ಫೆಬ್ರವರಿ 20: ವಿಶ್ವ ಸಾಮಾಜಿಕ ನ್ಯಾಯ ದಿನ
“ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಜೀವನದ ಕ್ರಮವಾದಾಗ ಮಾತ್ರ ಸಾಮಾಜಿಕ ಪ್ರಜಾಪ್ರಭುತ್ವ ಕಾಣಲು ಸಾಧ್ಯ – 1945ರ ನವೆಂಬರ್ 25ರಂದು ಸಂವಿಧಾನ ರಚನಾಸಭೆಯಲ್ಲಿ ಕಡೆಯದಾಗಿ ಭಾಷಣ ಮಾಡಿದ್ದ ಡಾ. ಬಿಆರ್ ಅಂಬೇಡ್ಕರ್ ಹೇಳಿದ ಮಾತುಗಳಿವು. ಶತಮಾನಗಳ ಕಾಲ ಈ ದೇಶದಲ್ಲಿದ್ದ ವರ್ಣವ್ಯವಸ್ಥೆ ಪ್ರಣೀತ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆಯ ತರಲೆಂದೇ ರೂಪಿಸಿದ ಸಂವಿಧಾನದ ಕರಡು ಸಿದ್ಧಪಡಿಸುವ ಸಭೆಯಲ್ಲಿ ಹೇಳಿದ ಮಾತಿದು.
ಅಸಮಾನತೆಯನ್ನೇ ಕಂಡುಂಡು ಬೆಳೆದ ಅಂಬೇಡ್ಕರ್ ಅವರಿಗೆ ಸ್ವತಂತ್ರ ಭಾರತದಲ್ಲಿ ಜಾತಿಯ ಕಾರಣಕ್ಕೆ ಯಾರೂ ಅವಕಾಶ ವಂಚಿತರಾಗಬಾರದು, ಜಾತಿಯ ಕಾರಣಕ್ಕಾಗಿ ಯಾರಿಗೋ ಹೆಚ್ಚು ಅಥವಾ ಕಡಿಮೆ ಅವಕಾಶ ಸಿಗುವ ತಾರತಮ್ಯ ಇರಬಾರದು ಎಂದು, ಸಾಮಾಜಿಕ ನ್ಯಾಯದಿಂದ ಮಾತ್ರ ಈ ದೇಶದ ಪ್ರಗತಿ ಸಾಧ್ಯ ಮತ್ತು ನಿಜವಾದ ಪ್ರಜಾಪ್ರಭುತ್ವವಾಗಲು ಎಂದು ಸಾಧ್ಯ ಎಂದು ಪ್ರತಿಪಾದಿಸಿದ್ದರು.
ಏನಿದು ಸಾಮಾಜಿಕ ನ್ಯಾಯ? ಅದನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದೇನೊ; ದೇಶವನ್ನು ಒಂದು ಮನೆ ಎಂದುಕೊಂಡರೆ, ಕುಟುಂಬದ ಸದಸ್ಯರೆಲ್ಲರೂ ಅದರ ಪ್ರಜೆಗಳು. ಕುಟುಂಬದ ಆಸ್ತಿಯನ್ನು ಈ ಎಲ್ಲ ಸದಸ್ಯರಿಗೆ ಸಮಾನವಾಗಿ ಹಂಚುವುದು ಸಾಮಾನ್ಯ ರೂಢಿ. ಇದು ದೇಶದಲ್ಲೂ ಆಗಬೇಕು. ಕುಟುಂಬದ ಆಸ್ತಿಯಂತೆ, ಉದ್ಯೋಗ, ಶಿಕ್ಷಣ, ಆರ್ಥಿಕ, ರಾಜಕೀಯ ಅವಕಾಶಗಳು ಜಾತಿ-ಮತ ಬೇಧಗಳಿಲ್ಲದ ಸಮಾನಾವಾಗಿ ತನ್ನ ಪ್ರಜೆಗಳಿಗೆ ಹಂಚಿಕೆಯಾಗಬೇಕು. ಹಿಂದುಳಿದವರನ್ನೂ, ಶತಶತಮಾನಗಳಿಂದ ಅವಕಾಶವಂಚಿತರನ್ನೂ ಸಮಾನತೆಗಾಗಿ ಮೇಲೆತ್ತಲು ಕ್ರಮ ಕೈಗೊಳ್ಳಬೇಕು.
