Homeಅಂತರಾಷ್ಟ್ರೀಯಪೌರತ್ವ ಕಾಯ್ದೆಯಿಂದ ಬಳಲುತ್ತಿರುವ ಬಿದೂನ್ ಜಿನ್ಸಿಯಾ: ಕುವೈಟ್‌ನ ದೇಶರಹಿತರಿಂದ ಭಾರತ ಕಲಿಯಬೇಕಾದ ಪಾಠ

ಪೌರತ್ವ ಕಾಯ್ದೆಯಿಂದ ಬಳಲುತ್ತಿರುವ ಬಿದೂನ್ ಜಿನ್ಸಿಯಾ: ಕುವೈಟ್‌ನ ದೇಶರಹಿತರಿಂದ ಭಾರತ ಕಲಿಯಬೇಕಾದ ಪಾಠ

ಪೌರತ್ವ ಕಾಯ್ದೆ ಜಾರಿಯಾದ ನಂತರ ತಾವು ವಾಸಿಸುತ್ತಿರುವ ದೇಶದಲ್ಲೇ ದೇಶರಹಿತರಾದ ಕುವೈಟ್‌ನ ಬಿದೂನ್ ಜನರ ಸಂಕಷ್ಟಗಳು ಭಾರತದ ಭಾವೀ ದೇಶರಹಿತರಿಗೆ ಒಂದು ಪಾಠವಾಗಿದೆ...

- Advertisement -
  • ಕಿಶೋರ್ ಗೋವಿಂದ
- Advertisement -

ಅನುವಾದ: ನಿಖಿಲ್ ಕೋಲ್ಪೆ

ಭಾರತ ಮತ್ತು ಕುವೈಟ್ ತೀರಾ ಭಿನ್ನವಾದ ಇತಿಹಾಸ ಹೊಂದಿದ್ದರೂ, ತಾವು ವಾಸಿಸುತ್ತಿರುವ ದೇಶದಲ್ಲೇ ದೇಶರಹಿತರಾದ ಕುವೈಟ್‌ನ ಬಿದೂನ್ ಜನರ ಸಂಕಷ್ಟಗಳು ಭಾರತದ ಭಾವೀ ದೇಶರಹಿತರಿಗೆ ಒಂದು ಪಾಠವಾಗಿದೆ. ಪೌರತ್ವ ನೋಂದಣಿಯ ಕಾರ್ಯಕ್ರಮದಿಂದ ಕುವೈಟ್ ಇನ್ನೂ ನರಳುತ್ತಿದೆ ಮತ್ತು ಸಮಸ್ಯೆಗಳು ದಿನಕಳೆದಂತೆ ಇನ್ನಷ್ಟು ಬಿಗಡಾಯಿಸುತ್ತಿವೆ.

“ಬಿದೂನ್ ಜಿನ್ಸಿಯಾ” ಎಂಬುದು ಅರೇಬಿಕ್ ಭಾಷೆಯಲ್ಲಿ “ರಾಷ್ಟ್ರರಹಿತರು” ಎಂದು ಅರ್ಥಕೊಡುತ್ತದೆ. ಆದರೆ, ಇದೊಂದು ದೊಡ್ಡ ಸುಳ್ಳು. ಯಾಕೆದರೆ ಬಿದೂನ್ ಜಿನ್ಸಿಯಾ ಎನಿಸಿಕೊಂಡ ಬಹುತೇಕ ಜನರು ಕುವೈಟ್‌ನವರೇ ಆಗಿದ್ದು, ಕುವೈಟ್‌ನ ಪೌರತ್ವದಿಂದ ವಂಚಿತರು. ಪೌರತ್ವ ಎಂದರೆ ಒಂದು ರಾಜಕೀಯ ಸಮುದಾಯಕ್ಕೆ ಸೇರಿದವರು ಎಂದು ಅರ್ಥ ಮತ್ತದು ಸ್ವಾತಂತ್ರ್ಯಕ್ಕೆ ಒಂದು ಪೂರ್ವ ಅಗತ್ಯವಾಗಿದೆ. ಜಗತ್ತಿನಾದ್ಯಂತ ಪೌರತ್ವ ವಂಚಿತ ಮತ್ತು ಪೌರತ್ವದಿಂದ ಬರುವ ಸ್ವಾತಂತ್ರ್ಯದಿಂದ ವಂಚಿತರಾದ ಜನರು ತುಂಬಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಜನರು ಯುದ್ಧ ಅಥವಾ ರಾಜಕೀಯ ಕಾರಣಗಳಿಂದಾಗಿ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಬಿದೂನ್ ಜಿನ್ಸಿಯಾಗಳ ಕತೆ ಇಂತಹಾ ಒಂದು ಉದಾಹರಣೆ. ಅವರಿಗೆ ಒಂದು ರಾಷ್ಟ್ರೀಯತೆ ಇದ್ದಿರಬಹುದು; ಆದರೆ, ಅವರು ದೇಶರಹಿತರು.

