“ಮನೆಯಲ್ಲಿ ಕುಳಿತು ಎಷ್ಟು ಹೊತ್ತು ಹೆಂಡತಿಯ ಮುಖ ನೋಡಿಕೊಂಡು ಇರುತ್ತೀರಿ. ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು. ಶ್ರಮವಹಿಸಿ ದುಡಿಯಲು ಭಾನುವಾರದ ರಜೆಯನ್ನೂ ತ್ಯಜಿಸಬೇಕು” ಎಂದು ಎಲ್ ಆ್ಯಂಡ್ ಟಿ ಕಂಪನಿ ಮುಖ್ಯಸ್ಥ ಎಸ್.ಎನ್. ಸುಬ್ರಹ್ಮಣ್ಯನ್ ಅವರು ನೀಡಿರುವ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣ ಬಳಕೆದಾರರು, ಕೆಲ ಸಿನಿಮಾ ಕಲಾವಿದರು ಸೇರಿದಂತೆ ಸಾರ್ವಜನಿಕ ವಲಯದ ಜನರು ಉದ್ಯೋಗಿಗಳ ಮಾನಸಿಕ ಪರಿಸ್ಥಿತಿಯನ್ನು ಉಲ್ಲೇಖಿಸಿ ಎಲ್ ಆ್ಯಂಡ್ ಟಿ ಮುಖ್ಯಸ್ಥನ ಹೇಳಿಕೆ ವಿರೋಧಿಸಿದ್ದಾರೆ.
ಶನಿವಾರ ಮತ್ತು ಭಾನುವಾರ ರಜೆ ಕೊಡಬೇಕು ಎಂದು ಒತ್ತಾಯಿಸಿದ್ದ ತನ್ನ ಕಂಪನಿಯ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಎಸ್.ಎನ್. ಸುಬ್ರಹ್ಮಣ್ಯನ್, “ನಿಮ್ಮಿಂದ ಭಾನುವಾರ ಕೂಡ ಕೆಲಸ ಮಾಡಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ನನಗೆ ವಿಷಾದವಾಗುತ್ತಿದೆ. ನಾನು ಭಾನುವಾರವೂ ಕೆಲಸ ಮಾಡುತ್ತೇನೆ. ಅಂದು ಕೂಡ ನಿಮ್ಮಿಂದ ಕೆಲಸ ಮಾಡಿಸಲು ನನ್ನಿಂದ ಸಾಧ್ಯವಾದರೆ ನಾನು ಹೆಚ್ಚು ಸಂತೋಷ ಪಡುತ್ತೇನೆ” ಎಂದು ಹೇಳಿದ್ದಾರೆ.
“ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ. ಎಷ್ಟು ಹೊತ್ತು ಹೆಂಡತಿಯ ಮುಖ ನೋಡುತ್ತೀರಿ. ಆಕೆ ಕೂಡ ಎಷ್ಟು ಹೊತ್ತು ನಿಮ್ಮ ಮುಖ ನೋಡಿಕೊಂಡು ಇರುತ್ತಾರೆ. ಹಾಗಾಗಿ, ಕಚೇರಿಗೆ ಬಂದು ಕೆಲಸ ಮಾಡಿ” ಎಂದಿದ್ದಾರೆ.
90 hours a week? Why not rename Sunday to ‘Sun-duty’ and make ‘day off’ a mythical concept! Working hard and smart is what I believe in, but turning life into a perpetual office shift? That’s a recipe for burnout, not success. Work-life balance isn’t optional, it’s essential.… pic.twitter.com/P5MwlWjfrk
— Harsh Goenka (@hvgoenka) January 9, 2025
ಸುಬ್ರಹ್ಮಣ್ಯನ್ ಯಾವಾಗ ಈ ಮಾತುಗಳನ್ನು ಆಡಿದ್ದಾರೆ ಎಂಬ ಖಚಿತ ಮಾಹಿತಿ ದೊರೆತಿಲ್ಲ. ಆದರೆ, ಅವರ ಹೇಳಿಕೆಯ ವಿಡಿಯೋ ಭಾರೀ ವೈರಲ್ ಆಗಿ, ಟೀಕೆಗೆ ಗುರಿಯಾಗಿದೆ.
ಸುಬ್ರಹ್ಮಣ್ಯನ್ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಹಲವರು ಸುಬ್ರಹ್ಮಣ್ಯನ್ ಅವರಿಗೆ ಛೀಮಾರಿ ಹಾಕಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈ ಕುರಿತು ಪ್ರತಿಕ್ರಿಯಿಸಿದ್ದು, “ಉನ್ನತ ಹುದ್ದೆಯಲ್ಲಿರುವವರು ಈ ರೀತಿಯ ಹೇಳಿಕೆ ನೀಡುತ್ತಿರುವುದು ‘ಆಘಾತಕಾರಿ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. #MentalHealthMatters ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.