ಎಪ್ಪತ್ತು ವರ್ಷಗಳ ಬಳಿಕ ಭಾರತೀಯ ಸಮಾಜದ ಸ್ಥಿತಿಯನ್ನು ಗಮನಿಸಿದರೆ ನಿಜಕ್ಕೂ ಸಾಮಾಜಿಕ ನ್ಯಾಯ ಅನುಷ್ಠಾನಕ್ಕೆ ಬಂದಿದೆ ಎಂದು ಮುಟ್ಟಿಹೇಳಿಕೊಳ್ಳುವ ಧೈರ್ಯ ಯಾರಿಗೂ ಇಲ್ಲ.
ಶೋಷಿತ, ಹಿಂದುಳಿದ ಸಮುದಾಯಗಳು ಇಂದಿಗೂ ತಮ್ಮ ಹಕ್ಕಿಗಾಗಿ ಹೋರಾಟ ಮಾಡಲೇಬೇಕಾದ ಸ್ಥಿತಿ ಇರುವುದನ್ನು, ಘನತೆಯ ಬದುಕು ಕಟ್ಟಿಕೊಳ್ಳುವ ಅವಕಾಶಗಳನ್ನು ಪಡೆದುಕೊಳ್ಳುವುದಕ್ಕಾಗಿ ಸಂಘರ್ಷ ನಡೆಸಬೇಕಾಗಿರುವುದನ್ನು ನೋಡುತ್ತಿದ್ದೇವೆ. ಸಂವಿಧಾನ ಬದ್ಧ ಅವಕಾಶ ಹಕ್ಕಾಗದೆ, ಮೇಲ್ಜಾತಿಯ, ಅಧಿಕಾರಸ್ಥರ ಮರ್ಜಿ, ಅನುಕಂಪವಾಗಿದೆ ಎಂದೇ ಅನ್ನಿಸುತ್ತದೆ.

ತೊಂಬತ್ತರ ದಶಕದ ಜಾಗತೀಕರಣ ಅಂತಹ ಅವಕಾಶಗಳನ್ನು ತರುವ ಬೆಳವಣಿಗೆಯಾಗಿ ಬಣ್ಣಿಸಲಾಯಿತು. ಆರ್ಥಿಕ ಸ್ವಾವಲಂಬನೆ ಈ ಜಾತಿಯ ತಾರತಮ್ಯವನ್ನು ಹೋಗಲಾಡಿಸಬಹುದು ಎಂಬ ಪ್ರತಿಪಾದನೆಗಳು ತೀವ್ರವಾಗಿ ಕೇಳಿ ಬಂದ ಕಾಲವದು. ಜಾಗತೀಕರಣ, ಹೊಸ ಉದ್ಯಮ, ಹೊಸ ಉದ್ಯೋಗ, ಹೊಸ ಅವಕಾಶಗಳನ್ನು ಸೃಷ್ಟಿಸಿತಾದರೂ, ಶತಮಾನಗಳಿಂದಲೂ ಶಿಕ್ಷಣ, ಕೌಶಲ್ಯಗಳನ್ನು ತಮ್ಮ ಪಾರುಪತ್ಯದಂತೆ ಕಾಪಾಡಿಕೊಂಡ ಜಾತಿ/ವರ್ಗಗಳೇ ಈ ಅವಕಾಶಗಳನ್ನು ಹಂಚಿಕೊಂಡು ಸಮಾಜದಲ್ಲಿರುವ ತಮ್ಮ ಸ್ಥಾನಗಳನ್ನು ಹಾಗೇ ಭದ್ರ ಮಾಡಿಕೊಂಡವು.
