Homeಮುಖಪುಟಪ್ರಭುತ್ವಕ್ಕೆ "ಚಂದ್ರಶೇಖರ್‌ ಆಝಾದ್ ರಾವಣ್" ಎಂದರೆ ಆತಂಕ ಯಾಕೆ?

ಪ್ರಭುತ್ವಕ್ಕೆ “ಚಂದ್ರಶೇಖರ್‌ ಆಝಾದ್ ರಾವಣ್” ಎಂದರೆ ಆತಂಕ ಯಾಕೆ?

ಜಾಮಿಯಾ ಮಿಲ್ಲಿಯಾದ ವಿದ್ಯಾರ್ಥಿನಿಗಳ ಮೇಲೆ ಫೊಲೀಸರು ನಡೆಸಿದ ದೌರ್ಜನ್ಯದ ವಿರುದ್ದ ದಿಲ್ಲಿಗೆ ಆಗಮಿಸಿದ್ದ ಆಝಾದ್ "ದಲಿತರೇ ಮುಸ್ಲಿಮರಿಗೆ ಬೀಳುವ ಗುಂಡಿಗೆ ನಾವು ಎದೆ ಕೊಡೋಣವೆಂದು" ಹೇಳಿದ್ದರು

- Advertisement -

ಜನವರಿ 16 ಗುರುವಾರ ರಾತ್ರಿ ತಿಹಾರ್ ಜೈಲಿನಿಂದ ಬಿಡುಗಡೆಯಾದ ಚಂದ್ರಶೇಖರ್‌ ಆಝಾದ್‌ರನ್ನು ಸಾವಿರಾರು ಮಂದಿ ಸೇರಿ ಸ್ವಾಗತಿಸಿದರು. ಸಂವಿಧಾನ ವಿರೋಧಿ ನೀತಿಯ ವಿರುದ್ದ ಇಡೀ ದೇಶವನ್ನೇ ಬಡಿದೆಬ್ಬಿಸಿ, ಪ್ರತಿರೋಧದ ಕಹಳೆ ಮೊಳಗಿಸಿದ್ದ ಚಂದ್ರಶೇಖರ್‌ ನೆರೆದಿದ್ದ ಅಷ್ಟೂ ಜನರಲ್ಲಿ ಹೊಸ ಭರವಸೆಯಾಗಿ ಮಾರ್ಪಟ್ಟಿದ್ದರು. ಕೈಯಲ್ಲೊಂದು ಸಂವಿಧಾನ ಪ್ರತಿಯನ್ನು ಎತ್ತಿ ಹಿಡಿದು, ತನ್ನ ನಿತ್ಯ ಗಾಂಭೀರ್ಯತೆಯೊಂದಿಗೆ  ಜನಸ್ತೋಮದ ನಡುವೆ ತಲುಪಿದರು ಆಝಾದ್. ಪೌರತ್ವ ತಿದ್ದುಪಡಿ ಎಂಬ ಕರಾಳ ಕಾಯ್ದೆಯನ್ನು ಹಿಂಪಡೆಯದೆ ಹೋರಾಟ ನಿಲ್ಲದೆಂದೂ, ಕೇಂದ್ರ ಸರಕಾರದ ದಾರ್ಷ್ಟ್ಯತೆಯನ್ನು ಸಹಿಸಲಾರೆನೆಂದೂ ಉಚ್ಚವಾಗಿ ಹೇಳಿದರು.

