ಕೇಂದ್ರ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ”ನೀತಿಗಳು” ಎಂಬ ಹೆಸರಿನಲ್ಲಿ “ಹಿಂಬಾಗಿಲಿನ ಮೂಲಕ” ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ)ದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರವು ಈ ಹೊಸ “ನೀತಿಗಳ” ಪ್ರತಿಗಳನ್ನು ಎಲ್ಲಾ ರಾಜ್ಯ ಸರ್ಕಾರಗಳಿಗೆ ಅವರ ಅಭಿಪ್ರಾಯಗಳಿಗಾಗಿ ಕಳುಹಿಸಿದೆ ಎಂದು ಅವರು ಆರೋಪಿಸಿದ್ದಾರೆ. ಹಿಂಪಡೆದ ರೈತ ವಿರೋಧಿ
ಎಎಪಿ ನೇತೃತ್ವದ ಪಂಜಾಬ್ ಸರ್ಕಾರವು ಹೊಸದಾಗಿ ಪರಿಚಯಿಸಲಾದ ಕೃಷಿ ಮಾರುಕಟ್ಟೆಯ ರಾಷ್ಟ್ರೀಯ ನೀತಿ ಚೌಕಟ್ಟಿನ ಕರಡನ್ನು ಟೀಕಿಸಿದ್ದು, ಇದು ಹಿಂತೆಗೆದುಕೊಳ್ಳಲಾದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಮರುಪರಿಚಯಿಸುವ ಪ್ರಯತ್ನ ಎಂದು ಅದು ಹೇಳಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ರೈತರು ನಡೆಸಿದ ಒಂದು ವರ್ಷಗಳ ಪ್ರತಿಭಟನೆಯ ನಂತರ ನವೆಂಬರ್ 2021 ರಲ್ಲಿ ವಾಪಾಸು ಪಡೆಯಲಾಗಿತ್ತು.
“ದೇಶದಲ್ಲಿ ರೋಮಾಂಚಕ ಮಾರುಕಟ್ಟೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು, ಇದರಲ್ಲಿ ಎಲ್ಲಾ ವರ್ಗಗಳ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆದುಕೊಳ್ಳಲು ತಮ್ಮ ಆಯ್ಕೆಯ ಮಾರುಕಟ್ಟೆಯನ್ನು ಕಂಡುಕೊಳ್ಳುತ್ತಾರೆ” ಎಂದು ಕೇಂದ್ರ ಸರ್ಕಾರ ರಚಿಸಿರುವ ಕರಡು ನೀತಿಯು ಹೇಳಿದೆ. ಹಿಂಪಡೆದ ರೈತ ವಿರೋಧಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ಕರಡು ನೀತಿಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ನವೆಂಬರ್ 25 ರಂದು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದು, 15 ದಿನಗಳಲ್ಲಿ ಮಧ್ಯಸ್ಥಗಾರರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ.
ರೈತ ಮುಖಂಡರು, ಪಂಜಾಬ್ ಸರ್ಕಾರ ಮತ್ತು ಇತರ ವಿರೋಧ ಪಕ್ಷದ ನಾಯಕರು ಸೇರಿದಂತೆ ಟೀಕಾಕಾರರು ಕರಡು ನೀತಿ ಮತ್ತು ಈ ಹಿಂದೆ ಹಿಂಪಡೆದ ಮೂರು ಕೃಷಿ ಕಾನೂನುಗಳ ನಡುವೆ ಸಾಮ್ಯತೆಗಳನ್ನು ಎತ್ತಿತೋರಿಸಿದ್ದಾರೆ.
ಹಿಂಪಡೆದ ರೈತರ ವಿರೋಧಿ ಕಾನೂನಾದ, ‘ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನೆ ಮತ್ತು ಅನುಕೂಲ) ಕಾಯಿದೆ’ ಮತ್ತು ಹೊಸದಾಗಿ ಪರಿಚಯಿಸಲಾದ ‘ನೀತಿ’ಗಳ ನಡುವಿನ ಸಾಮ್ಯತೆಗಳನ್ನು ಹೋರಾಟಗಾರರು ಗಮನಸೆಳೆದಿದ್ದಾರೆ. ಎರಡೂ ಕೂಡಾ, ಕೃಷಿ ಉತ್ಪನ್ನಗಳ ಸಗಟು ಮಾರಾಟಕ್ಕೆ ಸರ್ಕಾರಿ ನಿಯಂತ್ರಿತ ಮಾರುಕಟ್ಟೆಯಾಗಿರುವ ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ'(ಎಪಿಎಂಸಿ)ಯ ಹೊರಗೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ಮಾತನಾಡುತ್ತದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಟಿಪ್ಪಣಿ ಮಾಡಿದೆ.