ಔದ್ಯೋಗೀಕರಣದ ಈ ಬೆಳವಣಿಗೆಗೆ ತಂತ್ರಜ್ಞಾನ ಮತ್ತೊಂದು ಆಯಾಮವನ್ನು ಕೊಟ್ಟಿತು. ಇಂಟರ್‌ನೆಟ್ ಮಾಂತ್ರಿಕತೆ ದೇಶವ್ಯಾಪಿ ಆವರಿಸುತ್ತಿರುವಾಗ ಇದೂ ಹೊಸ ಅವಕಾಶಗಳ ಬಾಗಿಲಿನಂತೆ ಕಂಡಿತಾದರೂ ಇಲ್ಲೂ ನಿರ್ದಿಷ್ಟ ಸಮುದಾಯದವರೇ ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಂಡವು ಎಂಬುದನ್ನು ಹಲವು ಸಾಮಾಜಿಕ ಸಂಶೋಧನೆಗಳು ಬಹಿರಂಗಮಾಡಿವೆ. ಇಡೀ ದೇಶ ಸಾಮಾಜಿಕ ಚಲನೆಯ ಭಾಗವಾಗಿ ಬದಲಾಗುತ್ತಿದ್ದರೂ, ಸಾಮಾಜಿಕ ನ್ಯಾಯದ ವಿಷಯದಲ್ಲಿ ಯಥಾಸ್ಥಿತಿಯಲ್ಲೇ ಇತ್ತು ಎಂಬುದನ್ನೂ ಈ ಅಧ್ಯಯನಗಳು ಹೇಳುತ್ತವೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೇಳಿ ಬರುತ್ತಿರುವ ಕೆಲವು ’ಮಾಂತ್ರಿಕ’ ಪದಪುಂಜಗಳ ಪೈಕಿ ಡಿಜಿಟಲ್ ಇಂಡಿಯಾ ಕೂಡ ಒಂದು. ಎಲ್ಲ ಸರ್ಕಾರಿ ಸೇವೆಗಳನ್ನು ಡಿಜಿಟಲ್ ಸೇವೆಯಾಗಿ ರೂಪಾಂತರಿಸುವ ಮೂಲಕ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಭ್ರಮೆಯನ್ನು ಈ ಘೋಷಣೆಗಳು ಹುಟ್ಟಿಸಿದವು. ಅಗ್ಗದ ಇಂಟರ್‌ನೆಟ್ ಮತ್ತು ಸುಲಭ ದರದ ಸ್ಮಾರ್ಟ್‌ಫೋನ್‌ಗಳನ್ನು ಈ ಡಿಜಿಟಲ್ ಇಂಡಿಯಾದ ಕಲ್ಪನೆಯನ್ನು ಸಾಕಾರ ಮಾಡುವ ಉತ್ಸಾಹದಲ್ಲಿದ್ದವು. ಇದು ಎಲ್ಲರನ್ನು ದೇಶದ ಆರ್ಥಿಕತೆಯ ತೆಕ್ಕೆಗೆ ಎಳೆದುಕೊಳ್ಳುವ ಪ್ರಯತ್ನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಲೇ ಬಂದರು. ಆದರೆ ನಿಜಕ್ಕೂ ಹಾಗಾಯಿತೇ?
ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಯುವ ವ್ಯಕ್ತಿ ಈ ಡಿಜಿಟಲ್ ಆರ್ಥಿಕತೆಯಲ್ಲಿ ಹೇಗೆ ಭಾಗವಾದಾನು? ಆತನಿಗೆ ಫೋನ್ ಕೊಳ್ಳಲು ಆಗುವುದಿಲ್ಲ ಎಂದಲ್ಲ. ಆತನಿಗೆ ಇಂಟರ್‌ನೆಟ್ ಹೊಂದಲು ಸಾಧ್ಯವಿಲ್ಲ ಎಂದಲ್ಲ. ಆದರೆ ಡಿಜಿಟಲ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಆತನಿಗೆ ಮಾಹಿತಿಯೇ ಇಲ್ಲದಿದ್ದಾಗ, ಆತ ಈ ಡಿಜಿಟಲ್ ಆರ್ಥಿಕ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಹೇಗೆ ಭಾಗಿಯಾಗುತ್ತಾನೆ? ಇಂಥ ತೊಡಕುಗಳ ನಡುವೆಯೂ ಸರ್ಕಾರ ಡಿಜಿಟಲ್ ಇಂಡಿಯಾ ಎಂದು ಬೀಗುತ್ತಲೇ ಇದೆ.
ನಾಲ್ಕು ವರ್ಷಗಳ ಹಿಂದೆ, ’ಭಾರತ 2025ರ ಹೊತ್ತಿಗೆ 1 ಟ್ರಿಲಿಯನ್ ಡಾಲರ್‌ಗಳ ಡಿಜಿಟಲ್ ಅರ್ಥಿಕತೆಯಾಗುತ್ತದೆ’ ಎಂದು ಸರ್ಕಾರ ಬೀಗುತ್ತಿದ್ದಾಗಲೇ ಹೊರಬಿದ್ದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿದ್ದ ಡಿಜಿಟಲ್ ಸಾಕ್ಷರತೆಯ ಪ್ರಮಾಣ 10% ಅಷ್ಟೇ! ಅಂದರೆ 13 ಕೋಟಿ ಜನ! ನಮ್ಮ ಮನೆಯ ಬೀದಿಯ ತರಕಾರಿ ವ್ಯಾಪಾರಿಯೋ, ನಮ್ಮ ಪುಟ್ಟ ಊರಿನ ಕೃಷಿಕನೊ ಈ ಡಿಜಿಟಲ್ ಆರ್ಥಿಕತೆಯಲ್ಲಿ ಲೆಕ್ಕಕ್ಕೆ ಇದ್ದಾನೋ! ಇಲ್ಲ.