ಇನ್ನು ತಿಂಗಳು ಹಿಂದಕ್ಕೆ ಹೋಗೋಣ.
ಅಗಷ್ಟೇ ಈ ಕಾಯ್ದೆಯನ್ನು ಕೇಂದ್ರ ಸರಕಾರ ಜಾರಿ ಮಾಡಿತ್ತು. ದೇಶಾದ್ಯಂತ ಆತಂಕಗಳು ಆಕ್ರೋಶಗಳಾಗಿ ಪುಟಿದು ಬರುತ್ತಿದ್ದರೆ ದೆಹಲಿಯ ಜುಮಾ ಮಸೀದಿಯ ಇಮಾಂ ಇದನ್ನು ಬೆಂಬಲಿಸಿ ಮಾತನಾಡಿದರು. ಯಾವ ಸೀಮೆಯ ಆಮಿಷಗಳು ಈ ರೀತಿ ಅವರನ್ನು ಮಾತನಾಡಿಸಿತ್ತೋ ಗೊತ್ತಿಲ್ಲ. ಆದರೆ ಇಮಾಮರ ಮಾತು ಮುಸ್ಲಿಮರ ಸಮೇತ ಬಹುತೇಕ ಸಂವಿಧಾನ ಪ್ರೇಮಿಗಳ ಹೃದಯ ಬೇಧಿಸಿತು. ಅಷ್ಟರಲ್ಲಿ ಜುಮಾ ಮಸೀದಿಗೆ ತೆರಳಿದ ಆಝಾದ್ ಶುಕ್ರವಾರ ಪ್ರಾರ್ಥನೆಯ ಬಳಿಕ ಮುಸ್ಲಿಮರನ್ನು ಸೇರಿಸಿ ಪ್ರತಿಭಟನೆಗೆ ಸಜ್ಜಾದರು. ಮುಸ್ಲಿಮರು ಪರಂಪರಾಗತವಾಗಿ ಗೌರವಿಸುವ ಒಬ್ಬ ವ್ಯಕ್ತಿಯನ್ನು ಮುಂದಿಟ್ಟು ಅವರ ಆಕ್ರೋಶವನ್ನು  ತಣಿಸಬಹುದೆಂಬುದಾಗಿತ್ತು ಸರಕಾರದ ಚಿಂತನೆ. ಆದರೆ ಆಝಾದ್‌ನ ಆಗಮನದೊಂದಿಗೆ ಕೇಂದ್ರ ಸರಕಾರ ಹೂಡಿದ ತಂತ್ರಗಳೆಲ್ಲಾ ವಿಫಲವಾಯಿತು.

ಜುಮಾ ಮಸೀದಿಯಿಂದ ಜಂತರ್ ಮಂತರ್‌ಗೆ ಜಾಥಾ ನಡೆಸಲು ಮುಂದಾದರೂ ಕೂಡ ಪೊಲೀಸರು ಅನುಮತಿ ನೀಡಲಿಲ್ಲ.  ಕಾಯ್ದೆ ಪರವಾದ ಇಮಾಮರ ನಿಲುವಿನಿಂದ ಜಾಥಾಗೆ ಹೆಚ್ಚಾಗಿ ಮುಸ್ಲಿಮರು  ಸೇರಲಾರರೆಂಬುದು ಪೋಲೀಸರ ನಿಗಮನವಾಗಿತ್ತು. ಆದರೆ ಅಲ್ಲಿನ ಪರಿಸ್ಥಿತಿ ತದ್ವಿರುದ್ದವಾಗಿತ್ತು.