ಕುವೈಟ್‌ನ ದೇಶರಹಿತ ಜನರ ಹಕ್ಕುಗಳಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಕ್ಕಾಗಿ ಇದೇ ಜನವರಿ 28ರಂದು ಮೂವರು ಪ್ರತಿಭಟನಕಾರರಿಗೆ ಕುವೈಟ್‌ನ ನ್ಯಾಯಾಲಯಗಳು ತಲಾ 10 ವರ್ಷಗಳ ಸೆರೆವಾಸ ವಿಧಿಸಿದವು. ಕಳೆದ ವರ್ಷ ಸೂಕ್ತ  ದಾಖಲೆಗಳನ್ನು ಪಡೆಯಲಾಗದೆ ನೊಂದ ಅಯೇದ್ ಹಮದ್ ಎಂಬ ದೇಶರಹಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಾಗ ಕುವೈಟ್ ವಿವಾದಕ್ಕೆ ಒಳಗಾಗಿತ್ತು. ಆತನ ಸಾವು 15 ದೇಶರಹಿತ ವ್ಯಕ್ತಿಗಳು ಪ್ರತಿಭಟನೆ ನಡೆಸುವುದಕ್ಕೆ ಕಾರಣವಾಗಿತ್ತು. ದೇಶರಹಿತರ ಕೆಟ್ಟ ನಿರ್ವಹಣೆಯು ಹಿಂಸೆ ಮತ್ತು ತಮ್ಮದೇ ದೇಶದಲ್ಲಿ ಸೂಕ್ತ ದಾಖಲೆ ಪಡೆಯಲಾಗದೆ ಮಾನ್ಯತೆ ಕಳೆದುಕೊಂಡ ಕುವೈಟಿಗರ ವಿರುದ್ಧ ತಾರತಮ್ಯಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದರು.

ಕುವೈಟ್‌ನಲ್ಲಿ ಒಂದು ಲಕ್ಷ ದೇಶರಹಿತರು ಅಥವಾ ಬಿದೂನ್‌ಗಳು ವಾಸಿಸುತ್ತಿದ್ದಾರೆ ಎಂದು ಕುವೈಟ್‌ ಸರಕಾರ ಹೇಳಿತ್ತು. ಅವರೆಲ್ಲರೂ ಬೇರೆ ದೇಶಗಳಿಂದ ಬಂದ ನಿರಾಶ್ರಿತರು ಎಂದೂ ಅದು ವಾದಿಸಿತ್ತು. ಆದರೆ, ಕುವೈಟ್‌ನಲ್ಲಿ 2-3 ಲಕ್ಷ ದೇಶರಹಿತರು ವಾಸಿಸುತ್ತಿದ್ದು, ಅವರಲ್ಲಿ ಹೆಚ್ಚಿನವರು ಸ್ವಾತಂತ್ರ್ಯ ಕಾಲದಿಂದಲೂ ಪೌರತ್ವ ಪಡೆಯಲು ಸಾಧ್ಯವಾಗದ ಕುವೈಟಿಗರೇ ಆಗಿದ್ದಾರೆ ಎಂದು ಬಿದೂನ್ ಕಾರ್ಯಕರ್ತರು ವಾದಿಸುತ್ತಾರೆ. ಆದರೆ, ಕುವೈಟ್ ಸರಕಾರವು ಇನ್ನೂ ಕೂಡಾ ಪೌರತ್ವಕ್ಕೆ ಅರ್ಹರು ಎಂದು ಪರಿಗಣಿಸಲಾದವರಿಗೆ ಕೂಡಾ ಪೌರತ್ವ ನೀಡಲು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ.

