ತಮ್ಮ ಸ್ನೇಹಿತೆ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ ಮೂವರು ಪುರುಷರಿಗೆ ವಿಧಿಸಿದ್ದ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದ್ದು, ಮಹಿಳೆ ಬೇಡ ಎಂದು ಹೇಳಿದಾಗ ಅದು ಬೇಡ’ ಎಂದರ್ಥ (ನೋ ಮೀನ್ಸ್ ನೋ), ಆಕೆಯ ಹಿಂದಿನ ಲೈಂಗಿಕ ಚಟುವಟಿಕೆಗಳ ಆಧಾರದ ಮೇಲೆ ಒಪ್ಪಿಗೆಯನ್ನು ಊಹಿಸುವಂತಿಲ್ಲ ಎಂದು ತೀರ್ಪು ನೀಡಿದೆ.
“ಬೇಡ ಎಂದರೆ ಬೇಡ” ಎಂದು ನ್ಯಾಯಮೂರ್ತಿಗಳಾದ ನಿತಿನ್ ಸೂರ್ಯವಂಶಿ ಮತ್ತು ಎಂ.ಡಬ್ಲ್ಯೂ. ಚಂದ್ವಾನಿ ಅವರ ಪೀಠವು ಮೇ 6 ರ ತೀರ್ಪಿನಲ್ಲಿ, ಸಂತ್ರಸ್ತೆಯ ನೈತಿಕತೆಯನ್ನು ಪ್ರಶ್ನಿಸಲು ಅಪರಾಧಿಗಳು ಮಾಡಿದ ಪ್ರಯತ್ನವನ್ನು ಸ್ವೀಕರಿಸಲು ನಿರಾಕರಿಸಿದೆ.
ಮಹಿಳೆಯ ಒಪ್ಪಿಗೆಯಿಲ್ಲದೆ ಲೈಂಗಿಕ ಸಂಭೋಗ ನಡೆಸಿದಾಗ ಅದು ಆಕೆಯ ದೇಹ, ಮನಸ್ಸು ಮತ್ತು ಗೌಪ್ಯತೆಯ ಮೇಲಿನ ಹಲ್ಲೆಯಾಗಿದೆ ಎಂದ ನ್ಯಾಯಾಲಯವು, ಅತ್ಯಾಚಾರವು ಸಮಾಜದಲ್ಲಿ ಖಂಡನೀಯ ಅಪರಾಧ ಎಂದು ಹೇಳಿದೆ.
“ಮಹಿಳೆ ಬೇಡ ಎಂದರೆ ಬೇಡವೇಬೇಡ ಎಂದರ್ಥ; ಇದರಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲ. ಮುಖ್ಯವಾಗಿ, ಮಹಿಳೆಯ ಹಿಂದಿನ ಲೈಂಗಿಕ ಚಟುವಟಿಕೆಗಳ ಆಧಾರದ ಮೇಲೆ ಆಕೆಯ ಒಪ್ಪಿಗೆಯ ಊಹೆ ಇರುವಂತಿಲ್ಲ” ಎಂದು ಹೈಕೋರ್ಟ್ ಹೇಳಿದೆ.
ಈ ತೀರ್ಪಿನ ಮೂಲಕ, ಮೂವರು ವ್ಯಕ್ತಿಗಳ ಶಿಕ್ಷೆಯನ್ನು ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿತು. ಆದರೆ, ಅವರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಿಂದ 20 ವರ್ಷಗಳ ಜೈಲು ಶಿಕ್ಷೆಗೆ ಇಳಿಸಿತು.
ತಮ್ಮ ಮೇಲ್ಮನವಿಯಲ್ಲಿ, ಮಹಿಳೆ ಆರಂಭದಲ್ಲಿ ತಮ್ಮಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರು. ಆದರೆ, ನಂತರ ಇನ್ನೊಬ್ಬ ಪುರುಷನೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದರು ಎಂದು ಮೂವರು ಹೇಳಿಕೊಂಡಿದ್ದರು.
ನವೆಂಬರ್ 2014 ರಲ್ಲಿ, ಮೂವರು ಸಂತ್ರಸ್ತೆ ಮನೆಗೆ ನುಗ್ಗಿ, ಆಕೆಯ ಲಿವ್-ಇನ್ ಸಂಗಾತಿಯ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಹತ್ತಿರದ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದರು.