ಜುಮಾಮಸೀದಿ ಜನಸ್ತೋಮದಿಂದ ತುಂಬಿ ತುಳುಕತೊಡಗಿತು. ಸಂವಿಧಾನದ ಪ್ರತಿಯೊಂದಿಗೆ ಜುಮಾ ಮಸೀದಿಯ ಮೆಟ್ಟಿಲುಗಳಲ್ಲಿ ಆಜಾದ್ ಮತ್ತು ಜೊತೆಗಿದ್ದವರು ಧರಣಿ ಕೂತರು. ಭಾರತದ ವಿಭಜನೆಯ ಕಾಲದಲ್ಲಿ ಮೌಲಾನಾ ಅಬ್ದುಲ್ ಕಲಾಂ ಆಝಾದ್ ತನ್ನ ಪ್ರಸಿದ್ಧವಾದ ಹಿಂದೂ ಮುಸ್ಲಿಮ್ ಮೈತ್ರಿ ಪ್ರಭಾಷಣ ನಡೆಸಿದ್ದೂ ಇದೇ ಮೆಟ್ಟಿಲುಗಳಲ್ಲಿ ಕುಳಿತಾಗಿತ್ತು. ಗತಕಾಲವನ್ನು ಮತ್ತೊಮ್ಮೆ ನೆನಪಿಸುವಂತಿದ್ದವು ಮೊನ್ನೆ ದಿನದ ಆ ದೃಶ್ಯ. ರಾತ್ರಿಯಾಗಿಯೂ ಕದಲದ ಆಝಾದ್ ಮತ್ತು ಜನರ ನಿರಂತರವಾದ ಧರಣಿಯು ಸರಕಾರದಲ್ಲಿ ನಡುಕವನ್ನು ಹುಟ್ಟಿಸಿದ್ದವು‌. ಅಝಾದ್‌ರನ್ನು ಬಂಧಿಸಲು ಆಜ್ಞೆಯೂ ಪೋಲೀಸರಿಗೆ ಬಂದವು. ಆದರೆ ಪೋಲೀಸರ ಕಣ್ತಪ್ಪಿಸಿದ ಆಝಾದ್ ಕಟ್ಟಡಗಳಿಂದ ಕಟ್ಟಡಗಳಿಗೆ ಸಾಹಸಿಕವಾಗಿ ಹಾರಿ ಪುನಃ ಅಲ್ಲಿಗೇ ಬಂದು ತಲುಪಿದ್ದರು. ದಿಲ್ಲಿ ಪೋಲೀಸರ ಖಾಕಿ ಕ್ರೌರ್ಯವೇನಾದರೂ ನಡೆದರೆ ಇನ್ನಷ್ಟು ಅಪಾಯ ಎದುರಾಗುವುದನ್ನು, ಮತ್ತು ಆ ಪುರಾತನ ಮಸೀದಿಯ ಪಾವಿತ್ರತೆಗೆ ಭಂಗವಾಗಬಹು ದೆಂಬುದನ್ನರಿತ ಆಝಾದ್ ಪೋಲೀಸರಿಗೆ ಶರಣಾಗಿ ಬಿಟ್ಟರು. ಅದರ ಮೊದಲ ದಿನ ಜುಮಾ ಮಸೀದಿಯ ಸಮೀಪದಲ್ಲೇ ದರಿಯಾ ಗಂಜ್, ಸೀಲಾಂಪುರ್, ಜಾಮಿಯಾ ಮಿಲ್ಲಿಯಾದಲ್ಲೆಲ್ಲಾ ಪೋಲೀಸರು ತಮ್ಮ ನೈಶಾಟ್ಯತನವನ್ನು ಅನಾವರಣ ಮಾಡಿದ್ದರು. ಇಲ್ಲೇನಾದರೂ ತಾನು ಸೆರೆಯಾಗದಿದ್ದರೆ ಅಲ್ಲಿ ಸೇರಿರುವ ಅಷ್ಟೂ ಜನರ ಮೇಲೆ ಅದರ ಪರಿಣಾಮ ನಡೆಯಲಿದೆಯೆಂಬುದನ್ನು ಆಝಾದ್ ಅರ್ಥೈಸಿಕೊಂಡಿದ್ದರು. ಕೊನೆಗೂ ಪೋಲೀಸರ ಮುಂದೆ ಶರಣಾಗಿಯೇ ನೀಲಿ ಪಡೆಯ ಭೀಮ್ ನಾಯಕ.

ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸಿ ಬಂಧನಕ್ಕೊಳಗಾದ ನಾಯಕರಂತೆ ಆಝಾದ್ ಕೂಡ ಬಿಡುಗಡೆಯಾಗುವರೆಂದು ಜನಸಾಮಾನ್ಯರು ಭಾವಿಸಿದ್ದರೆ ಅದು ನಡೆಯಲೇ ಇಲ್ಲ.  ಆಝಾದ್ ಬಂಧನಕ್ಕೊಳಗಾಗುವ ಮುಂಚಿನ ದಿನದಲ್ಲೂ ಸೀತರಾಂ ಯೆಚೂರಿ, ಡಿ ರಾಜ, ಕೆ.ಸಿ ವೇಣುಗೋಪಾಲ್, ಇತಿಹಾಸಕಾರ ರಾಮಚಂದ್ರ ಗುಹಾ, ಯೋಗೇಂದ್ರ  ಯಾದವ್ ಮುಂತಾದ ರಾಜಕೀಯ, ಸಾಮಾಜಿಕ ಕ್ಷೇತ್ರದ ನಾಯಕರು  ಬಂಧನಕ್ಕೊಳಗಾಗಿ ತಾಸುಗಳೊಳಗೆ ಬಿಡುಗಡೆಯಾಗಿದ್ದರು. ಆದರೆ ಆಝಾದ್ ಪಾಲಿಗೆ ವ್ಯವಸ್ಥೆ ಇನ್ನಷ್ಟು ಬಿಗಿಯಾಯಿತು. ಶಾಂತಿಯುತವಾಗಿ ಹೋರಾಟ ನಡೆಸುವವರನ್ನು, ಸಂವಿಧಾನದ ತಳಹದಿಯಲ್ಲಿ ಪ್ರತಿಭಟಿಸುವವರನ್ನು ಬಂಧಿಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹಾಗಿರುವಾಗ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಪೂರ್ವ ನಿಯೋಜಿತವಾಗಿ ಬಂಧಿಸಿ ಕಾರಾಗೃಹದಲ್ಲಿಟ್ಟದ್ದು ಮೋದಿ ಆಡಳಿತದ ನಿರಂಕುಶತ್ವದ ಪರಮಾವಧಿಯೆಂದೇ ಹೇಳಬೇಕಷ್ಟೇ.

ಆ ಬಳಿಕ ಏನೆಲ್ಲಾ ನಡೆದು ಹೋದವು. 144 ಸೆಕ್ಷನ್‌ನ್ನು ದುರುಪಯೋಗಪಡಿಸಿ ಹೋರಾಟಗಳನ್ನು ಹತ್ತಿಕ್ಕಿಸಲಾಯಿತು. ಅಲ್ಲಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ, ಮಹಿಳೆಯರ ಮೇಲೆ, ಹಿರಿಯರ ಮೇಲೆ ಲಾಠಿಜಾರ್ಜ್ ಹೆಸರಲ್ಲಿ ದೌರ್ಜನ್ಯ ನಡೆಸಲಾಯಿತು. ಗೋಲಿಬಾರ್ ಮಾಡಿ ಜನರನ್ನು ಕೊಂದು ಹಾಕಿದರು. ಸರಕಾರದ ಜತೆಗೆ ಪ್ರಾದೇಶಿಕ ಸಂಘಪರಿವಾರವೂ ಕೂಡಾ ಇದಕ್ಕೆ ನೇರವಾಗಿ ಕುಮ್ಮಕ್ಕು ನೀಡಿದವು. ಆದರೆ ಅದೆಷ್ಟೇ ಹತ್ತಿಕ್ಕಿದರೂ ಬಸವಳಿಯದ ಸಮಾಜವೊಂದು ಮತ್ತಷ್ಟು ತೀವ್ರ ಸ್ವರೂಪದಲ್ಲಿ ಬೀದಿಗಿಳಿಯ ತೊಡಗಿದವು.

