ಪತ್ನಿ ಪರ್ದಾ (ಮುಸುಕು) ಧರಿಸದಿರುವುದು ಕ್ರೌರ್ಯವಲ್ಲ, ಅದನ್ನು ವಿಚ್ಛೇದನಕ್ಕೆ ಕಾರಣವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಕೆಳ ನ್ಯಾಯಾಲಯ ವಿಚ್ಛೇದನ ಅರ್ಜಿ ವಜಾಗೊಳಿಸಿರುವ ಹಿನ್ನೆಲೆ, ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌಮಿತ್ರಾ ದಯಾಳ್ ಸಿಂಗ್ ಮತ್ತು ನ್ಯಾಯಮೂರ್ತಿ ಡೊನಾಡಿ ರಮೇಶ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆದರೆ, ಈ ಪ್ರಕರಣದಲ್ಲಿ ಕಳೆದ 23 ವರ್ಷಗಳಿಂದ ಪತಿ-ಪತ್ನಿ ಬೇರೆ ಬೇರೆಯಾಗಿ ಜೀವನ ನಡೆಸುತ್ತಿರುವ ಕಾರಣ ನ್ಯಾಯಾಲಯ ವಿಚ್ಛೇದನಕ್ಕೆ ಅವಕಾಶ ನೀಡಿದೆ.
“ಪತ್ನಿ ಪರ್ದಾ ಧರಿಸದೆ, ಪದೇ ಪದೇ ಒಬ್ಬಳೇ ಹೊರಗಡೆ ಹೋಗುವ ಮೂಲಕ ನನಗೆ ಮಾನಸಿಕ ಹಿಂಸೆ ನೀಡಿದ್ದಾಳೆ” ಎಂದು ಆರೋಪಿಸಿ ಅರ್ಜಿದಾರ ಪತಿ ವಿಚ್ಛೇದನ ಕೋರಿದ್ದರು.
ಈ ವಾದವನ್ನು ವಿರೋಧಿಸಿದ ನ್ಯಾಯಾಲಯ “ಕ್ರೌರ್ಯದ ವಿಚಾರದಲ್ಲಿ ಅರ್ಜಿದಾರ ಮಾಡಿರುವ ಆರೋಪ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೆಂಡತಿ ಏನನ್ನು ಧರಿಸಬೇಕು, ಏನನ್ನು ಧರಿಸಬಾರದು ಎಂಬ ಮುಕ್ತ ಇಚ್ಚೆ ಹೊಂದಿದ್ದಾರೆ. ಆಕೆ ಮಾರುಕಟ್ಟೆ ಮತ್ತು ಇತರ ಸ್ಥಳಗಳಿಗೆ ಘೊಂಘಾಟ್ (ಮುಸುಕು) ಧರಿಸದೆ ಹೋಗುತ್ತಾರೆ. ಈ ಮೂಲಕ ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂಬ ವಾದ ಒಪ್ಪಲಾಗದು” ಎಂದಿದೆ.
ಕಳೆದ 23 ವರ್ಷಗಳಿಂದ ದಂಪತಿ ದೂರ ಇದ್ದಾರೆ. ಈ ಮೂಲಕ ಅರ್ಜಿದಾರನಿಗೆ ಮಾನಸಿಕ ಹಿಂಸೆ ಉಂಟಾಗಿದೆ ಎಂದರೆ ಒಪ್ಪಬಹುದು ಎಂದ ನ್ಯಾಯಾಲಯ ವಿಚ್ಚೇದನಕ್ಕೆ ಅವಕಾಶ ಮಾಡಿಕೊಟ್ಟಿದೆ.
ಇದನ್ನೂ ಓದಿ : ಪತ್ನಿಯ ದೇಹ ಪತಿಯ ಮಾಲಿಕತ್ವಕ್ಕೆ ಒಳಪಡುವುದಿಲ್ಲ – ಅಲಹಬಾದ್ ಹೈಕೋರ್ಟ್