ಬಿದೂನ್‌ಗಳಾದದ್ದು ಹೇಗೆ?

ಕುವೈತ್, ಪರ್ಶಿಯನ್ ಕೊಲ್ಲಿಯಲ್ಲಿ ಆಯಕಟ್ಟಿನ ಜಾಗದಲ್ಲಿದೆ. ಅದು ಒಟ್ಟೋಮಾನ್ ನಿಯಂತ್ರಣದಲ್ಲಿದ್ದಾಗ ರಾಜಕೀಯ ಸ್ವಾಯತ್ತತೆ ಉಳಿಸಿಕೊಂಡಿತ್ತು.‌ 1899ರಲ್ಲಿ ಅದನ್ನು ಆಶ್ರಿತ ರಾಜ್ಯವನ್ನಾಗಿ ಉಳಿಸಿಕೊಳ್ಳಲು ಆಳುವವರು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಎರಡನೇ ಮಹಾಯುದ್ಧದ ಬಳಿಕ ಕುವೈಟ್ ಅತ್ಯಂತ ದೊಡ್ಡ ತೈಲ ರಫ್ತುದಾರನಾಗಿ ಹೊರಹೊಮ್ಮಿತ್ತು. ಭಾರತವೂ ಸೇರಿದಂತೆ ಪ್ರಪಂಚದ ವಿವಿಧ ಭಾಗಗಳಿಂದ ಕಾರ್ಮಿಕರನ್ನು ಆಕರ್ಷಿಸಿತ್ತು. 1961ರಲ್ಲಿ ಕುವೈಟ್ ಸ್ವತಂತ್ರಗೊಂಡಾಗ ಅಲ್ಲಿನ ಆಳುವ ವರ್ಗವು ಆಶ್ರಿತ ರಾಜ್ಯ ಸ್ಥಾನಮಾನವನ್ನು ಕೊನೆಗೊಳಿಸಿತು.

ಹೊಸ ಸ್ವತಂತ್ರ ದೇಶದ ಮುಂದೆ ಎರಡು ಸವಾಲುಗಳಿದ್ದವು. ಮೊದಲನೆಯದಾಗಿ ತನ್ನನ್ನು ಒಂದು ಗಣರಾಜ್ಯವನ್ನಾಗಿ ಸ್ಥಾಪಿಸಿಕೊಳ್ಳಲು ಅದಕ್ಕೆ ನಾಗರಿಕರ ಯಾದಿಯೊಂದನ್ನು ರಚಿಸುವ ಅಗತ್ಯವಿತ್ತು. ಎರಡನೆಯದಾಗಿ ಒಂದು ಸ್ವತಂತ್ರ ಸೇನೆ ಮತ್ತು ಪೊಲೀಸ್ ಪಡೆಗಳನ್ನು ಸ್ಥಾಪಿಸುವ ಅಗತ್ಯವಿತ್ತು.

ಯಾರು ಪೌರತ್ವಕ್ಕೆ ಅರ್ಹರು ಎಂದು ನಿರ್ಧರಿಸುವ ರಾಷ್ಟ್ರೀಯತೆಯ ಕಾನೂನು ನಗರ ಪ್ರದೇದ ನಿವಾಸಿಗಳು ಮತ್ತು ಪ್ರಭಾವಿ ಸಮುದಾಯಗಳ ಸಂಪರ್ಕ ಹೊಂದಿದ್ದ ಜನರ ಪರವಾಗಿತ್ತು. ಅನೇಕ ಕುವೈಟಿಗರು ಪೌರತ್ವದಿಂದ ವಂಚಿತರಾದರು. ಅನೇಕರು- ದೂರದ ಗ್ರಾಮೀಣ ಪ್ರದೇಶಗಳ ಜನರು, ಒಂದೋ ನಿರಕ್ಷರತೆ ಅಥವಾ ತಿಳುವಳಿಕೆಯ ಕೊರತೆಯಿಂದಾಗಿ ಸೂಕ್ತ ದಾಖಲೆಗಳನ್ನು ಪಡೆಯಲಿಲ್ಲ. ಇವರನ್ನೇ ಮುಂದೆ ಬಿದೂನ್ ಜಿನ್ಸಿಯಾ (ಅರೇಬಿಕ್‌ನಲ್ಲಿ ರಾಷ್ಟ್ರೀಯತೆ ರಹಿತರು) ಅಥವಾ ಕೇವಲ ಬಿದೂನ್ (ರಹಿತರು) ಎಂದು ಕರೆಯಲಾಯಿತು.