ಎಲ್ಲರನ್ನು ಒಳಗೊಳ್ಳುವ ಸಾಮಾಜಿಕ ಸಮಾನತೆಯ, ಸಮಾನ ಅವಕಾಶಗಳ ಧ್ಯೇಯಕ್ಕೆ, ಡಿಜಿಟಲ್ ಆರ್ಥಿಕತೆ ವಾಸ್ತವದಲ್ಲಿ ಸಾಮಾಜಿಕ ಅಸಮಾನತೆಗೆ ಡಿಜಿಟಲ್ ಹೊದಿಕೆಯನ್ನು ಹೊದಿಸಿತಷ್ಟೆ. ಸಾಮಾಜಿಕ, ಆರ್ಥಿಕವಾದ ಅಸಮಾನತೆಯ ಇನ್ನಷ್ಟು ಹೆಚ್ಚಿತೇ ಹೊರತು, ಕಡಿಮೆಯಾಗಲಿಲ್ಲ. ಮಾಹಿತಿಯ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆಯ ಜೊತೆಗೆ ಡಿಜಿಟಲ್ ವ್ಯವಹಾರಗಳ ಬಗೆಗಿನ ತಿಳಿವು ಇಲ್ಲದಿರುವುದು ಈ ಅಸಮಾನತೆಯನ್ನು ಜೀವಂತವಾಗಿಯೇ ಉಳಿಸಿಕೊಂಡು ಬಂದಿದೆ.
ನೇರ ಆರ್ಥಿಕತೆಗೆ ಸಂಬಂಧಿಸದೇ ಇದ್ದರೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಈ ಅಂಶವನ್ನು ಗಮನಿಸಬೇಕೆಂದೆನಿಸುತ್ತದೆ; ಕೋವಿಡ್ ಕಾಲದಲ್ಲಿ ಶಾಲೆಗಳು ನಿಂತು ಹೋದವು. ಆನ್‌ಲೈನ್ ಮೂಲಕ ಶಿಕ್ಷಣ ಚಟುವಟಿಕೆಗಳು ಆರಂಭಗೊಂಡವು. ಈ ಹೊತ್ತಿನಲ್ಲಿ ಹತ್ತಾರು ಸುದ್ದಿಗಳು ಗಮನಿಸಿದ್ದೇವೆ. ಮಗಳಿಗೆ ಸ್ಮಾರ್ಟ್‌ಫೋನ್ ಕೊಳ್ಳಲಾಗದೆ ಸೋತ ತಂದೆ, ಅಪ್ಪ ಫೋನ್ ಕೊಡಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಮಗಳು, ಫೋನಿದ್ದರೂ ಸರಿಯಾದ ಇಂಟರ್‌ನೆಟ್ ಸಂಪರ್ಕವಿಲ್ಲದ ನೊಂದ ವಿದ್ಯಾರ್ಥಿಗಳು ಇತ್ಯಾದಿ.ಸ॒ಮಾಜದ ವಿವಿಧ ಆರ್ಥಿಕ ಹಿನ್ನೆಲೆಯ ಕುಟುಂಬಗಳು ಆನ್‌ಲೈನ್ ಕ್ಲಾಸ್‌ಗಳ ಕಾರಣಕ್ಕೆ ಅನುಭವಿಸಿದ ನೋವು, ಸಂಕಟ ಈ ದೇಶದಲ್ಲಿ ಇನ್ನೂ ಉಸಿರಾಡುತ್ತಿರುವ ಸಾಮಾಜಿಕ ಅಸಮಾನತೆಯ ಸಂಕೇತವೇ.

