ಗುಜರಾತ್‌ನ ಕಚ್ ಜಿಲ್ಲೆಯ ಮುಂದ್ರಾ ಗ್ರಾಮಸ್ಥರು 13 ವರ್ಷಗಳ ಕಾಲ ನಡೆಸಿದ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸರ್ಕಾರ 2005ರಲ್ಲಿ ಅದಾನಿ ಸಮೂಹಕ್ಕೆ ಮಂಜೂರು ಮಾಡಿದ್ದ 108 ಹೆಕ್ಟೇರ್ ಗೋಮಾಳದ ಜಾಗವನ್ನು ಮರಳಿ ಗ್ರಾಮಸ್ಥರಿಗೆ ನೀಡಲು ನಿರ್ಧಿರಿಸಿರುವುದಾಗಿ ಹೈಕೋರ್ಟ್‌ಗೆ ತಿಳಿಸಿದೆ.
ವಿಶೇಷ ಅರ್ಥಿಕ ವಲಯ (ಸೆಝ್) ಮತ್ತು ಅದಾನಿ ಬಂದರಿಗೆ 231 ಎಕರೆ ಗೋಮಾಳದ ಜಾಗವನ್ನು ಮಂಜೂರು ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.
ಸರ್ಕಾರ 2005ರಲ್ಲಿ ಜಮೀನು ಮಂಜೂರು ಮಾಡಿದ್ದರೂ ಈ ವಿಚಾರ ಗ್ರಾಮಸ್ಥರಿಗೆ ತಿಳಿದಿರಲಿಲ್ಲ. 2010ರಲ್ಲಿ ಅದಾನಿ ಬಂದರು ಮತ್ತು ಸೆಝ್ ಜಂಟಿಯಾಗಿ ತಮಗೆ ಮಂಜೂರಾದ ಜಮೀನಿಗೆ ಬೇಲಿ ಹಾಕಲು ಮುಂದಾಗಿತ್ತು. ಈ ವೇಳೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಕಾನೂನು ಹೋರಾಟಕ್ಕೆ ಧುಮುಕಿದ್ದರು.
ಗ್ರಾಮಸ್ಥರ ಪ್ರಕಾರ, 279 ಎಕರೆ ಗೋಮಾಳದ ಜಾಗದಲ್ಲಿ 45 ಎಕರೆ ಬಿಟ್ಟು ಉಳಿದ 231 ಎಕರೆಯನ್ನು ಕಾರ್ಪೋರೇಟ್ ವಲಯಕ್ಕೆ ಮಂಜೂರು ಮಾಡಲಾಗಿತ್ತು. ಗೋಮಾಳದ ಕೊರತೆ ಎದುರಿಸುತ್ತಿದ್ದ ಗ್ರಾಮಸ್ಥರಿಗೆ ಇದರಿಂದ ಇನ್ನಷ್ಟು ಸಮಸ್ಯೆ ಆಗಿತ್ತು. ಗೋಮಾಳದ ಜಾಗ ಸಮುದಾಯದ ಸಂಪನ್ಮೂಲ ಎಂದು ಅವರು ಪ್ರತಿಪಾದಿಸಿದ್ದರು.
2014ರಲ್ಲಿ ಹೆಚ್ಚುವರಿ 387 ಎಕರೆ ಸರ್ಕಾರಿ ಭೂಮಿಯನ್ನು ಗೋಮಾಳಕ್ಕಾಗಿ ಮಂಜೂರು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ರಾಜ್ಯ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದ್ದ ಹಿನ್ನೆಲೆ ಹೈಕೋರ್ಟ್ ಪಿಐಎಲ್ ಇತ್ಯರ್ಥಪಡಿಸಿತ್ತು.
ಆದರೆ, ಅದು ಸಾಧ್ಯವಾಗದಿದ್ದಾಗ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. 2015 ರಲ್ಲಿ, ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿ ಪಂಚಾಯಿತಿಗೆ ಹಂಚಿಕೆ ಮಾಡಲು ಲಭ್ಯವಿರುವ ಭೂಮಿ ಕೇವಲ 17 ಹೆಕ್ಟೇರ್ ಎಂದು ತಿಳಿಸಿತ್ತು.
ನಂತರ ರಾಜ್ಯ ಸರ್ಕಾರ ಸುಮಾರು 7 ಕಿಲೋ ಮೀಟರ್ ದೂರದಲ್ಲಿ ಉಳಿದ ಭೂಮಿಯನ್ನು ಮಂಜೂರು ಮಾಡುವುದಾಗಿ ಹೇಳಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ಜಾನುವಾರುಗಳು ಅಷ್ಟು ದೂರ ಹೋಗಲು ಸಾಧ್ಯವಿಲ್ಲ ಎಂದಿದ್ದರು.
ಏಪ್ರಿಲ್ 2024 ರಲ್ಲಿ, ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಪ್ರಣವ್ ತ್ರಿವೇದಿ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪರಿಹಾರ ನೀಡುವಂತೆ ಸೂಚಿಸಿತ್ತು.
ಶುಕ್ರವಾರ (ಜುಲೈ 5,2024) ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ರಾಜ್ಯ ಸರ್ಕಾರ ಅದಾನಿ ಸೆಝ್‌ಗೆ ಹಂಚಲಾಗಿದ್ದ ಸುಮಾರು 108 ಹೆಕ್ಟೇರ್ ಅಥವಾ 266 ಎಕರೆ ಗೋಮಾಳದ ಜಾಗವನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಪೀಠಕ್ಕೆ ತಿಳಿಸಿದೆ.
ರಾಜ್ಯ ಸರ್ಕಾರವು 129 ಹೆಕ್ಟೇರ್ ಭೂಮಿಯನ್ನು ಗೋಮಾಳವಾಗಿ “ಮರುಪೂರಣ” ಮಾಡಿ ಅದನ್ನು ಗ್ರಾಮಕ್ಕೆ ಹಿಂದಿರುಗಿಸಲಿದೆ. ಇದಕ್ಕಾಗಿ ತನ್ನದೇ ಆದ ಕೆಲವು ಭೂಮಿಯನ್ನು ಬಳಸಲಿದೆ. 108 ಹೆಕ್ಟೇರ್ ಅನ್ನು ಅದಾನಿ ಸಮೂಹ ಸಂಸ್ಥೆಯಿಂದ ಹಿಂದಕ್ಕೆ ತೆಗೆದುಕೊಳ್ಳಲಿದೆ ಎಂದು ಕಂದಾಯ ಇಲಾಖೆ ನ್ಯಾಯಾಲಯಕ್ಕೆ ತಿಳಿಸಿದೆ.
ಹೈಕೋರ್ಟ್ ಪೀಠ ಈ ನಿರ್ಧಾರಕ್ಕೆ ತೃಪ್ತಿ ವ್ಯಕ್ತಪಡಿಸಿದ್ದು, ಈ ನಿರ್ಣಯವನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಇದನ್ನೂ ಓದಿ : ಮಹಿಳಾ ಆಯೋಗದ ಮುಖ್ಯಸ್ಥೆ ಕುರಿತು ಪೋಸ್ಟ್; ಹೊಸ ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಮಹುವಾ ವಿರುದ್ಧ ಕೇಸ್