ಬಿದೂನ್ ಕುವೈಟಿಗರು ಪೊಲೀಸ್ ಅಥವಾ ಸೇನೆಗೆ ಸೇರುವಂತಿರಲಿಲ್ಲ. ಸರಕಾರವು ವಿದೇಶಿ ರಾಷ್ಟ್ರೀಯರನ್ನು ಸೇರಿಸಿಕೊಳ್ಳಬೇಕಾಯಿತು. ಬಾಡಿಗೆ ಸೈನಿಕರು ಅಥವಾ ಮರ್ಸಿನರಿಗಳನ್ನು ನೇಮಕ ಮಾಡಿಕೊಂಡ ಅಂತಾರಾಷ್ಟ್ರೀಯ ವಿವಾದವನ್ನು ತಪ್ಪಿಸಲು ಕುವೈಟ್ ಸರಕಾರ ಇಂತಹಾ ಇಡೀ ಜನವರ್ಗವನ್ನೇ ದೇಶರಹಿತರು ಎಂದು ವರ್ಗೀಕರಿಸಿತು. ಇವರಲ್ಲಿ ಹಲವರು ಇರಾಕ್‌ನವರಾಗಿದ್ದು, ಹಲವು ಬಿದೂನ್ ಜನರು ಇರಾಕ್ ಜೊತೆ ಸಂಬಂಧ ಹೊಂದಿದ್ದರು. ಬಹಳ ಕಾಲದಿಂದ ಕುವೈಟ್ ಸೇನೆಯ ಬಹುಸಂಖ್ಯಾತರು ಬಿದೂನ್‌ಗಳೆಂದೇ ವರ್ಗೀಕರಣ ಹೊಂದಿದ್ದಾರೆ.

ಕುವೈಟ್‌ನ ಸ್ವಾತಂತ್ರ್ಯದ ಬಳಿಕದ ಎರಡು ದಶಕಗಳಲ್ಲಿ ಬಿದೂನ್‌ಗಳು ಹಲವಾರು ಹಕ್ಕುಗಳನ್ನು ಹೊಂದಿದ್ದರು. ಅವರಿಗೆ ಉಳಿದ ಕುವೈಟಿಗರಂತೆ ಉದ್ಯೋಗ, ಸಾರ್ವಜನಿಕ ಶಿಕ್ಷಣ ಮತ್ತು ಉಚಿತ ಆರೋಗ್ಯ ಸೇವೆಯ ಅವಕಾಶವಿತ್ತು. ಅವರು ಮದುವೆಗಳ ನೋಂದಣಿ ಮತ್ತಿತರ ಗುರುತು ದಾಖಲೆಗಳನ್ನು ಪಡೆಯಬಹುದಾಗಿತ್ತು. ಆದರೆ, ಅವರಿಗೆ ಮತದಾನ ಮಾಡುವ ಅಥವಾ ಪ್ರತಿಭಟನೆ ನಡೆಸುವ ಹಕ್ಕಿರಲಿಲ್ಲ. ಆ ಹಕ್ಕುಗಳು ಕುವೈಟಿ ನಾಗರಿಕರಿಗೆ ಮಾತ್ರ ಸೀಮಿತವಾಗಿದ್ದವು. ಹೊಸದಾಗಿ ಕುವೈಟಿ ನಾಗರಿಕರಾಗಿ ಪೌರತ್ವ ಪಡೆದರೂ ತಕ್ಷಣ ಈ ಹಕ್ಕುಗಳು ಸಿಗುತ್ತಿರಲಿಲ್ಲ. ಮತದಾನ ಮಾಡಲು ಪೌರತ್ವ ಪಡೆದು 30 ವರ್ಷಗಳ ತನಕ ಕಾಯಬೇಕಾಗಿತ್ತು.