ಸರ್ಕಾರದ್ದೇ ರಾಷ್ಟ್ರೀಯ ಮಾದರಿ ಸಮೀಕ್ಷೆ ನಡೆಸಿದ ಒಂದು ಅಧ್ಯಯನದ ಪ್ರಕಾರ ಭಾರತದ 23.8% ಮನೆಗಳಿಗೆ ಮಾತ್ರ ಇಂಟರ್‌ನೆಟ್ ಸೇವೆ ಇದೆ. ಇದರಲ್ಲೂ 14.9% ಹಳ್ಳಿಗಳಿಗೆ ಮಾತ್ರ ಇಂಟರ್‌ನೆಟ್ ಸಂಪರ್ಕ ಲಭ್ಯವಿದೆ. ಭಾರತದ ಚಿತ್ರಣ ಹೀಗಿರುವಾಗ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಡಿಜಿಟಲ್ ಮಾಡುವುದು, ’ಅರ್ಹರು ಬದುಕಲಿ’ ಎಂಬ ಅಹಂಕಾರದ ನಡೆ ಎಂದು ಅನ್ನಿಸದೇ ಇರದು. ಸರ್ಕಾರ ಎಲ್ಲರಿಗೂ ತಲುಪುವ ಯೋಜನೆಯನ್ನು ಜಾರಿಗೆ ತರುವ ಬದ್ಧತೆಯಿಂದ ಕೆಲಸ ಮಾಡದೆ, ಅರ್ಹರು ಪಡೆದುಕೊಳ್ಳುತ್ತಾರೆ ಎಂಬ ಧಾಷ್ಟ್ರ್ಯದಿಂದಲೇ ವರ್ತಿಸಿದ್ದನ್ನು ಕಾಣುತ್ತೇವೆ. ಸಮಾನ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಾಗಬಹುದಾಗಿದ್ದ ಡಿಜಿಟಲ್ ಇಂಡಿಯಾ, ಈ ಕಾರಣಕ್ಕಾಗಿಯೇ ಆಕರ್ಷಕವಾಗಿ ಕಂಡರೂ, ಅನಾಹುತಕಾರಿ ಎನಿಸುತ್ತದೆ.
ಕಿರಾಣಿ ಅಂಗಡಿಯಲ್ಲೊಬ್ಬ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದೇ ಡಿಜಿಟಲ್ ಆರ್ಥಿಕತೆಯ ಒಳಗೊಳ್ಳುವಿಕೆಯ ಮಾನದಂಡವೇ!? ಬಹಳ ಮುಖ್ಯವಾಗಿ ಇಂಟರ್‌ನೆಟ್ ಲಭ್ಯತೆ, ಮಾಹಿತಿ ಸುರಕ್ಷತೆ, ಡಿಜಿಟಲ್ ವಹಿವಾಟುಗಳ ಬಗ್ಗೆ ಅಗತ್ಯವಾದ ತಿಳಿವಳಿಕೆ ಇವೆಲ್ಲವೂ ಎಲ್ಲರಿಗೂ ಲಭ್ಯವಾಗಬೇಕು. ಇದು ಹಕ್ಕು. ಇದನ್ನು ಒದಗಿಸದೇ ಯಾವುದೇ ಸೌಲಭ್ಯವನ್ನು ಒದಗಿಸುವುದು ಸಾಮಾಜಿಕ ವ್ಯವಸ್ಥೆಯಲ್ಲಿ ಗುಲಾಮರನ್ನು ಸೃಷ್ಟಿಸಿಕೊಳ್ಳುವ ಅಥವಾ ತಾರತಮ್ಯವನ್ನು ಜೀವಂತವಾಗಿಡುವ ತಂತ್ರವೇ ಆಗಿರುತ್ತದೆ.
ಕೋವಿಡ್ ಹಿನ್ನೆಲೆಯಲ್ಲಿ ಈ ’ಡಿಜಿಟಲ್ ವ್ಯವಸ್ಥೆ ಹೆಚ್ಚು ಹತ್ತಿರವಾಗಿದೆ. ಸೋಂಕಿನ ಭೀತಿಗೆ ಮನೆಯಲ್ಲೇ ತಿಂಗಳುಗಳನ್ನು ಕಳೆಯಬೇಕಾದ ಸ್ಥಿತಿಯಲ್ಲಿ ಕೆಲಸವನ್ನು ಮನೆಯಿಂದ ಮಾಡುವಂತಾಗಿದ್ದು, ವಿದ್ಯಾಭ್ಯಾಸಕ್ಕೆ ಇಂಟರ್‌ನೆಟ್‌ಅನ್ನೇ ಅವಲಂಬಿಸಬೇಕಾದ್ದು, ಖರೀದಿ, ಇತ್ಯಾದಿ ವಹಿವಾಟುಗಳಿಗೆ ಇಂಟರ್‌ನೆಟ್ ಬ್ಯಾಂಕಿಂಗ್‌ಗೆ ಆತುಕೊಂಡಿದ್ದು, ಇವೆಲ್ಲವೂ ಡಿಜಿಟಲ್ ಅವಲಂಬನೆಯನ್ನು ಹಲವು ಪಟ್ಟು ಹೆಚ್ಚಿಸಿತು.