“ಒಬ್ಬ ಮಹಿಳೆ ಗಂಡನಿಂದ ಬೇರ್ಪಟ್ಟ ಹೆಂಡತಿಯಾಗಿದ್ದರೂ, ಆಕೆ ತನ್ನ ಪತಿಯಿಂದ ವಿಚ್ಛೇದನ ಪಡೆಯದೆ ಇನ್ನೊಬ್ಬ ಪುರುಷನೊಂದಿಗೆ ವಾಸಿಸುತ್ತಿದ್ದರೂ ಸಹ, ವ್ಯಕ್ತಿಯೊಬ್ಬ ಮಹಿಳೆಯ ಒಪ್ಪಿಗೆಯಿಲ್ಲದೆ ಸಂಭೋಗ ನಡೆಸಲು ಒತ್ತಾಯಿಸಲು ಸಾಧ್ಯವಿಲ್ಲ” ಎಂದು ಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.
ಸಂತ್ರಸ್ತೆ ಮತ್ತು ಅಪರಾಧಿಗಳಲ್ಲಿ ಓರ್ವ ಹಿಂದೆ ಸಂಬಂಧದಲ್ಲಿದ್ದರೂ, ಆಕೆಯ ಒಪ್ಪಿಗೆಯಿಲ್ಲದೆ ಯಾವುದೇ ಲೈಂಗಿಕ ಕ್ರಿಯೆಯು ಆಕೆ ಅವನೊಂದಿಗೆ ಹಾಗೂ ಇತರ ಆರೋಪಿಯೊಂದಿಗೆ ಸಂಭೋಗ ಹೊಂದಲು ಸಿದ್ಧರಿಲ್ಲದಿದ್ದರೆ ಅದು ಅತ್ಯಾಚಾರಕ್ಕೆ ಸಮನಾಗಿರುತ್ತದೆ ಎಂದು ಪೀಠ ಹೇಳಿದೆ.
“ಒಂದು ನಿರ್ದಿಷ್ಟ ಸಂದರ್ಭದಲ್ಲಿ ಪುರುಷನೊಂದಿಗೆ ಲೈಂಗಿಕ ಚಟುವಟಿಕೆಗಳಿಗೆ ಸಮ್ಮತಿಸುವ ಮಹಿಳೆಯು ಇತರ ಎಲ್ಲ ಸಂದರ್ಭಗಳಲ್ಲಿ ಅದೇ ಪುರುಷನೊಂದಿಗೆ ಲೈಂಗಿಕ ಚಟುವಟಿಕೆಗೆ ಸಮ್ಮತಿ ನೀಡುವುದಿಲ್ಲ (ವಾಸ್ತವವಾಗಿಯೇ). ಮಹಿಳೆಯ ಪಾತ್ರ ಅಥವಾ ಆಕೆಯ ನೈತಿಕತೆಯು ಹಿಂದೆ ಹೊಂದಿದ್ದ ಲೈಂಗಿಕ ಪಾಲುದಾರರ ಸಂಖ್ಯೆಗೆ ಸಂಬಂಧಿಸಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಲೈಂಗಿಕ ದೌರ್ಜನ್ಯವು ಕಾನೂನನ್ನು ಕುಗ್ಗಿಸುತ್ತದೆ, ಕಾನೂನುಬಾಹಿರವಾಗಿ ಮಹಿಳೆಯ ಗೌಪ್ಯತೆಯನ್ನು ಅತಿಕ್ರಮಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
“ಅತ್ಯಾಚಾರವನ್ನು ಲೈಂಗಿಕ ಅಪರಾಧವೆಂದು ಮಾತ್ರ ಪರಿಗಣಿಸಲಾಗುವುದಿಲ್ಲ. ಆದರೆ, ಅದನ್ನು ಆಕ್ರಮಣಶೀಲತೆಯನ್ನು ಒಳಗೊಂಡಿರುವ ಅಪರಾಧವೆಂದು ನೋಡಬೇಕು. ಇದು ಅವಳ ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗಿದೆ. ಅತ್ಯಾಚಾರವು ಸಮಾಜದಲ್ಲಿ ಅತ್ಯಂತ ನೈತಿಕವಾಗಿ ಮತ್ತು ದೈಹಿಕವಾಗಿ ಖಂಡನೀಯ ಅಪರಾಧವಾಗಿದೆ. ಏಕೆಂದರೆ, ಇದು ಸಂತ್ರಸ್ತೆ ದೇಹ, ಮನಸ್ಸು ಮತ್ತು ಗೌಪ್ಯತೆಯ ಮೇಲಿನ ಆಕ್ರಮಣವಾಗಿದೆ” ಎಂದು ಹೈಕೋರ್ಟ್ ಹೇಳಿದೆ.
ಕಳ್ಳತನ ದೂರು ನೀಡಲು ಠಾಣೆಗೆ ತೆರಳಿದ್ದ ಮಹಿಳೆಗೆ ಲೈಂಗಿಕ ಕಿರುಕುಳ: ಪೊಲೀಸರ ವಿರುದ್ಧ ಗಂಭೀರ ಆರೋಪ


