ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪನೆ ಮಾಡುವಲ್ಲಿ ಹೆಚ್ಚು ವಿಳಂಬವಾದರೆ, ನ್ಯಾಷನಲ್ ಕಾನ್ಫರೆನ್ಸ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಶನಿವಾರ ಹೇಳಿದ್ದಾರೆ.
ಪಕ್ಷದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಅಕ್ಟೋಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಜಮ್ಮು ಕಾಶ್ಮೀರದ ಜನತೆ ತಮ್ಮ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕೆಂದು ಬಯಸಿದ್ದರು. ಆದರೆ ರಾಜ್ಯ ಸ್ಥಾನಮಾನ ಮರು ಸ್ಥಾಪಿಸದಿರುವುದು ನಮ್ಮನ್ನು ತಡೆಯುತ್ತಿದೆ” ಎಂದಿದ್ದಾರೆ.
“ನಾವು ರಾಜ್ಯದ ಸ್ಥಾನಮಾನಕ್ಕಾಗಿ ಕಾಯುತ್ತಿದ್ದೇವೆ. ವಿಳಂಬವಾದರೆ ಸುಪ್ರೀಂ ಕೋರ್ಟ್‌ಗೆ ಹೋಗುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ರಾಜ್ಯತ್ವ ಪುನಃಸ್ಥಾಪಿಸಿದಾಗ, ನಮಗೆ ಹೆಚ್ಚಿನ ಅಧಿಕಾರ ಸಿಗಲಿದೆ ಎಂದು ನಾನು ಭಾವಿಸುತ್ತೇನೆ” ಎಂಬುವುದಾಗಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆಗಸ್ಟ್ 2019ರಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿಧಿ 370 ಅನ್ನು ರದ್ದು ಮಾಡಿದೆ. ಅಲ್ಲದೆ, ರಾಜ್ಯವನ್ನು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ.
ಡಿಸೆಂಬರ್ 2023ರಲ್ಲಿ, ಸುಪ್ರೀಂ ಕೋರ್ಟ್ 2019ರ ವಿಧಿ 370ರ ರದ್ದತಿಯ ಆದೇಶದ ಸಿಂಧುತ್ವವನ್ನು ಎತ್ತಿಹಿಡಿದಿದೆ ಮತ್ತು ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲು ಕೇಂದ್ರಕ್ಕೆ ಆದೇಶಿಸಿದೆ.
2024ರ ನವೆಂಬರ್ 6ರಂದು ಜಮ್ಮು ಕಾಶ್ಮೀರ ವಿಧಾನಸಭೆಯು ರಾಜ್ಯಕ್ಕೆ 370ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಲು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದೆ.
ಜನವರಿಯಲ್ಲಿ, ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕಾನೂನು ನೆರವು ಪಡೆಯುವ ಮೊದಲು ಕೇಂದ್ರಾಡಳಿತ ಪ್ರದೇಶದ ರಾಜ್ಯತ್ವವನ್ನು ಪುನಃಸ್ಥಾಪಿಸಲು ಕೇಂದ್ರಕ್ಕೆ ಮೊದಲ ಅವಕಾಶ ನೀಡಲು ಬಯಸುವುದಾಗಿ ಹೇಳಿದ್ದರು.
ಭಾರತದ ಮಿತ್ರ ಇರಾನ್ ಮೇಲಿನ ಅಮೆರಿಕ ದಾಳಿಗೆ ಮೋದಿ ಮೌನವೇಕೆ? | ಕಾಂಗ್ರೆಸ್, ಸಿಪಿಐ ಪ್ರಶ್ನೆ