ಈ ಬೇಡಿಕೆಯ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ಯಾವ ವ್ಯವಸ್ಥೆಯೂ ಸರ್ಕಾರ ಮಾಡಿದಂತೆ ಕಾಣಿಸುತ್ತಿಲ್ಲ. ಸರ್ಕಾರ ಎಲ್ಲರಿಗೂ ಡಿಜಿಟಲ್ ಸೇವೆಯನ್ನು ಹೊಂದುವುದಕ್ಕೆ ಬೇಕಾದ ಪರಿಸರವನ್ನು ಕಲ್ಪಿಸದೇ ಹೋದರೆ, ತಾನೇ ಡಿಜಿಟಲ್ ಅನರಕ್ಷಸ್ಥ ನಾಗರಿಕ ಸಮುದಾಯವನ್ನು ಸೃಷ್ಟಿಸುತ್ತದೆ. ಅಂದ ಮೇಲೆ ಇದು ಎಲ್ಲರನ್ನು ಒಳಗೊಳ್ಳುವ ಡಿಜಿಟಲ್ ಆರ್ಥಿಕತೆಯಾಗದೆ ಉಳ್ಳವರು-ಇಲ್ಲದವರ ಆರ್ಥಿಕತೆಯ ಹೊಸ ಮಾದರಿಯೇ ಆಗುತ್ತದೆ ಎಂಬ ವಾದ ಗಟ್ಟಿಯಾಗುತ್ತದೆ.
ಜಗತ್ತಿನಲ್ಲೇ ಡಿಜಿಟಲ್ ವ್ಯವಸ್ಥೆಯನ್ನು ಬಳಸಿಕೊಂಡು ಅತ್ಯಂತವಾಗಿ ಬೆಳೆಯುತ್ತಿರುವ 17 ದೇಶಗಳಲ್ಲಿ ಭಾರತವೂ ಒಂದಾಗಿದೆ. ಒಂದೆಡೆ ವಿವಿಧ ರೀತಿಯ ಔದ್ಯೋಗಿಕ ವಲಯದಲ್ಲಿರುವ ಕಾರ್ಮಿಕರಿಗೆ ಸೂಕ್ತ ಸವಲತ್ತುಗಳನ್ನು, ಭದ್ರತೆಯನ್ನು ಕಲ್ಪಿಸುವ ಮೂಲಕ ಆರ್ಥಿಕತೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಡಿಜಿಟಲ್ ಸ್ವರೂಪವನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಸೂಕ್ತ ಬೆಂಬಲ ನೀಡುವ ಪೂರಕ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮವನ್ನು ಕೈಗೊಳ್ಳದೇ ಹೋದರೆ, ಅದು ದೇಶದ ಬಹುದೊಡ್ಡ ಸಮುದಾಯವನ್ನು ಅವಕಾಶ ವಂಚಿತವಾಗಿಸುತ್ತಿದೆ ಎಂದರ್ಥ.
ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆ, ಲಿಂಗ ಸಮಾನತೆ ಮತ್ತು ಸಾಮಾಜಿಕ ಸಮಾನತೆಯ ಎಲ್ಲ ಹಕ್ಕುಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಲು ಡಿಜಿಟಲ್ ಆರ್ಥಿಕತೆಯನ್ನು ಕಲ್ಪಿಸುವ ಬದ್ಧತೆ ಆಳುವ ವರ್ಗ ತೋರಿಸಬೇಕು. ಜಾತಿ, ಧರ್ಮಗಳ ಮಂತ್ರ ಪಠಿಸುತ್ತಲೇ ತಂತ್ರಜ್ಞಾನವನ್ನು ತನ್ನ ಹಿತಾಸಕ್ತಿಗಳ ಸಾಧನೆಯ ಸಾಧನವನ್ನಾಗಿ ಬಳಸುತ್ತಿರುವ ಸರ್ಕಾರ, ಹೊಸ ಕಾಲದ ಆರ್ಥಿಕತೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಎಷ್ಟರ ಮಟ್ಟಿಗೆ ಬದ್ಧವಾಗಿರುತ್ತದೆ ಎಂಬುದು ಕುತೂಹಲದ ನಿರೀಕ್ಷೆ.