ಬಿದೂನ್‌ಗಳಿಗೆ ಕಳಂಕ

1980ರ ದಶಕದಲ್ಲಿ ಕುವೈಟ್ ಸರಕಾರ ಬಿದೂನ್‌ಗಳ ಹಲವಾರು ಹಕ್ಕುಗಳನ್ನು ಹಿಂತೆಗೆದುಕೊಳ್ಳಲು ಆರಂಭಿಸಿತು. ಇರಾನಿನ ಕ್ರಾಂತಿಯಿಂದ ಆರಂಭವಾಗಿ, ಇರಾನ್- ಇರಾಕ್ ಯುದ್ಧದ ತನಕ ಕೊಲ್ಲಿಯ ಸಂಘರ್ಷಗಳ ಸಮಯದಲ್ಲಿ ಹಲವಾರು ನಿರಾಶ್ರಿತರು ಕುವೈಟ್‌ಗೆ ಬಂದರು. ಸೇನೆಗೆ ಕಡ್ಡಾಯ ಸೇರ್ಪಡೆ ಮತ್ತಿತರ ದಮನಗಳಿಂದ ತಪ್ಪಿಸಿಕೊಳ್ಳಲು ಅನೇಕ ಇರಾಕಿಗಳು ಕುವೈಟ್‌ಗೆ ಬಂದಿದ್ದಾರೆ ಎಂಬ ಕತೆಗಳು ಕುವೈಟ್ ಸರಕಾರವು ಬಿದೂನ್‌ಗಳನ್ನು ಸಂಶಯದಿಂದ ಕಾಣುವಂತೆ ಮಾಡಿತು.

1986ರಲ್ಲಿ ಸರಕಾರ ಬಿದೂನ್‌ಗಳ ಸ್ಥಾನಮಾನವನ್ನು ‘ಅಕ್ರಮ ನಿವಾಸಿಗಳು’ ಎಂದು ಬದಲಿಸಿತು. ಇದರಿಂದ ಅವರು ಹಲವಾರು ಹಕ್ಕುಗಳನ್ನು ಕಳೆದುಕೊಂಡರು. ಅವರನ್ನು ಉಚಿತ ಶಿಕ್ಷಣ, ವಸತಿ ಮತ್ತು ಆರೋಗ್ಯ ಸೇವೆಗಳಿಂದ ಹೊರಗಿಡಲಾಯಿತು. ಅನೇಕರನ್ನು ಕೆಲಸದಿಂದ ವಜಾ ಮಾಡಲಾಯಿತು. ಸರಕಾರ ವಿದೇಶಿ ನಿವಾಸಿ ಕಾನೂನನ್ನು ಬಿದೂನ್‌ಗಳ ಮೇಲೆ ಅನ್ವಯಿಸಲು ಆರಂಭಿಸಿತು. ಹಲವು ತಲೆಮಾರುಗಳಿಂದ ಕುವೈಟ್‌ನಲ್ಲಿ ವಾ‌ಸಿಸುತ್ತಿದ್ದ ಜನರನ್ನು ಏಕಾಏಕಿಯಾಗಿ ವಿದೇಶೀಯರು ಎಂದು ಪರಿಗಣಿಸಲಾಯಿತು. ಅನೇಕ ಬಿದೂನ್‌ಗಳನ್ನು ಹೊರಗಟ್ಟಲಾಯಿತೆಂದೂ ಹೇಳಲಾಗುತ್ತದೆ.

