ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ಮಲ್ಟಿ-ಮೋಡಲ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ (ಎಂಎಂಟಿಎಸ್) ರೈಲಿನಿಂದ ಹಾರಿದ ಮಹಿಳೆ ಗಾಯಗೊಂಡ ಘಟನೆ ಮಾರ್ಚ್ 22ರ ಶನಿವಾರ ತೆಲಂಗಾಣದಲ್ಲಿ ನಡೆದಿದೆ.
ಸಿಕಂದರಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ತೆಲಾಪುರ-ಮೆಡ್ಚಲ್ ಎಂಎಂಟಿಎಸ್ ರೈಲಿನ ಮಹಿಳಾ ಕೋಚ್‌ಗೆ ನುಗ್ಗಿದ ವ್ಯಕ್ತಿಯೊಬ್ಬ, ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಭಯಭೀತರಾದ ಆಕೆ, ಚಲಿಸುತ್ತಿದ್ದ ರೈಲಿನಿಂದ ಹೊರಗೆ ಹಾರಿದ್ದಾರೆ ಎಂದು ರೈಲ್ವೆ ಪೊಲೀಸರು ಸೋಮವಾರ (ಮಾ.24) ತಿಳಿಸಿದ್ದಾರೆ.
ಮಹಿಳೆ ನಗರದ ಕೊಂಪಲ್ಲಿಯಲ್ಲಿ ರೈಲ್ವೆ ಸೇತುವೆಯ ಬಳಿ ಗಾಯಗೊಂಡು ಬಿದ್ದಿದ್ದರು. ಆಕೆಯನ್ನು ಗಮನಿಸಿದ ದಾರಿಹೋಕರು 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯವರಾಗಿದ್ದು, ಹೈದರಾಬಾದ್ ಹೊರವಲಯದಲ್ಲಿರುವ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು.
ಮಹಿಳೆ ತನ್ನ ಮೊಬೈಲ್ ರಿಪೇರಿಗಾಗಿ ಸಿಕಂದರಾಬಾದ್‌ಗೆ ಹೋಗಿದ್ದರು. ಮೊಬೈಲ್ ರಿಪೇರಿ ಮಾಡಿಸಿದ ನಂತರ, ಸಿಕಂದರಾಬಾದ್ ರೈಲು ನಿಲ್ದಾಣ ತಲುಪಿ ತೆಲಾಪುರ್-ಮೆಡ್ಚಲ್ ಎಂಎಂಟಿಎಸ್ ರೈಲು ಹತ್ತಿ ಮಹಿಳೆಯರಿಗೆ ಮೀಸಲಾದ ಕೋಚ್‌ನಲ್ಲಿ ಕುಳಿತಿದ್ದರು.
ಆಕೆಯ ಜೊತೆಗಿದ್ದ ಇಬ್ಬರು ಮಹಿಳೆಯರು ಅಲ್ವಾಲ್ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ನಂತರ ಒಂದು ಬೋಗಿಯಲ್ಲಿ ಆಕೆ ಒಬ್ಬರೇ ಇದ್ದರು. ರಾತ್ರಿ 8.30ರ ಸುಮಾರಿಗೆ ಮಹಿಳೆಯ ಬಳಿಗೆ ಬಂದ ಯುವಕನೊಬ್ಬ ಲೈಂಗಿಕವಾಗಿ ಸಹಕರಿಸುವಂತೆ ಕೇಳಿದ್ದಾನೆ. ಆಕೆ ನಿರಾಕರಿಸಿದಾಗ, ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಹೊರಗೆ ಹಾರಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಸಂತ್ರಸ್ತೆಯ ತಲೆ, ಗಲ್ಲ, ಬಲಗೈ ಮತ್ತು ಸೊಂಟಕ್ಕೆ ಗಂಭೀರ ಗಾಯಗಳಾಗಿವೆ. ಸಿಕಂದರಾಬಾದ್ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಇನ್ಸ್‌ಪೆಕ್ಟರ್ ಸಾಯಿ ಈಶ್ವರ್ ಗೌಡ್ ಅವರು ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.


