರಿಯಾಗಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಹಿಳೆಯೊಬ್ಬರು ಮನವಿ ಮಾಡಿದರು. ಆ ಮಹಿಳೆ ಸ್ವಂತಕ್ಕಾಗಿ ಏನನ್ನೂ ಕೇಳಲಿಲ್ಲ. ಆದರೂ ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಆ ಮಹಿಳೆ ರಾಸ್ಕಲ್ ಬಾಯಿಮುಚ್ಚು ಎಂದು ಹೇಳಿ ವಿವಾದವನ್ನು ಬೆನ್ನಮೇಲೆ ಎಳೆದುಕೊಂಡಿದ್ದಾರೆ.
ಕೊರೊನ ಕಾಲದಲ್ಲಿ ಜನರ ಸಮಸ್ಯೆಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ ಸಚಿವರು ಅಧಿಕಾರ ಅಮಲು ಏರಿಸಿಕೊಂಡು ಸಮಸ್ಯೆ ಹೇಳಿಕೊಳ್ಳುವ ಮಹಿಳೆಯ ಮೇಲೆಯೇ ತಿರುಗಿ ಬೀಳುವುದು ಎಷ್ಟು ಸರಿ ಎಂದು ಮಹಿಳಾ ಹೋರಾಟಗಾರರು ಪ್ರಶ್ನಿಸಿದ್ದಾರೆ. ಪದೇ ಪದೇ ವಿವಾದಕ್ಕೆ ಗುರಿಯಾಗುತ್ತಿರುವ ಮಾಧುಸ್ವಾಮಿ ಅವರಿಗೆ ಖಾತೆಯನ್ನು ನಿಭಾಯಿಸುವುದು ಕಷ್ಟವಾಗಿದೆಯೇ? ಆ ಸೇಡನ್ನು ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಓದಿ: ಸಚಿವ ಮಾಧುಸ್ವಾಮಿ ವರ್ತನೆ ತಪ್ಪು, ಸಹಿಸಲು ಸಾಧ್ಯವಿಲ್ಲ: ಸಿಎಂ ಯಡಿಯೂರಪ್ಪ
(ಲೇಖಕರು ಹಿರಿಯ ಪತ್ರಕರ್ತರು. ಅಭಿಪ್ರಾಯಗಳು ವೈಯಕ್ತಿಕವಾದವು)


