ರಾಜ್ಯ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದು (ಡಿ.9) ಪ್ರಾರಂಭಗೊಳ್ಳಲಿದೆ.
ಡಿಸೆಂಬರ್ 20ರವರೆಗೆ ನಡೆಯುವ ಅಧಿವೇಶನ ರಾಜ್ಯದ ಸಮಸ್ಯೆಗಳ ಕುರಿತ ಚರ್ಚೆಗೆ ವೇದಿಕೆಯಾಗುವ ಬದಲು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರದ ಕಣವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಎರಡೂ ಕಡೆಯವರು ಕಲಹಕ್ಕೆ ಅಸ್ತ್ರಗಳನ್ನು ಸಿದ್ದಪಡಿಸಿಕೊಂಡಿದ್ದಾರೆ.
ಅಡಳಿತ ಪಕ್ಷ ಅಥವಾ ಸರ್ಕಾರ ಮುಖ್ಯಮಂತ್ರಿಯಿಂದ ಹಿಡಿದು ಶಾಸಕರವರೆಗಿನ ತಮ್ಮ ಒಗ್ಗಟ್ಟನ್ನೇ ದೊಡ್ಡ ಅಸ್ತ್ರ ಮಾಡಿಕೊಂಡತಿದೆ. ಇದರ ಹೊರತಾಗಿ ಕೇಂದ್ರ ಸಂಸ್ಥೆಗಳ ದುರ್ಬಳಕೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ ನಡೆದ 7 ಸಾವಿರ ಕೋಟಿ ರೂಪಾಯಿಯ ಹಗರಣ, ಅದರಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವ ಶ್ರೀರಾಮುಲು ಹೆಸರು ಉಲ್ಲೇಖ, ಯಡಿಯೂರಪ್ಪ ಕುಟುಂಬದ ವಿರುದ್ದದ ಬಿಡಿಎ ಹಗರಣ. ಮುನಿರತ್ನ ವಿರುದ್ದ ಲೈಂಗಿಕ ದೌರ್ಜನ್ಯ ಸೇರಿದಂತೆ ವಿವಿಧ ಆರೋಪಗಳು ಆಡಳಿತ ಪಕ್ಷದ ಬಳಿಯಿರುವ ಅಸ್ತ್ರಗಳು.
ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಬಿಜೆಪಿಯೊಳಗಿನ ಬಣ ರಾಜಕೀಯವೂ ಧನಾತ್ಮಕ ಪರಿಣಾಮ ಬೀರಿದಂತಿದೆ. ಅವುಗಳ ಲಾಭ ಹೇಗೆ ಪಡೆಯಲಿದೆ ಎಂದು ನೋಡಬೇಕಿದೆ.
ಪ್ರಮುಖ ಪ್ರತಿಪಕ್ಷ ಬಿಜೆಪಿ ಮತ್ತು ಅದರ ಮಿತ್ರ ಜೆಡಿಎಸ್ ಕೂಡ ಸರ್ಕಾರವನ್ನು ಕಟ್ಟಿಹಾಕಲು ತಮ್ಮದೇ ಸಿದ್ದತೆಗಳನ್ನು ಮಾಡಿಕೊಂಡಿದೆ. ಸಿಎಂ ವಿರುದ್ದದ ಮೂಡಾ ಪ್ರಕರಣ, ವಾಲ್ಮೀಕಿ ಹಗರಣ ಮತ್ತು ಸಚಿವರೊಬ್ಬರ ತಲೆದಂಡ, ಅಬಕಾರಿ ಸಚಿವರ ವಿರುದ್ದದ 7 ಸಾವಿರ ಕೋಟಿ ರೂ. ಅಕ್ರಮ ಆರೋಪ, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು, ವಕ್ಫ್, ಬಿಪಿಎಲ್ ಕಾರ್ಡ್ ವಿವಾದ ಪ್ರತಿಪಕ್ಷಗಳ ಬಳಿಯಿರುವ ಅಸ್ತ್ರಗಳಾಗಿವೆ.
ಆದರೆ, ಬಣ ರಾಜಕೀಯ ಮತ್ತು ಉಪಚುನಾವಣೆ ಸೋಲಿನ ಮುಜುಗರ ಬಿಜೆಪಿ-ಜೆಡಿಎಸ್‌ಗೆ ದೊಡ್ಡ ಹಿನ್ನಡೆ ತಂದಿಟ್ಟಿದೆ. ಅವುಗಳನ್ನು ಮೆಟ್ಟಿ ನಿಂತು ಸರ್ಕಾರದ ವಿರುದ್ದ ಹೇಗೆ ಸಮರ ಸಾರಲಿವೆ ಎಂದು ಕಾದು ನೋಡಬೇಕಿದೆ. ಬಿಜೆಪಿಯೊಳಗಿನ ಬಣ ರಾಜಕೀಯ ಸದನದಲ್ಲಿ ಸರ್ಕಾರವನ್ನು ಎದುರಿಸಲು ಸವಾಲಾಗಬಹುದು.
