“ಈ ಗೆಲುವು ಹೊಸ ರೀತಿಯ ರಾಜಕಾರಣವನ್ನು ಗುರುತಿಸಿದೆ ಹಾಗೂ ಇದು ಭಾರತ ಮಾತೆಯ ಗೆಲುವು” ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ದೆಹಲಿ ಚುನಾವಣೆಯ ಗೆಲುವಿನ ನಂತರ ಹೇಳಿದ್ದಾರೆ.
ಭಾರೀ ಗೆಲುವಿನ ನಂತರ ಅರವಿಂದ್ ಕೇಜ್ರಿವಾಲ್ ಇಂದು ತಮ್ಮ ಧನ್ಯವಾದ ಭಾಷಣದಲ್ಲಿ “ದಿಲ್ಲಿಯ ಜನರೆ ಐ ಲವ್ ಯು. ಈ ವಿಜಯವು ಹೊಸ ರೀತಿಯ ರಾಜಕೀಯವನ್ನು ಗುರುತಿಸಿದೆ , ಇದು ಭಾರತ ಮಾತೆಯ ಗೆಲುವು” ಎಂದು ಕರೆದರಲ್ಲದೆ “ಇಂದು ಮಂಗಳವಾರ, ಹನುಮಾನ್ ಜಿಯ ದಿನ, ಅವರು ದೆಹಲಿಗೆ ಆಶೀರ್ವಾದವನ್ನು ಸುರಿಸಿದ್ದಾರೆ, ಧನ್ಯವಾದಗಳು ಹನುಮಾನ್-ಜಿ” ಎಂದರು.
ಮುಖ್ಯಮಂತ್ರಿ ಕೇಜ್ರಿವಾಲ್ ಚುನಾವಣಾ ಪ್ರಚಾರ ಅಭಿಯಾನದ ಸಂದರ್ಭದಲ್ಲಿ ಹನುಮಾನ್ ಚಾಲಿಸಾ ಪಠಿಸಿರುವುದಕ್ಕೆ ಬಿಜೆಪಿಯೂ ಆಪ್ ಗೆಲ್ಲಲು ಬೇಕಾಗಿ ಹಿಂದುತ್ವವನ್ನು ಆಶ್ರಯಿಸುತ್ತಿದ್ದಾರೆ ಎಂಬ ಆರೋಪವನ್ನು ಮಾಡಿದ್ದರು.
ತೆರಿಗೆ ಇಲಾಖೆಯ ಮಾಜಿ ಅಧಿಕಾರಿಯಾದ ಕೇಜ್ರಿವಾಲ್ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಅವರ ಪಕ್ಷ 70 ಕ್ಷೇತ್ರಗಳಲ್ಲಿ 62ರಲ್ಲಿ ಗೆಲುವು/ಮುನ್ನಡೆ ಸಾಧಿಸಿದೆ.


