- Advertisement -
ವಿವಿಧ ರಾಜ್ಯಗಳಲ್ಲಿ ಏಪ್ರಿಲ್ 11 ರಂದು ನಡೆದ ಮೊದಲ ಹಂತದ ಚುನಾವಣೆಗೂ ಮೊದಲು ಪ್ರಕಟ/ಪ್ರಸಾರವಾದ ಚುನಾವಣಾ ಸಮೀಕ್ಷೆಗಳು ಎನ್‍ಡಿಎಗೆ ಸಣ್ಣ ಅಂತರದ ಬಹುಮತ ಅಥವಾ 272ರ ಮಾರ್ಕ್ ತಲುಪುವ ಸಾಧ್ಯತೆಯನ್ನು ತೋರಿಸಿದ್ದವು. ಆದರೆ ಈಗ ಏಪ್ರಿಲ್ 11ರ ನಂತರ ಸಮೀಕ್ಷೆ ಮಾಡಿದ ದೇಶದ ಎರಡು ವಿಶ್ವಾಸಾರ್ಹ ಚುನಾವಣಾ ಸಮೀಕ್ಷಾ ಸಂಸ್ಥೆಗಳ ಪ್ರಕಾರ ಮೋದಿ ಹವಾ ಬಕ್ಕಬರಲು ಬೀಳ್ತಾ ಇದೆ. ಸಿ-ವೋಟರ್ ಸಂಸ್ಥೆ ಪ್ರಕಾರ ಮೋದಿ ಜನಪ್ರಿಯತೆ ಬರೋಬ್ಬರಿ ಶೇ. 19ರಷ್ಟು ಕುಸಿದಿದೆ! ಸಿಎಸ್‍ಡಿಎಸ್ ಪ್ರಕಾರ, ಸೀಟು-ಸೀಟುಗಳ ಫೈಟಿನ ಲೆಕ್ಕದಲ್ಲಿ ಬಿಜೆಪಿ ಎಡವಿ ತೊಂದರೆಗೆ ಸಿಲುಕಿದೆ….

ಏಸಿಯನ್ ಏಜ್‍ನಲ್ಲಿ ಏಪ್ರಿಲ್ 13ರಂದು ಪ್ರಕಟವಾದ ‘ಮೊದಲ ಹಂತದ ಚುನಾವಣೆ ನಂತರ ಬಿಜೆಪಿಗೆ ಅನಾನುಕೂಲಕರ ಪರಿಸ್ಥಿತಿಯೇ?’ ಎಂಬ ತಲೆಬರಹದ ಲೇಖನದಲ್ಲಿ ಸಿಎಸ್‍ಡಿಎಸ್ ನಿರ್ದೇಶಕ ಸಂಜಯ ಕುಮಾರ್ ಹಲವು ಸಂಗತಿಗಳನ್ನು ನಮ್ಮ ಮುಂದೆ ಇಡುತ್ತಾರೆ:
• ಮೊದಲ ಹಂತದಲ್ಲಿ ಉತ್ತರಪ್ರದೇಶದಲ್ಲಿ ನಡೆದ ಎಂಟು ಲೋಕಸಭಾ ಚುನಾವಣೆಯಲ್ಲಿ ಘಾಜಿಯಾಬಾದ್ ಮತ್ತು ಗೌತಮ್ ಬುದ್ಧಿ ನಗರ ಕ್ಷೇತ್ರಗಳಲ್ಲಿ ಮಾತ್ರ ಮತದಾನ ಪ್ರಮಾಣದಲ್ಲಿ ಸಣ್ಣ ಏರಿಕೆ ಕಂಡಿದೆ. ಇಲ್ಲಿ ಕ್ರಮವಾಗಿ, ಕೇಂದ್ರ ಸಚಿವರಾದ ವಿ.ಕೆ. ಸಿಂಗ್ ಮತ್ತು ಮಹೇಶ್ ಶರ್ಮಾ ಸ್ಪರ್ಧಿಸಿದ್ದಾರೆ.
• ಉಳಿದ ಆರು ಕ್ಷೇತ್ರಗಳಲ್ಲಿ (ಇಲ್ಲಿ ಮುಸ್ಲಿಮರ ಸಂಖ್ಯೆ ಸಾಪೇಕ್ಷವಾಗಿ ಹೆಚ್ಚು) 2014ರ ಚುನಾವಣೆಗಿಂತ ಮತದಾನ ಕಡಿಮೆಯಾಗಿದೆ.
• ನನ್ನ ಲೆಕ್ಕದ ಪ್ರಕಾರ, ಎಂಟರಲ್ಲಿ ಮೇಲೆ ಪ್ರಸ್ತಾಪಿಸಿದ ಎರಡರಲ್ಲಿ ಮಾತ್ರ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿಯಿದೆ.
• ಹಾಗೆಯೇ ಆದರೆ, ಉತ್ತರಪ್ರದೇಶದ ಮೊದಲ ಹಂತದ ಚುನಾವಣೆಯಲ್ಲೇ ಬಿಜೆಪಿಗೆ 6 ಸೀಟುಗಳ ನಷ್ಟವಾಗಲಿದೆ. 2014ರಲ್ಲಿ ಬಿಜೆಪಿ ಇಲ್ಲಿ 8 ಸೀಟನ್ನೂ ಗೆದ್ದಿತ್ತು.

ಈ ಹಿಂದೆ ಇದೇ ಸಂಜಯ ಕುಮಾರ್ ಅವರು ಬಿಜೆಪಿ ಕುರಿತಾಗಿ ಮಾಡಿದ್ದ ಅಂದಾಜುಗಳಿಗೆ ಹೋಲಿಸಿದಾಗ, ಈ ಸಲದ ಅವರ ಲೆಕ್ಕದಲ್ಲಿ ಸಾಕಷ್ಟು ಗುಣಾತ್ಮಕ ಮತ್ತು ಪರಿಮಾಣಾತ್ಮಕ ಅಂಶಗಳನ್ನು ನೋಡಬಹುದು. ಈ ಲೇಖನಕ್ಕೂ ಒಂದು ವಾರ ಮುಂಚೆ ಬರೆದ ಲೇಖನದಲ್ಲಿ ಅವರು ‘ಬಿಜೆಪಿಗೆ ಅನುಕೂಲಕರ’ (advantage BJP) ಎಂದಿದ್ದರು. ಈಗ ಮೊದಲ ಹಂತದ ಚುನಾವಣೆ ನಂತರ, ಅವರು ‘ಬಿಜೆಪಿಗೆ ಅನಾನುಕೂಲಕರ?’ (disadvantage BJP?) ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.
ಸಂಜಯ ಕುಮಾರ್ ಅವರ ಲೆಕ್ಕ ಅಥವಾ ಅಂದಾಜನ್ನು ಸಿಎಸ್‍ಡಿಎಸ್‍ನ ಹಿಂದಿನ ಸರ್ವೆಗೆ ಹೋಲಿಸಿ, ಸೀಟುಗಳ ಲೆಕ್ಕದಲ್ಲಿ ವಿಶ್ಲೇಷಣೇ ಮಾಡಿದಾಗ:
ಮೊದಲ ಹಂತದ ಚುನಾವಣೆಗೂ ಸ್ವಲ್ಪ ದಿನ ಮೊದಲು ಸಿಎಸ್‍ಡಿಎಸ್ ಪ್ರಕಟಿಸಿದ ಸಮೀಕ್ಷೆ ಪ್ರಕಾರ, ಉತ್ರಪ್ರದೇಶದಲ್ಲಿ ಬಿಜೆಪಿಗೆ 80ರಲ್ಲಿ 32-40 ಸೀಟು (ಅಂದರೆ ಶೇ.40-50) ಸಿಗುತ್ತದೆ ಎನ್ನಲಾಗಿತ್ತು. ಆದರೆ, ಮೊದಲ ಹಂತದ ಚುನಾವಣೆ ನಂತರ ಸಂಜಯಕುಮಾರ್ ಬರೆದಿರುವ ಲೇಖನದಲ್ಲಿ ಮೊದಲ ಹಂತದಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆ ನಡೆದ ಎಂಟು ಕ್ಷೇತ್ರಗಳಲ್ಲಿ ಬಿಜೆಪಿಗೆ ಎರಡೇ ಎರಡು ಸೀಟು ಸಿಗಲಿದೆ. ಮುಂದಿನ ಹಂತಗಳಲ್ಲಿ ಇದೇ ಟ್ರೆಂಡ್ ಮುಂದುವರೆದರೆ, ಬಿಜೆಪಿಗೆ ಉತ್ತರ ಪ್ರದೇಶದ 80ರಲ್ಲಿ ಕೇವಲ 20-25 ಸೀಟು ಮಾತ್ರ ಸಿಗಲಿವೆ.
ಈ ಕುರಿತು ‘ಕ್ವಿಂಟ್’ ಜೊತೆ ಮಾತಾಡಿರುವ ಸಂಜಯ ಕುಮಾರ್, ಮತದಾನದ ಬಗ್ಗೆ ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು ಹೆಚ್ಚು ಉತ್ಸುಕರಾಗಿರಬಹುದು. ಮಹಾಘಟಬಂಧನ್‍ಗೆ ‘ಫಿಕ್ಸ್’ ವೋಟ್‍ಗಳಿವೆ. ಮತದಾನ ಪ್ರಮಾಣದಲ್ಲಿ ಕಡಿಮೆ ಆಯಿತೆಂದರೆ, ಬಿಜೆಪಿ ಎಡವಟ್ಟು ಮಾಡಿಕೊಂಡಿದೆ ಎಂದೇ ಅರ್ಥ’ ಎಂದು ವಿಶ್ಲೇಷಣೆ ಮಾಡಿದ್ದಾರೆ.
ಇದೇ ಲೆಕ್ಕಾಚಾರವನ್ನು ಬಿಹಾರ್ ಮತ್ತು ಮಹಾರಾಷ್ಟ್ರಕ್ಕೂ ವಿಸ್ತರಿಸುವ ಅವರು, ಬಿಹಾರದಲ್ಲಿ ಮೊದಲ ಹಂತದಲ್ಲಿ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಅಂದರೆ ಅದು ಬಿಜೆಪಿ ಮೈತ್ರಿಗೆ ಕಷ್ಟ ಎಂದೇ ಅರ್ಥ ಎನ್ನುತ್ತಾರೆ. ಈ ಮೊದಲಿನ ಸರ್ವೆಯಲ್ಲಿ ಸಿಎಸ್‍ಡಿಎಸ್ ಸರ್ವೆ ಬಿಹಾರದಲ್ಲಿ ಎನ್‍ಡಿಎಗೆ ಸ್ವೀಪ್ ಎಂಬರ್ಥದಲ್ಲಿ ಹೇಳಿತ್ತು. ಮಹಾರಾಷ್ಟ್ರದ ವಿದರ್ಭದಲ್ಲೂ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬರಲಾರದು ಎನ್ನುತ್ತಾರೆ ಸಂಜಯ ಕುಮಾರ್. ಇದೇ ಮೊದಲ ಬಾರಿಗೆ ಮತ ಹಂಚಿಕೆ ಆಧಾರವನ್ನು ಬಿಟ್ಟು ಸೀಟ್‍ಗಳನ್ನು ಆಧಾರವಾಗಿ ಇಟ್ಟುಕೊಂಡು ಸಿಎಸ್‍ಡಿಎಸ್ ಸಮೀಕ್ಷೆ ಮಾಡಿದೆ.
ಸಿ-ವೋಟರ್: ‘ಮೋದಿ ಜನಪ್ರಿಯತೆ ಕುಸಿತ’
ಇನ್ನೊಂದು ವಿಶ್ವಾಸಾರ್ಹ ಸಮೀಕ್ಷಾ ಸಂಸ್ಥೆ ಸಿ-ವೋಟರ್ ಕೂಡ ಬಿಜೆಪಿಗೆ ತೊದರೆ ಎಂಬರ್ಥದಲ್ಲಿ ಅಂಕಿಅಂಶಗಳನ್ನು ನೀಡಲು ಶುರು ಮಾಡಿದೆ. ಮೋದಿ ಮತ್ತು ಅವರ ಸರ್ಕಾರದ ಜನಪ್ರಿಯತೆ ಈ ಒಂದೇ ತಿಂಗಳಲ್ಲಿ 19 ಅಂಕಗಳಷ್ಟು ಕುಸಿದಿದೆ ಎಂದು ಅದರ ಲೇಟೆಸ್ಟ್ ಸಮೀಕ್ಷೆ ಹೇಳುತ್ತಿದೆ. ಈ ಹಿಂದಿನ ಸರ್ವೆಯಲ್ಲಿ ಅದು ಬಾಲಾಕೋಟ್ ದಾಳಿ ನಂತರ ಮೋದಿ ಜನಪ್ರಿಯತೆ ಹೆಚ್ಚಿದೆ ಎಂದು ಹೇಳಿತ್ತು. ಹೊಸ ಸಮೀಕ್ಷೆಯಲ್ಲಿ ಅದು ಕೇವಲ ಒಂದೇ ತಿಂಗಳಲ್ಲಿ 19 ಅಂಕಗಳಷ್ಟು ಕುಸಿದೆ ಎಂದು ಅಂಕಿಅಂಶಗಳನ್ನು ನೀಡಿದೆ.
ಮಾರ್ಚ್ 7ರಂದು ಮೋದಿ ಸರ್ಕಾರದ ಜನಪ್ರಿಯತೆ ದರ ಶೇ. 62.02 ಇತ್ತು. ನಂತರ ಅದರಲ್ಲಿ ಸಣ್ಣಗೆ ಕುಸಿತ ಶುರುವಾಯಿತು. ಏಪ್ರಿಲ್ 12 ರ ಮೊದಲ ಹಂತದ ಚುನಾವಣೆ ಬಳಿಕ ಅದು ಶೇ. 43.25ಕ್ಕೆ ಕುಸಿದಿದೆ ಎನ್ನುತ್ತದೆ ಸ-ವೋಟರರನ ಲೇಟೆಸ್ಟ್ ಸರ್ವೆ.

ಸಮೀಕ್ಷೆ ಅಂದಾಜಿಗಿಂತ ಕೆಳಕ್ಕೆ ಬಿಜೆಪಿ
• ಸಿಎಸ್‍ಡಿಎಸ್‍ನ ಸಂಜಯಕುಮಾರ್ ಮತ್ತು ಸಿ-ವೋಟರ್‍ನ ಲೇಟೆಸ್ಟ್ ಲೆಕ್ಕಾಚಾರ ಮತ್ತು ಸಮೀಕ್ಷೆಗಳ ಪ್ರಕಾರ, ಮೊದಲ ಹಂತಕ್ಕೂ ಮೊದಲು ಸರ್ವೆಗಳು ಬಿಜೆಪಿ ಮತ್ತು ಎನ್‍ಡಿಎಗೆ ಅಂದಾಜಿಸಿದ್ದಕ್ಕಿಂತ ಕಡಿಮೆ ಸೀಟುಗಳು ಸಿಗಲಿವೆ.
• ಸಿ-ವೋಟರ್ ಪ್ರಕಾರ, ಬಾಲಾಕೋಟ್ ವಿಷಯ ಈಗ ಕಾಣೆಯಾಗಿದ್ದು, ಮೋದಿಯ ಜನಪ್ರಿಯತೆ ಕೆಳಮುಖದಲ್ಲಿ ಚಲಿಸುತ್ತಿದೆ.
• ಪ್ರಧಾನಿ ಹುದ್ದೆಗೆ ಮೋದಿಯೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಹೆಚ್ಚು ಬೆಂಬಲ ನೀಡಿದ್ದ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಬಿಹಾರ್‍ಗಳಲ್ಲಿ ಬಿಜೆಪಿ/ಎನ್‍ಡಿಎ ಮೈತ್ರಿ ಲೆಕ್ಕಾಚಾರ, ಜಾತಿ ಮತ್ತು ಅಭ್ಯರ್ಥಿಗಳ ಆಯ್ಕೆಯಲ್ಲಿ ಅಶಕ್ತವಾಗಿವೆ.
• ಉತ್ತರಪ್ರದೇಶದಲ್ಲಿ ಮಹಾಘಟಬಂಧನ್‍ಗೆ ದೊಡ್ಡ ಲಾಭ ಸಿಗಲಿದ್ದರೆ, ಬಿಹಾರ್ ಮತ್ತು ಮಹಾರಾಷ್ಟ್ರಗಳಲ್ಲಿ ಸೀಟ್-ಟು-ಸೀಟ್ ಕದನವಿರುವುದು ಬಿಜೆಪಿ ಮತ್ತು ಮೋದಿಗೆ ಹಿನ್ನಡೆಯೇ ಎನ್ನುತ್ತಾರೆ ಸಂಜಯ ಕುಮಾರ್.
• ಕೊನೆಯ ಹಂತದ ಸರ್ವೆಗಳು ಎನ್‍ಡಿಎಗೆ 260-270 ಸೀಟುಗಳು ಸಿಗಲಿವೆ ಎಂದಿದ್ದವು. ಆದರೆ ಈಗ ಮೊದಲ ಹಂತದ ನಂತರದಲ್ಲಿ ಸಿ-ವೋಟರ್ ಟ್ರ್ಯಾಕರ್ ಮತ್ತು ಸಿಎಸ್‍ಡಿಎಸ್ ನಿರ್ದೇಶಕ ಸಣಜಯ ಕುಮಾರ್ ವಿಶ್ಲೇಷಣೆ ಪ್ರಕಾರ, ಎನ್‍ಡಿಎ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಕುಸಿಯಲಿದೆ.
(ಆಧಾರ: ದಿ ಕ್ವಿಂಟ್)