ಪ್ರಜಾಪ್ರಭುತ್ವ ದೇಶವೊಂದರಲ್ಲಿ ಪ್ರತಿಭಟನೆಯೆಂಬುದು ನಾಗರಿಕನ ವರ್ತಮಾನ ಪ್ರಜ್ಞೆಯ ಸಂಕೇತ. ಅದನ್ನು ಪ್ರದರ್ಶಿಸುವ ಹಕ್ಕು ಆತನಿಗಿದೆ. ಅದನ್ನಷ್ಟೇ ಆಝಾದ್ ಮಾಡಿದ್ದರು. ಪೋಲೀಸ್ ಅನುಮತಿ ಪಡೆಯದೆ ರ‌್ಯಾಲಿ ನಡೆಸಲು ತೀರ್ಮಾನಿಸಿದರೆಂಬ ಏಕೈಕ ಕಾರಣವನ್ನು ಮುಂದಿಟ್ಟು ಆಝಾದ್‌ರನ್ನು ತಿಹಾರ್  ಜೈಲಿಗೆ ತಳ್ಳಲಾಯಿತು. ತಿಳಿದಿರಲಿ.. ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಅಮಿತ್ ಶಾ ಜೈಲು ವಾಸ ಅನುಭವಿಸಿದ್ದು ಕೇವಲ ಹದಿಮೂರು ದಿನಗಳಷ್ಟೇ. ಅದೇ ಅಮಿತ್ ಶಾ ಗೃಹ ಸಚಿವರಾದಾಗ ಕೇವಲ ಅನುಮತಿ ರಹಿತ ಪ್ರತಿಭಟನೆ ನಡೆಸಿದ್ದಕ್ಕಾಗಿ ದಲಿತ ಯುವಕನೊಬ್ಬ ಜೈಲು ವಾಸ ಅನುಭವಿಸಿದ್ದು ಬರೋಬ್ಬರಿ ಇಪ್ಪತ್ತಾರು ದಿನಗಳು…! ಇದು ವ್ಯವಸ್ಥೆಯ ವ್ಯಂಗ್ಯವಲ್ಲದೆ ಇನ್ನೇನು…?

‘ದೈತ್ಯ’ ಅಪರಾಧಿಗಳು ಜಾಮೀನು ಪಡೆದು ಎರಡೇ ದಿನಕ್ಕೆ ಬಿಡುಗಡೆಗೊಳ್ಳುವ ಇಂದಿನ ಕಾನೂನಿನ ಕುಣಿಕೆಗೆ ಬಿದ್ದ ಅಝಾದ್‌ಗೆ ಸತತವಾಗಿ ಜಾಮೀನು ನಿಶೇಧಿಸಲಾಯಿತು. ಸಮಾನ ರೀತಿಯಲ್ಲಿ ಹೋರಾಟ ನಡೆಸಿದ ಇತರರು ಮಾಡದ ಯಾವ ಅಪರಾಧವನ್ನು ಆಝಾದ್ ಮಾಡಿದ್ದರೆಂಬುದು ಪ್ರಸಕ್ತ ಸನ್ನಿವೇಶದ ಪ್ರಶ್ನೆ.