ಅಭಿವೃದ್ದಿ ಚರ್ಚೆ ಅನುಮಾನ
ಈಗಾಗಲೇ ವಿವರಿಸಿದಂತೆ ಆಡಳಿತ ಮತ್ತು ವಿಪಕ್ಷಗಳ ಬಳಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಮತ್ತು ಆರೋಪ-ಪ್ರತ್ಯಾರೋಪಗಳನ್ನು ಮಾಡುವ ಅಸ್ತ್ರಗಳು ಬಹಳಷ್ಟಿವೆ. ಆದರೆ, ರಾಜ್ಯದ ಅಭಿವೃದ್ದಿಯ ಚರ್ಚೆಗಳು ಯಾವುದೂ ಮುನ್ನಲೆಯಲ್ಲಿ ಇಲ್ಲ. ಹಾಗಾಗಿ, ಸುಮಾರು 21-25 ಕೋಟಿ ರೂಪಾಯಿ ಜನರ ದುಡ್ಡು ನೀರಿನಲ್ಲಿ ಹೋಮ ಇಟ್ಟಂತಾಗುವುದರಲ್ಲಿ ಅನುಮಾನವಿಲ್ಲ.
ನಾಲ್ಕು ದಿನ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಚಳಿಗಾಲದ ಅಧಿವೇಶನದ ನಾಲ್ಕು ದಿನ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗೆ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ (ಡಿ.8) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ. 10 ಮತ್ತು 11 ಹಾಗೂ 17 ಮತ್ತು 18ರಂದು ಕೃಷ್ಣಾ ಮೇಲ್ದಂಡೆ, ಮಹದಾಯಿ-ಕಳಸಾ ಬಂಡೂರಿ, ತುಂಗ ಭದ್ರಾ, ಕಾರಂಜಾ, ಕೃಷಿ, ಅರಣ್ಯಭೂಮಿ ಅತಿಕ್ರಮ ಮತ್ತು ಸಂತ್ರಸ್ತರ ಸಮಸ್ಯೆ, ಸಕ್ಕರೆ ಕಾರ್ಖಾನೆ, ತೋಟಗಾರಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಸ್ಕೃತ ಚರ್ಚೆಯ ನಡೆಯಲಿದೆ ಎಂದಿದ್ದಾರೆ. ಈ ಹಿಂದಿನ ಅಧಿವೇಶನಗಳಲ್ಲೂ ಉತ್ತರ ಕರ್ನಾಟಕದ ಕುರಿತು ಹಲವು ಚರ್ಚೆಗಳು ನಡೆದಿವೆ. ಅವುಗಳಿಂದ ಆದ ಲಾಭಗಳು ಮಾತ್ರ ಅಷ್ಟಕಷ್ಟೆ. ಆದ್ದರಿಂದ ಈ ಬಾರಿಯ ಕಲಾಪದ ಕುರಿತೂ ಜನರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದಂತೆ ಕಾಣುತ್ತಿಲ್ಲ.
ವಿಧೇಯಕಗಳ ಮಂಡನೆ ಸಾಧ್ಯತೆ
ನ.28 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ- 2024, ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ, ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ- 2024, ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ- 2024, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ- 2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ- 2024, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (2ನೇ ತಿದ್ದುಪಡಿ) ವಿಧೇಯಕ-2024, ಕರ್ನಾಟಕ ಪ್ರವಾಸೋದ್ಯಮ ರೋಪ್‌ವೇಸ್ ವಿಧೇಯಕ-2024, Karnataka State Allied and Healthcare Professions Councilನಿಯಮಗಳು-2024ಕ್ಕೆ ಅನುಮೋದನೆ ನೀಡಲಾಗಿದೆ. ಅವುಗಳ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ : ಬೆಲೆಕೇರಿ ಅಕ್ರಮ ಗಣಿ ಅದಿರು ಪ್ರಕರಣದಲ್ಲಿ ಅದಾನಿ ವಿರುದ್ಧ ಪ್ರಕರಣ ದಾಖಲಾಗಲಿ: ಬಿ.ಕೆ. ಹರಿಪ್ರಸಾದ್


