ಬೆಳಗಾವಿಯ ಸುವರ್ಣ ವಿಧಾನಸೌಧದದಲ್ಲಿ ನಡೆದ ಚಳಿಗಾಲ ಅಧಿವೇಶನದ ವಿಧಾನಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಸದಸ್ಯ ಸಿ.ಟಿ. ರವಿ ಬಳಸಿದ ಅವಾಚ್ಯ ಪದದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪತ್ರ ಬರೆದಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.
“ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿ, ಗೌರವ ಹೊಂದಿರಬೇಕಾದ ಜವಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿಯೇ ಸದನದಲ್ಲಿ ಮಹಿಳಾ ಸಚಿವೆಯೊಬ್ಬರನ್ನು ಅತಿ ಕೀಳು ಮಟ್ಟದಲ್ಲಿ ಅಸಂವಿಧಾನಿಕ ಪದ ಬಳಕೆ ಮಾಡಿ ನಿಂದಿಸಿದ್ದಾರೆ. ಇದು ನಾಡಿನ ಇಡೀ ಹೆಣ್ಣು ಕುಲಕ್ಕೆ ಹಾಗೂ ಅವರ ಭಾವನೆಗಳಿಗೆ ಮಾಡಿದ ಅಪಮಾನ. ಈ ನಿಟ್ಟಿನಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕು” ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌದರಿ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ @laxmi_hebbalkar ಅವರಿಗೆ ವಿಧಾನ ಪರಿಷತ್ತಿನ ಸದಸ್ಯರಾದ @CTRavi_BJP ಅವಾಚ್ಯ ಮತ್ತು ಅಸಂವಿಧಾನಿಕ ಪದ ಬಳಕೆ ಮಾಡಿ ಅಪಮಾನಿಸಿರುವ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೋರಿ ವಿಧಾನ ಪರಿಷತ್… pic.twitter.com/UPF6JwXTD7
— Karnataka Congress (@INCKarnataka) December 20, 2024
ಸಿ.ಟಿ. ರವಿಗೆ ಮಧ್ಯಂತರ ಜಾಮೀನು
ಬೆಳಗಾವಿಯ ಸುವರ್ಣ ಸೌಧದ ಸದನದಲ್ಲೆ ಸಚಿವರಾದ ಲಕ್ಷ್ಮಿ ಹೆಬ್ಬಾಲ್ಕರ್ ಅವರನ್ನು ಅಶ್ಲೀಲವಾಗಿ ನಿಂದಿಸಿದ ಬಿಜೆಪಿ ಎಮ್‌ಎಲ್‌ಸಿ ಸಿ.ಟಿ. ರವಿ ಅವರನ್ನು ಬಿಡುಗಡೆ ಮಾಡುವಂತೆ ಶುಕ್ರವಾರ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಬಂಧನದ ಪ್ರಕ್ರಿಯೆ ಪಾಲಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎಂದು ಹೇಳಿರುವ ಕೋರ್ಟ್, ಪ್ರಕರಣದ ವಿಚಾರಣೆಯಲ್ಲಿ ಮುಂದೂಡಿದೆ. ಸಚಿವೆ ಲಕ್ಷ್ಮಿ
ಷರತ್ತು ಬದ್ಧ ಬಿಡುಗಡೆಗೆ ಹೈಕೋರ್ಟ್ ಅದೇಶ ನೀಡಿದ್ದು, ಪ್ರಕರಣದಲ್ಲಿ ಸಹರಿಸುವಂತೆ ಹೇಳಿದೆ. ಅವರ ಬಂಧನಕ್ಕೂ ಮೊದಲು ನೋಟಿಸ್ ನೀಡಬಹುದಿತ್ತು ಎಂದು ಹೇಳಿರುವ ಕೋರ್ಟ್, ಅವರು ಈಗ ಎಲ್ಲಿದ್ದಾರೊ ಅಲ್ಲಿಂದಲೆ ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗುರುವಾರ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿದ್ದರು. ಈ ಬಗ್ಗೆ ಸದನದ ಒಳಗೆ ಮತ್ತು ಹೊರಗೆ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದ್ದು, ಸಚಿವರ ಅಭಿಮಾನಿಗಳು ಸುವರ್ಣಸೌಧದ ಮೊಗಸಾಲೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದರು. ಸಚಿವೆ ಲಕ್ಷ್ಮಿ
ಬಿಜೆಪಿಯ ಸಿ.ಟಿ. ರವಿ ಅವರ ಮಾತು ಕೇಳಿ ಲಕ್ಷ್ಮಿ ಹೆಬ್ಬಾಳ್ಕರ್ ಕೆಂಡಾಮಂಡಲವಾಗಿದ್ದು, ಇದರಿಂದ ತಮಗಾದ ಅವಮಾನ ತಡೆದುಕೊಳ್ಳಲಾಗದೇ ಕಣ್ಣಿರು ಹಾಕುತ್ತಾ ಪರಿಷತ್ತಿನಿಂದ ಹೊರಗೆ ಹೋಗಿದ್ದಾರೆ ಎಂದು ವರದಿಯಾಗಿತ್ತು. ಹೆಬ್ಬಾಳ್ಕರ್ ಮಾತಿಗೆ ಕಾಂಗ್ರೆಸ್ ಸದಸ್ಯರು ಧ್ವನಿ ಗೂಡಿಸಿದ್ದು, ಹತ್ತು ಬಾರಿ ಅಸಂವಿಧಾನಿಕ ಪದ ಬಳಸಿದ್ದಾರೆ ಎಂದು ಹೆಬ್ಬಾಳ್ಕರ್ ಆರೋಪ ಮಾಡಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಸಿಟಿ ರವಿ ಅಶ್ಲೀಲ ಪದ ಬಳಸಿದ್ದಾರೆ ಎಂದು ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರೆಲ್ಲರೂ ಸದನದಲ್ಲಿ ಕಿಡಿ ಕಾರಿದ್ದಾರೆ. ಸಹ ಸದಸ್ಯರನ್ನು ಕರೆತಂದು ಲಕ್ಷ್ಮಿ ಹೆಬ್ಬಾಳ್ಕರ್ ಸಭಾಪತಿ ಹೊರಟ್ಟಿ ಅವರಿಗೆ ದೂರು ನೀಡಿದ್ದಾರೆ.
ಸದನದಲ್ಲಿ ಕೋಲಾಹಲ ಉಂಟಾದಾಗ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಮುಂದೂಡಿದ್ದರು. ಕಲಾಪ ಮುಂದೂಡಿಕೆಯಾದರೂ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಸದನದ ಒಳಗೆ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದರು. ಈ ಗದ್ದಲದ ಮಧ್ಯೆ ಸಿ.ಟಿ. ರವಿ ಅಶ್ಲೀಲ ಪದ ಬಳಸಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಭಾಪತಿಗೆ ದೂರು ನೀಡಿದ ಬಳಿಕ ಸಭಾಪತಿ, ಆಡಿಯೊ ವಿಡಿಯೊ ಪರಿಶೀಲನೆಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ; ಬೆಂಗಳೂರು ಐಐಎಂನಲ್ಲಿ ಜಾತಿ ದೌರ್ಜನ್ಯ : ನಿರ್ದೇಶಕ, 7 ಪ್ರಾಧ್ಯಾಪಕರ ವಿರುದ್ಧ ಎಫ್‌ಐಆರ್ ದಾಖಲು


