ರಾಜ್ಯದಲ್ಲಿ ಅನರ್ಹ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ರದ್ದು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರ ಅಧಿಕಾರಿಗಳ ಮೂಲಕ ಈಗಾಗಲೇ ಸಾವಿರಾರು ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತಿಸಿದೆ ಎಂಬ ಮಾಹಿತಿಯಿದೆ.
ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಬಿಪಿಎಲ್ ಕಾರ್ಡ್‌ಗಳ ರದ್ದತಿ ವಿಚಾರ ಮುಂದಿಟ್ಟುಕೊಂಡು ಸರ್ಕಾರ ವಿರುದ್ದ ಮುಗಿಬಿದ್ದಿವೆ. ಬಿಜೆಪಿ ನಾಯಕರಾದ ಆರ್. ಅಶೋಕ್, ಅಶ್ವತ್ಥ ನಾರಾಯಣ, ಗೋಪಾಲಯ್ಯ ಸೇರಿದಂತೆ ಹಲವರು ಬುಧವಾರ (ನ.21) ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ತೆರಳಿ ಬಿಪಿಎಲ್ ಕಾರ್ಡ್ ಕಳೆದುಕೊಂಡವರ ಅಹವಾಲು ಆಲಿಸಿದ್ದಾರೆ.
ಸರ್ಕಾರ ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆ ತಕ್ಷಣ ನಿಲ್ಲಿಸಬೇಕು. ರದ್ದಾದವರ ಕಾರ್ಡ್ ಮರಳಿ ಕೊಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗುವುದಿಲ್ಲ. ಅರ್ಹರಿಗೆ ಅನ್ಯಾಯವಾದರೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಪಿಎಲ್ ಕಾರ್ಡ್ ರದ್ದಾದವರಿಗೆ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ನೀಡುತ್ತಿರುವ ಮಾಸಿಕ 2 ಸಾವಿರ ರೂಪಾಯಿ ಧನಸಹಾಯ ಸಿಗುವುದಿಲ್ಲ ಎಂಬ ಸುದ್ದಿ ಹಬ್ಬಿದೆ. ಕೆಲ ಮಾಧ್ಯಮಗಳು ಸರ್ಕಾರ ‘ಒಂದೇ ಕಲ್ಲಿಗೆ ಎರಡು ಹಕ್ಕಿ’ ಹೊಡೆಯಲು ಪ್ಲ್ಯಾನ್ ಮಾಡಿದೆ ಎಂದು ಆರೋಪಿಸಿವೆ.
ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?
ಬಿಪಿಎಲ್ ಕಾರ್ಡ್ ರದ್ದಾದರೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಎಂಬ ಸುದ್ದಿಗೆ ಸಂಬಂಧಿಸಿದಂತೆ ಬುಧವಾರ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು “ಗೃಹಲಕ್ಷ್ಮಿ ಯೋಜನೆಗೆ ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ಎಂಬ ಬೇಧವಿಲ್ಲ. ಆದಾಯ ತೆರಿಗೆ, ಜಿಎಸ್‌ಟಿ ಪಾವತಿದಾರರಿಗೆ ಗೃಹಲಕ್ಷ್ಮಿ ಅನ್ವಯ ಆಗುವುದಿಲ್ಲ. ರಾಜ್ಯದಲ್ಲಿ ಸದ್ಯ 80 ಸಾವಿರ ಪಡಿತರ ಕಾರ್ಡ್‌ಗಳು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆ ಆಗಿವೆ. ಈ ಎಲ್ಲಾ ಕಾರ್ಡ್‌ದಾರರಿಗೂ ಗೃಹಲಕ್ಷ್ಮಿ ಸೌಲಭ್ಯ ಸಿಗಲಿದೆ. ಯಾರಾದರು ತೆರಿಗೆ ಪಾವತಿದಾರರು ಪತ್ತೆಯಾದರೆ, ಅಂತವರಿಗೆ ಧನ ಸಹಾಯ ನಿಲ್ಲಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ದೇಶದಲ್ಲಿ 5.8 ಕೋಟಿ ನಕಲಿ ಪಡಿತರ ಚೀಟಿ ರದ್ದು
ದೇಶದಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯ ಡಿಜಿಟಲೀಕರಣಕ್ಕೆ ಚಾಲನೆ ನೀಡಲಾಗಿದ್ದು, 5.8 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯವು ಬುಧವಾರ ತಿಳಿಸಿದೆ.
ದೇಶದಲ್ಲಿ ಒಟ್ಟು 80.6 ಕೋಟಿ ಪಡಿತರ ಚೀಟಿಗಳನ್ನು ಹೊಂದಿದ ಕುಟುಂಬಗಳಿವೆ. ಆಧಾರ್ ಸಂಖ್ಯೆ ಪರಿಶೀಲನೆ ಪ್ರಕ್ರಿಯೆ ಮೂಲಕ ಈ ನಕಲಿ ಚೀಟಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ : ದೇಶದಲ್ಲಿ 5.8 ಕೋಟಿ ನಕಲಿ ಪಡಿತರ ಚೀಟಿ ರದ್ದು: ಕೇಂದ್ರ ಆಹಾರ ಸಚಿವಾಲಯ