ಹಾಗೆ ನೋಡಿದರೆ ಆಝಾದ್ ಪ್ರತಿನಿಧಿಸುವ ಸಿದ್ದಾಂತ, ಅನುಕರಿಸುವ ತತ್ವ ಹಾಗೂ ಹಾದು ಬಂದ ಹಾದಿಯಲ್ಲೇ ಈ ಪ್ರಶ್ನೆಗಳಿಗೆಲ್ಲಾ ಉತ್ತರವಿದೆ. ಪ್ರಭುತ್ವಕ್ಕೂ ಮಿಗಿಲಾದ ಬಹುತ್ವದ ಆಧಿಪತ್ಯವೇ ತನ್ನ ದೌತ್ಯವೆಂದು ಘೋಷಿಸಿದ ಆಝಾದ್ ಧೃತಿಗೆಡುವ ದೇಶಕ್ಕೆ ಹೊಸ ಭರವಸೆಯಾಗಿ ಬೆಳೆಯುತ್ತಿದ್ದಾರೆ. ಸವರ್ಣೀಯರ ಸಾಮಾಜಿಕ ದಬ್ಬಾಳಿಕೆ ಮತ್ತು ರಾಜಕೀಯ ನಿರಂಕುಶತ್ವದ ವಿರುದ್ದ ಸಮಾಜವನ್ನು ಎಚ್ಚರಿಸಲು ಅಝಾದ್ ನಡೆಸುವ ಪ್ರಯತ್ನಗಳು ಆಧಿಕಾರಶಾಹಿಗಳ ನಿದ್ದೆಗೆಡಿಸಿದೆ. ಪ್ರಭುತ್ವವು ಸಮಾಜದ ದಮನಿತ ವರ್ಗಕ್ಕೆ ಬಿಗಿಯಾಗಿ ಬಿಗಿದ ಪ್ರತಾಪದ ಸರಪಳಿಯನ್ನು ಕಿತ್ತೆಸೆದು ಸಂವಿಧಾನದ ತಳಹದಿಯಲ್ಲಿ ಜನರನ್ನು ಒಗ್ಗೂಡಿಸುತ್ತಿರುವ ಅಝಾದ್ ಎಂಬ ಸ್ವಾಭಿಮಾನಿ ದಲಿತನನ್ನು ಕೇಂದ್ರ ಸರಕಾರವು ಸಹಜವಾಗಿಯೇ ಭಯಪಡುತ್ತಿದೆ.  ಉತ್ತರಪ್ರದೇಶದಾದ್ಯಂತ ಆವಾಹಿಸಿರುವ ಜಾತಿ ವ್ಯವಸ್ಥೆಗೆ ಆಝಾದ್ ಬೆದರಿಕೆಯಾಗಬಹುದೋ ಎಂಬ  ಸವರ್ಣೀಯ ಪ್ರಜ್ಞೆಯೂ ನಿರಂತರವಾಗಿ ಜಾಮೀನು ನಿಶೇಧಗೊಳ್ಳಲು ಕಾರಣವಾಗಿರಬಹುದು.

ಅಜಾದ್ ಪ್ರಕರಣದಲ್ಲಿ ಕಾನೂನನ್ನು ಕಟ್ಟಿ ಹಾಕುವ ರೀತಿಯಲ್ಲಿ ಪ್ರಭುತ್ವವು ಪೋಲೀಸ್ ವ್ಯವಸ್ಥೆಯನ್ನು ಸ್ವಾಧೀನಪಡಿಸಿಕೊಂಡಿದೆ. “ಜಾಮಿಯಾ ಮಸೀದಿ ಪಾಕಿಸ್ಥಾನದಲ್ಲಿದೆಯಾ…? ಸಂವಿಧಾನವನ್ನು ಪೋಲೀಸರು ಓದಿದ್ದೀರಾ..? ಪ್ರತಿಭಟನೆ ನಡೆಸುವುದು ಅಷ್ಟಕ್ಕೂ ದೊಡ್ಡ ಅಪರಾಧವಾಯಿತಾ..? ಪ್ರತಿಭಟಿಸುವ ಹಕ್ಕನ್ನು ನಿಶೇಧಿಸಬಹುದೇ..?  ಇದು ಹೈಕೋರ್ಟ್ ಪೋಲೀಸರನ್ನು ತರಾಟೆಗೆ ತೆಗೆದುಕೊಂಡ ರೀತಿ. ಇದು ಕಾನೂನನ್ನೂ ಮೀರಿ‌ ನಿಂತ ಪೋಲೀಸ್ ವ್ಯವಸ್ಥೆಯ ದಾರ್ಷ್ಟ್ಯತೆಯನ್ನು ಎತ್ತಿತೋರಿಸುತ್ತದೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅಝಾದ್‌ಗೆ ವಿಳಂಬವಾಗಿಯಾದರೂ ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿದ್ದು ಜಾತ್ಯಾತೀತ ಮನಸ್ಸುಗಳಿಗೆ ಆಶ್ವಾಸನೆಯನ್ನು ನೀಡಿದೆ. ಪೋಲೀಸರಿಗೆ ಸಂವಿಧಾನದ ಬಗ್ಗೆ ಪಾಠ ಮಾಡಿದ ನ್ಯಾಯಾಲಯ, ಒಂದು ತಿಂಗಳ ಮಟ್ಟಿಗೆ ಪ್ರತಿಭಟನೆಯಲ್ಲಿ ಭಾಗವಹಿಸಬಾರದೆಂಬ ಷರತ್ತು ವಿಧಿಸಿದ್ದು ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ. ಈ ಷರತ್ತು, ಸಂವಿಧಾನದ ಆಶಯಕ್ಕೆ ವಿರುದ್ದವಲ್ಲವೇ ಎಂಬ ಪ್ರಶ್ನೆ ಸಹಜವಾಗಿದೆ. ಪ್ರಭುತ್ವದ ಹಿಡಿತದಿಂದ ಪೋಲೀಸರು ಮಾತ್ರವಲ್ಲ, ನ್ಯಾಯಾಲಯವೂ ಮುಕ್ತವಲ್ಲವೆಂಬುದನ್ನು ಇದು ಸೂಚಿಸುತ್ತದೆ.

