ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ (ನ.27) ಹೇಳಿದ್ದಾರೆ.
ನವೆಂಬರ್ 20ಕ್ಕೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದೆ. ಆ ನಂತರ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ತೀವ್ರಗೊಂಡಿದೆ. ಈ ಕುರಿತ ಊಹಾಪೋಹಗಳು, ಗೊಂದಲಗಳನ್ನು ಪರಿಹರಿಸುವುದು ಮತ್ತು ಪಕ್ಷದ ಭವಿಷ್ಯ ರೂಪಿಸುವುದರ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.
ಐದು ವರ್ಷದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ತಲಾ ಎರಡೂವರೆ ವರ್ಷ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಒಪ್ಪಂದ ಆಗಿದೆ ಎಂಬ ವರದಿಗಳು ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆಯನ್ನು ಹೆಚ್ಚಿಸಿದೆ.
“ನಾನು ಮೂರು ಅಥವಾ ನಾಲ್ಕು ಪ್ರಮುಖ ನಾಯಕರನ್ನು ಕರೆದು ಚರ್ಚೆ ನಡೆಸುತ್ತೇನೆ. ಅದರ ನಂತರ, ಸಮಸ್ಯೆಯನ್ನು ಹೇಗೆ ಇತ್ಯರ್ಥಪಡಿಸುವುದು ಮತ್ತು ಮುಂದುವರಿಯುವುದು ಎಂಬುದನ್ನು ನಾವು ನಿರ್ಧರಿಸುತ್ತೇವೆ” ಎಂದು ಖರ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ ಎಂಬುವುದನ್ನು ಖರ್ಗೆ ದೃಢಪಡಿಸಿದ್ದಾರೆ.
ಹೆಚ್ಚುತ್ತಿರುವ ಗದ್ದಲದ ಮಧ್ಯೆ, ಸಿದ್ದರಾಮಯ್ಯ ಗುರುವಾರ ತಮ್ಮ ನಿವಾಸದಲ್ಲಿ ತಮ್ಮ ಆಪ್ತ ಬಳಗದ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಮತ್ತು ಕೆ.ಎನ್. ರಾಜಣ್ಣ ಸೇರಿದಂತೆ ಹಿರಿಯ ಸಚಿವರು ಮತ್ತು ಇತರ ನಾಯಕರನ್ನು ಭೇಟಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.