ಬೇರಾವುದೇ ರಾಷ್ಟ್ರವು ಅವರನ್ನು ತನ್ನ ರಾಷ್ಟ್ರೀಯರು ಎಂದು ಪರಿಗಣಿಸದೇ ಇರುವುದರಿಂದ ಅವರನ್ನು ವಿದೇಶಿ ನಿವಾಸಿ ಕಾನೂನಿನಂತೆ ಹೊರಗಿನವರು ಎಂದು ಪರಿಗಣಿಸಲಾಗದು ಎಂದು 1988ರಲ್ಲಿ ಮೇಲ್ಮನವಿ ನ್ಯಾಯಾಲಯವೊಂದು ತೀರ್ಪು ನೀಡಿತು. ಆದರೆ, ಇದನ್ನು ಅವಗಣಿಸಿದ ಸರಕಾರವು, ಬಿದೂನ್‌ಗಳ ಗಡಿಪಾರನ್ನು ಮುಂದುವರಿಸಿತು. 1980ರ ದಶಕದಲ್ಲಿ ಪೌರತ್ವ ಕಾನೂನಿಗೆ ತಿದ್ದುಪಡಿ ಮಾಡಿ ಅದನ್ನು ಇನ್ನಷ್ಟು ಕಠಿಣಗೊಳಿಸಲಾಯಿತು.

1990ರಲ್ಲಿ ಇರಾಕ್ ಕುವೈಟನ್ನು ಆಕ್ರಮಿಸಿದಾಗ ಬಿದೂನ್‌ಗಳು ಹರಕೆಯ ಕುರಿಗಳಾದರು. ಕುವೈಟ್ ಸೇನೆಯ ಕೆಲವರನ್ನು ಸೆರೆಹಿಡಿದು ಇರಾಕ್ ಪರ ಹೋರಾಡುವಂತೆ ಮಾಡಲಾಯಿತು. ಇರಾಕ್ ಸೇನೆ ಕುವೈಟನ್ನು ಪ್ರವೇಶಿಸಿದಂದಿನಿಂದ ಪ್ರತಿಯೊಬ್ಬ ದೇಶ ರಹಿತರಿಗೆ ದ್ರೋಹಿಗಳೆಂಬ ಕಳಂಕ ಹಚ್ಚಲಾಯಿತು. ಇರಾಕ್ ಕುವೈಟ್‌ನಿಂದ ಹಿಂದೆಗೆದ ಬಳಿಕ ಅನೇಕ ಬಿದೂನ್‌ಗಳನ್ನು ಮಿಲಿಟರಿ ವಿಚಾರಣೆಗೆ ಗುರಿಪಡಿಸಲಾಯಿತು. ದೊಡ್ಡ ಪ್ರಮಾಣದಲ್ಲಿ ಸೇವೆಯಿಂದ ವಜಾ ಆರಂಭವಾಯಿತು. ಉಳಿಯಲು ಬಯಸುವ ಹಲವರು ವಿದೇಶಿ ರಾಷ್ಟ್ರೀಯರೆಂದು ಘೋಷಿಸಿಕೊಂಡು ಉದ್ಯೋಗ ವೀಸಾದಲ್ಲಿ ಕುವೈಟ್‌ನಲ್ಲಿ ಉಳಿಯಬೇಕಾಯಿತು.

2000ದಲ್ಲಿ ಕುವೈಟ್ ಸರಕಾರ ಬಿದೂನ್‌ಗಳ ಸ್ಥಾನಮಾನವನ್ನು ಪುನರ್ವಿಮರ್ಶಿಸುವ ಮತ್ತು ಪ್ರತಿ ವರ್ಷ 2,000 ಬಿದೂನ್‌ಗಳಿಗೆ ಪೌರತ್ವ ನೀಡುವ ಭರವಸೆ ನೀಡಿದರೂ, ಆ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ.

