ಹೆಂಡತಿಯ ದೇಹ, ಗೌಪ್ಯತೆ ಮತ್ತು ಹಕ್ಕುಗಳು ಅವಳ ಸ್ವಂತದ್ದಾಗಿದ್ದು, ಆಕೆಯ ಪತಿಯ ನಿಯಂತ್ರಣ ಅಥವಾ ಮಾಲೀಕತ್ವಕ್ಕೆ ಒಳಪಡುವುದಿಲ್ಲ ಎಂದು ಅರಿತುಕೊಳ್ಳಲು ಹಾಗೂ ಗಂಡಂದಿರ ವಿಕ್ಟೋರಿಯನ್ ಕಾಲದ ಹಳೆಯ ಮನಸ್ಥಿತಿಯನ್ನು ತೊಡೆದುಹಾಕಲು ಇದು ಸಕಾಲವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ. ಪತ್ನಿಯ ದೇಹ
ನ್ಯಾಯಮೂರ್ತಿ ವಿನೋದ್ ದಿವಾಕರ್ ಅವರ ಪೀಠವು ಪತ್ನಿ ತನ್ನ ಪತಿಯ ವಿಸ್ತರಣೆಯಲ್ಲ. ಅವಳಿಗೆ ತನ್ನದೇ ಆದ ಹಕ್ಕುಗಳು ಮತ್ತು ಆಸೆ ಆಕಾಂಕ್ಷೆಗಳನ್ನು ಹೊಂದಿರುವ ವ್ಯಕ್ತಿ ಎಂದು ಹೇಳಿದೆ. ಪತ್ನಿಯ ದೈಹಿಕ ಸ್ವಾಯತ್ತತೆ ಮತ್ತು ಗೌಪ್ಯತೆಯನ್ನು ಗೌರವಿಸುವುದು ಕಾನೂನು ಬಾಧ್ಯತೆ ಮಾತ್ರವಲ್ಲ, ನಿಜವಾದ ಸಮಾನ ಸಂಬಂಧವನ್ನು ಬೆಳೆಸುವಲ್ಲಿ ಗಂಡನ ನೈತಿಕ ಅಗತ್ಯವೂ ಆಗಿದೆ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತನ್ನ ಹೆಂಡತಿಗೆ ತಿಳಿಸದೆ ಮತ್ತು ಒಪ್ಪಿಗೆಯಿಲ್ಲದೆ ರಹಸ್ಯವಾಗಿ ಖಾಸಗಿ ಕ್ಷಣವನ್ನು ವೀಡಿಯೊ ರೆಕಾರ್ಡ್ ಮಾಡಿ, ನಂತರ ಅದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿ, ಜೊತೆಗೆ ಅದನ್ನು ಹೆಂಡತಿಯ ಸೋದರಸಂಬಂಧಿಯೊಂದಿಗೆ ಹಂಚಿಕೊಂಡಿದ್ದ ವ್ಯಕ್ತಿಯೊಬ್ಬರ ವಿರುದ್ಧ ಸಲ್ಲಿಕೆಯಾದ ಅರ್ಜಿಯನ್ನು ವಜಾಗೊಳಿಸುವ ವೇಳೆ ನ್ಯಾಯಾಲಯ ಈ ಅವಲೋಕನ ಮಾಡಿದೆ.
ಪ್ರಕರಣದಲ್ಲಿ ಪತಿಯು ಚಾರ್ಜ್‌ಶೀಟ್ ಅನ್ನು ಪ್ರಶ್ನಿಸಿ ಅರ್ಜಿ ಹಾಕಿದ್ದನು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಬಿ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸಂಪೂರ್ಣ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಬೇಕು ಎಂದು ಕೋರಿದ್ದನು. ಜೊತೆಗೆ ತಾನು ಕಾನೂನುಬದ್ಧವಾಗಿ ಪತಿಯಾಗಿರುವುದರಿಂದ ಐಟಿ ಕಾಯ್ದೆಯ ಸೆಕ್ಷನ್ 67 ಬಿ ಅಡಿಯಲ್ಲಿ ಯಾವುದೇ ಅಪರಾಧ ಮಾಡಿಲ್ಲ ಎಂದು ವಾದಿಸಿದ್ದನು.
“ಪತ್ನಿಯ ದೇಹವು ಅವಳ ಸ್ವಂತ ಆಸ್ತಿಯಾಗಿದೆ. ಅವಳ ವೈಯಕ್ತಿಕ ಮತ್ತು ನಿಕಟ ಜೀವನದ ಎಲ್ಲಾ ಅಂಶಗಳಲ್ಲಿ ಅವಳ ಒಪ್ಪಿಗೆ ಪಡೆಯಬೇಕಾಗಿದೆ. ಗಂಡನ ಪಾತ್ರವು ಯಜಮಾನ ಅಥವಾ ಮಾಲೀಕನ ಪಾತ್ರವಲ್ಲ, ಬದಲಾಗಿ, ಸಮಾನ ಪಾಲುದಾರ ಮಾತ್ರವಾಗಿದೆ. ಅವನು ಪತ್ನಿಯ ಸ್ವಾಯತ್ತತೆ ಮತ್ತು ಪ್ರತ್ಯೇಕತೆಯನ್ನು ಗೌರವಿಸಲು ಬದ್ಧವಾಗಿರಬೇಕು. ಈ ಹಕ್ಕುಗಳನ್ನು ನಿಯಂತ್ರಿಸುವ ಅಥವಾ ಉಲ್ಲಂಘಿಸುವ ಪ್ರಯತ್ನಗಳು ಕಾನೂನಿನ ಸಂಪೂರ್ಣ ಉಲ್ಲಂಘನೆಯಾಗಿದೆ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
“ಮದುವೆಯು ಪತಿಗೆ ಮಾಲೀಕತ್ವವನ್ನು ನೀಡುವುದಿಲ್ಲ ಅಥವಾ ಅವನ ಹೆಂಡತಿಯ ಮೇಲೆ ನಿಯಂತ್ರಣವನ್ನು ನೀಡುವುದಿಲ್ಲ, ಹಾಗೂ ಮದುವೆಯು ಪತ್ನಿಯ ಸ್ವಾಯತ್ತತೆ ಅಥವಾ ಗೌಪ್ಯತೆಯ ಹಕ್ಕನ್ನು ದುರ್ಬಲಗೊಳಿಸುವುದಿಲ್ಲ. ಫೇಸ್‌ಬುಕ್‌ನಲ್ಲಿ ಖಾಸಗಿ ಕ್ಷಣದ ವೀಡಿಯೊವನ್ನು ಅಪ್‌ಲೋಡ್ ಮಾಡುವ ಮೂಲಕ, ಅರ್ಜಿದಾರ (ಪತಿ) ವೈವಾಹಿಕ ಸಂಬಂಧದ ಪವಿತ್ರತೆಯನ್ನು ಗಂಭೀರವಾಗಿ ಉಲ್ಲಂಘಿಸಿದ್ದಾರೆ.” ಎಂದು ಕೋರ್ಟ್ ಹೇಳಿದೆ. ಪತ್ನಿಯ ದೇಹ
ಇದನ್ನೂ ಓದಿ: ಅಣ್ಣಾ ವಿವಿ ಅತ್ಯಾಚಾರ ಪ್ರಕರಣ : ಮಹಿಳಾ ಅಧಿಕಾರಿಗಳ ಎಸ್‌ಐಟಿ ರಚಿಸಿದ ಮದ್ರಾಸ್ ಹೈಕೋರ್ಟ್, ₹25 ಲಕ್ಷ ಪರಿಹಾರ ನೀಡಲು ಸೂಚನೆ