ಪೋಲೀಸರು ಬಂಧಿಸುವ ವೇಳೆ ನಾನು ಇದೇ ಮಸೀದಿಗೆ ಮರಳಿ ಬರುತ್ತೇನೆಂದಿದ್ದರು ಅಝಾದ್. ಬಿಡುಗಡೆಯಾಗಿ ಸೋನಾಪುರ್‌ಗೆ ತೆರಳುವ ಮೊದಲು ಜಾಮಿಯಾ ಮಸೀದಿಗೆ ತೆರಳಿದರು. ಸಾವಿರಾರು ಮಂದಿ ಸ್ವಾಗತಿಸಿದರು. ಚುಣಾವಣಾ ರಾಜಕೀಯವು ತನ್ನ ಗುರಿಯಲ್ಲವೆಂದೂ ಸಂಘಪರಿವಾರವನ್ನು ವಿರೋಧಿಸುವ ಯಾರನ್ನೂ ತಾನು ಬೆಂಬಲಿಸುವೆನೆಂದೂ ಅಝಾದ್ ಈ ಮೊದಲೇ ವ್ಯಕ್ತಪಡಿಸಿದ್ದರು. ಜಾಮಿಯಾ ಮಿಲ್ಲಿಯಾದ ವಿದ್ಯಾರ್ಥಿನಿಗಳ ಮೇಲೆ ಫೊಲೀಸರು ನಡೆಸಿದ ದೌರ್ಜನ್ಯದ ವಿರುದ್ದ ದಿಲ್ಲಿಗೆ ಆಗಮಿಸಿದ್ದ ಆಝಾದ್ “ದಲಿತರೇ ಮುಸ್ಲಿಮರಿಗೆ ಬೀಳುವ ಗುಂಡಿಗೆ ನಾವು ಎದೆ ಕೊಡೋಣವೆಂದು” ಹೇಳಿದ್ದರು. ಇದು ದಲಿತ ಮತ್ತು ಮುಸ್ಲಿಮರ  ದ್ರಾವಿಡ ನಂಟನ್ನು ಎತ್ತಿತೋರಿಸಿದ್ದವು.

ಏನೇ ಆದರೂ ಆಝಾದ್ ಎಂಬ ಹೋರಾಟದ ಕಿಡಿಯೊಂದು ಅದೇಗೆ ಪ್ರಭುತ್ವಕ್ಕೆ ತಲೆನೋವಾಗಿ ಪರಿಣಮಿಸಿದೆಯೆಂಬುದಕ್ಕೆ ಅವರ ಬಂಧನವೇ ಒಂದು ಉದಾಹರಣೆ.  ದಲಿತ-ಮುಸ್ಲಿಂ ಐಕ್ಯತೆಯು ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ರಾಜಕೀಯವಾಗಿ ಅಸ್ಥಿರಗೊಳಿಸದಿರದು ಎಂಬ ಭಯ ಕಾಡುವುದು ಸ್ವಾಭಾವಿಕವೇ.

(ಲೇಖಕರು ಸಾಮಾಜಿಕ ಕಾರ್ಯಕರ್ತರು. ಅಭಿಪ್ರಾಯಗಳು ಅವರ ವಯಕ್ತಿಕವಾದವುಗಳು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial