“ಸರ್ಕಾರಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ, ನಿಂಬೆ ಹಣ್ಣು ಕತ್ತರಿಸಿ ಮಾಟ, ಮಂತ್ರದ ಮೂಲಕ ಅವರ ದೆವ್ವ ಬಿಡಿಸುತ್ತೇನೆ” ಎಂದು ಛತ್ತೀಸ್‌ಗಢದ ಬಿಜೆಪಿ ಸಂಸದ ಭೋಜರಾಜ್ ನಾಗ್ ಹೇಳಿದ್ದಾರೆ.
ವರದಿಗಳ ಪ್ರಕಾರ, ತಮ್ಮ ಲೋಕಸಭಾ ಕ್ಷೇತ್ರ ಕಾಂಕೇರ್‌ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ, ಜಲ ಜೀವನ್ ಮಿಷನ್ ಸೇರಿದಂತೆ ಸರ್ಕಾರಿ ಯೋಜನೆಗಳಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಉಲ್ಲೇಖಿಸಿದ ಸಂಸದ ನಾಗ್, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
“ನಾನು ಈ ಹಿಂದೆಯೂ ಹೇಳಿದ್ದೇನೆ, ಈಗ ಮತ್ತೊಮ್ಮೆ ಹೇಳುತ್ತಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಕೆಲವರು (ಅಧಿಕಾರಿಗಳು) ನಿರ್ಲಕ್ಷ್ಯದ ಮೂಲಕ ಹಾಳು ಮಾಡುತ್ತಿದ್ದಾರೆ. ಅವರು ಸರಿಯಾಗಿ ಜವಾಬ್ದಾರಿ ನಿರ್ವಹಿಸದಿದ್ದರೆ, ಪ್ರತಿಯೊಬ್ಬರ ಹೆಸರಿನಲ್ಲೂ ನಿಂಬೆ ಹಣ್ಣು ಕತ್ತರಿಸುತ್ತೇನೆ” ಎಂದು ಸಂಸದ ನಾಗ್ ಹೇಳಿದ್ದಾರೆ.
“ನಾನು ಬೈಗಾ (ಮಾಟ, ಮಂತ್ರದ ಶಕ್ತಿಯ ಮೂಲಕ ಆಧ್ಯಾತ್ಮಿಕ ಚಿಕಿತ್ಸೆ ನೀಡುವ ಅಥವಾ ದೆವ್ವ, ಭೂತ ಬಿಡಿಸುವ ಸಂಪ್ರದಾಯ ಅನುಸರಿಸುವ ಬುಡಕಟ್ಟು ಸಮುದಾಯ) ಸಮುದಾಯದವನು” ಎಂದು ಈ ಹಿಂದೆಯೊಮ್ಮೆ ಸಂಸದ ನಾಗ್ ಅವರು ಹೇಳಿದ್ದರು ಎಂದು ವರದಿಗಳು ತಿಳಿಸಿವೆ.
ನಾಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಹಿರಿಯ ವಕ್ತಾರ ಧನಂಜಯ್ ಸಿಂಗ್ ಠಾಕೂರ್ “ಬಿಜೆಪಿಗೆ ಸಂಸದ ಈ ಹೇಳಿಕೆಗಿಂತ ಉತ್ತಮವಾದ ಪ್ರಮಾಣಪತ್ರ ಯಾವುದಿದೆ? ಬಿಜೆಪಿ ಸಂಸದರು ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅದರ, ಪರಿಣಾಮವನ್ನು ಜನರು ಅನುಭವಿಸುತ್ತಿದ್ದಾರೆ” ಎಂದಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಬುಡಕಟ್ಟು ವ್ಯವಹಾರಗಳು ಮತ್ತು ಕೃಷಿ ಖಾತೆಯ ರಾಜ್ಯ ಸಚಿವ ರಾಮ್‌ವಿಚಾರ್ ನೇತಮ್, “ರಾಜ್ಯದ ಆಡಳಿತ ಯಂತ್ರ ಅಥವಾ ಅಧಿಕಾರಿಗಳಿಂದ ಕಾಂಗ್ರೆಸ್ ಭೂತವನ್ನು ಓಡಿಸುವುದಾಗಿ ಸಂಸದರು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಅಧಿಕಾರಿಗಳು ಬದ್ದತೆಯಿಂದ ಜನರಿಗಾಗಿ ಕೆಲಸ ಮಾಡಬೇಕು” ಎಂದು ಹೇಳಿದ್ದಾರೆ.
“ಜನಪ್ರತಿನಿಧಿಯೊಬ್ಬರು ಇಂತಹ ಹೇಳಿಕೆ ನೀಡಿರುವುದು ದುರದೃಷ್ಟಕರ ಸಂಗತಿ. ಭಾರತೀಯ ಜನತಾ ಪಕ್ಷದೊಳಗೆ ಮೂಢನಂಬಿಕೆ ಆಳವಾಗಿದೆ. ಕೊರೋನಾ ಓಡಿಸಲು ಚಪ್ಪಾಳೆ ತಟ್ಟಲು ಮತ್ತು ತಟ್ಟೆ ಬಡಿಯಲು ಪ್ರಧಾನಿ ಮೋದಿ ಸೂಚಿಸಿದ್ದರು. ಆ ಮೌಢ್ಯತೆ ಈಗ ಅವರ ಅನುಯಾಯಿಗಳಲ್ಲಿ ಪ್ರತಿಧ್ವನಿಸುತ್ತಿದೆ” ಎಂದು ಛತ್ತೀಸ್‌ಗಢದ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ವಾಗ್ದಾಳಿ ನಡೆಸಿದ್ದಾರೆ.
ಛತ್ತೀಸ್‌ಗಢದಲ್ಲಿ ಮಾಟಮಂತ್ರಕ್ಕೆ ಸಂಬಂಧಿಸಿದಂತೆ ಕೊಲೆಗಳು ಆಗಾಗ ವರದಿಯಾಗುತ್ತಲೇ ಇರುತ್ತದೆ. ಕಳೆದ ತಿಂಗಳು, ಬಲೋದಬಝಾರ್-ಭಟಪರಾ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ, ಅವರ ಇಬ್ಬರು ಸಹೋದರಿಯರು ಮತ್ತು 11 ತಿಂಗಳ ಸೋದರಳಿಯನ ಕೊಲೆ ನಡೆದಿತ್ತು. ಇದರ ಹಿಂದೆ ಸಂಬಂಧಿಕರೊಬ್ಬರು ಮಾಟ ಮಂತ್ರ ಮಾಡಿದ ಶಂಕೆ ವ್ಯಕ್ತವಾಗಿದೆ.
ಮಾಟ, ಮಂತ್ರ, ದೆವ್ವ ಬಿಡಿಸುವುದು ಇತ್ಯಾದಿ ಕೃತ್ಯಗಳನ್ನು ತಡೆಗಟ್ಟಲು ಛತ್ತೀಸ್‌ಗಢದಲ್ಲಿ 2005ರಲ್ಲಿ ತೋನಾಹಿ ಪ್ರತದ್ನಾ ನಿವಾರಣ್ ಕಾಯ್ದೆ ಜಾರಿಗೆ ತರಲಾಗಿದೆ. ಆದರೂ, ಅಂತಹ ಪ್ರಕರಣಗಳು ನಡೆಯುತ್ತಲೇ ಇವೆ.
ಇದನ್ನೂ ಓದಿ : ಮಹಾರಾಷ್ಟ್ರ | 200 ಕ್ಷೇತ್ರಗಳಲ್ಲಿ ಮಹಾ ವಿಕಾಸ್ ಅಘಾಡಿ ಒಮ್ಮತ – ಶರದ್ ಪವಾರ್