ಅರಬ್ ಸ್ಪ್ರಿಂಗ್‌ನಲ್ಲಿ ಬಿದೂನ್

2011ರಲ್ಲಿ ಅರಬ್ ಸ್ಪ್ರಿಂಗ್ ಚಳವಳಿ ಕುವೈಟ್‌ಗೆ ಹರಡಿದಾಗ ಬಿದೂನ್‌ಗಳೇ ಮುಂಚೂಣಿಯಲ್ಲಿದ್ದರು. ಪೌರತ್ವ ಹೊಂದಿರದ ಕಾರಣದಿಂದ ಅವರು ಬಂಧನ ಮತ್ತು ಗಡಿಪಾರಿನ ಭೀತಿಯನ್ನು ಎದುರಿಸುತ್ತಿದ್ದರು. ಪ್ರತಿಭಟನೆ ಹೆಚ್ಚಾದಾಗ ಸರಕಾರವು ಪ್ರತೀ ಕುವೈಟ್ ನಾಗರಿಕರಿಗೆ 1000 ದೀನಾರ್ ಮತ್ತು ಆಹಾರ ಅನುದಾನದ ಭರವಸೆ ನೀಡಿತು. ನೂರಾರು ಮಂದಿ ಬಿದೂನ್ ಕೊಳೆಗೇರಿ ನಿವಾಸಿಗಳು ತಮಗೆ ಪೌರತ್ವ ಇಲ್ಲದ ಕಾರಣ ಪ್ರತಿಭಟಿಸಿದರು. ಪ್ರತಿಭಟನೆ ತೀವ್ರಗೊಂಡು ವರ್ಷದೊಳಗೆ ಸಾವಿರಾರು ಜನರು ಸೇರಿಕೊಂಡರು. ಪ್ರತಿಭಟನೆಯು ದೇಶರಹಿತತೆಯ ವಿಷಯವನ್ನು ಮೀರಿ ಬೆಳೆದಾಗ ಸರಕಾರವು ಬಿದೂನ್‌ಗಳಿಗೆ 11 ಸೌಲಭ್ಯಗಳನ್ನು ನೀಡಿತು. ಇದರಲ್ಲಿ ಜನನ, ಮರಣ, ಮದುವೆ ನೋಂದಣಿ, ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಅವಕಾಶ,  ಬಿದೂನ್ ಕಾರ್ಡುಗಳನ್ನು ನೀಡುವ ಮೂಲಕ ಮಾನ್ಯತೆ ನೀಡುವ ಭರವಸೆ ಸೇರಿದ್ದವು.

ಬಿದೂನ್‌ಗಳ ನೋಂದಣಿ ಆಮೆಗತಿಯಲ್ಲಿ ನಡೆದಿದೆ. ಹೆಚ್ಚಿನ ಬಿದೂನ್ ಜನರು ವಿದೇಶೀಯರೆಂದು ಸರಕಾರ ಈಗಲೂ ಹೇಳುತ್ತಿದೆ. ಪರಿಣಾಮವಾಗಿ ಹಲವಾರು ಬಿದೂನ್‌ಗಳು ಈಗಲೂ ಉದ್ಯೋಗ ವೀಸಾಗಳಿಗೆ ಅರ್ಜಿ ಹಾಕಬೇಕಾಗಿದೆ. ತಮ್ಮದೇ ದೇಶದಲ್ಲಿ ಅವರಿಗೆ ಹಕ್ಕುಗಳನ್ನು ನಿರಾಕರಿಸಿದಂತಾಗಿದೆ.

ಇತ್ತೀಚೆಗೆ ಭಾರತದಲ್ಲಿ ಎನ್‌ಆರ್‌ಸಿಯಿಂದಾಗಿ ಭಾರೀ ಸಂಖ್ಯೆಯಲ್ಲಿ ಜನರು ಪೌರತ್ವ ಕಳೆದುಕೊಳ್ಳುವ ಭಯ ಉಂಟಾಗಿದೆ. ಈ ಸಮಯದಲ್ಲಿ ಬೇರೆ ದೇಶಗಳು ಇಂತದ್ದೇ ವಿಷಯಗಳನ್ನು ಹೇಗೆ ನಿರ್ವಹಿಸಿವೆ ಎಂದು ನೋಡುವುದು ಮುಖ್ಯವಾಗಿದೆ. ಇತಿಹಾಸವು ಭಿನ್ನವಾಗಿದ್ದರೂ, ಕುವೈಟ್ ಮತ್ತು ಅದರ ಬಿದೂನ್ ಜನರ ಸಂಕಷ್ಟದ ಕತೆಗಳು ಎಚ್ಚರಿಕೆ ನೀಡುತ್ತವೆ. ಕುವೈಟ್ ಪೌರತ್ವ ನೋಂದಣಿಯ ವಿಷಯದಲ್ಲಿ ಇಂದಿಗೂ ತಳಮಳಿಸುತ್ತಿದ್ದು, ಸಮಸ್ಯೆಗಳು ದಿನಗಳೆದಂತೆ ಇನ್ನಷ್ಟು ಬಿಗಡಾಯಿಸುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...