ಏರ್ ಇಂಡಿಯಾ ವಿಮಾನದ ಮಹಿಳಾ ಪೈಲಟ್ ಒಬ್ಬರು ಮುಂಬೈನ ತನ್ನ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಪ್ರಿಯಕರನ ಕಿರುಕುಳಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವಾಣಿಜ್ಯ ಪೈಲಟ್ ಸೃಷ್ಟಿ ತುಲಿ ಸಾವನ್ನಪ್ಪಿದವರು. ಈಕೆಯ ಪ್ರಿಯಕರ ಆದಿತ್ಯ ಪಂಡಿತ್ ಎಂಬಾತ ಮಾಂಸಾಹಾರ ತ್ಯಜಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ವರದಿಗಳ ಪ್ರಕಾರ, ಉತ್ತರ ಪ್ರದೇಶದ ಗೋರಖ್‌ಪುರ ಮೂಲದ ಸೃಷ್ಟಿ ತುಲಿ, ಮುಂಬೈನ ಮರೋಲ್ ಪ್ರದೇಶದ ಕನಕಿಯಾ ರೈನ್ ಫಾರೆಸ್ಟ್ ಅಪಾರ್ಟ್‌ಮೆಂಟ್‌ನ ತನ್ನ ಫ್ಲಾಟ್‌ನಲ್ಲಿ ಮಂಗಳವಾರ (26) ತಡರಾತ್ರಿ ಡೇಟಾ ಕೇಬಲ್‌ನಿಂದ ನೇಣು ಬಿಗಿದುಕೊಂಡಿದ್ದಾರೆ. ದೆಹಲಿಯಲ್ಲಿ ನೆಲೆಸಿದ್ದ ಆಕೆಯ ಪ್ರಿಯಕರ ಆದಿತ್ಯ ಪಂಡಿತ್ ಜೊತೆ ಜಗಳವಾಡಿದ ನಂತರ ಈ ಘಟನೆ ನಡೆದಿದೆ.
ಪೊಲೀಸರು ಆದಿತ್ಯ ಪಂಡಿತ್‌ನನ್ನು ಬಂಧಿಸಿ ನಾಲ್ಕು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. “ಪೊವೈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಪೈಲಟ್ ಎಂದು ಹೇಳಲಾದ ಸೃಷ್ಟಿ ತುಲಿ ಎಂಬ ಯುವತಿ ನವೆಂಬರ್ 24 ಮತ್ತು 25ರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆಕೆಯ ಗೆಳೆಯ ಆದಿತ್ಯ ಪಂಡಿತ್‌ನನ್ನು ಬಂಧಿಸಿದ್ದಾರೆ” ಎಂದು ಮುಂಬೈ ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಸೃಷ್ಟಿ ತುಲಿ ಅವರು ಗೋರಖ್‌ಪುರದ ಮೊದಲ ಮಹಿಳಾ ಪೈಲಟ್ ಆಗಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಸನ್ಮಾನಿಸಲ್ಪಟ್ಟಿದ್ದರು. ಈ ವಿಚಾರವನ್ನು ಸೃಷ್ಟಿ ತುಲಿಯ ಚಿಕ್ಕಪ್ಪ ವಿವೇಕ್ ತುಲಿ ಇಂಡಿಯಾ ಟುಡೇ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ವರದಿಗಳು ವಿವರಿಸಿವೆ.
ಸೃಷ್ಟಿ ಕಳೆದ ವರ್ಷ ಜೂನ್‌ನಿಂದ ಕೆಲಸದ ನಿಮಿತ್ತ ಮುಂಬೈನಲ್ಲಿ ನೆಲೆಸಿದ್ದರು. ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ಕಮರ್ಷಿಯಲ್ ಪೈಲಟ್ ಕೋರ್ಸ್ ಓದುತ್ತಿದ್ದಾಗ ಆಕೆ ಮತ್ತು ಆದಿತ್ಯ ಪಂಡಿತ್ ಭೇಟಿಯಾಗಿದ್ದರು. ಅಲ್ಲಿಂದ ಅವರಿಬ್ಬರ ನಡುವೆ ಪ್ರೀತಿಯಾಗಿತ್ತು ಎಂದು ಪೊವೈ ಪೊಲೀಸ್ ಠಾಣೆಯ ಅಧಿಕಾರಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಆತ್ಮಹತ್ಯೆಗೂ ಮುನ್ನ ತುಲಿ ಮತ್ತು ಪಂಡಿತ್ ನಡುವೆ ಜಗಳ ನಡೆದಿತ್ತು. ಬಳಿಕ ಪಂಡಿತ್ ಕಾರಿನಲ್ಲಿ ದೆಹಲಿಗೆ ಹೊರಟಿದ್ದರು. ಪ್ರಯಾಣದ ಮಧ್ಯೆ ಪಂಡಿತ್‌ಗೆ ಕರೆ ಮಾಡಿದ್ದ ತುಲಿ, ತಾನು ಜೀವನವನ್ನು ಕೊನೆಗೊಳಿಸುವುದಾಗಿ ಹೇಳಿದ್ದಾರೆ. ತಕ್ಷಣ ಕಾರು ತಿರುಗಿಸಿದ ಪಂಡಿತ್ ಮುಂಬೈಗೆ ಆಗಮಿಸಿದ್ದಾರೆ. ಈ ವೇಳೆ ತುಲಿ ಅವರ ಮನೆಯ ಬಾಗಿಲು ಲಾಕ್ ಆಗಿತ್ತು. ಬಳಿಕ ಕೀ ಮಾಡುವವರ ಸಹಾಯದಿಂದ ಬಾಗಿಲು ತೆರೆಯಲಾಯಿತು. ಈ ವೇಳೆ ತುಲಿ ಡೇಟಾ ಕೇಬಲ್‌ನಿಂದ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ತಕ್ಷಣ ಆಕೆಯನ್ನು ಇಳಿಸಿ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಮನೆಯಲ್ಲಿ ಯಾವುದೇ ಆತ್ಮಹತ್ಯಾ ಪತ್ರ ಕಂಡು ಬಂದಿಲ್ಲ ಎಂದು ಕೆಲ ವರದಿಗಳು ವಿವರಿಸಿವೆ.
ಆಹಾರ ಪದ್ದತಿಯನ್ನು ಬದಲಾಯಿಸುವಂತೆ ಆದಿತ್ಯ ಪಂಡಿತ್ ಸೃಷ್ಟಿ ತುಲಿಗೆ ಒತ್ತಡ ಹೇರುತ್ತಿದ್ದ. ಸಾರ್ವಜನಿಕವಾಗಿ ಅವಮಾನಿಸುತ್ತಿದ್ದ. ಆತನ ಕಿರುಕುಳಕ್ಕೆ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿನ ಬಳಿಕ ಪಂಡಿತ್ ಸಾಕ್ಷ್ಯ ನಾಶ ಮಾಡಿದ್ದಾನೆ ಎಂದು ಆರೋಪಿಸಿ ಸೃಷ್ಟಿ ತುಲಿಯ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ಇದನ್ನೂ ಓದಿ : ಮಧ್ಯಪ್ರದೇಶ | ದಲಿತ ವ್ಯಕ್ತಿಯನ್ನು ಥಳಿಸಿ ಕೊಂದ ಗ್ರಾಮ ಪಂಚಾಯತ್ ಅಧ್ಯಕ್ಷ