“ಸುಬ್ರಹ್ಮಣ್ಯನ್ ಅವರ ಹೇಳಿಕೆ ಗುಲಾಮಗಿರಿಯನ್ನು ಉತ್ತೇಜಿಸುವುದು ಮಾತ್ರವಲ್ಲದೆ, ಸ್ತ್ರೀ ದ್ವೇಷವನ್ನು ಹೊಂದಿದೆ. ಎಲ್ ಆ್ಯಂಡ್ ಟಿ ಕಂಪನಿ ಮಹಿಳೆಯರನ್ನು ನೇಮಿಸಿಕೊಳ್ಳುವುದಿಲ್ವಾ? ಸುಬ್ರಹ್ಮಣ್ಯನ್ ಅವರ ಹೇಳಿಕೆ, ಹೆಂಡತಿ ಅಥವಾ ಸಂಗಾತಿಯನ್ನು ಅವಮಾನಿಸುವಂತಿದೆ. ಇದು ನಾಚಿಕೇಗೇಡಿನ ಸಂಗತಿ” ಎಂದು ಖ್ಯಾತೆ ಪತ್ರಕರ್ತೆ ನಿಧಿ ರಝ್ದಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
His comments are problematic not only because he wants to enforce slavery but also because they reflect a deeper misogyny. Does L & T not employ women? The comments also reflect disrespect for a wife or partner. Shameful https://t.co/WusCqyVYd1
— Nidhi Razdan (@Nidhi) January 9, 2025
ಮುಖ್ಯಸ್ಥನ ಹೇಳಿಕೆ ಸಮರ್ಥಿಸಿದ ಎಲ್ ಆ್ಯಂಡ್ ಟಿ
ಉದ್ಯೋಗಿಗಳು ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂಬ ತಮ್ಮ ಮುಖ್ಯಸ್ಥನ ಹೇಳಿಕೆಯನ್ನು ಎಲ್ ಆ್ಯಂಡ್ ಟಿ ಕಂಪನಿ ಸಮರ್ಥಿಸಿಕೊಂಡಿದೆ. “ರಾಷ್ಟ್ರ ನಿರ್ಮಾಣದಲ್ಲಿನ ತನ್ನ ಬದ್ಧತೆಯನ್ನು ಸುಬ್ರಹ್ಮಣ್ಯನ್ ಅವರು ತನ್ನ ಹೇಳಿಕೆಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಇದು ಅಸಾಧಾರಣ ಫಲಿತಾಂಶಗಳನ್ನು ಸಾಧಿಸುವ ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಅಲ್ಲದೆ, ಭಾರತದ ಪ್ರಗತಿಯನ್ನು ಹೆಚ್ಚಿಸಲು ಸಾಮೂಹಿಕ ಸಮರ್ಪಣೆ ಮತ್ತು ಪ್ರಯತ್ನವನ್ನು ಸುಬ್ರಹ್ಮಣ್ಯನ್ ಕೋರಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ಹಿಂದೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಉದ್ಯೋಗಿಗಳು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದರೂ, ಅವರು ತನ್ನ ಹೇಳಿಕೆಯನ್ನು ಪುನರುಚ್ಚರಿಸಿ ಸಮರ್ಥಿಸಿಕೊಂಡಿದ್ದರು. ನಂತರ ಓಲಾ ಸಿಇಒ ಭವೀಷ್ ಅಗರ್ವಾಲ್ ಅವರು ನಾರಾಯಣ ಮೂರ್ತಿಯನ್ನು ಹೇಳಿಕೆಯನ್ನು ಬೆಂಬಲಿಸಿದ್ದರು. ಇದೀಗ ಎಲ್ ಆ್ಯಂಡ್ ಟಿ ಮುಖ್ಯಸ್ಥ 90 ಭಾನುವಾರವೂ ಸೇರಿದಂತೆ 90 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ.
ಇದನ್ನೂ ಓದಿ : SC/ST Reservation |’ಕೆನೆಪದರ’ ಕುರಿತು ಶಾಸಕಾಂಗ, ಕಾರ್ಯಾಂಗ ನಿರ್ಧರಿಸಲಿ : ಸುಪ್ರೀಂ ಕೋರ್ಟ್