ಜೊತೆಗೆ ಕರಡು ನೀತಿಯು, ಖಾಸಗಿ ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ. ಇದು ಗುತ್ತಿಗೆ ಕೃಷಿ ಮತ್ತು ಖಾಸಗೀಕರಣಕ್ಕೆ ಉತ್ತೇಜನ ನೀಡಿದ, ಹಿಂಪಡೆಯಲಾದ ಎರಡನೇ ಕಾನೂನಾದ, ‘ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ’ಯಂತೆಯೆ ಇದೆ ಎಂದು ಹೋರಾಟಗಾರರು ಹೇಳಿದ್ದಾರೆ.
ಬಹಳ ಮುಖ್ಯವಾಗಿ, ಹೊಸ ಕರಡು ನೀತಿಯು ಕೃಷಿ ಉತ್ಪನ್ನಗಳಿಗೆ ಕಾನೂನುಬದ್ಧವಾಗಿ ಖಾತರಿಪಡಿಸಿದ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಯಾವುದೇ ಉಲ್ಲೇಖವನ್ನು ಹೊಂದಿಲ್ಲ ಎಂದು ವರದಿಯಾಗಿದೆ.
ಪಂಜಾಬ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ “ಏನಾದರೂ ಸಂಭವಿಸಿದರೆ” ಬಿಜೆಪಿಯೆ ಹೊಣೆಯಾಗಲಿದೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಬೇಕು ಎಂದು ಒತ್ತಾಯಿಸಿ ಹರ್ಯಾಣ ಮತ್ತು ಪಂಜಾಬ್ ನಡುವಿನ ಅಂತರರಾಜ್ಯ ಗಡಿಯಲ್ಲಿರುವ ಶಂಭು ಮತ್ತು ಖಾನೌರಿಯಲ್ಲಿ ರೈತರು ಫೆಬ್ರವರಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಎಂದರೆ ಸರ್ಕಾರವು ರೈತರಿಂದ ಕೃಷಿ ಸರಕುಗಳನ್ನು ಖರೀದಿಸುವ ವೆಚ್ಚವಾಗಿದೆ.
ಕಾನೂನು ಖಾತರಿಯ ಜೊತೆಗೆ, ಕೃಷಿ ಸುಧಾರಣೆಗಾಗಿ ಎಂಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ರೈತರು ಒತ್ತಾಯಿಸುತ್ತಿದ್ದಾರೆ. ಫೆಬ್ರವರಿ 18 ರಿಂದ ಯಾವುದೇ ಮಾತುಕತೆ ನಡೆದಿಲ್ಲ ಎಂದು ಆರೋಪಿಸಿರುವ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರತಿಭಟನೆ ನಡೆಸುತ್ತಿರುವವರಲ್ಲಿ 70 ವರ್ಷದ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ನವೆಂಬರ್ 26 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. “ಬಿಜೆಪಿ ಸರ್ಕಾರ ರೈತರೊಂದಿಗೆ ಮಾತನಾಡುತ್ತಿಲ್ಲ” ಎಂದು ಕೇಜ್ರಿವಾಲ್ ಹೇಳಿದ್ದಾರೆ. ಯಾರೊಂದಿಗೂ ತಾನು ಮಾತನಾಡುವುದಿಲ್ಲ ಎನ್ನುವಷ್ಟು ಸೊಕ್ಕು ಬಿಜೆಪಿಗೆ ಏಕಿದೆ? ಎಂದು ಅವರು ಕೇಳಿದ್ದಾರೆ.
ಇದನ್ನೂ ಓದಿ: ಲಂಚ ಪ್ರಕರಣ: ಉದ್ಯಮಿ ಅದಾನಿ ವಿರುದ್ಧ ಜಂಟಿ ವಿಚಾರಣೆಗೆ ಯುಎಸ್ ನ್ಯಾಯಾಲಯ ಆದೇಶ
ಲಂಚ ಪ್ರಕರಣ: ಉದ್ಯಮಿ ಅದಾನಿ ವಿರುದ್ಧ ಜಂಟಿ ವಿಚಾರಣೆಗೆ ಯುಎಸ್ ನ್ಯಾಯಾಲಯ ಆದೇಶ


